ಮಂಗಳೂರು : ಪರಿಸರ ವಿಕಿರಣಶೀಲತೆಯ ಮುಂದುವರಿದ ಸಂಶೋಧನಾ ಕೇಂದ್ರ (CARER), ವಿಕಿರಣ ಮತ್ತು ರೇಡಿಯೋ ಐಸೋಟೋಪ್ ತಂತ್ರಜ್ಞಾನದ ಅನ್ವಯ ಕೇಂದ್ರ (CARRT), ವಿಶ್ವವಿದ್ಯಾನಿಲಯ ಸಂಶೋಧನೆ ಮತ್ತು ವೈಜ್ಞಾನಿಕ ಉತ್ಕೃಷ್ಟತೆಯ ಪ್ರೋತ್ಸಾಹ (PURSE) ಕೇಂದ್ರಗಳು ಜಂಟಿಯಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ (DST) ಪ್ರಾಯೋಜಕತ್ವದೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರಮಟ್ಟದ "ವೈಜ್ಞಾನಿಕ ಮತ್ತು ತಾಂತ್ರಿಕ ಮೂಲಸೌಕರ್ಯ ಬಳಸಿಕೊಂಡು ಸಿನರ್ಜಿಸ್ಟಿಕ್ ತರಬೇತಿ ಕಾರ್ಯಕ್ರಮ"ವನ್ನು (STUTI) ಅಕ್ಟೋಬರ್ 10 ರಿಂದ 16 ರವರೆಗೆ ಆಯೋಜಿಸಲಾಗಿದೆ. ಮೈಸೂರಿನ ಜೆಎಸ್ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅಂಡ್ ರಿಸರ್ಚ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದೆ.
'ಭೌತಿಕ, ವಸ್ತುಗಳು, ರಾಸಾಯನಿಕ ಮತ್ತು ಜೈವಿಕ ವಿಜ್ಞಾನ ಸಂಶೋಧನೆಯಲ್ಲಿ ವಿಕಿರಣ ಮತ್ತು ರೇಡಿಯೊ ಐಸೋಟೋಪ್ಗಳ ಬಳಕೆಗಳುʼ ಎಂಬುದು ತರಬೇತಿ ಕಾರ್ಯಕ್ರಮದ ಕೇಂದ್ರ ವಿಷಯವಾಗಿರಲಿದ್ದು. ಅಕ್ಟೋಬರ್ 10 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ರಾಜಶ್ರೀ ಡಾ.ವೀರೇಂದ್ರ ಹೆಗ್ಗಡೆ ಸಭಾಂಗಣದಲ್ಲಿ ಯೆನೆಪೊಯ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಡಾ. ಎಂ ವಿಜಯಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಧ್ಯಕ್ಷತೆ ವಹಿಸುವರು.
ದೇಶದ ಪ್ರತಿಷ್ಠಿತ ಸಂಸ್ಥೆಗಳಿಂದ ಸುಮಾರು 50 ವಿಜ್ಞಾನಿಗಳನ್ನು ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗುತ್ತದೆ. ಅಣುಶಕ್ತಿ ವಿಭಾಗದ ವಿಜ್ಞಾನಿಗಳು ಸೇರಿದಂತೆ ಕ್ಷೇತ್ರದ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.