ಕುಂಬಳೆ: ಇತಿಹಾಸ ಪ್ರಸಿದ್ಧ ಸರೋವರ ಕ್ಷೇತ್ರ ಎಂದೇ ಜನಜನಿತ ಅನಂತಪುರ ಶ್ರೀಅನಂತ ಪದ್ಮನಾಭ ಕ್ಷೇತ್ರದ ಪ್ರತ್ಯಕ್ಷ ದೇವರೆಂದೆ ಭಕ್ತಿಗೆ ಕಾರಣೀಭೂತವಾದ ಬಬಿಯ ಎಂಬ ಮೊಸಳೆ ರವಿವಾರ ತಡ ರಾತ್ರಿ ಇಹಲೋಕ ತ್ಯಜಿಸಿತ್ತು. ಸೋಮವಾರ ಪೂರ್ವಾಹ್ನ ಶಾಸ್ತ್ರೋಕ್ತ ವಿಧಿ ವಿಧಾನಗಳೊಂದಿಗೆ ಕ್ಷೇತ್ರ ಮುಂಭಾಗದ ಬಲ ಪಾರ್ಶ್ವದಲ್ಲಿ ಬಬಿಯನ ಅಂತ್ಯ ಸಂಸ್ಕಾರ ನಡೆಸಲಾಯಿತು. ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಗಣೇಶ್ ತಂತ್ರಿ ದೇಲಂಪಾಡಿ ಅವರ ನೇತೃತ್ವದಲ್ಲಿ ಅಂತಿಮ ವಿಧಿ ವಿಧಾನ ನೇರೆವೇರಿಸಲಾಯಿತು.
ಸೋಮವಾರ ಬೆಳಗ್ಗಿನಿಂದಲೇ ನಾಡಿನ ನಾನಾ ಕಡೆಯ ಆಸ್ತಿಕ ಶ್ರದ್ಧಾಳುಗಳು ಬಬಿಯನ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಕಾಸರಗೋಡಿನ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕ ಎನ್.ಎ.ನೆಲ್ಲಿಕುನ್ನು, ಎಕೆಎಂ ಆಶ್ರಫ್ ಮಂಜೇಶ್ವರ ಹಾಗೂ ವಿವಿಧ ಪಂ.ಜನ ಪ್ರತಿನಿಧಿಗಳು, ಪಕ್ಷ ಸಂಘಟನೆಗಳ ನೇತಾರರು ಅಂತಿಮ ದರ್ಶನಗೈದರು.
ಕ್ಷೇತ್ರ ಮುಂಭಾಗದಲ್ಲಿ ವಿಶೇಷವಾಗಿ ಭಕ್ತ ಜನತೆಗೆ ಬಬಿಯನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪರಿಸರದಲ್ಲಿ ಶೋಕ ನಿರತ ಅಸಂಖ್ಯಾತ ಜನ ಶ್ರದ್ಧಾಳುಗಳು ಬಬಿಯನ ಗುಣಗಾನಗೈಯುತ್ತಿದ್ದರು. ಪ್ರತ್ಯಕ್ಷ ದೇವರು ಎಂದೇ ಜನಜನಿತವಾಗಿ ವಿಶ್ವ ಪ್ರವಾಸೋದ್ಯಮದ ನಕ್ಷೆಯಲ್ಲಿ ಗುರುತಿಸಿಕೊಂಡಿದ್ದ ಬಬಿಯ ಇನ್ನಿಲ್ಲ ಎಂಬುದು ಜನರ ಕೊರಗು ಎಲ್ಲೆಡೆಯೂ ಎದ್ದು ಕಾಣುತ್ತಿತ್ತು. ನೂರಾರು ಜನ ಸಮಕ್ಷಮದಲ್ಲಿ ಮಧ್ಯಾಹ್ನ ವೇಳೆಗೆ ಅಂತ್ಯ ಸಂಸ್ಕಾರ ಪೂರ್ಣಗೊಂಡಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ