ಕೋಲಾರ: ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ (ಯು.ಎನ್.ಎಚ್.ಆರ್.ಸಿ) ಕೋಲಾರ ಜಿಲ್ಲೆಯ ಡಾ. ಕೆ.ಪಿ.ಅಶ್ವಿನಿ ಅವರು ನೇಮಕವಾಗಿದ್ದಾರೆ. ಇವರು ಮೂಲತಃ ಕೋಲಾರ ತಾಲೂಕಿನ ಕಸಬಾ ಕುರುಬರಹಳ್ಳಿಯವರು. ವಿ. ಪ್ರಸನ್ನಕುಮಾರ್ ಹಾಗೂ ಜಯಮ್ಮ ದಂಪತಿಗಳ ಮಗಳು.
ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದಿದ್ದಾರೆ. ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದಾರೆ. ಎಂ.ಫಿಲ್, ಪಿಎಚ್ಡಿ ಪದವಿಯನ್ನು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್ಯು) ದಿಂದ ಸ್ವೀಕರಿಸಿದ್ದಾರೆ.
ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕರಾಗಿಯೂ ಕರ್ತವ್ಯ ನಿರ್ವಹಿಸಿದ್ದರು ಅಶ್ವಿನಿ. ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾ ಗಣಿಗಾರಿಕೆಯಿಂದ ಒಡಿಶಾ, ಛತ್ತೀಸ್ಘಡ ರಾಜ್ಯಗಳ ಆದಿವಾಸಿಗಳ ಪ್ರದೇಶಗಳಲ್ಲಿ ಆದಿವಾಸಿಗಳ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ವಿಶೇಷ ಅಧ್ಯಯನವನ್ನು ಕೈಗೊಂಡಿದ್ದರು. ಜೊತೆಗೆ ನಾಲ್ಕು ವರ್ಷ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.
ಪ್ರಸ್ತುತ ಇವರು ವಿಶ್ವಸಂಸ್ಥೆಯ ಮಾನವ ಹಕ್ಕು ಆಯೋಗಕ್ಕೆ ನೇಮಕಗೊಂಡಿದ್ದಾರೆ. ಜಿನೀವಾ ಮೂಲದ 47 ಸದಸ್ಯರ ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ ಇವರ ನೇಮಕಾತಿಯನ್ನು ಅನುಮೋದಿಸಿದೆ. ಈ ಮೂಲಕ ಅಶ್ವಿನಿ ಅವರು ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ