ಬಳ್ಳಾರಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂದಾಳತ್ವದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ವಿದ್ಯುತ್ ಅವಗಢ ಸಂಭವಿಸಿದೆ. ಇದರಲ್ಲಿ ಐದು ಮಂದಿಗೆ ಗಾಯಗಳಾಗಿದ್ದು, ಅವರನ್ನು ಮೋಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ರಾಹುಲ್ ಗಾಂಧಿ ಅವರ ಸನಿಹದಲ್ಲೇ ಈ ವಿದ್ಯುತ್ ಅವಘಡ ಸಂಭವಿಸಿದೆ. ಮೋಕಾ ಗ್ರಾಮದ ಡೊಡ್ಡ ಮೋರಿ ಬಳಿ ಈ ಘಟನೆ ನಡೆದಿದ್ದು, ಯಾತ್ರಿಯೊಬ್ಬರು ತಮ್ಮ ಕೈಯಲ್ಲಿ ಕಬ್ಬಿಣದ ರಾಡ್ ಹೊಂದಿದ್ದ ಕಾಂಗ್ರೆಸ್ ಧ್ವಜವನ್ನು ಹಿಡಿದಿದ್ದರು. ಅದು ವಿದ್ಯುತ್ ತಂತಿಗೆ ತಗುಲಿದ ಹಿನ್ನೆಲೆಯಲ್ಲಿ ಈ ಅವಘಡ ನಡೆದಿದೆ ಎನ್ನಲಾಗಿದೆ.
ಮೋಕಾ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಣ್ಣ, ಸಂತೋಷ್ ಮತ್ತು ದೊಡ್ಡಪ್ಪ ಸೇರಿದಂತೆ ಒಟ್ಟು ಐದು ಜನರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಗಾಯಗೊಂಡವರನ್ನು ಮೋಕಾ ಗ್ರಾಮದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಣ್ಣ - ಪುಣ್ಣ ಸುಟ್ಟ ಗಾಯಗಳಾಗಿದ್ದು, ದೊಡ್ಡ ಮಟ್ಟದ ಅಪಾಯ ಸಂಭವಿಸಿಲ್ಲ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಹುಲ್ ಗಾಂಧಿ ಅವರು ಗಾಯಾಳುಗಳಿಗೆ ತಲಾ ಒಂದು ಲಕ್ಷ ಪರಿಹಾರವನ್ನು ಘೋಷಿಸಿದ್ದಾರೆ. ಗಾಯಗೊಂಡವರನ್ನು ಶಾಸಕ ನಾಗೇಂದ್ರ ಅವರು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ