ಅನಂತಪುರದ ಅನಂತಸ್ವಾಮೀ ಕ್ಷೇತ್ರದ ಬಬಿಯ ಮತ್ತು ನಾನು: ಭಾಗ- 6

Upayuktha
0

ಈ ಹಿಂದಿನ ಐದು ಕಂತುಗಳಲ್ಲಿ ಒಂದನೇ ಬಬಿಯನ ಆಗಮನ ಮತ್ತು ಅವನ ಅಂತ್ಯದ ವರೆಗಿನ ವಿವರ ಕೊಟ್ಟಿರುತ್ತೇನೆ. ಹಾಗೆಯೇ ಎರಡನೇ ಬಬಿಯನ ಆಗಮನದ ಬಗ್ಗೆಯೂ ತಿಳಿಸಿರುತ್ತೇನೆ. ಅನಂತಪುರದ ಅನಂತ ಪದ್ಮನಾಭ ಸ್ವಾಮಿ ಕ್ಷೇತ್ರದ ಜೀರ್ಣೋದ್ಧಾರ ಪ್ರಕ್ರಿಯೆಗಳು ಸುರುವಾದುದನ್ನು ಕೂಡಾ ತಿಳಿಸಿರುತ್ತೇನೆ. ಇನ್ನು ಶ್ರೀಕ್ಷೇತ್ರಕ್ಕೆ ವಿದ್ಯುತ್ ಒದಗಿಸಿ ಕೊಡುವ ಜವಾಬ್ಧಾರಿಯನ್ನು ನನಗೆ ವಹಿಸಿದ ಬಗ್ಗೆಯೂ ತಿಳಿಸಿದ್ದೇನೆ. 

"ಇಂದಿನ ಲೇಖನ ಕೇವಲ ಬಬಿಯನೊಂದಿಗೊಂದು ಒಡನಾಟ"ದ ಬಗ್ಗೆ. ತಿಳಿಯಲು ಓದು ಮುಂದುವರಿಸಿ


ಅನಂತಪುರೇಶನ ಕ್ಷೇತ್ರಕ್ಕೆ ಕರೆಂಟು ಒದಗಿಸಿ ಕೊಡುವ ಬಗ್ಗೆ ಒಪ್ಪಿಕೊಂಡಿದ್ದೆ. ಆದರೆ ಆ ಬಗ್ಗೆ ಮುಂದುವರಿಯಲು ಹೊರಟಾಗಲೇ ಇದು ನನ್ನ ಅಂದಾಜಿಗೂ ಮೀರಿದ ಕೆಲಸವೆಂದು ತಿಳಿದುದು. ಆದರೆ ಹೊಸದಾಗಿ ಕೆಲಸದಲ್ಲಿ ತೊಡಗಿದ ಉತ್ಸಾಹ, ಯುವ ಮನಸ್ಸು ಒಂದಿಗೆ ಒಂದಷ್ಟು ಛಲ ಹೇಗೋ ಆಗಬೇಕಾದ  ಕೆಲಸವನ್ನು ಆಗು ಮಾಡಿ ಕೊಟ್ಟಿತ್ತು. ಈ ಬಗ್ಗೆ ಹೆಚ್ಚು ವಿವರಿಸಲು ಹೋಗುವುದಿಲ್ಲ. ಈ ಬರಹದ ಕಥಾನಾಯಕನಾದ ಬಬಿಯನ ಒಡನಾಟದ ಬಗ್ಗೆಯೇ ಹೇಳುತ್ತೇನೆ.


ಕ್ಷೇತ್ರದ ಪರಿಸರ ನೀವೆಲ್ಲಾ ತಿಳಿದಂತೆ ಕಠಿಣ ಮುರಕಲ್ಲು. ಆ ಸಮಯದಲ್ಲಿ ಆಧುನಿಕ ಉಪಕರಣಗಳಿರಲಿಲ್ಲ. ಎಲ್ಲಾ ಕೆಲಸಗಳು ಕೈಯ್ಯಿಂದಲೇ ಮಾಡಬೇಕಿತ್ತು. ಕಠಿಣ ಪಾರೆಯಂತಹ ಕಲ್ಲಿನಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆ ಒಂದಿಗೆ ಸಹಿಸಲಸಾಧ್ಯವಾದ ಬಿಸಿಲಿನ ತಾಪ ಇದೆಲ್ಲದರಿಂದ ಬಸವಳಿದ ಕೆಲಸದವರು ಆಗಾಗ ರಜೆ ಮಾಡುತ್ತಿದ್ದ ಸಮಸ್ಯೆಯೂ ಸೇರಿ ಶ್ರೀ ಕ್ಷೇತ್ರದಲ್ಲಿ ವಯರಿಂಗ್ ಕೆಲಸ ಮೂರು ತಿಂಗಳಿಗೂ ಹೆಚ್ಚು ಸಮಯ ತೆಗೆದು ಕೊಂಡಿತ್ತು. ರಾತ್ರಿ ಪೆಟ್ರೋಮೇಕ್ಸ್ ಲೈಟಿನ ಬೆಳಕಲ್ಲಿ ಕೆಲಸ ಮಾಡಿದ್ಧೂ ಇತ್ತು.


ಆಗ ಕ್ಷೇತ್ರದ ಗೋಪುರ ಮತ್ತು ಗರ್ಭಗುಡಿಯ ಮಧ್ಯೆ ಮರದ ಸಂಕ ಒಂದಿತ್ತು. ಹೆಚ್ಚು ಕಡಿಮೆ ಎರಡೂವರೆ ಅಡಿ (ಬಹುಶ: ಒಂದು ಕೋಲು ಅಂದರೆ 28") ಅಗಲವಿತ್ತು. ಕೆಲಸದ ಸಾಮಾನುಗಳು ಉಪಕರಣಗಳು ಕೆಲಸದ ಗಡಿಬಿಡಿಯಲ್ಲಿ ಗೋಪುರ ಮತ್ತು ಗರ್ಭಗುಡಿಯ ಭಾಗದಲ್ಲಿ ಹಂಚಿ ಹೋಗುವುದು ಸಾಮಾನ್ಯವಾಗಿತ್ತು.

ಕೆಲಸ ಸುರುಮಾಡಿ ಮೂರು ನಾಲ್ಕು ದಿನಗಳಾಗಿರ ಬಹುದು ಸಂಜೆ ನಾನು ಕೆಲಸದ ಮೇಲ್ವಿಚಾರಣೆಗೆ ಹೋಗುತ್ತಿದ್ದಂತೆ ನನ್ನ ಮುಖ್ಯ ಕೆಲಸಗಾರ ಸ್ವಾಮಿ, ಈವತ್ತು ಮಧ್ಯಾಹ್ನ ಆ ಸಂಕದಲ್ಲಿ ಮೊಸಳೆ ಮಲಗಿತ್ತು. ನಾವು ಹೆದರಿ ಆ ಭಾಗದ  ಕೆಲಸ ಬಿಟ್ಟು ಗುಡ್ಡದ ಮೇಲೆ ಮಾಡ ಬೇಕಾದ ಕೆಲಸ ಮಾಡಿದೆವು ಎಂದ.

ಕೆಲಸಗಾರರು ಹೆದರಿದರೆ ಮುಂದೆ ಕೆಲಸ ಮಾಡಿಸೋದು ಕಷ್ಟ. ಧೈರ್ಯ ಇದ್ದರೂ ಇಲ್ಲದಿದ್ದರೂ ನಾನು ಧೈರ್ಯ ತೋರಿಸಲೇ ಬೇಕಿತ್ತು.


ಛೆ ನಾನಿದ್ದರೆ ಅದನ್ನು ಹೇಗೆ ದಾಟಿ ಹೋಗ ಬಹುದೆಂದು ನಿಮಗೆ ತೋರಿಸುತ್ತಿದ್ದೆ. ಮೊಸಳೆಯಾದರೂ ಇಲ್ಲಿಯ ಮೊಸಳೆ ನಿರುಪದ್ರವಿ ಅಂದೆಲ್ಲಾ ಒಂದಷ್ಟು ಧೈರ್ಯ ತುಂಬುವ ಮಾತನಾಡಿದೆ. ನಾಳೆ ಮಧ್ಯಾಹ್ನ ಊಟ ಮುಗಿಸಿ ನಾನೇ ಬರುತ್ತೇನೆ ನೀವು ಕೆಲಸ ಮುಂದುವರಿಸಿ ಎಂದೆ. ನಾನು ಅಲ್ಲಿಂದ ಹೊರಡುವುದಕ್ಕೆ ಮೊದಲೇ ಅಲ್ಲಿ ಬಂದ ಹಿರಿಯವರೊಬ್ಬರು ನಾವು ವಿಚಾರ ಹೇಳಿದಾಗ ಅದು ಬಿಸಿಲು ತಾಗಲು ಬರುವುದು ಸಾಮಾನ್ಯ ಅದು ಮಲಗಿರುವಾಗ ಅದು ನಿಮ್ಮನ್ನು ಏನೂ ಮಾಡಲಾರದು. ಅಲ್ಲದೆ ಹೊಟ್ಟೆ ತುಂಬಿದ ಮೊಸಳೆ ಯಾರ ಮೇಲೂ ಆಕ್ರಮಣ ಮಾಡುವುದಿಲ್ಲ ಎಂದರು. ಆದರೆ ಅದು ಬಾಯಿ ತೆರೆದು ಮಲಗಿದ್ದರೆ ಮಾತ್ರ ಅದರ ಬಳಿ ಹೋಗುವುದು ಅಪಾಯ‌ ಅದನ್ನು ಗಮನಿಸಿ ಕೆಲಸ ಮಾಡಿ ಎಂದರು. ಅದು ಕಣ್ಣು ಬಾಯಿ ಮುಚ್ವಿ ಮಲಗಿದ್ದರೆ ಅದರ ಮೇಲೇ ನಡೆದೂ ಹೋಗಬಹುದು ಏನೂ ತೊಂದರೆ ಇಲ್ಲ ಎಂದೆಲ್ಲಾ ನಮಗೆ ಧೈರ್ಯ ತುಂಬಿದರು. 


ಮರುದಿನ ಹೆಚ್ಚು ಕಡಮೆ ಮಧ್ಯಾಹ್ನ 2:30 ರ ಅಂದಾಜಿಗೆ ನಾನು ಶ್ರೀಕ್ಷೇತ್ರಕ್ಕೆ ತಲಪಿದಾಗ ಕೆಲಸದವರು ಸಂಕದ ಮೇಲೆ ಮೊಸಳೆ ಮಲಗಿದೆ. ನಾವು ಪರಿಕರಗಳನ್ನು ಗರ್ಭಗುಡಿಯ ಭಾಗದಲ್ಲಿ ಇಟ್ಟಿದ್ದೇವೆ. ಕೆಲಸ ಮುಂದುವರಿಸುವುದು ಸಮಸ್ಯೆಯಾಗಿದೆ ಎಂದರು.


ಇಲ್ಲದ ಧೈರ್ಯ ತೋರಿಸುತ್ತಾ ನೀವೆಲ್ಲಾ ಹೆದರು ಪುಕ್ಕಲರು. ಏನು ಬೇಕು ಹೇಳಿ ನಾನೇ ತಂದು ಕೊಡುತ್ತೇನೆ ಎಂದೆ. ಬೇಡ ಸ್ವಾಮಿ‌ ಹೇಳಿ ಕೇಳಿ ಅದು ಮೊಸಳೆ ಒಮ್ಮೆ ಕಾಲಿಗೆ ಬಾಯಿ ಹಾಕಿ ಬಿಟ್ಟರೆ ಬಿಡಿಸಿಕೊಳ್ಳೋಕೂ ಆಗೋದಿಲ್ಲ ಅಂದರು ಕೆಲಸದವರು. ಒಮ್ಮೆ ಧೈರ್ಯ ಕೆಟ್ಟರೆ ಮತ್ತೆಂದೂ ಧೈರ್ಯ ಬರೋದಿಲ್ಲ ಎಂಬ ನಿಲುವು ನನ್ನದು. ಪದ್ಮನಾಭನ ಕೆಲಸಕ್ಕೆ ಬಂದಿದ್ದೇವೆ ಏನೂ ಅಪಾಯ ಬಾರದಂತೆ ಅವನೇ ನೋಡಿಕೊಳ್ಳುತ್ತಾನೆ ಅಂದೆ. ಸಂಕದ ಬಳಿ ಬಂದರೆ ಬಬಿಯ ಪೂರ್ವಕ್ಕೆ ಮುಖ ಮಾಡಿ ಕಣ್ಣು ಬಾಯಿ ಮುಚ್ಚಿ ಮುಖವನ್ನು ಸಂಕಕ್ಕೆ ಒತ್ತಿ ಮಲಗಿದ್ದ. ನೊಣಗಳು ಅವನ ಮೈಮೇಲೆಲ್ಲಾ ಹಾರಾಡುತ್ತಿದ್ಧುವು. ಅವನ ಬಾಯಿಯ ಹತ್ತಿರ ತಲಪುತ್ತಿದ್ದಂತೆ ಆ ವರೆಗೆ ಇದ್ದ ಧೈರ್ಯ ಕುಸಿಯ ತೊಡಗಿತ್ತು. ಎದೆ ಡವ ಡವ ಎನ್ನುತ್ತಿತ್ತು. ಆದರೆ ಯುದ್ಧಕೆ ಇಳಿದ ಸೈನಿಕನ ಸ್ಥಿತಿ ನನ್ನದು. ಕೆಲಸದವರ ಎದುರು ಅದೇನು ಮಹಾ ಎಂದಿದ್ದೆ ಇನ್ನು ಅಡಿಯ ಮುಂದಿಡೆ ಸ್ವರ್ಗ ಎಂದು ಮುಂದೆ ಹೋಗಲೇ ಬೇಕಿತ್ತು. ಇರುವ ಎರಡು ಕಣ್ಣುಗಳನ್ನು ಸಾವಿರವಾಗಿಸಿ ಸಾಧ್ಯ ಇದ್ದಷ್ಟೂ ಮುಂದೆ ಹೋಗಿ ಅವನ ತಲೆಯ ಭಾಗದಿಂದ ಕೈಗಳಿದ್ದ ಭಾಗದೆಡೆಗೆ ಬಲಗಾಲನ್ನು ಇಟ್ಟೆ. ಬಬಿಯ ಅಲ್ಲಾಡಿರಲಿಲ್ಲ. ನೊಣಗಳು ಜೊಯ್ಯೆಂದು ಹಾರಾಡಿದುವು. ಒಂದಷ್ಟು ಧೈರ್ಯ ಬಂತು ಎಡಕಾಲನ್ನು ಬಬಿಯನ ಹಿಂದಿನ ಕಾಲಿನ ಮುಂಬಾಗಕ್ಕೆ ಇಟ್ಟೆ. ಈಗ ನನ್ನೆರಡು ಕಾಲುಗಳ ನಡುವೆ ಬಬಿಯನ ದೇಹ ಇತ್ತು. ಮುಂದೆ ಬಲಗಾಲನ್ನು ಅದರ ಬಾಲದ ಬದಿಗೆ ಇಟ್ಟೆ ಕಾಲಿಗೆ ಬಾಲ ಸ್ಪರ್ಶವಾಗಿಯೇ ಹೋಯಿತು. ಹೃದಯ ಬಾಯಿಗೆ ಬಂದಿತ್ತು. ಕಣ್ಣು ಮುಚ್ಚಿ ಒಡೆಯುವುದರೊಳಗೆ ಒಂದೇ ಜಂಪ್ ನಮಸ್ಕಾರ ಮಂಟಪದ ಎದುರು ನಾನಿದ್ದೆ. ಬಬಿಯ ನಿರ್ಲಿಪ್ತ. ಆರಾಮದಲ್ಲಿ ಬಿಸಿಲನ್ನು ಆಸ್ವಾದಿಸುತ್ತಾ ಮಲಗಿದ್ದ. ಆ ಬದಿಯಲ್ಲಿ ಕಾಯುತ್ತಿದ್ದ ನನ್ನ ಕೆಲಸದವರು ಚಪ್ಪಾಳೆ ಹೊಡೆದೇ ಬಿಟ್ಟರು. 


ಬಂದುದೇನೋ ಬಂದಾಗಿತ್ತು, ಬೇಕಾದ ಕೆಲಸದ ಉಪಕರಣಗಳನ್ನು ತೆಗೆದುಕೊಂಡು ಹಿಂದೆ ಹೋಗಲೇ ಬೇಕಿತ್ತು. ಆದರೆ ಯಾಕೋ ಈ ಸಲ ಹಿಂದಿನಷ್ಟು ಜೋರಾಗಿ ಹೃದಯ ಹೊಡೆದು ಕೊಳ್ಳುತ್ತಿರಲಿಲ್ಲ. ಬಬಿಯನ ದೇಹದ ಎರಡೂ ಭಾಗಕ್ಕೆ ಕಾಲುಗಳನ್ನಿಡುತ್ತಾ ಕೈಯ್ಯಲ್ಲಿ ಉಪಕರಣದ ಚೀಲವನ್ನು ಹಿಡಿದುಕೊಂಡು ಮುಂದೆ ಬಂದವ ಬಬಿಯನ ಮೂತಿಯ ಬಳಿ ತಲಪುತ್ತಿದ್ದಂತೆಯೇ ಎದುರು ಭಾಗಕ್ಕೆ ಹಾರಿದ್ದೆ. ತಿರುಗಿ ನೋಡಿದರೆ  ಬಬಿಯ ಇನ್ನೂ ಸ್ವಪ್ನಲೋಕದಲ್ಲೇ ತೇಲುತ್ತಿರುವನೇನೋ ಅನ್ನಿಸುತ್ತಿತ್ತು.


ಎಲ್ಲಾ ಸರಿಯಾಯಿತಲ್ಲಾ ಎಂದು ನಿಟ್ಟುಸಿರಿಟ್ಟರೆ ಉಪಕರಣಗಳ ಚೀಲದಲ್ಲಿ ಕೈ ಡ್ರಿಲ್ ಒಂದು ಕಡಿಮೆಯಾಗಿತ್ತು. ನನ್ನ ಮುಖ್ಯ ಕೆಲಸದವ ಬಿಡಿ ಸ್ವಾಮಿ ನಾನೇ ಹೋಗಿ ತರುತ್ತೇನೆ ಎಂದವ ಯಾವುದೇ ಜಂಪ್ ಇಲ್ಲದೆ ಬಬಿಯನ ಒಂದು ಬದಿಯಲ್ಲೇ ಕಾಲಿಡುತ್ತಾ ಹೋಗಿ ಮತ್ತೊಂದು ಬದಿಯಲ್ಲೇ ವಾಪಾಸ್ ಬಂದ. ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ನಮ್ಮೆಲ್ಲರ ಉಸಿರೂ ಸರಾಗವಾಗಿ ಓಡ ತೊಡಗಿತ್ತು.


ಮುಂದೆ ನಮ್ಮ ಕೆಲಸಗಳು ನಡೆಯುತ್ತಿದ್ದ ಹೆಚ್ಚಿನ ದಿನಗಳಲ್ಲೂ ಬಬಿಯ ಸಂಕದ ಮೇಲೆ ಮಲಗೋದು ನನ್ನ ಕೆಲಸದವರು ಅವನ ಅಸ್ಥಿತ್ವವನ್ನೇ ಮರೆತು ಆ ಸಂಕವನ್ನು ದಾಟಿ ಆಚೆ ಈಚೆ ಹೋಗುವುದು ನಡೆದೇ ಇತ್ತು. ನಾನು ಸಾಕಷ್ಟು ಸಲ ಬಬಿಯನ ಮೈಯ್ಯನ್ನು ಸ್ಪರ್ಷಿಸಿಯೇ ದಾಟಿದ ಸಂದರ್ಭಗಳೂ ಇತ್ತು. ಅವನ ಮೈ ಸ್ಪರ್ಷವಾದರೆ ಮಾತ್ರ ಒಮ್ಮೆ ವಿದ್ಯುತ್ ಸಂಚಾರವಾದಂತೆ ಆಗುತ್ತಿತ್ತು. ತಣ್ಣನೆ ಹಾವಿನ ಮೈಯ್ಯನ್ನು ಮುಟ್ಟಿದ ಅನುಭವ. ಆದರೆ ಈ ಯಾವ ಸಂದರ್ಭದಲ್ಲೂ ಅವ ಬಿಸಿಲನ್ನು ಆಸ್ವಾದಿಸುವುದನ್ನು ಬಿಟ್ಟಿರಲಿಲ್ಲ. ಇಟ್ಟ ಬಾಲವನ್ನು ಅಲ್ಲಾಡಿಸಿರಲಿಲ್ಲ. ಅಪರೂಪಕ್ಕೆ ಬಲದ ಬದಿಗೆ ವಾಲಿದ್ದ ಬಾಲವನ್ನು ಎಡದ ಬದಿಗೆ ವಾಲಿಸಿದ್ಧು ಇತ್ತು.


ಒಮ್ಮೊಮ್ಮೆ ಈ ಬಿಸಿಲಿನ ಆಸ್ವಾದನೆ ಮುಗಿದರೆ ಅವ ಗೋಪುರದ ಸುತ್ತೆಲ್ಲಾ ಸುಳಿದಾಡುತ್ತಿದ್ದ. ಅವನೇ ಇಲ್ಲಿಯ ಪಹರೆಗಾರ ಎಂಬಂತೆ. ಕೊನೆ ಕೊನೆಗೆ ನಾವು ಅವನಿಗೆ ಎಷ್ಟು ಒಗ್ಗಿ ಹೋಗಿದ್ದೆವು ಅಂದರೆ ಅವನನ್ನು ಕಾಣದಿದ್ದರೆ ಏನೋ ಕಳೆದುಕೊಂಡ ಅನುಭವವಾಗುತ್ತಿತ್ತು. ಗೋಪುರದ ಬಳಿ ಕೆಲಸ ಮಾಡುವಾಗ ಬಬಿಯ ಆ ಬದಿಯಲ್ಲಿ ಬಂದರೆ ನನ್ನ ಕೆಲಸದವರು ಏ ಇಲ್ಲಿ ಬರ್ಬೇಡ್ವೋ ನಮಗೆ ಕೆಲಸ ಇದೆ ಕೆಲಸ ಮಾಡೋಕೆ ತೊಂದರೆ ಯಾಗ್ತದೆ ಒಂದಿಗೆ ನಿನ್ನನ್ನು ಕಂಡರೆ ಹೆದರಿಕೆಯೂ ಆಗ್ತದೆ  ಎಂದು ದೊಡ್ಡ ಸ್ವರದಲ್ಲಿ ಹೇಳಿದರೆ ಒಮ್ಮೆ ತಲೆ ಎತ್ತಿ ನೋಡಿ ಸ್ವಲ್ಪ ದೂರ ಹೋಗಿ ಈ ಕಡೆ ನೋಡ್ತಾ ಮಲಗುತ್ತಿದ್ದನಂತೆ.


"ಆಗ ಯುವಕನಾಗಿದ್ದ ಬಬಿಯನಿಗೆ ಮಕ್ಕಳಾಟಿಕೆ ಇಷ್ಟವಾಗಿತ್ತೇ?" ಇದೇ ಮುಂದಿನ ಭಾಗಕ್ಕೆ ವಸ್ತು.

- ಎಡನಾಡು ಕೃಷ್ಣ ಮೋಹನ ಭಟ್ಟ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top