"ಸುಲಿದ ಬಾಳೆಯ ಹಣ್ಣಿನಂದದಿ" ಎಂದು ಬಾಳೆಹಣ್ಣಿನ ಮಧುರತೆಯನ್ನು ವರ್ಣಿಸಿರುವ ಸಾಲುಗಳನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಇತ್ತೀಚೆಗಿನ ಸಂಶೋಧನಾ ವರದಿಗಳ ಪ್ರಕಾರ ಬಾಳೆಹಣ್ಣು ಮಾತ್ರವಲ್ಲ, ಬಾಳೆಕಾಯಿ ಕೂಡ ಆರೋಗ್ಯ ದೃಷ್ಟಿಯಿಂದ ಮಧುರ ಎಂಬ ಅಂಶ ಬೆಳಕಿಗೆ ಬಂದಿದೆ. ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುವುದಲ್ಲದೆ ಜೀರ್ಣಾಂಗವ್ಯೂಹದ ಸಮಸ್ಯೆಗಳಲ್ಲಿ ಪರಿಣಾಮಕಾರಿಯಾಗಿದೆ. ತನ್ನ ಪಕ್ವ ಅವಸ್ಥೆಯ ಗರಿಷ್ಠ ಹಂತದಲ್ಲಿ, ಕಂದು ಬಣ್ಣಕ್ಕೆ ತಿರುಗಿದಾಗ ಕ್ಯಾನ್ಸರನ್ನು ನಿರೋಧಿಸುವ ಗುಣವನ್ನು ಕೂಡ ಹೊಂದುತ್ತದೆ.
ಎಲ್ಲದಕ್ಕೂ ಕೂಡ ಇದರ ಪಕ್ವ ಮತ್ತು ಅಪಕ್ವ ಅವಸ್ಥೆಯ ಹಂತಗಳನ್ನು ಪರಿಗಣಿಸಬೇಕಾಗುತ್ತದೆ. ಹಸಿರು ಬಾಳೆಕಾಯಿ ಜಠರದ ಹುಣ್ಣು, ಕರುಳಿನ ಹುಣ್ಣು, ಸೂಕ್ಷ್ಮಾಣು ಸೋಂಕು, ಡಯಾಬಿಟಿಸ್, ಅತಿಸಾರ, ಕರುಳಿನ ಉರಿಯೂತ ಮತ್ತು ರಕ್ತದೊತ್ತಡ ಗಳಲ್ಲಿ ಅತ್ಯಂತ ಪ್ರಯೋಜನಕಾರಿ ಇಂದು ಅಧ್ಯಯನದ ವರದಿಗಳು ಒತ್ತಿ ಹೇಳಿವೆ.
ಹಾಗೆಂದು ಕೇವಲ ಬಾಳೆಹಣ್ಣಿನ ಒಳಗಿನ ಮಾಂಸಲವಾದ ಮೃದು ಭಾಗ ಮಾತ್ರವಲ್ಲ, ಬಾಳೆ ಸಿಪ್ಪೆ ಕೂಡ ಆರೋಗ್ಯ ದೃಷ್ಟಿಯಿಂದ ಮಹತ್ವದ್ದು. ಸಿಪ್ಪೆಯಲ್ಲಿ ಆಂಟಿ ಆಕ್ಸಿಡೆಂಟ್ ( ಔಷಧೀಯ ಜಾಡಮಾಲಿಗಳು), ವಿಟಮಿನ್ ಎ ಅಂಶ ಅಧಿಕವಾಗಿರುತ್ತದೆ. ಇದರಲ್ಲಿನ ಅಂಶಗಳು ಗಾಯಗಳನ್ನು ಮಾಯಿಸುವಲ್ಲಿ, ನರಮಂಡಲಕ್ಕೆ ಸಂಬಂಧಿಸಿದ ಪಾರ್ಕಿನ್ಸನ್ ಕಾಯಿಲೆಯನ್ನು ನಿಯಂತ್ರಿಸುವಲ್ಲಿ ಪಾತ್ರ ವಹಿಸುತ್ತವೆ. ಆದುದರಿಂದ ಬಾಳೆ ಹಣ್ಣನ್ನು ತಿನ್ನಿ, ಅಥವಾ ಹಣ್ಣಿನ ಸಿಪ್ಪೆಯನ್ನು ತಿನ್ನಿ, ಎರಡು ಕೂಡ ನಿಮ್ಮ ಆರೋಗ್ಯದ ಮೇಲೆ ಸತ್ಪರಿಣಾಮ ಬೀರುವುದು.
ಹಸಿರು/ ಬಾಳೆಕಾಯಿ ಗುಣಗಳು
ಇದರಲ್ಲಿ ಸಕ್ಕರೆಯ ಪ್ರಮಾಣ ಅತ್ಯಂತ ಕಡಿಮೆ. ಗ್ಲೈಸೀಮಿಕ್ ಇಂಡೆಕ್ಸ್ 30. ಇದರಲ್ಲಿ (ರೆಸಿಸ್ಟಾಂಟ್ ಸ್ಟಾರ್ಚ್) ನಿರೋಧಕ ಪಿಷ್ಟವು ಅತ್ಯಂತ ಹೆಚ್ಚು ಪ್ರಮಾಣದಲ್ಲಿದೆ. ಅಂದರೆ ಈ ಪಿಷ್ಟವು ಸುಲಭಕ್ಕೆ ಸಕ್ಕರೆಯ ಕಣಗಳಾಗಿ ಪರಿವರ್ತನೆ ಆಗದಿರುವುದರಿಂದ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹಠಾತ್ತಾಗಿ ಹೆಚ್ಚಿಸುವುದಿಲ್ಲ.
ಜೀರ್ಣಾಂಗವ್ಯೂಹದ ಭಾಗಗಳಿಗೆ ಒಳ್ಳೆಯ ಪರಿಣಾಮವನ್ನು ಉಂಟುಮಾಡುತ್ತದೆ. ಕರುಳಿನಲ್ಲಿರುವ ನಮಗೆ ಉಪಕಾರಿ ಯಾಗಿರುವ ಸೂಕ್ಷ್ಮಾಣುಗಳಿಗೆ ಆಹಾರ ಒದಗಿಸಿ ಅವುಗಳನ್ನು ಪುಷ್ಟಿಗೊಳಿಸುತ್ತದೆ. ಬಾಳೆಕಾಯಿ ಅತಿಸಾರವನ್ನು ಹಾಗೂ ಮಲಬದ್ಧತೆಯನ್ನು ಸಮತೂಕದಲ್ಲಿ ನಿವಾರಣೆ ಮಾಡುತ್ತದೆ.
ಜೀರ್ಣಾಂಗವ್ಯೂಹದ ಕಾಯಿಲೆಗಳಾದ ಕರುಳಿನ ಕ್ಯಾನ್ಸರ್ ತಡೆಗಟ್ಟುತ್ತದೆ. ಆದರೆ ಜೀರ್ಣಕ್ರಿಯೆಯ ಸಮಸ್ಯೆಗಳಿಂದ ಬಳಲುವರಲ್ಲಿ, ಜೀರ್ಣಕ್ಕೆ ಕಷ್ಟವಾಗಿರುವುದರಿಂದ, ಬಾಳೆಕಾಯಿ ತುಸು ತೊಂದರೆ ಉಂಟುಮಾಡಬಹುದು. ಬಾಳೆಕಾಯಿಯನ್ನು ಬೇಯಿಸುವುದರಿಂದ ನಿರೋಧಕ ಪಿಷ್ಟದ ಮಟ್ಟವನ್ನು ಹೆಚ್ಚಿಸಬಹುದು. ಸಕ್ಕರೆ ನಿಯಂತ್ರಣದ ಪ್ರಯೋಜನ ಆಗ ಇನ್ನೂ ಹೆಚ್ಚಾಗಿ ದೊರಕಬಹುದು.
ಹಳದಿ/ ಮಾಗಿದ ಬಾಳೆಹಣ್ಣಿನ ಗುಣಗಳು
ಸಕ್ಕರೆಯ ಪ್ರಮಾಣ, ವಿಟಮಿನ್ ಎ, ವಿಟಮಿನ್ ಸಿ, ಹಾಗೂ ಆಂಟಿಆಕ್ಸಿಡೆಂಟ್ ಅಂಶಗಳು ಹೇರಳವಾಗಿವೆ. ತಕ್ಷಣಕ್ಕೆ ಶಕ್ತಿದಾಯಕ. ಕ್ಯಾನ್ಸರ್ ತಡೆಗಟ್ಟುವ ಉದ್ದೇಶಕ್ಕೆ ಇದು ನಿಮ್ಮ ಆಯ್ಕೆಯಾಗಲಿ. ಅಂದರೆ ನಾಲ್ಕನೇ ಹಂತದ ಕ್ಯಾನ್ಸರ್ ಬಂದಾಗ ಬಾಳೆಹಣ್ಣಿನ ಕುರಿತಾಗಿ ಯೋಚಿಸಿ ಎಂದು ಅರ್ಥವಲ್ಲ. ಇದು ನಿಮ್ಮ ದಿನನಿತ್ಯದ ಆಹಾರದ ಅಂಗವಾಗಲಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹಣ್ಣಿನಲ್ಲಿದೆ. ಅತಿಯಾಗಿ ಮಾಗಿದ ಹಣ್ಣಿನಲ್ಲಿ ಹೆಚ್ಚು ಸಕ್ಕರೆ, ಕಡಿಮೆ ಪಿಷ್ಟವಿದೆ. ಪೊಟ್ಯಾಶಿಯಂ, ವಿಟಮಿನ್ ಬಿ6, ಮತ್ತು ಫೋಲೇಟ್ ಅಂಶಗಳು ಅಧಿಕವಾಗಿವೆ.
ಕಂದು ಚುಕ್ಕೆಗಳುಳ್ಳ ಹಳದಿ ಬಾಳೆಹಣ್ಣಿನ ಗುಣಗಳು
ಪಿಷ್ಟವು ಸಂಪೂರ್ಣವಾಗಿ ಸಕ್ಕರೆಯಾಗಿ ಪರಿವರ್ತಿತವಾಗಿರುತ್ತದೆ. ಸಕ್ಕರೆ ಪ್ರಮಾಣವು ನಾಲ್ಕು ಪಟ್ಟು ಹೆಚ್ಚಾಗಿರುತ್ತದೆ. ಸಕ್ಕರೆ ಕಾಯಿಲೆ ಇದ್ದವರು ಈ ಸ್ಥಿತಿಯ ಹಣ್ಣನ್ನು ಸೇವಿಸತಕ್ಕದ್ದಲ್ಲ. ಇದರಲ್ಲಿ ಟ್ಯೂಮರ್ ನೆಕ್ರೋಸಿಸ್ ಫ್ಯಾಕ್ಟರ್, ಅಂದರೆ ಕ್ಯಾನ್ಸರ್ ಗಡ್ಡೆಗಳ ಕೋಶಗಳನ್ನು ಘಾಸಿ ಗೊಳಿಸುವ ಉತ್ತಮ ಪರಿಣಾಮವಿದೆ. ನಮ್ಮ ದೇಹದಲ್ಲಿ ರೋಗಾಣು ಸೋಂಕಿನ ವಿರುದ್ಧ ಹೋರಾಡುವ ಬಿಳಿರಕ್ತಕಣಗಳನ್ನು ಚುರುಕುಗೊಳಿಸುವ ಗುಣವನ್ನು ಕೂಡ ಹೊಂದಿದೆ. ಮಾಗಿದಷ್ಟು ರೋಗ ನಿರೋಧಕ ಗುಣ ಹೆಚ್ಚು.
-ಡಾ. ಆರ್.ಪಿ. ಬಂಗಾರಡ್ಕ.
B.A.M.S.,D. Pharm., M.S.(Ayu) .
ಆಡಳಿತ ನಿರ್ದೇಶಕರು ಹಾಗೂ ಆಯುರ್ವೇದ ತಜ್ಞ ವೈದ್ಯರು,
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ ನರಿಮೊಗರು, ಪುತ್ತೂರು.
ಜಾಲತಾಣ: www.prasadini.com
email:prasadinicare@gmail.com.
you tube:Prasadini Ayurnikethana
mob. 9740545979
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ