ಅರ್ಥ ನೋಟ: ಉಚಿತ ಭಾಗ್ಯಗಳಿಗೆ ಇರಲಿ ಮಿತಿ

Upayuktha
0

 ಅಲ್ಪಕಾಲಿಕ ಶಮನ ನೀಡುವ ಉಚಿತ ಭಾಗ್ಯಗಳ ಜಮಾನ


ಸತ್ಪಾತ್ರರಿಗೆ ದಾನ

ನಮ್ಮ ಸನಾತನ ಧರ್ಮದಲ್ಲಿ ದಾನಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ದಾನ ಎಂದರೆ ಅಗತ್ಯವಿದ್ದವರಿಗೆ ಉಳ್ಳವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಅಗತ್ಯವಿರುವುದನ್ನು ಕೊಡುವುದು ಎಂದರ್ಥ. ದಾನ ಎಂದರೆ ಪರೋಪಕಾರದ ಕೆಲಸ ಅಂದರೆ ಪುಣ್ಯದ ಕೆಲಸ. ಸುಮ್ಮನೆ ದಾನ ಮಾಡಿದರೆ ಫಲ ದೊರಕದು. ದಾನ ಸದಾಕಾಲವೂ ಸತ್ಪಾತ್ರರಿಗೇ ಮಾಡಬೇಕು. ದಾನಗಳಲ್ಲಿ ಸಾತ್ವಿಕ ದಾನ ಶ್ರೇಷ್ಠ. ಸಾತ್ವಿಕ ದಾನ ಎಂದರೆ ದಾನ ಮಾಡುವುದು ಕರ್ತವ್ಯವೆಂದು ತಿಳಿದು ಶ್ರದ್ಧೆಯಿಂದ ಪುಣ್ಯ, ದೇಶ, ಯೋಗ್ಯ ಕಾಲಗಳಲ್ಲಿ ಪ್ರತ್ಯುಪಕಾರವನ್ನು ಬಯಸದೇ ಸತ್ಪಾತ್ರನಲ್ಲಿ ಮಾಡುವ ದಾನ. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಸೇರ್ಪಡೆಯಾಗದೆ ಅಂಚಿಗೆ ತಳ್ಳಲ್ಪಟ್ಟ ವರ್ಗದ ಬಗ್ಗೆ ಕಾಳಜಿ ಅಗತ್ಯ. ಆರ್ಥಿಕ, ಸಾಮಾಜಿಕ ಅಂತರ ಕಡಿಮೆ ಮಾಡಲು ತತ್ ಕ್ಷಣಕ್ಕೆ ಹೊಳೆಯುವ ಯೋಜನೆ ಉಚಿತ ಭಾಗ್ಯಗಳು. ಆದರೆ ಉಚಿತ ಭಾಗ್ಯಗಳು ದಾನದ ವ್ಯಾಖ್ಯಾನದಲ್ಲಿ ಬರುವುದಿಲ್ಲ. ಜನ ಆಮಿಷಕ್ಕೆ ಒಳಗಾಗಿ ತಮ್ಮ ಅಲ್ಪಾವಧಿ ಖುಷಿಗಾಗಿ ದೀರ್ಘಾವಧಿ ಅನುಕೂಲತೆಗಳ ಚಿಂತನೆ ಗೌಣವಾಗಿರುವುದು ವಿಪರ್ಯಾಸ.


ಉಚಿತ ಆಮಿಷಗಳು ಮತ್ತು ದೇಶದ ಆರ್ಥಿಕತೆ

ವೆನೆಝುವೆಲಾ ಅತ್ಯಂತ ಸುಂದರ ಮತ್ತು ರಮಣೀಯವಾದ ಪ್ರಕೃತಿ ತಾಣಗಳಿಗೆ ಮತ್ತು ವಿಶ್ವ ಸುಂದರಿಯರ ತಾಣವಾಗಿತ್ತು. ಇಲ್ಲಿನ ಸಮುದ್ರ ತೀರದಲ್ಲಿ ಯಥೇಚ್ಛವಾಗಿ ಪೆಟ್ರೋಲಿಯಂ ದೊರಕುತ್ತಿದ್ದಂತೆಯೇ, ಏಕಾಏಕಿ 1970 ರಲ್ಲಿ ವೆನೆಝುವೆಲಾ ದೇಶವು ಪ್ರಪಂಚದ ಅತ್ಯಂತ 20 ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿತ್ತು. ಸುಲಭವಾಗಿ ಅಧಿಕಾರಕ್ಕೆ ಬರಬೇಕೆಂಬ ಏಕೈಕ ಆಸೆಯಿಂದ ತಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ನಿರುದ್ಯೋಗಿಗಳಿಗೆ ಮತ್ತು ಬಡವರಿಗೆ ಪ್ರತೀ ತಿಂಗಳೂ ಸರ್ಕಾರದ ವತಿಯಿಂದ ಮಾಸಾಶನದ ರೂಪದಲ್ಲಿ ಉಚಿತವಾಗಿ ಧನಸಹಾಯವನ್ನು ಮಾಡುವುದಾಗಿ ಚುನಾವಣಾ ಕಾಲದಲ್ಲಿ ವೆನಿಝೂಲಾದ ರಾಜಕೀಯ ಪಕ್ಷವೊಂದು ಪ್ರಕಟಿಸಿತು. ಈ ಆಮಿಷಕ್ಕೆ ಒಳಗಾದ ಜನ ಅವರನ್ನು ಭಾರೀ ಬಹುಮತದಿಂದ ಆಯ್ಕೆ ಮಾಡಿದರು. ಮತ್ತೆ ಮುಂದಿನ ಚುಣಾವಣೆಯಲ್ಲಿ ಅಧಿಕಾರಕ್ಕೆ ಬರುವ ಸಲುವಾಗಿ ಸರ್ಕಾರಿ ನೌಕರರು ಹಾಗೂ ಕಾರ್ಮಿಕರ ಸಂಬಳವನ್ನು ಐದು ಪಟ್ಟು ಹೆಚ್ಚಿಸುವ ಕೊಡುಗೆಗಳನ್ನು ನೀಡಲಾಯಿತು.


2008ರ ಚುನಾವಣೆಯಲ್ಲಂತೂ ಬೆಲೆಯೇರಿಕೆ ಇಲ್ಲದ ಆಹಾರ ಸರಬರಾಜು ವ್ಯವಸ್ಥೆ ಎಂದು ಘೋಷಿಸಿದ ಪಕ್ಷ ಅಧಿಕಾರಕ್ಕೆ ಬಂದ ನಂತರ ಸರಕಾರವೇ ಎಲ್ಲಾ ಆಹಾರ ಸಾಮಗ್ರಿಗಳ ಬೆಲೆಯನ್ನು ನಿಗಧಿಪಡಿಸಿತು. ಸರ್ಕಾರ ನಿರ್ಧರಿಸಿದ ಬೆಲೆಗೆ ದೈನಂದಿನ ವಸ್ತುಗಳನ್ನು ಮತ್ತು ಆಹಾರವನ್ನು ಸರಬರಾಜು ಮಾಡಲಾಗದೇ ಅನೇಕ ವ್ಯಾಪಾರಿಗಳು ದಿವಾಳಿಗಳಾದರು.


ಇದರಿಂದ ಬೇಸತ್ತ ಸುಮಾರು ಮೂವತ್ತು ಲಕ್ಷಕ್ಕೂ ಅಧಿಕ ಸಿರಿವಂತ ಕೈಗಾರಿಕೋದ್ಯಮಿಗಳು, ನುರಿತ ಕೆಲಸಗಾರರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ದೇಶಬಿಟ್ಟು ಅಕ್ಕ ಪಕ್ಕ ದೇಶಗಳಿಗೆ ಪಲಾಯನಗೊಂಡರು. ಅಲ್ಲಿನ ಉದ್ಯಮಗಳು ಸಾರಾಸಗಟಾಗಿ ಮುಚ್ಚುತ್ತಾ ಹೋಗಿ ಮುಚ್ಚಿ ಆಹಾರ ಉತ್ಪನ್ನಗಳೊಂದಿಗ ಸಾಮಾನ್ಯ ವಸ್ತುಗಳನ್ನು ಕೂಡಾ ವಿದೇಶಗಳಿಂದ ಆಮದು ಮಾಡಿಕೊಳ್ಳ ಬೇಕಾದಂತಹ ದಮನೀಯ ಸ್ಥಿತಿಗೆ ತಲುಪಿತು. ಇಷ್ಟಾದರೂ ದೇಶದ ಜನರು ಯಾವುದೇ ಕೆಲಸ ಮಾಡದೇ ಸರಕಾರ ಕೊಡುವ ಉಚಿತ ಸವಲತ್ತುಗಳನ್ನೇ ಬಳಸಿಕೊಂಡು ಜೀವನವನ್ನು ನಡೆಸತೊಡಗಿದರು. ತಮ್ಮೆಲ್ಲಾ ವೆಚ್ಚಗಳನ್ನು ಸರ್ಕಾರವೇ ನೋಡಿಕೊಂಡು ಹೋಗುತ್ತಿದ್ದರಿಂದ ದೇಶದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಯಾರೂ ಗಮನ ನೀಡಲೇ ಇಲ್ಲ. 2005ರಲ್ಲಿ ಪೆಟ್ರೋಲಿಯಂ ಬೆಲೆ ಅಂತರರಾಷ್ಟ್ರೀಯ ಮಾರಕಟ್ಟೆಯಲ್ಲಿ ಇದ್ದಕ್ಕಿದ್ದಂತೆಯೇ ಬಿದ್ದುಹೋದಾಗ ಅದಕ್ಕೆ ತಲೆ ಕೆಡಸಿಕೊಳ್ಳದ ವೆನಿಝೂಲಾ ಯಥೇಚ್ಛವಾಗಿ ನೋಟುಗಳನ್ನು ಮುದ್ರಿಸಿ ಚಲಾವಣೆಗೆ ಬಿಟ್ಟ ಕಾರಣ ಹಣದುಬ್ಬರ ಬಂದೆರಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಅವರ ನಗದಿಗೆ ಬೆಲೆಯೇ ಇಲ್ಲವಾಗಿ ಹೋಯಿತು. 2018ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿ ಉಚಿತ ಸಬ್ಸಿಡಿ ಎಲ್ಲವೂ ನಿಂತುಹೋಯಿತು. ಆಹಾರದ ಕೊರತೆಯೊಂದಿಗೆ ಆಲಸೀ ಬದುಕಿಗೆ ಹೊಂದಿಕೊಂಡ ಸಮಾಜದಲ್ಲಿ ಲೂಟಿ ದರೋಡೆ ಸಾಮಾನ್ಯವಾಗಿಬಿಟ್ಟಿತು. 20-30 ವರ್ಷಗಳ ಹಿಂದೆ ವಿಶ್ವದ 20 ಅತ್ಯಂತ ಶ್ರೀಮಂತ ರಾಷ್ಟ್ರಗಳಲ್ಲಿ ಒಂದಾಗಿದ್ದಂತಹ ದೇಶದಲ್ಲಿ ಆವಶ್ಯಕ ವಸ್ತುಗಳನ್ನು ಅಮದು ಮಾಡಿಕೊಳ್ಳಲು ಸಾಧ್ಯವಾಗದೇ ರಕ್ತಪಾತ ನಡೆಸುವ ದೇಶಗಳ ಪಟ್ಟಿಯಲ್ಲಿ ಮೇಲಿನ ಸ್ಥಾನವನ್ನೇ ಪಡೆದುಕೊಂಡಿತು. ಯಾವ ದೇಶದಲ್ಲಿ ಪೆಟ್ರೋಲ್ , ಡೀಸೆಲ್ ನೀರಿಗಿಂತ ಅಗ್ಗವಾಗಿತ್ತೋ ಅದೇ ದೇಶದಲ್ಲಿ ಇಂದು ಹತ್ತು ಲೀಟರ್ ಪೆಟ್ರೋಲ್ ಗೆ ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುವಂತಹ ದುಸ್ಥಿತಿಗೆ ಬಂದು ತಲುಪಿದ್ದಾರೆ.


ಕೂತು ತಿನ್ನುವವರಿಗೆ ಕುಡಿಕೆ ಹೊನ್ನು ಸಾಲದು

’ಪ್ರತಿಯೊಬ್ಬ ವ್ಯಕ್ತಿಯು ಏನಾದರೊಂದು ದೈಹಿಕ ಶ್ರಮದ ಮೂಲಕ ಸಂಪಾದನೆ ಮಾಡಿ ಜೀವನ ನಡೆಸಬೇಕು’ ಸೋಮಾರಿಯಾಗಿ ಕಾಲಕಳೆಯದೆ ಕಷ್ಟಪಟ್ಟು ದುಡಿದು ಬದುಕುವುದರಿಂದ ಹಣ ಸಂಪಾದನೆ ಸಾಧ್ಯ. ಕೂತು ಉಣ್ಣುವವನಿಗೆ ಕುಡುಕೆ ಹೊನ್ನೂ ಸಾಲದು ಎಂಬಂತೆ ಇರುವ ಆಸ್ತಿ ಕರಗಿದ ಮೇಲೆ ಕಷ್ಟ ಪಡಬೇಕಾಗುತ್ತದೆ. ಕೂತು ತಿನ್ನುವವರಿಗೆ ಕುಡಿಕೆ ಹೊನ್ನು ಸಾಲದು ಎನ್ನುವ ಗಾದೆ ಮಾತು ಅಕ್ಷರಶಃ ಸತ್ಯ ಎಂದು ವೆನಿಝೂಲಾ ಆರ್ಥಿಕತೆಯ ದಿವಾಳಿತನದಿಂದ ನಾವು ಅರ್ಥಮಾಡಕೊಳ್ಳಬೇಕು.


ಉಚಿತ ಭಾಗ್ಯಗಳ ಮರೀಚಿಕೆ

ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಉಚಿತ ಭಾಗ್ಯಗಳನ್ನು ನೀಡುತ್ತೇವೆ ಎಂದು ಪಕ್ಷಗಳು ನೀಡುವ ವಿವೇಚನಾರಹಿತ ಭರವಸೆ ನೀಡುವುದು ಗಂಭೀರ ವಿಚಾರ. ಈ ನಿಟ್ಟಿನಲ್ಲಿ ಉಚಿತ ಕೊಡುಗೆಗಳಿಂದಾಗಿ ಅರ್ಥವ್ಯವಸ್ಥೆಯು ಕಳೆದುಕೊಳ್ಳುವ ಸಂಪನ್ಮೂಲ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಖರ್ಚಾಗುವ ಹಣದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಕರೆ ನೀಡಿರುವುದು ಸಮಯೋಚಿತವಾದುದು.

ಉಚಿತ ಕೊಡಿಗೆಗಳಿಗೆ ಕೊನೆಯಿಲ್ಲ: ಉಚಿತ ಕೊಡುಗೆಗಳು ಆರ್ಥಿಕತೆಗೆ ಹೊರೆ, ಆರ್ಥಿಕತೆಗೆ ದೀರ್ಘಾವಧಿಯಲ್ಲಿ ಬಲತುಂಬ ಬಲ್ಲ ಯೋಜನೆಗಳಿಗೆ ಅನುದಾನದ ಕೊರತೆಯಾಗುವುದರಲ್ಲಿ ಸಂಶಯವಿಲ್ಲ. ಭರವಸೆಗಳು ಅಮಿಷಗಳಾಗಿ ಜನಸಾಮಾನ್ಯರು ಉಚಿತ ಭಾಗ್ಯಗಳ ಮಾಯಾಲೋಕದ ಬಂಧಿಗಳಾಗುತ್ತಾರೆ. ಉಚಿತ ಕೊಡುಗೆಗಳು ಸರಿಯಾದ ಜನರನ್ನು ತಲುಪಲು ವಿಫಲವಾಗುತ್ತವೆ. ಇದರಿಂದಾಗ ಸಾರ್ವಜನಿಕ ಸಂಪನ್ಮೂಲಗಳ ಅಪವ್ಯಯ ಒಂದೆಡೆಯಾದರೆ ದೀರ್ಘಾವಧಿ ಪರಿಣಾಮ ಬೀರಬಲ್ಲ ಅಗತ್ಯ ಅಭಿವೃದ್ಧಿ ಕಾರ್ಯಗಳಿಗೆ ಸಂಪನ್ಮೂಲಗಳ ಕೊರತೆಯಾಗುತ್ತದೆ. ಈ ಜನಪ್ರಿಯ ಯೋಜನೆಗಳಿಂದಾಗಿ ಅತ್ಯಗತ್ಯವಾಗಿ ಬೇಕಿರುವ ಸಾಮಾಜಿಕ ಅಭಿವೃದ್ಧಿ ವಲಯಕ್ಕೆ ಹಣಕಾಸಿನ ಮುಗ್ಗಟ್ಟು ಉಂಟಾಗುತ್ತಿದೆ. 


ರಾಜಕೀಯ ಪಕ್ಷಗಳು ಘೋಷಿಸುವ ಜನಪ್ರಿಯ ಯೋಜನೆಗಳು, ಉಚಿತ ಭಾಗ್ಯಗಳೇ ಕಂಟಕವಾಗುವ ಸಾಧ್ಯತೆ ಇದೆ. ಆಹಾರ, ವಿದ್ಯುತ್, ತೆರಿಗೆ ಕಡಿತ ಸೇರಿದಂತೆ ರಾಜಕೀಯ ಪಕ್ಷಗಳು ಚುನಾವಣೆ ವೇಳೆ ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದಂತೆಯೇ ತಮ್ಮ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಅವುಗಳನ್ನ ಜಾರಿಗೆ ತರಲು ಹೊರಡುತ್ತವೆ. ಇವು ಭವಿಷ್ಯದಲ್ಲಿ ದೇಶದ ಆರ್ಥಿಕತೆಗೆ ಕಂಟಕವಾಗುವ ಸಾಧ್ಯತೆಗಳಿವೆ. ಕೆಲವು ರಾಜ್ಯಗಳು ಈಗಾಗಲೇ ಜನರಿಗೆ ನೀಡಿರುವ ಉಚಿತ ‘ಭಾಗ್ಯ’ಗಳು ಆಯಾ ರಾಜ್ಯ ಸರ್ಕಾರಗಳ ಆರ್ಥಿಕತೆಗೆ ಅರಗಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ. ಹೀಗಾಗಿ, ಇದಕ್ಕೆ ಪರಿಹಾರ ಬೇಕಿದೆ. 


ನೀತಿ ಸಂಹಿತೆಯಡಿ ಉಚಿತ ಕೊಡುಗೆ

ಇದೀಗ ಚುನಾವಣಾ ಆಯೋಗ ದೇಶದ ಎಲ್ಲ ರಾಷ್ಟ್ರೀಯ ಪಕ್ಷಗಳಿಗೆ ಪತ್ರ ಬರೆದು ಉಚಿತ ಕೊಡುಗೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತ ಸೂಚಿಸಿದ. ಉಚಿತ ಕೊಡುಗೆಗಳನ್ನೂ ಒಳಗೊಂಡಂತೆ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಘೋಷಿಸುವ ಯೋಜನೆಗಳ ಅನುಷ್ಠಾನದ ಹಣಕಾಸು ಸಾಧ್ಯತೆಯ ಕುರಿತಂತೆಯೂ ಮತದಾರರಿಗೆ ಮನದಟ್ಟು ಮಾಡಬೇಕು ಎಂದು ಸಲಹೆ ನೀಡಿದೆ. ಬಹುತೇಕ ಚುನಾವಣಾ ಭರವಸೆಗಳು ಮಹತ್ವಾಕಾಂಕ್ಷೆ ಹೊಂದಿರುತ್ತದೆ. ಅದರೆ ಅದನ್ನು ಈಡೇರಿಸುವ ಬಗ್ಗೆ ಯಾವುದೇ ತರ್ಕಬದ್ಧ ಮಾಹಿತಿ ನೀಡವುದಿಲ್ಲ. ಹಣಕಾಸಿನ ಸ್ಥಿತಿಗತಿ ಹಾಗ ಚುನಾವಣೆ ಭರವಸೆ ಈಡೇರಿಸಲು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ರಾಜಕೀಯ ಪಕ್ಷಗಳು ಸ್ಪಷ್ಟ ಮಾಹತ ನೀಡಿದರೆ ಮತದಾರರಿಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಅಯೋಗವು ಅಭಿಪ್ರಾಯಪಟ್ಟಿದೆ. ಭರವಸೆಗಳು ಕೇವಲ ಅಮಿಷಗಳಾಗಿ ಉಳಿಯದೆ ಕಾರ್ಯಸಾಧುವಾಗಿರಬೇಕು, ಅಭಿವೃದ್ದಿಗೆ ಪೂರಕವಾಗರಬೇಕು ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಮುಖ್ಯವಾಹಿನಿಗೆ ತರುವಂತಾಗಿರಬೇಕು.


ಹಸಿದವನಿಗೆ ಬದುಕು ಕೊಡುವ ಕಲೆ:

ಬಡವರಿಗೆ ಹಾಗೂ ವಂಚಿತರಿಗೆ ಸುಸ್ಥಿರ ಹಾಗೂ ಗೌರವಯುತ ಜೀವನಾಧಾರವನ್ನು ಒದಗಿಸಲು ಅಗತ್ಯ ಪ್ರೇರಣೆ, ತರಬೇತಿ ಹಾಗೂ ಮಾರ್ಗದರ್ಶನವನ್ನು ನಿರಂತರ ನೀಡುವ ಮೂಲಕ ಸೇರ್ಪಡೆಯುಳ್ಳ ಆರ್ಥಿಕ ಅಭಿವೃದ್ಧಿಯ ಉದ್ದೇಶಗಳನ್ನು ಸಾಕಾರಗೊಳಿಸಲು ಸಾಧ್ಯ. ಬಡವರಾದರೂ ಸ್ವಾವಲಂಬಿಗಳಾಗಿ ಸ್ವಾಭಿಮಾನಿಗಳಾಗಿರಬೇಕೇ ಹೋರತು ಈ ರೀತಿಯಾಗಿ. ಬಿಕ್ಷುಕರಾಗ ಬಾರದು. ಹಸಿದವನಿಗೆ ಮೀನು ನೀಡಿದರೆ ಒಂದು ದಿನದ ಹಸಿವನ್ನು ತಣಿಸಿದಂತೆ. ಅವನಿಗೆ ಮೀನು ಹಿಡಿಯುವ ಕಲೆಯನ್ನು ಕಲಿಸಿಕೊಟ್ಟರೆ ಅವನಿಗೆ ಬದುಕು ಕೊಟ್ಟಂತೆ ಎಂಬ ಪ್ರಾಜ್ಞರ ನುಡಿ ನಮಗೆ ದಾರಿ ದೀಪವಾಗಬೇಕು.


ಅಭಿವೃದ್ಧಿ ಪಥದತ್ತ ಮುನ್ನುಗ್ಗುತ್ತಿರುವ ದೇಶದ ಸರ್ವಾಂಗೀಣ ಪ್ರಗತಿಗೆ ಆಧುನಿಕ ಶಿಕ್ಷಣ ಹಾಗೂ ಕೌಶಲ ವರ್ಧನೆ ಅತ್ಯಗತ್ಯ. ದೇಶದ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು, ಲಭ್ಯ ಸಂಪನ್ಮೂಲಗಳನ್ನು ಜಾಣತನದಿಂದ ಬಳಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಭಾರತೀಯರ ಬದುಕು ಸಹನೀಯವಾಗಿರಲು ಸಾಧ್ಯವಿದೆ. 

ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಜನಸಂಖ್ಯೆಯನ್ನು ಮಾನವ ಸಂಪನ್ಮೂಲವಾಗಿ ಪರಿವರ್ತಿಸುವ ಯೋಚನೆ ಹಾಗೂ ಯೋಜನೆಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತದೆ  ಎಂಬುದನ್ನು ಅರ್ಥಶಾಸ್ತ್ರ ನಮಗೆ ತಿಳಿಸುತ್ತದೆ. ಭಾರತ ಈಗ ಜನಸಂಖ್ಯಾ ಹೆಚ್ಚಳದೊಂದಿಗೆ ಬಹು ಮುಖ್ಯ ಅವಕಾಶ ಮತ್ತು ಸವಾಲನ್ನು ತನ್ನದಾಗಿಸಿಕೊಂಡಿದೆ. ಕೆಲಸ ಮಾಡುವ ಪ್ರಾಯ ಹಾಗೂ ಸಾಮರ್ಥ್ಯ ಇರುವ ವಿಪುಲ ಯುವಜನತೆಯ ಸದ್ಬಳಕೆ ನಮ್ಮ ದೇಶದ ಅಭಿವೃದ್ಧಿಗಿರುವ ರಹದಾರಿ. ನಮಗೆ ದೊರೆಯುವ ಉಚಿತಗಳು ನಮ್ಮ ದೀರ್ಘಾವಧಿ ಬೆಳವಣಿಗೆಗೆ ಅಡ್ಡಿಯಾಗದಿರಲಿ ಎಂಬುದೇ ನಮ್ಮ ಹಾರೈಕೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top