ಮೂಡುಬಿದಿರೆ: 12ನೇ ವರ್ಷದ 'ಆಳ್ವಾಸ್ ಪ್ರಗತಿ' ಬೃಹತ್ ಉದ್ಯೋಗ ಮೇಳ ಶುಕ್ರವಾರ ಮತ್ತು ಶನಿವಾರ ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ನಡೆಯಿತು. ಎರಡು ದಿನಗಳ ಕಾಲ ನಡೆದ ಉದ್ಯೋಗ ಮೇಳದಲ್ಲಿ, 1,346 ಉದ್ಯೋಗಾಕಾಂಕ್ಷಿಗಳನ್ನು ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಳ್ಳಲಾಗಿದೆ.
ಮೇಳದಲ್ಲಿ ಭಾಗವಹಿಸಿದ ಒಟ್ಟು 222 ಕಂಪನಿಗಳ ಪೈಕಿ 159 ಕಂಪನಿಗಳು, 3,118 ಜನರನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಉದ್ಯೋಗ ಮೇಳದ ಎರಡನೇ ದಿನ 2,342 ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು 8,160 ಅಭ್ಯರ್ಥಿಗಳು ಆಳ್ವಾಸ್ ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಿದರು.
ಬೆಂಗಳೂರು ಮೂಲದ ಜಾಗತಿಕ ಆನ್ಲೈನ್ ವೃತ್ತಿಪರ ತರಬೇತುದಾರ ಕಂಪನಿ ಇಂಟೆಲಿಪಾತ್ ಸಾಫ್ಟ್‌ವೇರ್ ಸೊಲ್ಯುಶನ್ಸ್ ಪ್ರೈ. ಲಿ. ಒಟ್ಟು 26 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಪ್ರತಿಯೊಬ್ಬರಿಗೂ ತಲಾ 9 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ಅನ್ನು ಘೋಷಿಸಿದೆ. ಅದಲ್ಲದೇ, ಅಮೆಜಾನ್ ಕಂಪನಿ 18 ಅಭ್ಯರ್ಥಿಗಳಿಗೆ ರೂ. 3.2 ಲಕ್ಷ ವಾರ್ಷಿಕ ಪ್ಯಾಕೇಜ್, ಉಜ್ಜೀವನ್ ಸ್ಮಾಲ್ ಫಿನಾನ್ಸ್ ಬ್ಯಾಂಕ್ 31 ಅಭ್ಯರ್ಥಿಗಳನ್ನು ರೂ.2.5 ರಿಂದ 3.2 ಲಕ್ಷ ವಾರ್ಷಿಕ ಪ್ಯಾಕೇಜ್, ಟ್ರೇಡ್‌ಬುಲ್ ಕಂಪನಿ 32 ಅಭ್ಯರ್ಥಿಗಳನ್ನು ರೂ. 2.54 ರಿಂದ 3.8 ಲಕ್ಷ ವಾರ್ಷಿಕ ಪ್ಯಾಕೇಜ್ ನೊಂದಿಗೆ ಸ್ಥಳದಲ್ಲಿಯೇ ನೇಮಕಾತಿ ಮಾಡಿಕೊಂಡಿದೆ.
ಮೇಳದಲ್ಲಿ ಭಾಗವಹಿಸಿದ ಭವ್ಯ ಎನ್., ಕೋಲಾರ ಮಾತನಾಡಿ, ನೂರಾರು ಕಂಪನಿಗಳು ಒಂದೇ ಸೂರಿನಡಿ ಬಂದಿರುವುದು ವಿದ್ಯಾರ್ಥಿಗಳಾಗಿ ನಮಗೆ ಬಹಳ ಖುಷಿ ನೀಡಿದೆ. ಬಹಳಷ್ಟು ಅವಕಾಶಗಳು ಇಲ್ಲಿ ಸಿಕ್ಕಿದ್ದರಿಂದ ನಮ್ಮ ಆಸಕ್ತಿಗೆ ತಕ್ಕ ಕಂಪನಿಯಲ್ಲಿ ಸಂದರ್ಶನ ನೀಡಲು ಸಾಧ್ಯವಾಯಿತು.
ನನಗೆ ಒಟ್ಟು ಮೂರು ಕಂಪನಿಗಳಲ್ಲಿ ಉದ್ಯೋಗ ಲಭಿಸಿದ್ದು, 9 ಲಕ್ಷ ರೂಪಾಯಿ ವಾರ್ಷಿಕ ಪ್ಯಾಕೇಜ್ ನೀಡಿದ ಇಂಟೆಲಿಪಾತ್ ಕಂಪನಿಯನ್ನು ನಾನು ಆಯ್ಕೆ ಮಾಡಿಕೊಂಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ಉದ್ಯೋಗ ಲಭಿಸಿದ ಅಂಜಲಿ ಕಡೇಲಿ, ಹುಕ್ಕೇರಿ, ಬೆಳಗಾವಿ (ಇಂಟೆಲಿಪಾತ್ ಕಂಪನಿಗೆ ಆಯ್ಕೆ) ಮಾತನಾಡಿ , ಪದವಿ ಮುಗಿದ ತಕ್ಷಣ ಫ್ರೆಷರ್‌ಗಳಿಗೆ 9 ಲಕ್ಷ ರೂಪಾಯಿಗಳ ವಾರ್ಷಿಕ ಪ್ಯಾಕೇಜ್ ಸಿಗುತ್ತಿದೆ ಎಂದರೆ ನಂಬಲು ಆಗುತ್ತಿಲ್ಲ. ಆಳ್ವಾಸ್ ವಿದ್ಯಾರ್ಥಿಯಾಗಿದ್ದರಿಂದ ಬೇರೆ ಬೇರೆ ಕಂಪನಿಗಳಿಗೆ ಸಂದರ್ಶನ ನೀಡಲು ಬಹಳ ಧೈರ್ಯವೂ ಬಂತು ಎಂದರು.
ರೇಷ್ಮಾ ಕೆ., ಮಣಿಪಾಲ ಮಾತನಾಡಿ, ನಾನು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿ. ಉದ್ಯೋಗ ಹುಡುಕಾಡುವುದರಲ್ಲಿ ಇದು ನನ್ನ ಮೊದಲ ಪ್ರಯತ್ನ. ಆಳ್ವಾಸ್ ಪ್ರಗತಿಯಲ್ಲಿ ಐದಾರು ಕಂಪನಿಗಳಿಗೆ ಸಂದರ್ಶನ ನೀಡಿದ್ದೆ. ವೋಲ್ವೊ ಸೀ ಇಂಡಿಯಾ ಕಂಪನಿಗೆ ಆಯ್ಕೆ ಆಗಿರುವುದು ಬಹಳ ಸಂತಸ ತಂದಿದೆ. ಈ ಉದ್ಯೋಗ ಮೇಳವು ಬಹಳ ಅಚ್ಚುಕಟ್ಟಾಗಿ ಆಯೋಜನೆಗೊಂಡಿದ್ದು, ಇದಕ್ಕಾಗಿ ನಾನು ಆಳ್ವಾಸ್‌ಗೆ ಆಭಾರಿಯಾಗಿದ್ದೇನೆ ಎಂದು ಸಂತಸವನ್ನು ಹಂಚಿಕೊಂಡರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ