ವಾಮಂಜೂರು: ತುಳುನಾಡಿನಲ್ಲಿ ದೈವಗಳ ಕಾರ್ಣಿಕ ಶಕ್ತಿಗೆ ಹಲವಾರು ನಿದರ್ಶನಗಳು ಸಿಗುತ್ತವೆ. ಕೋರ್ಟ್, ಪೊಲೀಸ್ ಠಾಣೆಯಲ್ಲಿ ಇತ್ಯರ್ಥಗೊಳ್ಳದ ಅದೆಷ್ಟೋ ಪ್ರಕರಣಗಳು ದೈವದ ಮುಂದೆ ಬಗೆಹರಿಸಲ್ಪಟ್ಟಿವೆ. ಮಂಗಳೂರಿನ ವಾಮಂಜೂರಿನಲ್ಲಿ ನಡೆದ ಘಟನೆಯೊಂದು ದೈವದ ಕಲೆ ಕಾರ್ಣಿಕವನ್ನು ಮತ್ತೆ ಮನವರಿಕೆ ಮಾಡಿಸಿಕೊಟ್ಟಿದೆ. ಕಾಂತಾರ ಸಿನಿಮಾದ ಗುಂಗಿನಲ್ಲಿದ್ದವರಿಗೆ ಈ ಘಟನೆಯು ಅಚ್ಚರಿ ಮೂಡಿಸಿದೆ.
ವಾಮಂಜೂರಿನಲ್ಲಿ ದಸರಾ ಹಬ್ಬದ ಹಿನ್ನೆಲೆಯಲ್ಲಿ ಶಾರದೋತ್ಸವ ಸಮಿತಿ ಹಾಗೂ ವಾಮಂಜೂರು ಫ್ರೆಂಡ್ಸ್ ನೇತೃತ್ವದಲ್ಲಿ ಕಟೌಟ್ ಮತ್ತು ಬ್ಯಾನರ್ ಹಾಕಲಾಗಿತ್ತು. ಬ್ಯಾನರ್ ಹರಿದು ಗಲಭೆ ಸೃಷ್ಟಿಸುವ ಹುನ್ನಾರ ಬೆಳಕಿಗೆ ಬಂದಿತ್ತು. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿತ್ತು. ಆದರೆ ತಕ್ಷಣ ಎಚ್ಚೆತ್ತುಕೊಳ್ಳಬೇಕಾಗಿದ್ದ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಆರೋಪಿಗಳನ್ನು ಮಟ್ಟಹಾಕುವ ಪ್ರಯತ್ನ ಮಾಡಿಲ್ಲ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಜೊತೆಗೆ ದೂರು ನೀಡಿ ದಿನಗಳು ಉರುಳಿದ್ದರೂ, ಸಿಸಿ ಟಿವಿ ಸಾಕ್ಷ್ಯಗಳಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸದೆ ಮೌನ ವಹಿಸಿದ್ದರು ಎಂದು ಆರೋಪ ಮಾಡಿದ್ದಾರೆ.
ಇದರಿಂದ ಬೇಸತ್ತ ವಾಮಂಜೂರು ಸಮಿತಿಯು ಶ್ರೀಮಂತ ರಾಜ ಗುಳಿಗ ದೈವದ ಮೊರೆ ಹೋಗಬೇಕಾಯಿತು. ಬ್ಯಾನರ್ ಹರಿದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲಿ ಎಂದು ದೈವಕ್ಕೆ ಪ್ರಾರ್ಥನೆ ಸಲ್ಲಿಸಿದರು. ಯುವಕರ ಪ್ರಾರ್ಥನೆ ಕೊನೆಗೂ ಫಲ ನೀಡಿದೆ. ಆರೋಪಿಗಳಾದ ಸುಮಿತ್ ಹೆಗ್ಡೆ, ಯತೀಶ್ ಪೂಜಾರಿ ಮತ್ತು ಪ್ರವೀಣ್ ಪೂಜಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಂತಾರ ಸಿನಿಮಾದ ಅಬ್ಬರದ ನಡುವೆಯೇ ತುಳುನಾಡು ಮತ್ತೊಮ್ಮೆ ದೈವದ ಕಾರ್ಣಿಕಕ್ಕೆ ಸಾಕ್ಷಿಯಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ