ಅನಂತಪುರದ ಅನಂತಸ್ವಾಮೀ ಕ್ಷೇತ್ರದ ಬಬಿಯ ಮತ್ತು ನಾನು (ಭಾಗ-7)

Upayuktha
0

 


ಈ ಹಿಂದಿನ ಆರು ಕಂತುಗಳಲ್ಲಿ ಒಂದನೇ ಬಬಿಯನ ಆಗಮನ ಮತ್ತು ಅವನ ಅಂತ್ಯದ ವರೆಗಿನ ವಿವರ ಕೊಟ್ಟಿರುತ್ತೇನೆ. ಹಾಗೆಯೇ ಎರಡನೇ ಬಬಿಯನ ಆಗಮನದ ಬಗ್ಗೆಯೂ ತಿಳಿಸಿರುತ್ತೇನೆ. ಅನಂತಪುರದ ಅನಂತ ಪದ್ಮನಾಭ ಸ್ವಾಮಿ ಕ್ಷೇತ್ರದ ಜೀರ್ಣೋದ್ಧಾರ ಪ್ರಕ್ರಿಯೆಗಳು ಸುರುವಾದುದನ್ನು ಕೂಡಾ ತಿಳಿಸಿರುತ್ತೇನೆ. ಇನ್ನು ಶ್ರೀಕ್ಷೇತ್ರಕ್ಕೆ ವಿದ್ಯುತ್ ಒದಗಿಸಿ ಕೊಡುವ ಜವಾಬ್ಧಾರಿಯನ್ನು ನನಗೆ ವಹಿಸಿದ ಬಗ್ಗೆಯೂ ತಿಳಿಸಿದ್ದೇನೆ. ಅದರೊಂದಿಗೆ ಎರಡನೇ ಬಬಿಯನ ದೇಹದ ಸ್ಪರ್ಶ ಈ ಲೇಖಕನಿಗೆ ಆದ ಬಗ್ಗೆಯೂ ತಿಳಿಸಿದ್ದೇನೆ.


"ಇಂದಿನ ಲೇಖನ ಬಬಿಯನಿಗೆ ಮಕ್ಕಳಾಟಿಕೆ ಇಷ್ಟವಾಗಿತ್ತೇ" ಎಂಬ ಬಗ್ಗೆ. ಅದನ್ನು ತಿಳಿಯಲಂತೂ ನೀವು ಓದು ಮುಂದುವರಿಸಲೇ ಬೇಕು.


ಅನಂತಪುರೇಶನ ಕ್ಷೇತ್ರದಲ್ಲಿ ಬಬಿಯನೊಂದಿಗೆ ಆದ ಒಡನಾಟದೊಂದಿಗೆ ಬಬಿಯನ ಬಗ್ಗೆ ಕುತೂಹಲ ಏರುತ್ತಿತ್ತು. ಆದ್ದರಿಂದ ಅಲ್ಲಿ ನಮ್ಮಕೆಲಸಗಳನ್ನು ನೋಡಲು ಬರುತ್ತಿದ್ದ ಊರ ಹಿರಿಯರಲ್ಲಿ ಬಬಿಯನ ಬಗ್ಗೆ ವಿಚಾರಿಸುತ್ತಿದ್ದೆ. ಅವರಿಂದ ಪಡೆದ ಮಾಹಿತಿಗಳು ನನ್ನ ಕೆಲಸದವರ ಅನುಭವ ಒಂದಿಗೆ ನನ್ನ ಸ್ವಾನುಭವಗಳೇ ಇಂದಿನ ಬರವಣಿಗೆಯ ವಸ್ತು.


ಆಗ ಬಬಿಯನ ದೇಹ ಇಷ್ಟು ಸ್ಥೂಲವೂ ಆಗಿರಲಿಲ್ಲ. ಇಷ್ಟು ದೊಡ್ಡವೂ ಇರಲಿಲ್ಲ ಹೆಚ್ಚು ಕಡಿಮೆ ಆರು ಆರೂವರೆ ಅಡಿ ಉದ್ದ ಇದ್ದಿರ ಬಹುದು. ಒಮ್ಮೊಮ್ಮೆ ತುಂಬಾ ಚುರುಕಾಗಿ ನಡೆದಾಡಿದರೆ ಒಮ್ಮೊಮ್ಮೆ ತುಂಬಾ ಮಂದ ಬೇಕೋ ಬೇಡದೋ ಎಂಬಂತೆ ನೆಲದ ಮೇಲೆ ಅವನ ಹರೆದಾಟ. ನೀರ ಮೇಲೆ ತೇಲಾಡ ತೊಡಗಿದರೆ ಅವನದೇ ಲೋಕ. ಈಜಾಡುತ್ತಾನೇ ಇರ್ತಿದ್ದ. ಪಕ್ಕನೇ ಮುಳುಗಿ ಕಾಣೆಯಾಗಿ ಇನ್ನೊಂದು ಬದಿಯಲ್ಲಿ ತಲೆ ಎತ್ತಿ ಬರುತ್ತಿದ್ದ. ಅದೊಂದು ಆಟವೇ ಆಗಿತ್ತವನಿಗೆ. ಆಗ ನಾನು ಕಂಡಂತೆ ಆ ಸರೋವರ ಬಿಟ್ಟರೆ ಬಳಿಯಲ್ಲೇ ಪಡುಬದಿಯಲ್ಲಿ ಇರುವ ಆ ಚಿಕ್ಕ ಕೆರೆಗೆ  ಹೋಗುತ್ತಿದ್ದ. (ಈಗ ಕೋಮಳೆ ಹೂ ಬಿಟ್ಟುಕೊಂಡಿರುವ ಕೆರೆ. ಈ ಸರೋವರದಿಂದ ಹೆಚ್ಚಾದ ನೀರು ಅಲ್ಲಿಗೇ ಹೋಗುವುದು.) ನೆಲದ ಮೇಲೆ ಬಂದರೆ ಎಲ್ಲೆಂದರಲ್ಲಿ ಸುತ್ತಾಡುತ್ತಿದ್ದ. ಆದರೆ ದೇವಾಲಯದ ಪರಿಸರ ಬಿಟ್ಟು ಹೋಗುತ್ತಿರಲಿಲ್ಲ. ಕಳೆದ ಕೆಲವು ಸಮಯದಿಂದ ಅವ ಇರುತ್ತಿದ್ದ ತೆಂಕು ಬದಿಯ ದೂರದ ಮದಕಕ್ಕೆ ಆ ಕಾಲದಲ್ಲಿ ಅವ ಹೋದುದು ಇರಲೇ ಇಲ್ಲ. 


ವಿಶೇಷ ಎಂದರೆ ಮೊದಲು ಅವನು ಕರುವನ್ನು ಆಕ್ರಮಣ ಮಾಡಿದ್ದ ಎಂಬ ಸುದ್ದಿ ಬಂದಮೇಲೆ ಅವ ಯಾವುದೇ ಪ್ರಾಣಿಗಳ ಮೇಲಾಗಲಿ  ಮನುಷ್ಯನ ಮೇಲಾಗಲಿ ಆಕ್ರಮಿಸಿದ ಸುದ್ದಿ ಇರಲೇ ಇಲ್ಲ. ನನಗೆ ತಿಳಿದಂತೆ ಬಬಿಯ ಆ ಮೇಲೆ ಯಾವುದೇ ಪ್ರಾಣಿಯ ಮೇಲೆ ಆಕ್ರಮಣ ಮಾಡಿದ ಪ್ರಕರಣ ನಡೆದೇ ಇಲ್ಲ. ಅವನೊಂದಿಗಿನ ನನ್ನ ಇನ್ನೊಂದು ಅನುಭವ ಹೇಳದಿದ್ದರೆ ತಪ್ಪಾಗ ಬಹುದು ಅನ್ನಿಸ್ತಿದೆ. ಆದ್ದರಿಂದ ಹಂಚುತ್ತಾ ಇದ್ದೇನೆ ನನ್ನ ಅನುಭವ.


ಒಂದು ದಿನ ನಾನು ಕೆಲಸದ ಮೇಲ್ವಿಚಾರಣೆಗೆ ತಲಪುವಾಗ ಸಂಜೆ ತುಂಬಾ ತಡವಾಗಿತ್ತು. ಕೆಲಸದವರು ಕೆಲಸ ಮುಗಿಸಿ ಹೋಗಿಯಾಗಿತ್ತು. ಅಲ್ಲಿ ಯಾರೂ ಇರಲಿಲ್ಲ.  ಸುತ್ತಾಡುತ್ತಾ ಮಾಡಿ ಮುಗಿಸಿದ  ಕೆಲಸಗಳನ್ನು ನೋಡುತ್ತಾ ಗೋಪಾಲಕೃಷ್ಣ ಕ್ಷೇತ್ರ ದಾಟಿ ಮುಂದೆ ಹೋಗುತ್ತಿದ್ದಂತೆ ಹಿಂದಿನಿಂದ ಸರ ಸರ ಸದ್ಧು ಕೇಳಿಸಿತು. ಹಿಂದಿರುಗಿ ನೋಡಿದರೆ ಬಬಿಯ ಆರಾಮದಲ್ಲಿ ಕೆರೆಯಿಂದ ಮೇಲೆ ಬರುತ್ತಾ ಇದ್ದಾನೆ. ಸಂಜೆಯ ಸಮಯ ಅವನಿಗೆ ಆಹಾರದ ಸಮಯ ಆಗಿರಲೂ ಬಹುದು ಅನ್ನಿಸಿತ್ತು. ಅದಕ್ಕಾಗಿ ಕಾಲಿಗೆ ಸ್ವಲ್ಪ ವೇಗವನ್ನು ಕೊಟ್ಟೆ. ಈಗ ಅವ ನನ್ನ ಹಿಂದಿನಿಂದಲೇ ಬರತೊಡಗಿದ್ದ. ಆಗ ಯುವಕನಾಗಿದ್ದ ನನಗೆ ನನ್ನ ಕಾಲಿನ ಮೇಲೆ ಅಪಾರ ವಿಶ್ವಾಸವಿತ್ತು. ಬೇಕಿದ್ದರೆ ಚಿಗರೆಯನ್ನೇ ಓಟದಲ್ಲಿ ಸೋಲಿಸಬಲ್ಲೆ ಎಂಬ ಭಂಡ ಧೈರ್ಯವೂ ಇತ್ತು. ಆದ್ದರಿಂದ ನಡೆಯುವ ವೇಗ ಹೆಚ್ಚಿಸಿದರೂ ಓಡಿರಲಿಲ್ಲ. ಬಬಿಯ ಮಾತ್ರ ತನ್ನದೇ ಆದ ವೇಗದಲ್ಲಿ ನನ್ನನ್ನೇ ಹಿಂಬಾಲಿಸುತ್ತಿದ್ದ. ಆ ಸಮಯ ಯಾಕೋ ವಾಲಿ ನೆನಪಾಗಿದ್ದ. ನೀರಲ್ಲಿದ್ದರೆ ಇದೇ ಬಬಿಯ ನನ್ನ ಅರ್ಧ ಶಕ್ತಿಯನ್ನು ತನ್ನದಾಗಿಸಿ ಕೊಳ್ಳುತ್ತಿದ್ದ. ಆದರೆ ನೆಲದ ಮೇಲಿರುವ ಇವನಿಗೆ ಅವನ ಶಕ್ತಿಯೇ ಅರ್ಧವಾಗ ಬಹುದಾದ್ದರಿಂದ ಹೆದರ ಬೇಕಿಲ್ಲ ಎಂದು ನನಗೆ ನಾನೇ ಸಮಾಧಾನ ಹೇಳಿಕೊಂಡೆ. ಆದರೆ ಹಿಂದೆ ತಿರುಗಿ ನೋಡುತ್ತಾನೇ ನಡೆಯ ತೊಡಗಿದೆ ಈಗ ಅವ ಅರಳೀಮರದ ಬಳಿ ತಲಪಿದರೆ ನಾನು ಅವನಿಗಿಂತ ಹತ್ತೇ ಅಡಿ ದೂರದಲ್ಲಿ ಅವನಿಂದ ಮುಂದೆ ಇದ್ದೆ. ಯಾಕೋ ಎದೆಯಲ್ಲಿ ಡಬ ಡಬ ಸುರುವಾಗಿತ್ತು. ಎಲ್ಲೂ ಜನ ಸಂಚಾರ ಇರಲಿಲ್ಲ. ಹೆಚ್ಚು ಕಡಮೆ ಕತ್ತಲೂ ಆವರಿಸ ತೊಡಗಿತ್ತು. ಆದ್ದರಿಂದ ನನ್ನ ಕಾಲಿನ ಚಲನೆಯ ವೇಗವನ್ನು ಅರ್ಧ ಓಟದ ಸ್ಥಿತಿಗೆ ತಲಪಿಸಿ ದೇವಾಲಯದ ಮುಂಭಾಗಕ್ಕೆ ಬಂದು ನಿಂತೆ. ಹೆಚ್ಚು ಕಡಮೆ ಗಣಪತಿ ಗುಡಿಯ ಬಳಿ ತಲಪಿದ್ದ ಬಬಿಯ ಇವ ಯಾಕೆ ಓಡುತ್ತಿದ್ದಾನೆ ಎಂಬಂತೆ ನನ್ನ ಕಡೆಯೇ ನೋಡುತ್ತಾ ಅಲ್ಲೇ ನಿಂತಿದ್ದ. ಯಾಕೋ ಈ ಓಟದ ಆಟ ಅವನಿಗೆ ನೀರಸ ಎನ್ನಿಸಿತು ಎಂದು ಕಾಣುತ್ತದೆ. ಅಲ್ಲೇ ಸ್ವಲ್ಪ ಹೊತ್ತು ನಿಂತವ ಮೆಲ್ಲಗೇ ಮುಂದೆ ಬಂದು ನನ್ನೆದುರೇ ಮುಂದಕ್ಕೆ ಹೋಗಿ ಬಡಗು ಭಾಗದಲ್ಲಿ ತಗ್ಗು ಪ್ರದೇಶವರೆಗೂ ಹೋದವ ಸರೋವರದ ಮೇಲ್ಬದಿಯಲ್ಲಿ ನಿಂತು ನನ್ನೆಡೆಗೆ ನೋಡಿದೆ. ಇವ ಆಟಕ್ಕೆ ನಾಲಾಯಕು ಎನ್ನಿಸಿತೇನು. ಒಂದೇ ಜಂಪಲ್ಲಿ ನೀರಿಗೆ ಹಾರಿದ. ಮತ್ತೆ ಕತ್ತಲೆ ಆವರಿಸಿದ್ದರಿಂದ ನನಗೇನೂ ಕಾಣಿಸಲಿಲ್ಲ. ನಾನು ನನ್ನ ಪಾಡಿಗೆ ತಿರುಗಿ ಬಂದೆ. ಬಬಿಯ  ನನ್ನನ್ನು ಆಹಾರವಾಗಿ ಬಳಸಲು ಉದ್ದೇಶಿಸಿರ ಬಹುದೇ? ಅಲ್ಲಾ ಅವ ನನ್ನ ಹಿಂದೆ ಬಂದಾಗ ನನ್ನ ಭೀತ ಮನಸ್ಸು ಕೆಟ್ಟದನ್ನು ಊಹಿಸಿತ್ತೇ ನನಗೆ ತಿಳಿಯದು. ಅಂತೂ ನನ್ನೆದೆರು ಹಾದು ಹೋಗುವಾಗ ಅವ ನನ್ನನ್ನು ನಿರ್ಲಕ್ಷ್ಯ ಮಾಡಿಯೇ ಮುಂದುವರಿದಿದ್ದ.


ನನ್ನ ಕೆಲಸದವರ ಅನುಭವದಂತೆ ಈ ಬಬಿಯ ಒಮ್ಮೊಮ್ಮೆ ಬಾಲ ಮಾತ್ರ ನೀರಿಗೆ ತಾಗುವಂತೆ ಮೇಲಕ್ಕೆ ಹಾರುತ್ತಿದ್ದನಂತೆ. ಪೆಂಗ್ವಿನ ಹಕ್ಕಿಗಳು ಜಲಕ್ರೀಡೆಯಾಡುವಂತೆ ಅವನಷ್ಟೇ ಎತ್ತರಕ್ಕೆ ಹಾರಿ ಮತ್ತೊಂದು ಬದಿಗೆ ಬಿದ್ದರೆ ಮರುಕ್ಷಣದಲ್ಲೇ ಆ ಬದಿಯಿಂದ ಈ ಬದಿಗೆ ಹಾರುತ್ತಿದ್ದನಂತೆ. ನನಗಂತೂ ಅದನ್ನು ಒಮ್ಮೆಯೂ ಕಾಣಲು ಸಾಧ್ಯವಾಗಿರಲಿಲ್ಲ. ಹಕ್ಕಿಗಳು ನೀರಮೇಲೆ ಹಾರಾಡುತ್ತಾ ಅವನ ಬಳಿ ಬಂದರೆ ಬಾಯಿತೆರೆದು ನೀರಮೇಲೆ ತೇಲುತ್ತಿದ್ದ ಬಬಿಯ ಒಂದೇ ಜಂಪ್ ನಲ್ಲಿ ಅವುಗಳನ್ನು ಬಾಯೊಳಗೆ ಇಳಿಸುತ್ತಿದ್ದನಂತೆ. (ದಯಮಾಡಿ ಸಸ್ಯಾಹಾರ ಮಾಂಸಾಹಾರದ ಚರ್ಚೆ ಈಗ ಬೇಡ. ನಾನು ನನ್ನ ಅನಿಸಿಕೆ ಅನುಭವಗಳನ್ನು ಮುಂದೆ ಹಂಚುತ್ತೇನೆ. ಅಲ್ಲಿಯ ವರೆಗೆ ಸಂಯಮವಿರಲಿ). ನನ್ನ ಕೆಲಸದವರ ಅನಿಸಿಕೆಯಂತೆ ಅವ ಚಿಕ್ಕ ಮಕ್ಕಳು ಆಡುವಂತೆ ಆಡುವುದನ್ನು ಇಷ್ಟ ಪಡುತ್ತಿದ್ದ. ಒಮ್ಮೊಮ್ಮೆ ಕೆಲಸದವರ ಹಿಂದೇನೇ  ಬಂದು ಇವರು ಗಟ್ಟಿಯಾಗಿ ಬೊಬ್ಬೆ ಹೊಡೆದರೆ ಸ್ವಲ್ಪ ದೂರ ಹೋಗಿ ನಿಂತು ನೋಡುತ್ತಿದ್ದನಂತೆ. ಒಮ್ಮೆಯೂ ಅವನಾಗಿ ಇವರ ಮೈಗೆ ತಗಲುವಷ್ಟು ಹತ್ತಿರ ಬಂದುದು ಇರಲಿಲ್ಲವಂತೆ. ಆದರೆ ಸುತ್ತ ಮುತ್ತ ಜನಗಳ ಇರುವಿಕೆಯನ್ನು ಅವ ಆಸ್ವಾದಿಸುತ್ತಿದ್ದನಂತೆ. ಎಲ್ಲಾ ಕೆಲಸದವರು ಹಾಜರಿದ್ದ ದಿನಗಳಲ್ಲಿಯಂತೂ ಅವನು ಹೆಚ್ಚಾಗಿ ನೆಲದ ಮೇಲೆಯೇ ನಡೆದಾಡುತ್ತಿದ್ದನಂತೆ ಮಾತ್ರವಲ್ಲ ಇವರ ಆಸುಪಾಸಿನಲ್ಲಿಯೇ ಸುಳಿದಾಡುತ್ತಿದ್ದನಂತೆ.

ಸ್ವಾಮಿಗೆ ಬ್ರಹ್ಮಕಲಶ ನೆರವೇರುವುದರೊಂದಿಗೆ ಅನಂತಪುರದಲ್ಲಿ ಹೊಸ ಶಕೆಯೊಂದು ತೊಡಗಿತ್ತು. ಅಲ್ಲಿಯ ವ್ಯವಸ್ಥೆಗಳಲ್ಲಿ ಅಪಾರ ವ್ಯತ್ಯಾಸಗಳು ಕಾಣ ತೊಡಗಿತ್ತು. ಈ ಬರಹಗಾರ ಕೆಲಸದ ಒತ್ತಡದಿಂದಲಾಗಿ ಅನಂತಪುರದ ಭೇಟಿ ತುಂಬಾ ಕಡಮೆ ಮಾಡಿದ್ದ. 

ಮುಂದಿನ ಒಂದು ಯಾ ಎರಡು ಕಂತುಗಳಲ್ಲಿ ಮೊಸಳೆಗಳ ಬಗ್ಗೆ ಹಾಗೂ ಬಬಿಯನ ಬಗ್ಗೆ ನನ್ನ ಅನಿಸಿಕೆ ಅನುಭವಗಳನ್ನು ಹಂಚಿಕೊಂಡು ಲೇಖನ ಮಾಲೆಗೆ ಕೊನೆಯ ಚುಕ್ಕಿ ಇಡುತ್ತೇನೆ.

ಬಬಿಯನ ಬಗ್ಯೆ ಸಸ್ಯಾಹಾರಿ ಮಾಂಸಾಹಾರಿ ಎಂಬ ಚರ್ಚೆ ಬೇಕೇ? ಇದೇ ಮುಂದಿನ ಕಂತಿನ ಲೇಖನ.


- ಎಡನಾಡು ಕೃಷ್ಣ ಮೋಹನ ಭಟ್ಟ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top