ಮೂಡುಬಿದಿರೆ: ಮೈಸೂರಿನ ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿ ನಡೆದ 2022ರ ಸಾಲಿನ ರಾಜ್ಯಮಟ್ಟದ ದಸರಾ ಕ್ರೀಡಾಕೂಟದಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ರೀಡಾಪಟುಗಳು ಮೇಲುಗೈ ಸಾಧಿಸಿದ್ದಾರೆ.
ಪುರುಷರ ಹಾಗೂ ಮಹಿಳೆಯರ ಅಥ್ಲೆಟಿಕ್ಸ್, ಪುರುಷರ ಹಾಗೂ ಮಹಿಳೆಯರ ವೈಟ್ ಲಿಫ್ಟಿಂಗ್, ಪುರುಷರ ಹಾಗೂ ಮಹಿಳೆಯರ ಬಾಲ್ ಬ್ಯಾಡ್‌ಮಿಂಟನ್‌ನಲ್ಲಿ ಪ್ರಥಮ ಸ್ಥಾನ ಪಡೆದ ಆಳ್ವಾಸ್ ತಂಡ, ಮಹಿಳೆಯರ ಕಬಡ್ಡಿ ಹಾಗೂ ಹ್ಯಾಂಡ್ ಬಾಲ್‌ನಲ್ಲಿ ಪ್ರಥಮ ಪ್ರಶಸ್ತಿ ಪಡೆದಿದೆ. ಪುರುಷರ ವಿಭಾಗವು ಖೋ ಖೋ ಪಂದ್ಯಾಟದಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದೆ.
ಪುರುಷರ ವಿಭಾಗದಲ್ಲಿ 4*400 ಓಟದಲ್ಲಿ ಪ್ರಥಮ ಸ್ಥಾನ , ವೈಯಕ್ತಿಕ ಆಟಗಳಲ್ಲಿ ಎತ್ತರ ಜಿಗಿತ ವಿಭಾಗದಲ್ಲಿ ಅನಿಲ್ ಕುಮಾರ್ ದ್ವಿತೀಯ, 110ಮೀ ಹರ್ಡಲ್ಸ್ ನಲ್ಲಿ ದಿಶಾಂತ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಮಹಿಳಾ ವಿಭಾಗದಲ್ಲಿ ಚೈತ್ರ ದೇವಾಡಿಗ 1500ಮೀ ಹಾಗೂ 3000ಮೀ ಓಟದಲ್ಲಿ ಚಿನ್ನದ ಪದಕ, ಚೈತ್ರ ಪಿ 800ಮೀ ಓಟದಲ್ಲಿ ಕಂಚಿನ ಪದಕ, 1500ಮೀ ಓಟದಲ್ಲಿ ಬೆಳ್ಳಿ ಪದಕ, ಶ್ರೀ ದೇವಿಕಾ ಉದ್ದ ಜಿಗಿತದಲ್ಲಿ ಚಿನ್ನದ ಪದಕ, ಪಲ್ಲವಿ ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ, ಸೃಷ್ಟಿ ಡಿಸ್ಕಸ್ ತ್ರೋದಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.
ವಿಜೇತ ತಂಡಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹಾಗೂ ಉಪನ್ಯಾಸಕ ವೃಂದ ಅಭಿನಂದಿಸಿದ್ದಾರೆ.