ಪಣಜಿ: ದೂಧ್‌ಸಾಗರ ನದಿ ನೀರು ಮತ್ತೆ ಕೆಂಪಗಾಗಿದ್ದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ದಾಬಲ್ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಲಸಂಪನ್ಮೂಲ ಸಚಿವ ಸುಭಾಷ್ ಶಿರೋಡ್ಕರ್ ರವರು ಈ ನೀರು ಹೇಗೆ ಕೆಂಪು ಬಣ್ಣಕ್ಕೆ ತಿರುಗಿದೆ ಎಂಬುದನ್ನು ಪತ್ತೆ ಹಚ್ಚಲು ಸಮಿತಿಯನ್ನು ನೇಮಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಿ ರಸ್ತೆಗಿಳಿದು ಪ್ರತಿಭಟನೆ ಆರಂಭಿಸುವುದಾಗಿ ಪಂಚಾಯತ್ ಅಧ್ಯಕ್ಷ ರಮಾಕಾಂತ ಗಾಂವ್ಕರ್ ಎಚ್ಚರಿಕೆ ನೀಡಿದ್ದಾರೆ.
ಪಂಚಾಯತ ಅಧ್ಯಕ್ಷ ರಮಾಕಾಂತ ಗಾಂವಕರ ಹಾಗೂ ದಾಬಾಳ ಗ್ರಾಮಸ್ಥರು ನೀಡಿರುವ ಮಾಹಿತಿ ಪ್ರಕಾರ -ದೂಧ್‌ಸಾಗರ ನದಿ ನೀರು ಮತ್ತೆ ಮತ್ತೆ ಕೆಸರುಮಯವಾಗುತ್ತಿದೆ. ಪಂಪ್ ಅಳವಡಿಸಿ, ದಾಬಲ್ ಪ್ರದೇಶದಲ್ಲಿ ದೂಧ್‌ಸಾಗರ ನದಿಯ ನೀರನ್ನು ಕುಡಿಯಲು ಬಳಸಲಾಗುತ್ತದೆ. ಕಳೆದ ಕೆಲ ದಿನಗಳಿಂದ ನಲ್ಲಿಗಳ ಮೂಲಕ ಜನರ ಮನೆಗಳಿಗೆ ಕೆಸರು ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಇದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಳೆದೊಂದು ತಿಂಗಳಿಂದ ದೂಧ್‌ಸಾಗರ ನದಿಯ ನೀರು ಕೆಂಪಾಗುತ್ತಿದೆ.
ಒಪಿಎ ಯೋಜನೆಯಿಂದ ವಿವಿಧ ತಾಲೂಕುಗಳಿಗೆ ಈ ನೀರು ಪೂರೈಕೆಯಾಗುವುದರಿಂದ ಕೆಸರು ಮಿಶ್ರಿತ ನೀರು ಜನರ ಆರೋಗ್ಯಕ್ಕೆ ಧಕ್ಕೆ ತಂದಿದೆ. ಈ ಕೆಸರು ನೀರಿನ ರಹಸ್ಯವನ್ನು ಜಲಸಂಪನ್ಮೂಲ ಇಲಾಖೆ ಪತ್ತೆ ಹಚ್ಚಬೇಕು ಎಂದು ರಮಾಕಾಂತ ಗಾಂವಕರ್ ಹಾಗೂ ದಾಬಲ್ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಷ್ಟೇ ಅಲ್ಲದೆಯೇ ಸರ್ಕಾರ ಈ ಕುರಿತು ಕೂಡಲೆ ಕ್ರಮ ಕೈಗೊಳ್ಳದಿದ್ದರೆ ರಸ್ತೆಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ