ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ, ಸರಕಾರಿ ಶಾಲೆಗಳ ದತ್ತು ಸ್ವೀಕಾರ ಯೋಜನೆ ಮತ್ತು ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜು, ಮಂಗಳಗಂಗೋತ್ರಿ ಇವರ ಜಂಟಿ ಸಹಭಾಗಿತ್ವದಲ್ಲಿ ಮಹಾತ್ಮ ಗಾಂಧೀಜಿಯವರ ೧೫೩ ನೇ ಜನ್ಮ ದಿನಾಚರಣೆ ಮಂಗಳಗಂಗೋತ್ರಿಯ ಯು.ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಮಹಾತ್ಮ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿ, ದೇಶ ಕಂಡ ಒಬ್ಬ ಅಪ್ರತಿಮ ನಾಯಕ ಮೋಹನದಾಸ್ ಕರಮಚಂದ ಗಾಂಧಿ. ಸಮಾಜದಲ್ಲಿ ಪರಿವರ್ತನೆ ಕಾಣಬೇಕಿದ್ದರೆ ಮೊದಲು ನಮ್ಮಲ್ಲಿ ನಾವು ಪರಿವರ್ತನೆ ಕಂಡುಕೊಳ್ಳಬೇಕು ಎಂಬುದನ್ನು ಜಗತ್ತಿಗೆ ಸಾರಿ ಹೇಳಿದರು. ಇವತ್ತಿನ ಯುವ ಪೀಳಿಗೆ ಮಹಾತ್ಮ ಗಾಂಧಿ ಅವರು ಹಾಕಿಕೊಟ್ಟಿರುವ ಸತ್ಯ, ಶಾಂತಿ, ತ್ಯಾಗ, ಅಹಿಂಸೆ, ಸಚ್ಚಾರಿತ್ರ‍್ಯ, ಸನ್ಮಾರ್ಗಗಳ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಅಪ್ರತಿಮ ದೇಶಭಕ್ತ, ಸರಳತೆಯ ಸಾಕಾರಮೂರ್ತಿ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಕೊಡುಗೆಗಳನ್ನು ಸ್ಮರಿಸಿಕೊಂಡು ವಇಹಾತ್ಮ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆ ಎಂದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ, ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ನಿಕಟಪೂರ್ವ ನಿರ್ದೇಶಕ, ಪ್ರಸಾರಾಂಗದ ನಿರ್ದೇಶಕ ಪ್ರೊ. ಶೇಖರ್ ಎಂ, "ಮಹಾತ್ಮ ಗಾಂಧೀಜಿ ಮತ್ತು ಪ್ರಸ್ತುತತೆ" ಕುರಿತು ಉಪನ್ಯಾಸ ನೀಡಿ, ತತ್ವಗಳಿಲ್ಲದ ರಾಜಕೀಯ, ಶ್ರಮವಿಲ್ಲದೆ ಸಂಪತ್ತು, ಆತ್ಮಸಾಕ್ಷಿಯಿಲ್ಲದ ಆನಂದ, ನಡತೆ ಇಲ್ಲದ ಜ್ಞಾನ, ನೈತಿಕತೆ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ವಿಜ್ಞಾನ, ತ್ಯಾಗವಿಲ್ಲದೆ ಪೂಜೆ ಮಹಾತ್ಮ ಗಾಂಧಿ ಅವರು ಅಂದು ಪ್ರತಿಪಾದಿಸಿದ ಏಳು ಸಾಮಾಜಿಕ ಪಾಪಗಳು, ಅವು ಅಂದಿಗೂ, ಇಂದಿಗೂ, ಮುಂದೆಂದಿಗೂ ಪ್ರಸ್ತುತವಾಗಿದ್ದು ಪ್ರತಿಯೊಬ್ಬ ಪ್ರಜೆಯೂ ಅವುಗಳನ್ನು ತಮ್ಮ ಕ್ಷೇತ್ರಕ್ಕೆ ಅನುಗುಣವಾಗಿ ಅಳವಡಿಸಿಕೊಂಡು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಕಿಶೋರ್ ಕುಮಾರ್ ಸಿ. ಕೆ, ಮಾತನಾಡಿ, ಗಾಂಧಿ ಅವರ ತತ್ವ ಸಿದ್ಧಾಂತವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಸರಳತೆ, ಅಹಿಂಸೆ ಮತ್ತು ಸತ್ಯಮೇವ ಜಯತೇ ಜೀವನದಲ್ಲಿ ಎಷ್ಟು ಅಮೂಲ್ಯ ಎಂಬುವುದನ್ನು ಅವರು ತಮ್ಮ ಕಾರ್ಯದಲ್ಲಿ ನಿರೂಪಿಸಿದರು ಎಂದು ಅವರು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಶುಚಿತ್ವ ದಳದ ಸಿಬ್ಬಂದಿಗಳಾದ ರೇವತಿ, ವಿಜಯಲಕ್ಷ್ಮಿ, ಶೋಬಾ, ತಿಮ್ಮಪ್ಪ, ನಾಗೇಶ್ ಅವರ ಸೇವೆಯನ್ನು ಗೌರವಿಸಿ ಸನ್ಮಾನಿಸಲಾಯಿತು. ಗಾಂಧಿ ಜಯಂತಿ ಪ್ರಯುಕ್ತ ವಿಶ್ವ ವಿದ್ಯಾನಿಲಯ ದತ್ತು ಸ್ವೀಕರಿಸಿರುವ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ 'ನಾನು ಕಂಡಂತೆ ಮಹಾತ್ಮ ಗಾಂಧೀಜಿ' ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಪ್ರೊ. ಪ್ರಶಾಂತ ನಾಯ್ಕ ಅವರ ಸಂಗ್ರಹದ ಮಹಾತ್ಮ ಗಾಂಧಿ ಅವರ ಸ್ವಾತಂತ್ರ‍್ಯ ಹೋರಾಟದ ಛಾಯಾಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಹಣಕಾಸು ಅಧಿಕಾರಿ ಪ್ರೊ. ಕೆ. ಎಸ್. ಜಯಪ್ಪ, ವಿಶೇಷಾಧಿಕಾರಿಗಳು, ಪ್ರಾಧ್ಯಾಪಕರು, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು, ಶಿಕ್ಷಕ- ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಕಾರ್ಯಕ್ರಮ ಸಂಯೋಜಕ ಪ್ರೊ. ಪ್ರಶಾಂತ ನಾಯ್ಕ ಪ್ರಸ್ತಾವನೆಗೈದು, ಸ್ವಾಗತಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿ ಡಾ. ಗೋವಿಂದರಾಜು ಎಂ. ಬಿ. ಸನ್ಮಾನ ಮತ್ತು ಸ್ವಚ್ಚತಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಮಿಯಾಜ್ ಕಾರ್ಯಕ್ರಮ ನಿರೂಪಿಸಿದರು. ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಮೋಹನ್ ಎಸ್. ಸಿಂಘೆ ವಂದಿಸಿದರು.