ಅನಂತಪುರದ ಅನಂತಸ್ವಾಮೀ ಕ್ಷೇತ್ರದ ಬಬಿಯ ಮತ್ತು ನಾನು- (ಭಾಗ 8 -ಕೊನೆಯ ಕಂತು)

Upayuktha
0



ಈ ಹಿಂದಿನ ಏಳು ಕಂತುಗಳಲ್ಲಿ ಒಂದನೇ ಬಬಿಯನ ಆಗಮನ ಮತ್ತು ಅವನ ಅಂತ್ಯದ ವರೆಗಿನ ವಿವರ ಕೊಟ್ಟಿರುತ್ತೇನೆ. ಹಾಗೆಯೇ ಎರಡನೇ ಬಬಿಯನ ಆಗಮನದ ಬಗ್ಗೆಯೂ ತಿಳಿಸಿರುತ್ತೇನೆ. ಅನಂತಪುರದ ಅನಂತ ಪದ್ಮನಾಭ ಸ್ವಾಮಿ ಕ್ಷೇತ್ರದ ಜೀರ್ಣೋದ್ಧಾರ ಪ್ರಕ್ರಿಯೆಗಳು ಸುರುವಾದುದನ್ನು ಕೂಡಾ ತಿಳಿಸಿರುತ್ತೇನೆ. ಇನ್ನು ಶ್ರೀಕ್ಷೇತ್ರಕ್ಕೆ ವಿದ್ಯುತ್ ಒದಗಿಸಿ ಕೊಡುವ ಜವಾಬ್ಧಾರಿಯನ್ನು ನನಗೆ ವಹಿಸಿದ ಬಗ್ಗೆಯೂ ತಿಳಿಸಿದ್ದೇನೆ. ಅದರೊಂದಿಗೆ ಎರಡನೇ ಬಬಿಯನೊಂದಿಗೆ ಈ ಲೇಖಕನ ಒಡನಾಟದ ಬಗ್ಗೆಯೂ ತಿಳಿಸಿದ್ದೇನೆ.

"ಇಂದಿನ ಲೇಖನ ಸಸ್ಯಾಹಾರ- ಮಾಂಸಾಹಾರ- ಸರಿ ತಪ್ಪುಗಳ ಬಗ್ಗೆ. ಅದನ್ನು ತಿಳಿಯಲು ನೀವು ಇಂದಿನ ಬರಹ ಓದಲೇ ಬೇಕು.

ಬಬಿಯನ ಬಗ್ಯೆ ಸಸ್ಯಾಹಾರಿ ಮಾಂಸಾಹಾರಿ ಎಂಬ ಚರ್ಚೆ ಜಾಲತಾಣದಲ್ಲಿ ತುಂಬಾ ರೀತಿಯಲ್ಲಿ ಹರಿದಾಡುತ್ತಿದೆ. ಇದರಲ್ಲಿ ಮುಖ್ಯವಾಗಿ ಮಾಂಸಾಹಾರಿ ಪ್ರಾಣಿಗೆ ಬಲಾತ್ಕಾರವಾಗಿ ಸಸ್ಯಾಹಾರ ತಿನ್ನಿಸಿ ಅದರ ಅಕಾಲ ಮೃತ್ಯುವಿಗೆ ಕಾರಣರಾದರು ಎಂಬುದು. ಮೊದಲು ಇದರ ಬಗ್ಗೆಯೇ ಆಲೋಚಿಸೋಣ.


ಒಂದು ಮೊಸಳೆಯ ಆಯುಸ್ಸು ಎಷ್ಟು ಎಂದು ಈ ರೀತಿಯ ಬರಹಗಾರರಿಗೆ ತಿಳಿದಿದೆಯೇ ತಿಳಿಯದು? ನಾನು ತಿಳಿದಂತೆ ಸಾಮಾನ್ಯವಾಗಿ ಸಿಹಿನೀರಲ್ಲಿ ಬದುಕುವ ಮೊಸಳೆ 60 ರಿಂದ 65 ವರ್ಷ ಬದುಕಿದರೆ ಉಪ್ಪು ನೀರಲ್ಲಿ ಅಂದರೆ ಸಮುದ್ರದಲ್ಲಿ ಬದುಕುವ ಮೊಸಳೆ 70 ರಿಂದ 75 ವರ್ಷ ಬದುಕುತ್ತದಂತೆ. ಅದರಿಂದ ಹೆಚ್ಚು ಬದುಕಿದ ಉದಾಹರಣೆಗಳು ಧಾರಾಳ ಇರಬಹುದು ಆದರೆ ಸರಾಸರಿ ಆಯುಸ್ಸು ಎಂಬುದು ಇಷ್ಟೆ.

ಈ ಎರಡನೇ ಬಬಿಯ ಸಾಮಾನ್ಯ ನಾವು ತಿಳಿದಂತೆ 1945 ರಲ್ಲಿಯೇ ಪ್ರತ್ಯಕ್ಷ ಆಗಿದ್ದ. (ಈ ಬಗ್ಗೆ ಸ್ನೇಹಿತರೊಬ್ಬರು ಹೆಚ್ಚಿನ ವಿವರ ಕೊಟ್ಟಿದ್ದಾರೆ. ಅದನ್ನು ಮುಂದೆ ತಿಳಿಸುತ್ತೇನೆ.) ಅಂದರೆ ಏನೆಂದರೂ ಬಬಿಯ ಹೆಚ್ಚು ಕಡಮೆ 80 ವರ್ಷ ಸಿಹಿ ನೀರಲ್ಲಿ ಬದುಕಿದ್ದ. ಇನ್ನೇನು ಬೇಕು ಈ ಬರವಣಿಗೆ ಬರೆಯುತ್ತಿರುವವರಿಗೆ ತಾವು ತಪ್ಪು ಮಾಹಿತಿ ಹಂಚುತ್ತಿದ್ದೇವೆಂದು ತಿಳಿಯಲು?.


ಇನ್ನು ಬಬಿಯನಿಗೆ ಸಸ್ಯಾಹಾರೀ ಆಹಾರ ಕೊಟ್ಟ ಬಗ್ಗೆ ಒಂದಷ್ಟು ವಿಚಾರ. 

ಸಾಮಾನ್ಯವಾಗಿ ಮೊಸಳೆಗಳು ಮಾಂಸಾಹಾರಿಗಳೇ ಇದರಲ್ಲಿ ಸಂದೇಹವೇ ಇಲ್ಲ. ಮೊಸಳೆಗಳ ಆಹಾರ ಕ್ರಮದಂತೆ ಒಮ್ಮೆ ಹೊಟ್ಟೆ ತುಂಬಾ ಆಹಾರ ತಿಂದರೆ ಮುಂದಿನ ಐದು ದಿನ ಅವುಗಳು ಆಹಾರ ಸೇವಿಸುವುದಿಲ್ಲವಂತೆ. (ನಾನು ಪ್ರಾಣಿ ಶಾಸ್ತ್ರ ಪರಿಣಿತ ಖಂಡಿತಾ ಅಲ್ಲ. ನನ್ನ ಸ್ನೇಹಿತರು ಕಳುಹಿಸಿದ ಮಾಹಿತಿಯ ಆಧಾರದ ಮೇಲಿನಿಂದ ಬರೆಯುತ್ತಿದ್ದೇನೆ.) ಬಬಿಯನಿಗೆ ದೇವಸ್ಥಾನದ ನೈವೇಧ್ಯವಾದ ಅರ್ಧ ಕಿಲೋ ಅಥವಾ ಒಂದು ಕಿಲೋ ಅಕ್ಕಿಯ ನೈವೇಧ್ಯ ತಿಂದರೆ ಹೊಟ್ಟೆ ತುಂಬ ಬಹುದಿತ್ತೇ? ಅವ ನೈವೇಧ್ಯ ಹಾಕಿದ ಕೂಡಲೇ ತಿನ್ನಲು ಬರುತ್ತಿದ್ದ ಎಂದೇನೂ ಇರಲಿಲ್ಲ ನಾನು ನೋಡಿದಂತೆ. ಒಂದನೇ ಬಬಿಯ ದಿನಾ ಅದೇ ಸಮಯಕ್ಕೆ ಬರುತ್ತಿದ್ದನಂತೆ. ಇವ ಅಂತಹಾ ನಿಯಮಗಳೇನೂ ಇಟ್ಟು ಕೊಂಡಿರಲಿಲ್ಲ. ಅವನಿಗೆ ಮನಸಾದಾಗ ಬಂದು ತಿನ್ನುತ್ತಿದ್ದ. ಇಲ್ಲಿ ವಿಚಿತ್ರ ಎಂದರೆ ಮಾಂಸಾಹಾರಿ ಪ್ರಾಣಿ ಆದ ಮೊಸಳೆ ಈ ಅನ್ನವನ್ನು ತಾನಾಗಿ ಬಂದು ತಿನ್ನುತ್ತಿತ್ತು ಎಂಬುದು. ಸಾಕಷ್ಟು ದೊಡ್ಡ ದೊಡ್ಡ ಮೀನುಗಳು ನಾನು ಅಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸರೋವರ ತುಂಬಾ ಇತ್ತು. ಅವುಗಳನ್ನು ತಿಂದು ತನ್ನ ಹೊಟ್ಟೆ ತುಂಬ ಬಲ್ಲ ಬಬಿಯನಿಗೆ ಈ ಅನ್ನವೇ ಬೇಕಿತ್ತೇ? ಅವನಿಗೆ ಒತ್ತಾಯ ಪೂರ್ವಕವಾಗಿ ಆಹಾರ ಕೊಡಲು ಸಾಧ್ಯವಿತ್ತೇ?. ಇತ್ತು ಅಂದರೆ ಹೇಗೆ ಸಾಧ್ಯವಿತ್ತು ಎಂದು ಆ ಬರಹಗಾರರೇ ತಿಳಿಸಬೇಕಷ್ಟೆ. ಇದು ಮಾತ್ರವಲ್ಲದೆ ಬಬಿಯನ ಸಂಚಾರಕ್ಕೆ ಎಲ್ಲೂ ಯಾವರೀತಿಯ  ತಡೆಯೂ ಇರಲಿಲ್ಲ. ಅವನಿಗೆ ಮನ ಬಂದಂತೆ ಸಂಚರಿಸುವ ಅವಕಾಶ ಸದಾ ಇತ್ತು ಮಾತ್ರವಲ್ಲ ಅವನು ಆ ಸ್ವಾತಂತ್ರ್ಯವನ್ನು ಧಾರಾಳವಾಗಿಯೇ ಉಪಯೋಗಿಸುತ್ತಿದ್ದ. ಅವನಿಗೆ ಬೇಕಾದ ಮಾಂಸಾಹಾರ ಹೊರಗಾದರೂ ಸಂಪಾದಿಸಲು ಅವನಿಗೆ ಯಾವುದೇ ಅಡ್ಡಿ ಇರಲಿಲ್ಲ. ಆದರೂ ಅವ ಅನ್ನವನ್ನು ತಿನ್ನುತ್ತಿದ್ದ ಎಂಬುದೇ ವಿಚಿತ್ರವಲ್ಲವೇ?


ಇಷ್ಟು ವಿವರಗಳೇ ಸಾಕೆನ್ನಿಸುತ್ತಿದೆಯಲ್ಲವೇ? ಬಬಿಯ ಜನ್ಮತಾ ಮಾಂಸಾಹಾರಿಯಾಗಿದ್ದರೂ ಸಸ್ಯಾಹಾರ ತಿನ್ನುತ್ತಿದ್ದ ಎಂಬುದಕ್ಕೆ.


ಇನ್ನು ಅವನು ಸಸ್ಯಾಹಾರಿಯೇ ಮಾಂಸಾಹಾರಿಯೇ ಎಂಬ ಪ್ರಶ್ನೆ ಬೇರೆ ಬೇಕೇ?. ಹುಟ್ಟಾ ಮಾಂಸಾಹಾರಿ ಪ್ರಾಣಿ ಬಬಿಯ. ಅವನನ್ನು ಸಸ್ಯಾಹಾರಿ ಎಂದು ಹಣೆಪಟ್ಟಿ ಕಟ್ಟಲು ನಾನಂತೂ ಖಂಡಿತಾ ತಯಾರಿಲ್ಲ. ಆದರೆ ಇಲ್ಲಿ ಸಾಮಾನ್ಯಕ್ಕಿಂತ ವ್ಯತ್ಯಸ್ಥವಾಗಿ ಕಾಣ ಬರುತ್ತಿದ್ದುದು ಏನೆಂದರೆ ಅವನಿಗೆ ಸ್ವತಂತ್ರವಾಗಿ ಮಾಂಸಾಹಾರ ಆಯ್ಧುಕೊಳ್ಳುವ ಅವಕಾಶ ಇದ್ದರೂ ಅವ ಸಸ್ಯಾಹಾರವನ್ನು ಕೂಡಾ ಮೆಲ್ಲುತ್ತಿದ್ದ ಎಂಬುದು. ಅವನು ಅವನ ಪಾಡಿಗೆ ಮಾಂಸಾಹಾರ ತಿಂದಿರಲೂ ಸಾಕು. ಸಾಕೇನು ತಿಂದಿದೆ ಎಂದೇ ಅಂದು ಕೊಳ್ಳಿ. ಮತ್ತೂ ಬೇಕೇ ಸಸ್ಯಾಹಾರ ಮಾಂಸಾಹಾರದ ಚರ್ಚೆ?


ಇನ್ನು 1990 ರ ದಶಕದಲ್ಲಿ (1992 ರಿಂದ 1999 ಎಂದು ನನ್ನ ನೆನಪು) ಬಬಿಯನಿಗೆ "ಕೋಳಿ ಹರಕೆ" ಎಂಬ ಒಂದು ಕ್ರಮ ಕ್ಷೇತ್ರದಲ್ಲಿ ತೊಡಗಿದ್ದರು. ಇದು ಸಹಜವೇ? ಅಲ್ಲಿ ಬೇಕಿತ್ತೇ? ಎಂಬ ಪ್ರಶ್ನೆ ಅಂದೂ ಮುಂದೆಯೂ ಬಂದಿತ್ತು. ಕೊನೆಗೆ ದೇವಾಲಯದ ಸರೋವರದಲ್ಲಿ ಕೋಳಿ ಸಮರ್ಪಣೆ ಮಾಡಿದುದು ಸರಿಯಲ್ಲ ಎಂಬ ನಿರ್ಣಯ ದೇವಾಲಯದಲ್ಲಿ ಇರಿಸಿದ ಪ್ರಶ್ನೆಯಲ್ಲಿ ಕಂಡುಬಂದು ಅದನ್ನು ನಿಲ್ಲಿಸುವಂತಹಾ ಉತ್ತಮ ಕ್ರಮ ಕೈಗೊಳ್ಳಲಾಗಿತ್ತು.


ಇನ್ನೊಂದಷ್ಟು ಇತರ ವಿಚಾರಗಳು.

ತುಂಬಾ ಜನ ನಮ್ಮ ಕಾಲದಲ್ಲಿ ಅನಂತಪುರದಲ್ಲಿ ನಡೆದ ಮೊದಲ ಬ್ರಹ್ಮ ಕಲಶದ ಬಗ್ಗೆ ವಿವರ ಕೇಳಿದ್ದರು. ತುಂಬಾ ವಿವರ ಕೊಡ ಬೇಕಿದ್ದರೆ ಪ್ರತ್ಯೇಕ ಸರಣಿಯೇ ಬರೆಯ ಬೇಕಾಗ ಬಹುದು. ಆದ್ದರಿಂದ ಪ್ರಶ್ನೆಗೆ ತಕ್ಕ ಉತ್ತರ ಕೊಡುತ್ತೇನೆ. ನನ್ನ ಬಳಿ ಆ ಬ್ರಹ್ಮಕಲಶದ ಆಮಂತ್ರಣ ಪತ್ರಿಕೆ ಇತ್ತು ಆದರೆ ಅದು ಹುಡುಕಾಡಿದಾಗ ಸಿಕ್ಕಿರಲಿಲ್ಲ. ನನ್ನ ಸ್ನೇಹಿತರಾದ ಮಧೂರು ಬಾಲಸುಬ್ರಹ್ಮಣ್ಯ‌ ಸರಳಾಯರನ್ನು ಸಂಪರ್ಕಿಸಿದಾಗ ಅವರು ಬೇಕಾದ ವಿವರಗಳನ್ನು ಕೊಟ್ಟರು.

ಬ್ರಹ್ಮ ಕಲಶ ನಡೆದ ತಾರೀಕು 19/04/1976

ತಾರೀಕು 14/04/1976 ರಿಂದ 

ತಾರೀಕು 20/04/1976 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಅನಂತ ಪದ್ಮನಾಭ ಸ್ವಾಮಿಗೆ ಬ್ರಹ್ಮಕಲಶೋತ್ಸವ ನಡೆದಿತ್ತು.

ಆ ಬ್ರಹ್ಮಕಲಶದ ನಂತರ ಮಧೂರಿನ ಆರಾಟು ಮಹೋತ್ಸವ ಕಳೆದ ಮರುದಿನ ಅನಂತಪುರದಲ್ಲಿ ತೆಪ್ಪೋತ್ಸವದೊಂದಿಗೆ ಜಾತ್ರೆ ನಡೆಯುತ್ತಿತ್ತು. ಆ ಬ್ರಹ್ಮಕಲಶವನ್ನು ದೇಲಂಪಾಡಿ ಸುಬ್ರಾಯ ತಂತ್ರಿಗಳು ನಡೆಸಿದ್ದರೆಂದು ನೆನಪು. ಹಾಗೆಯೇ ಅವರ ಮಗ ಬಾಲಕೃಷ್ಣ ತಂತ್ರಿಗಳು ಅಲ್ಲಿ ಪ್ರಥಮ ಬಾರಿ ತಾಂತ್ರಿಕ ವಿಧಿಯನ್ನು ನಡೆಸ ತೊಡಗಿದ್ದರೆಂದೂ ನನ್ನ ನೆನಪು. 


ಅನಿರೀಕ್ಷಿತವಾಗಿ ಕಣ್ಣೂರು ಮದನಗುಳಿ ರಾಮಚಂದ್ರ ಭಟ್ಟರ ಮೂಲಕ ಇನ್ನೊಂದು ಮಾಹಿತಿಯೂ ನನಗೆ ಸಿಕ್ಕಿತು. ಒಂದನೇ ಬಬಿಯನ ಕೊಲೆಯಾದ ಮೇಲೆ ಅವನ ದೇಹದ ಮಹಜರು ನಡೆಸಿದವರು ಕಣ್ಣೂರು ಗ್ರಾಮದ ಪಾರಂಪರಿಕ ಪಠೇಲರಾಗಿದ್ದ "ಕಣ್ಣೂರು ಪಠೇಲರು ಎಂದೇ ಹೆಸರಾದ ರಘುರಾಮ ಆಳ್ವರು". ಅವರು ಮುಂದೆ ಎಡನಾಡು ಕಣ್ಣೂರು ಗ್ರಾಮದ ಪಠೇಲರಾಗಿಯೂ ಕೆಲಸ ಮಾಡಿದ್ದರು. ಅವರ ಪ್ರಕಾರ 1945 ರಲ್ಲಿಯೇ ಎರಡನೇ ಬಬಿಯ ಕಾಣ ಸಿಕ್ಕಿದ್ದನಂತೆ.

ಇನ್ನೂ ಮುಂದೆ ಮುಂದೆ ಹೋದಂತೆ ಹಿಂದಿನ ಎಷ್ಟೆಷ್ಟೋ ವಿಷಯಗಳು ಯಾರು ಯಾರ ಮುಖಾಂತರವೋ ತಿಳಿದು ಬರಲೂ ಸಾಕು. ಆದರೆ ಸಧ್ಯಕ್ಕೆ ಇಷ್ಟೇ ಸಾಕು.

ಆ ಅನಂತ ಪದ್ಮನಾಭ ಸ್ವಾಮಿ ಸರ್ವರಿಗೂ ಸಕಲ ಸೌಭಾಗ್ಯಗಳನ್ನೂ ಕೊಟ್ಟು ಲೋಕಾ ಸಮಸ್ಥಾ ಸುಖಿನೋ ಭವಂತು ಎಂಬುದನ್ನು ಸತ್ಯವಾಗಿಸಲಿ ಎಂಬ ಪ್ರಾರ್ಥನೆ ನನ್ನ ಕಡೆಯಿಂದ

ಮೂರನೇ ಬಬಿಯನನ್ನು ಕಾಣುವ ಸೌಭಾಗ್ಯ ನಮಗೆಲ್ಲಾ ಆದಷ್ಟು ಬೇಗನೇ ಒಲಿದು ಬರಲಿ ಎಂಬ ಹಾರೈಕೆಯೊಂದಿಗೆ ಮಂಗಳ ಹಾಡಲು ನಿಶ್ಚಯಿಸಿದ್ದೇನೆ.

ನನ್ನ ಬರಹವನ್ನು ಮೆಚ್ಚಿ ತಮ್ಮ ತಮ್ಮ ಸಲಹೆ ಅಭಿಪ್ರಾಯಗಳನ್ನು ಕೊಟ್ಟು ಹುರಿದುಂಬಿಸಿ ಸಹಕರಿಸಿದ ಸರ್ವರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು.

 ಇದರೊಂದಿಗೆ "ಅನಂತಪುರದ ಅನಂತಸ್ವಾಮೀ ಕ್ಷೇತ್ರದ ಬಬಿಯ ಮತ್ತು ನಾನು" ಎಂಬ ಲೇಖನ ಮಾಲೆಯನ್ನು ಕೊನೆಗೊಳಿಸುತ್ತಿದ್ದೇನೆ. 

- ಎಡನಾಡು ಕೃಷ್ಣ ಮೋಹನ ಭಟ್ಟ

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top