ಉಜಿರೆ: ವಿದ್ಯೆ, ಬುದ್ಧಿವಂತಿಕೆ ಹಾಗೂ ಹೃದಯವಂತಿಕೆಯುಳ್ಳ ಡಾ. ಬಿ.ಪಿ. ಸಂಪತ್ ಕುಮಾರ್ ಅವರು ಎಸ್.ಡಿ.ಎಂ. ಸಂಸ್ಥೆಗೆ ನೈಜ ಸಂಪತ್ತು . ಇಂತಹ ವ್ಯಕ್ತಿತ್ವ ಸಂಸ್ಥೆಗಳಿಗೆ ಲಭಿಸುವುದು ಅತಿ ವಿರಳ ಎಂದು ಶ್ರೀ ಧ.ಮಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಎಸ್. ಸತೀಶ್ಚಂದ್ರ ಅವರು ಹೇಳಿದರು.
ಉಜಿರೆ ಎಸ್.ಡಿ.ಎಂ. ಕಾಲೇಜಿನ ಕುಲಸಚಿವ (ಆಡಳಿತ) ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಬಿ.ಪಿ. ಸಂಪತ್ ಕುಮಾರ್ ಅವರಿಗೆ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಕಾಲೇಜಿನ ಬೋಧಕರ ಸಂಘವು ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದ್ದ ವಿದಾಯಕೂಟ ಸಮಾರಂಭದಲ್ಲಿ ಅವರು ಮಾತನಾಡಿ, ವಿದ್ಯಾರ್ಥಿಗಳ ನೆಚ್ಚಿನ ಕನ್ನಡ ಬೋಧಕರಾಗಿ, ಉತ್ತಮ ಎನ್ನೆಸ್ಸೆಸ್ ಅಧಿಕಾರಿಯಾಗಿ, ಯಶಸ್ವೀ ಆಡಳಿತಗಾರರಾಗಿ ಕೆಲಸ ಮಾಡಿರುವ ಅವರು ಇತರರಿಗೆ ಮಾದರಿ ಎಂದು ಅವರು ಬಣ್ಣಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಎನ್. ಉದಯಚಂದ್ರ ಅಧ್ಯಕ್ಷತೆ ವಹಿಸಿ, ಜವಾಬ್ದಾರಿಯುತ ಸ್ಥಾನಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ ಸಂಪತ್ ಕುಮಾರ್ ಅವರ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಆಶಿಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಉಜಿರೆ ಎಸ್.ಡಿ.ಎಂ. ಪ.ಪೂ. ಕಾಲೇಜಿನ ಪ್ರಾಂಶುಪಾಲ ಪ್ರೊ. ದಿನೇಶ್ ಚೌಟ ಅವರು ಶುಭಹಾರೈಸಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕಿ ಡಾ. ಬೋಜಮ್ಮ ಮಾತನಾಡಿ, ಕನ್ನಡ ವಿಭಾಗವನ್ನು ಅತ್ಯಂತ ಸಮರ್ಥವಾಗಿ ಸಂಪತ್ ಕುಮಾರ್ ಅವರು ನಿಭಾಯಿಸಿದ್ದಾರೆ. ಮುಂದಿನ ವಿಶ್ರಾಂತ ಜೀವನವು ಅವರಿಗೆ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲು ಸಹಾಯಕವಾಗಲಿ ಎಂದು ಆಶಿಸಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ದಿವಾಕರ ಕೊಕ್ಕಡ, ಸಂಪತ್ ಕುಮಾರ್ ಅವರು ಕಾಲೇಜಿಗಷ್ಟೇ ಅಲ್ಲದೆ, ಧರ್ಮಸ್ಥಳ ಕ್ಷೇತ್ರಕ್ಕೂ ಸೇವೆ ಮಾಡಿದ್ದಾರೆ. ವಿದ್ಯಾರ್ಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದ್ದಾರೆ. ಮೃದುಭಾಷಿ, ಸಹೃದಯಿ, ಉತ್ತಮ ವಾಗ್ಮಿ, ಕಾರ್ಯಕ್ರಮ ನಿರೂಪಕ ಆಗಿರುವ ಅವರು, ಕವಿಯೂ ಹೌದು. ತಮ್ಮ ಗುರು, ಚಿಂತಕ ಎಂ.ಎಂ. ಕಲಬುರ್ಗಿ ಅವರ ಹತ್ಯೆಯಾದ ಸಂದರ್ಭದಲ್ಲಿ ಸಂಪತ್ ಕುಮಾರ್ ಅವರು ಗುರುಗಳ ಬಗ್ಗೆ ಕವಿತೆ ರಚಿಸಿ ಪ್ರಕಟಿಸಿದ್ದರು ಎಂದು ಈ ಸಂದರ್ಭ ನೆನಪಿಸಿದರು.
ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎ. ಕುಮಾರ ಹೆಗ್ಡೆ ಅವರು ತಾವು ಹಾಗೂ ಸಂಪತ್ ಕುಮಾರ್ ಸಿದ್ಧವನ ಗುರುಕುಲದಲ್ಲಿದ್ದಾಗಿನ ನೆನಪುಗಳನ್ನು ಹಂಚಿಕೊಳ್ಳುತ್ತಾ ಸಂಪತ್ ಕುಮಾರ್ ಅವರು ಹಿಡಿದ ಕೆಲಸ ಪೂರ್ಣಗೊಳ್ಳದೆ ವಿಶ್ರಮಿಸದ ಕಾಯಕಯೋಗಿ ಎಂದು ಅಭಿಪ್ರಾಯಪಟ್ಟರು.
ಬಳಿಕ ಡಾ. ಬಿ.ಪಿ. ಸಂಪತ್ ಕುಮಾರ್- ವೀರಶ್ರೀ ಸಂಪತ್ ಕುಮಾರ್ ದಂಪತಿಯನ್ನು ಸಮ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ಡಾ. ಬಿ.ಪಿ. ಸಂಪತ್ ಕುಮಾರ್ , , ತಮಗೆ ಕೆಲಸ ಮಾಡಲು ಹಲವು ಅವಕಾಶಗಳು ದೊರೆತಿದ್ದು, ಎಲ್ಲರ ಸಹಕಾರದಿಂದ ಉತ್ತಮವಾಗಿ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾಯಿತು ಎಂದರು. ಧರ್ಮಸ್ಥಳ ಕ್ಷೇತ್ರದ ಮಹಾಮಸ್ತಕಾಭಿಷೇಕದಂತಹ ಹಲವು ಕಾರ್ಯಕ್ರಮಗಳು ಹಾಗೂ ಸಾಹಿತ್ಯಕ್ಕೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಜವಾಬ್ದಾರಿ ನಿರ್ವಹಿಸಲು ಸಾಧ್ಯವಾದುದಕ್ಕೆ ಅವರು ಸಂಸ್ಥೆ ಹಾಗೂ ಕ್ಷೇತ್ರಕ್ಕೆ ಆಭಾರ ವ್ಯಕ್ತಪಡಿಸಿದರು.
ಹೊಸ ನೇಮಕ
ಸಂಪತ್ ಕುಮಾರ್ ಅವರ ನಿವೃತ್ತಿ ಬಳಿಕ ತೆರವಾದ ಕುಲಸಚಿವ (ಆಡಳಿತ) ಸ್ಥಾನಕ್ಕೆ ವಿಜ್ಞಾನ ವಿಭಾಗದ ಡೀನ್ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಎನ್. ಕಾಕತ್ಕರ್ ಅವರನ್ನು ಹಾಗೂ ಕನ್ನಡ ವಿಭಾಗ ಮುಖ್ಯಸ್ಥ ಸ್ಥಾನಕ್ಕೆ ಕನ್ನಡ ಪ್ರಾಧ್ಯಾಪಕಿ ಡಾ. ಬೋಜಮ್ಮ ಅವರನ್ನು ನೇಮಿಸಿ ಪ್ರಾಂಶುಪಾಲರು ಘೋಷಿಸಿದರು. ವಿಜ್ಞಾನ ವಿಭಾಗದ ಡೀನ್ ಆಗಿ ಡಾ. ಬಿ.ಎ. ಕುಮಾರ ಹೆಗ್ಡೆ, ಇಂಗ್ಲಿಷ್ ವಿಭಾಗ ಮುಖ್ಯಸ್ಥರು ಹಾಗೂ ಐಕ್ಯುಎಸಿ ಸಂಯೋಜಕರಾಗಿ ಗಜಾನನ ಆರ್. ಭಟ್ ಅವರು ನೇಮಕಗೊಂಡರು.
ಉಪ ಪ್ರಾಂಶುಪಾಲ ಡಾ. ಎ. ಜಯಕುಮಾರ ಶೆಟ್ಟಿ, ಸ್ನಾತಕೋತ್ತರ ಕೇಂದ್ರದ ಡೀನ್ ವಿಶ್ವನಾಥ್ ಪಿ., ಕಾಲೇಜಿನ ಸೂಪರಿಂಟೆಂಡೆಂಟ್ ಯುವರಾಜ ಪೂವಣಿ, ಬೋಧಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.ಬೋಧಕರ ಸಂಘದ ಕಾರ್ಯದರ್ಶಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗ್ಡೆ ಪ್ರಸ್ತಾವಿಸಿ, ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮಹೇಶ್ ಶೆಟ್ಟಿ ಪ್ರಾರ್ಥಿಸಿದರು. ಪ್ರಾಧ್ಯಾಪಕರಾದ ವೈದೇಹಿ ವಂದಿಸಿ, ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ

