ಕನ್ನಡ ಚಿತ್ರರಂಗದ ಇತ್ತೀಚೆಗಿನ ಬೆಳವಣಿಗೆ ಕಾಣುವಾಗ ಮನಸು ಪ್ರಪುಲ್ಲವಾಗುತ್ತದೆ. 'ಕಡಲದಂಡೆ' ಯ ಯುವ ಪ್ರತಿಭೆಗಳ ಹೊಸನೋಟ ಹಾಗೂ ಹೊಸಪ್ರಜ್ಞೆಯು ಕನ್ನಡ ಚಿತ್ರರಂಗದ ದಿಕ್ಕುದೆಸೆಗಳಿಗೆ ಶಕ್ತಿಯಾಗಿ ಸಂಚಲನವನ್ನುಂಟುಮಾಡುತ್ತಿದೆ. 'ಕಾಂತಾರ' ಒಂದು ವಾರದೊಳಗೆ ಕನ್ನಡದ ಗಡಿಮೀರಿ ದಕ್ಷಿಣ ಭಾರತದಲ್ಲಿ ಸುದ್ದಿ ಮಾಡಿ ಉತ್ತರಕ್ಕೂ ಹಬ್ಬುತ್ತಿದೆ.
ಪ್ರಾದೇಶಿಕ ಸಂಸ್ಕೃತಿಯೊಂದನ್ನು ಚಲನಚಿತ್ರದ ಮೂಲಕ ಅನಾವರಣಗೊಳಿಸುವಾಗ ಅದರ ಸಾರ್ವಕಾಲಿಕ ಹಾಗೂ ಮೌಲಿಕವಾದ ಚೌಕಟ್ಟನ್ನು ನೈಜರೂಪದಲ್ಲಿ ರೂಪಿಸುವುದು ಸುಲಭದ ಮಾತಲ್ಲ. ಇಲ್ಲಿ ಸವಾಲುಗಳೇ ಹೆಚ್ಚು. ನಂಬಿಕೆ, ಸಂಪ್ರದಾಯ, ಜಾತಿಪದ್ಧತಿ, ಪರಂಪರಾಗತ ರೀತಿ ರಿವಾಜುಗಳ 'ವಸ್ತು'ವೊಂದನ್ನು ಸ್ಪರ್ಶಿಸುವಾಗ ಈ ಮೊದಲ ಕಾಲಕ್ಕಿಂತಲೂ 'ಇ-ಯುಗ' ದಲ್ಲಿ ಕತೆಗಾರ, ನಿರ್ದೇಶಕ, ನಿರ್ಮಾಪಕನಿಗೆ ಜಾಗ್ರತೆ ಇರಬೇಕಾಗುತ್ತದೆ. ಇಲ್ಲದಿದ್ದರೆ ಉದ್ದೇಶ ಮತ್ತು ಪರಿಶ್ರಮ ಹಾಳಾಗಿ ಹೋಗುವ ಸಾಧ್ಯತೆ ಇದೆ.
ನಾಗರಿಕತೆಯ ಬೆಳವಣಿಗೆಯೆಂದರೆ ಅದು ಕಾನೂನುಗಳ ಚೌಕಟ್ಟುಗಳ ಬಲಪಡಿಸುವಿಕೆಯ ತಿರುವೂ ಹೌದು. ಕಾಲಕ್ಕದು ಅನಿವಾರ್ಯ. ಆದರೆ ಅವೆಲ್ಲ ಇದ್ದರೂ ಅದನ್ನು ಮೀರುವ ಅಥವಾ ಅದರ ಜತೆಗೆ ಸಾಂಗತ್ಯ ಮಾಡಿಕೊಂಡೇ ಬದುಕುವ ಗ್ರಾಮೀಣ ಬದುಕಿನ ಒಂದು ನೈಜ ಸಾಂಸ್ಕೃತಿಕ ಅಥವಾ ಜನಪದ ಬದುಕು ಇಂದಿಗೂ ಹಳ್ಳಿಯಲ್ಲಿದೆ. ಇದನ್ನೇ ನಾವು ದೇಸೀ ಬದುಕು ಅನ್ನೋದು.
ಶಿಕ್ಷಣ ಒಳಗಿನ ಜ್ಞಾನವನ್ನು ಹೊರಗೆಡಹಲು ಸಹಾಯಕವಾಗುವಂತದ್ದು. ಆದರೆ ಶಿಕ್ಷಣ ಇಲ್ಲದಿದ್ದರೂ ಬದುಕಿನ ಖುಷಿಗಳನ್ನು ಆವಾಹಿಸಿಕೊಳ್ಳುವ ಕಲೆ ಮತ್ತು ಅದನ್ನು ಸಮಭಾವ, ಸಮಚಿತ್ತದಲ್ಲಿ ನೋಡಿಕೊಂಡು ಮುಂದುವರಿಯುವ ಚಾಕಚಕ್ಯತೆ ವಿದ್ಯಾವಂತರಿಗಿಂತಲೂ ಹಳ್ಳಿಯ ಅವಿದ್ಯಾವಂತರಲ್ಲಿದೆಯೆಂಬುದೂ ಸತ್ಯ. ಆದ ಕಾರಣ ಆಧುನಿಕ ಕಾನೂನುಗಳ ಸರಹದ್ದಿಗೊಳಪಡುವ ವಿಷಯ ವಿಚಾರಗಳು ಅಲ್ಲಿ ನೈಜ ಬದುಕಿನ ಮೂರ್ತರೂಪಗಳಾಗಿರುತ್ತವೆ. ಅದರಿಂದ ಹೊರಬಂದಾಗ 'ಶಿವ', 'ಬುಲ್ಲ' 'ಗುರುವ'ರು ಅವರಾಗಿರುವುದಿಲ್ಲ.
'ಕಾಂತಾರ' ಇಂತಹ ಒಂದು ಒಳಸೂಕ್ಷ್ಮ ಪ್ರಜ್ಞೆಯತ್ತ ಬೆರಳು ಮಾಡಿ ನಮ್ಮನ್ನು ಯೋಚಿಸುವಂತೆ ಮಾಡುತ್ತದೆ. 'ಭೂತಾರಾಧನೆ' ಎಂಬುದು ಒಂದು ಆರಾಧನೆ ಪ್ರಕ್ರಿಯೆ ಮಾತ್ರ ಅಲ್ಲ. ಅಲ್ಲೊಂದು ಸಾಮಾಜಿಕ ಒಡಂಬಡಿಕೆ ಇದೆ. ನ್ಯಾಯಾನ್ಯಾಯಗಳ ಬಗೆಗಿನ ಚರ್ಚೆಯಿದೆ. ಬದುಕಿನ ಏರಿಳಿತಗಳನ್ನೆಲ್ಲ ಸಮತೂಕದಲ್ಲಿ ಸರಿಹೊಂದಿಸುವ ಕಲಾತ್ಮಕತೆ ಇದೆ. 'ಕಂಬಳ, ಕೋಳಿಅಂಕ'ಗಳು ಪ್ರಾಣಿಹಿಂಸೆಯ ಕ್ರೌರ್ಯತನದ ಮನರಂಜನೆಯಲ್ಲ. ಅದರ ಒಳಗೆ 'ನಾಗರಿಕತೆ'ಗೆ ಅರ್ಥವಾಗದ ಒಂದು ಪ್ರಾಣಿಪ್ರೀತಿಯೂ ಸಹಭಾಗಿ ಬದುಕಿನ ಸಾಂಗತ್ಯವೂ ಸಂತೋಷವೂ ಇದೆ. ಇದನ್ನು 'ಕಾಂತಾರ' ತಿಳಿಸಲು ಪ್ರಯತ್ನಿಸಿದೆ. ಆದ ಕಾರಣ ಈ ಸಿನೆಮಾವನ್ನು ಕನ್ನಡಿಗರು ತುಳುವರು ಮಾತ್ರವಲ್ಲದೆ, ಮಲೆಯಾಳಿಗರೂ ಪ್ರೀತಿಯಿಂದ ಅಪ್ಪಿಕೊಂಡದ್ದನ್ನು ಕಳೆದ ಏಳು ದಿನಗಳಿಂದ ಬಹಳ ಹತ್ತಿರದಿಂದ ಗಮನಿಸುತ್ತಿದ್ದೇನೆ.
ರಿಷಬ್ ಶೆಟ್ಟಿಯ ಅಭಿನಯ ಕೌಶಲ್ಯಕ್ಕೆ ಸಲಾಮು ಹೊಡೆದರೆ ಮಾತ್ರ ಸಾಲದು. ಅವರ ಚಿತ್ರಪ್ರೀತಿ ಮತ್ತು ನಿಷ್ಠೆಯನ್ನು ಹತ್ತಿರದಿಂದ ಬಲ್ಲವನೆಂಬ ನೆಲೆಯಲ್ಲಿ ಅವರ ಬಗ್ಗೆ ಒಂದೆರಡು ವಿಷಯಗಳನ್ನು ಇಲ್ಲಿ ಹೇಳಲೇಬೇಕು. ಒಂದು 'ವಸ್ತು' ವಿನ ಆಳಕ್ಕಿಳಿದು ಅಲ್ಲಿರುವ ಮೌಲ್ಯವೈಡೂರ್ಯಗಳನ್ನು ಹೆಕ್ಕಿ ಪೋಣಿಸುವ ಕೌಶಲ್ಯ, ಆಸಕ್ತಿ ಮತ್ತು ಅಧ್ಯಯನಶೀಲ ಗುಣ ಶೆಟ್ಟಿಯವರಲ್ಲಿದೆ. ತನ್ನ ಪರಿಸರದ ಸಾಂಸ್ಕೃತಿಕ, ಸಾಮಾಜಿಕ, ಸಕಾಲಿಕ ಹಾಗೂ ಜನಪದೀಯ ವಸ್ತುಗಳ ಬಗ್ಗೆ ಕುತೂಹಲ ತಾಳುವ ಮತ್ತು ಅದನ್ನು ಜೀವಂತಿಕೆ ಹಾಗೂ ನೈಜತೆಗೆ ಊನವಾಗದಂತೆ ಚಿತ್ರಿಸುವ ಜಾಣ್ಮೆಯೂ ಇದೆ. 'ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಚಿತ್ರ ಗೆದ್ದದ್ದು, ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದ್ದು ಈ ಕಾರಣಕ್ಕೆ.
ರಿಷಬ್ ಶೆಟ್ಟಿಯವರ ಈ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಕಾಂತಾರದಲ್ಲೂ ಕಾಣಬಹುದು.
'ಕಮರ್ಶಿಯಲ್ ಫಾರ್ಮುಲ' ದ ಕೆಲವೊಂದು ಇತಿಮಿತಿಯ ಸನ್ನಿವೇಶಗಳನ್ನು ಕೈಬಿಟ್ಟರೆ, ಒಂದು ಹಂತ ಕಳೆದ ಬಳಿಕ ಸಿನೆಮಾ ಸಾಗುವ 'ಕ್ಷಿಪ್ರ ತಿರುವು' ಹಾಗೂ 'ಕ್ಲೈಮ್ಯಾಕ್ಸ್' ಸಿನೆಮಾದ ಶಕ್ತಿಯಾಗಿ ಮೂಡಿದೆ.
ತಪ್ಪು ಮಾಡಿದವನೊಳಗಿನ 'ಸುಪ್ತಪ್ರಜ್ಞೆ' ಅಥವಾ ಸಾಮಾನ್ಯವಾಗಿ ನಾವು ಹೇಳುವ 'ಆತ್ಮಸಾಕ್ಷಿ' ಎಲ್ಲೋ ಒಂದು ಕಡೆ ಆತನೊಳಗೆಲ್ಲೊ ಹೊಗೆಯಾಡುತ್ತಾ ಆತನ ಕೊರಳದುಮುತ್ತಾ ಹೊರಬರಲು ಪ್ರಯತ್ನಿಸುತ್ತಿರುತ್ತದೆ. ರಿಲ್ಯಾಕ್ಸ್ ಗಾಗಿ ಅದು ಹಾತೊರೆಯುತ್ತದೆ. ಅದರ ರೂಪ ಯಾವುದೋ ಏನೋ ಆಗಿರಬಹುದು.
ಕಾಂತಾರದ 'ಧನಿ' ತನ್ನ 'ದಿವ್ಯಾಂಗ'ನಾದ ಮಗನಲ್ಲಿ ಗುಟ್ಟು ಬಿಚ್ಚಿಡುವ ಪ್ರಕ್ರಿಯೆಯನ್ನು ಹೀಗೆ ಆಧುನಿಕ ಮನಶಾಸ್ತ್ರದ ಹಿನ್ನೆಲೆಯಲ್ಲೂ ವಿವೇಚಿಸಬಹುದು. 'ಧನಿ'ಯ ಸಹಧರ್ಮಿಣಿಯ ಆಳಮೌನ, ಶೂನ್ಯದೃಷ್ಟಿ ಮತ್ತು ಎಲ್ಲೋ ಕೆಲವೊಮ್ಮೆ ಮೂಡುವ ಮಂದಹಾಸದ ಹಿಂದಿನ 'ನೋವು' ಸಿರಿವಂತಿಕೆಯೊಳಗಿನ 'ನಿಗೂಢ ಕತ್ತಲೆಗಳತ್ತ' ಬೆಳಕು ಚೆಲ್ಲುತ್ತದೆ. ಇಲ್ಲಿಯೆಲ್ಲ 'ಮೌನ' ವೇ ನಮ್ಮ ಜತೆ ಮಾತನಾಡುತ್ತದೆ.
'ದೈವದೋಷ' ಹೋಗಲು 'ಕೋಲ' ಸಾಕೇ? ಮನುಷ್ಯರಾಗಿರಬೇಡವೇ? 'ಮನುಷ್ಯ' ಮತ್ತು 'ಪಂಜುರ್ಲಿ' ಯ ಮಧ್ಯೆ ನಿಜಕ್ಕೂ ನಡೆಯುವ ಸೂಕ್ಷ್ಮಗಳ ಒಳಗೆ ಸಮತೂಕ, ಸಹಬಾಳ್ವೆ ಹಾಗೂ ಸಮಚಿತ್ತದ ಬಿಚ್ಚಿಡುವ ಅನೇಕ ಇಂತಹ ಒಳಗುಟ್ಟುಗಳು ಚಿತ್ರದಲ್ಲಿವೆ. ಸೂಕ್ಷ್ಮಗ್ರಾಹಿ ಪ್ರೇಕ್ಷಕ ಇದನ್ನು ಗುರುತಿಸಬಲ್ಲ.
1997 ರಲ್ಲಿ ಬಿಡುಗಡೆಗೊಂಡ, ಷೇಕ್ಸಫಿಯರ್ ನ 'ಅಥಲೊ' ನಾಟಕ ಆಧಾರಿತ 'ಕಳಿಯಾಟಂ' ಎಂಬ ಮಲೆಯಾಳ ಸಿನೆಮಾವನ್ನು ಜಯರಾಜ್ ನಿರ್ದೇಶಿಸಿದ್ದರು. ಸುರೇಶ್ ಗೋಪಿ - ಮಂಜುವಾರ್ಯರ್ ಮುಖ್ಯ ಅಭಿನಯದ ಈ ಚಿತ್ರವು ದೈವಾರಾಧನೆಯನ್ನು ವಸ್ತುವಾಗಿಟ್ಟುಕೊಂಡು ಹೆಣೆದ ಕಥಾಹಂದರವಿರುವ ಚಿತ್ರ. 'ಕಾಂತಾರ' ವು 'ಕಳಿಯಾಟಂ' ನ್ನು ನೆನಪಿಸುತ್ತದೆ. ಮಾತ್ರವಲ್ಲ ಎರಡೂ ಸಿನೆಮಾಗಳ ಒಳಗೆ ದೈವನರ್ತಕ ಸಮುದಾಯಗಳ ಒಳಬೇಗುದಿ, ಒಳತುಡಿತ ಹಾಗೂ ಪ್ರತಿಭಾಕೌಶಲ್ಯಗಳ ಅನಾವರಣವಿದೆ. ಆದ ಕಾರಣ ಇಂತಹ ಸಿನೆಮಾಗಳು ಮೂರು ಗಂಟೆಯ ಮನರಂಜನೆಗೆ ಮಾತ್ರ ಸೀಮಿತವಾಗುವುದಿಲ್ಲ. ಇದೊಂದು ದಾಖಲಾತಿ ಕಾರ್ಯವೂ ಹೌದು. ಕರಾವಳಿಯ ಆರಾಧನೆ ಮತ್ತು ನಂಬಿಕೆಗಳ ಬಗ್ಗೆ ಮನಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಮಾಡುವವರಿಗೆ ಇಂತಹ ಸಿನೆಮಾಗಳು ಸಹಾಯಕವಾಗಬಲ್ಲುದು.
"ಕನ್ನಡ ಪಡಂ ಆಯದ್ ಕೊಂಡ್ ಪ್ರೇಕ್ಷಗರ್ ಉಂಡಾವುಲ್ಲ ಎನ್ನುಳ್ಳ ಎಂಡೆ ಕಣಕ್ಕ್ ತೆಟ್ಟಿ. ಶೋ ಇನ್ನುಂ ಹೌಸ್ ಫುಲ್." (ಕನ್ನಡ ಚಿತ್ರವಾದ ಕಾರಣ ಪ್ರೇಕ್ಷಕರು ಇರಲಾರರು ಎಂಬ ನನ್ನ ಲೆಕ್ಕಾಚಾರ ತಪ್ಪಿತು. ಶೋ ಇಂದೂ ಹೌಸ್ ಫುಲ್) ಎಂಬ ಮಲೆಯಾಳಿ ಚಿತ್ರಪ್ರೇಮಿಯೋರ್ವರ ಲಿಖಿತ ಹೇಳಿಕೆ ನನ್ನ ಗಮನ ಸೆಳೆಯಿತು.
'ಒಥೆಲೊ' ಆಧಾರಿತ 'ಕಳಿಯಾಟ್ಟಂ' ನ ನಿರ್ದೇಶನಕ್ಕೆ ರಾಷ್ಟ್ರಪ್ರಶಸ್ತಿಯ ಕಿರೀಟ ದಕ್ಕಿದೆ. 'ಕಾಂತಾರ'ಕ್ಕೆ ಈ ಕಿರೀಟ ಬರಲು ಇದರ ಕ್ಲೈಮ್ಯಾಕ್ಸ್ ಸಾಕು ಎಂಬ ಮಾತಿನೊಂದಿಗೆ ವಿರಮಿಸುವೆ. ರಿಷಬ್ ಹಾಗೂ ತಂಡಕ್ಕೆ ಅಭಿನಂದನೆ.
✍️ ಡಾ.ರತ್ನಾಕರ ಮಲ್ಲಮೂಲೆ
ಸರಕಾರಿ ಮಹಾವಿದ್ಯಾಲಯ ಕಾಸರಗೋಡು.