ನಡೆಯುವಾಗ ಕಲ್ಲುಗಳ ಮೇಲೆ ಕಾಲಿಟ್ಟು ನಡೆಯುತ್ತೇವೆ. ಸಣ್ಣ, ದೊಡ್ಡ ಕಲ್ಲು ಯಾವುದೇ ಇರಲಿ. ಗಾತ್ರದಲ್ಲಿ ವ್ಯತ್ಯಾಸಗಳಿರಲಿ ಇಲ್ಲದಿರಲಿ ಅಂತಹ ಪ್ರಾಮುಖ್ಯವಾಗುವುದಿಲ್ಲ. ಆದರೆ ನಿರ್ದಿಷ್ಟ ಚಪ್ಪಲಿ ಹಾಕಿ ನಡೆವಾಗ ಇದೇ ಕಲ್ಲು ಚಪ್ಪಲಿಯ ಹಾಗೂ ಕಾಲಿನ ಮಧ್ಯೆ ಸಿಲುಕಿದಾಗ ನಡೆಯಲು ಅಷ್ಟು ಸುಲಭವೆಂದೆನಿಸುವುದಿಲ್ಲ. ತೆಗೆಯದ ಹೊರತು ನಡೆಯಲೇ ಆಗದು. ಕಲ್ಲು ಬರಿಯ ಸಣ್ಣವೇ ಆಗಿರಲಿ ಅಥವಾ ಸ್ವಲ್ಪ ದೊಡ್ಡದೇ ಆಗಿರಲಿ ಅದರ ಪಾಡಿಗೆ ಬಿಡುವ ಹಾಗೇ ಇಲ್ಲ. ನಡಿಗೆಗೆ ತೀವ್ರ ಪ್ರತಿರೋಧ ಒಡ್ದುತ್ತದೆ. ಬೇರೆ ಅವಕಾಶವಿರದಂತೆ ಬಗ್ಗಿ ತೆಗೆಯಲೇ ಬೇಕಾಗುತ್ತದೆ. ಹಾಗಾಗಿ ಹೇಗೇಗೋ ನಡೆದು ಬಿಡುತ್ತೇನೆಂದರೆ ಅದು ಅಹಂಕಾರದ ಮಾತು ಆದೀತು.
ಈ ಬದುಕೆಂಬ ಕವನಗಳು ಕೂಡಾ ಹಾಗೆಯೇ ಕೆಲವೊಮ್ಮೆ ತೀರಾ ಸಲೀಸಾಗಿ ಬಂದು ಹೊಚ್ಚ ಹೊಸ ಪರಿಣಾಮವನ್ನು ಬೀರುತ್ತದೆ. ವಿಮರ್ಶೆ, ವಿಚಾರಗಳನ್ನು ಎದುರಿಸುತ್ತ ಬೆಳೆಯುವ ಪೈರಿನಂತಾಗುತ್ತದೆ. ಬಳಿಕ ಆಸ್ವಾದಿಸುವ ಮನಸ್ಸಿಗೆ ಮುದ ನೀಡುತ್ತದೆ. ಸಂಭ್ರಮಿಸುತ್ತದೆ. ಇನ್ನು ಕೆಲವು ಹಲವು ವಿಚಾರಗಳನ್ನು ಹುಟ್ಟು ಹಾಕುತ್ತದೆ. ಹೀಗಿದ್ದರೆ ಇನ್ನೂ ಒಳ್ಳೆಯ ರೂಪು ಸಿಗುತ್ತಿತ್ತು. ಇಂತಹ ಶೈಲಿಯೇ ಬರಬೇಕಿತ್ತು. ಹೀಗೆ ಕಲ್ಪನೆಗಳಿಗೆ ಅಕ್ಷರ ರೂಪ ಕೊಡುವುದರ ಮೂಲಕ ಸೃಷ್ಟಿಯಲ್ಲಿ ಸಾರ್ಥಕ್ಯ ಅನುಭವಿಸುವುದು ಮನ್ನಣೆ ಪಡೆದುದಕ್ಕಿಂತಲೂ ಮಿಗಿಲು.ಜೀವನ ಪಾಠವೆಂಬ ಕವನಗಳು ಆದರ್ಶವನ್ನು ಬಿಂಬಿಸುತ್ತವೆ. ಬೇರೆ ಬೇರೆ ವಿಚಾರ ಧಾರೆಗಳ ಮುಖಾಂತರ ಸೃಷ್ಟಿಯ ಮಹತ್ವಕ್ಕೆ ಬೆರಗಾಗುತ್ತೇವೆ. ಆ ಅಂತರಾತ್ಮಕ್ಕೆ ತಲೆಬಾಗುತ್ತೇವೆ. ಅದರಂತೆ ನಡೆಯುತ್ತೇವೆ.
ಕಿವಿಯಾಗು ಆಗ ಕವಿಯಾಗುವಂತೆ ಮಾಡುವ ಗುಣ ಬೆಳೆಯುತ್ತದೆ. ಯಾವುದೇ ಪರೀಕ್ಷೆಗೆ ಹೊರಡುವಾಗ ಪುಸ್ತಕಗಳನ್ನು ಓದಿ ಮನಸ್ಸನ್ನು ಸಾಣೆ ಹಿಡಿಯಬೇಕಾಗುತ್ತದೆ. ಆಗ ಅಗೋಚರ ಶಕ್ತಿಯೊಂದು ನಮ್ಮೊಳಗೆ ಆವಾಹಿಸಿ ನಮ್ಮನ್ನು ಮಹಾನ್ ಶಕ್ತಿಯನ್ನಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ.
ಈ ಪ್ರಪಂಚಕ್ಕೆ ಕಾಲಿರಿಸಿದ ಮೇಲೆ ಬಾಳುವೆ ನಡೆಸಲುವಿಶ್ರಾಂತಿ ಪಡೆಯಲು ಮನೆಯೊಂದಿರಬೇಕು. ಇದರಲ್ಲೇನೂ ವಿಶೇಷವಿಲ್ಲ. ಪ್ರಾಣಿ ಪಕ್ಷಿಗಳು ತಮಗೆ ತಕ್ಕುದಾದ ಮನೆಯನ್ನು ತಾವೇ ನಿರ್ಮಿಸಿಕೊಳ್ಳುವುದು ಈ ಸೃಷ್ಟಿಯ ವೈವಿಧ್ಯತೆಗಳಲ್ಲಿ ಒಂದು. ಮನೆಯಲ್ಲಿ ಬಾಳುವೆ ನಡೆಸುವಾಗ ಮನೆಯೊಳಗೆ ಇರುವ ಯಾವುದೇ ವಸ್ತುಗಳು ಮನುಷ್ಯರನ್ನು ಹೊರತಾಗಿಸಿ ಎಲ್ಲವೂ ಎಲ್ಲೆಲ್ಲಿ ಇದೆಯೆಂದು ಅಂದಾಜು ಮಾಡಲು ಪ್ರಾರಂಭದಲ್ಲಿ ಕಷ್ಟವೆನಿಸುತ್ತದೆ. ಆದರೆ ಅಭ್ಯಾಸವಾದ ಬಳಿಕ ಎಲ್ಲೆಲ್ಲಿ ಯಾವ್ಯಾವುದು ವಸ್ತುಗಳು ಜೋಡಿಸಿಟ್ಟಿರುವ ಬಗ್ಗೆ ತಿಳಿದುಕೊಂಡು ಬಿಡುತ್ತೇವೆ. ದೇಹದ ಬಾಹ್ಯ ಹಾಗೂ ಆಂತರಿಕ ಅಂಗಗಳ ಪರಿಚಯ ಆದ ಬಳಿಕವೂ ಹಾಗೆ. ಏನೇನು ಕೆಲಸ ಮಾಡುತ್ತೇವೆಯೋ ಅದನ್ನು ವಿಶೇಷ ಮುತುವರ್ಜಿ ವಹಿಸದೆ ಹತ್ತರಲ್ಲಿ ಹನ್ನೊಂದು ಎಂಬಂತೆ ಮಾಡಿಬಿಡುತ್ತೇವೆ. ದೇಶದ ವಿಷಯದಲ್ಲೂ ಅಂತೆಯೇ. ಅದರ ಆಗು ಹೋಗುಗಳಿಗೆ ಪೂರಕ ಸ್ಪಂದನೆ ನೀಡಬೇಕು. ದೇಶ ಇದ್ದಾಗ ಮಾತ್ರ ನಾವು ಭಾರತೀಯರೆಂಬ ಹೆಮ್ಮೆ ತೋರಲು ಸಾಧ್ಯ. ನಾನೊಬ್ಬ ಭಾರತೀಯ ಎಂದು ಹೆಮ್ಮೆಯಿಂದ ಹೇಳುವಂತಹ ಪ್ರಜೆಗಳು ನಾವಾಗಬೇಕು.
ಹೊಸದಾಗಿ ಇರುವಾಗಿನ ಮಹತ್ವ ಕಾಲ ಕಳೆದಂತೆ ದಕ್ಕುವುದಿಲ್ಲ. ಹಾಗಾಗಿ ಅವಕಾಶ ಬಂದಾಗಲೇ ತೂರಿಕೊಳ್ಳುವುದು ಜಾಣರ ಲಕ್ಷಣವಾಗಿದೆ. ಬರುವ ಹಬ್ಬಗಳ ಯೋಚನೆಯಲ್ಲಿ ಮುಳುಗಿದ ಮನಸ್ಸು ಕಳೆದು ಹೋದ ನೆನಪುಗಳನ್ನು ಕ್ರೋಡೀಕರಿಸಿ ಹೊತ್ತೊಯ್ಯುತ್ತಾ ಸಾಗುತ್ತಿರುತ್ತದೆ. ಒಳಿತು ಕೆಡುಕುಗಳ ಮೂಲಕ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಹಬ್ಬಗಳು ಬಹು ದೊಡ್ಡ ಮಾನ್ಯತೆ ಪಡೆಯುತ್ತವೆ . ಜೀವನದ ನೋವು-ನಲಿವುಗಳನ್ನು ಮನಃ ಪೂರ್ವಕವಾಗಿ ಅನುಭವಿಸುತ್ತ ಬದುಕಿನ ಸಾಂಗತ್ಯವನ್ನು ಅದರೊಂದಿಗೆ ಕಳೆಯುತ್ತೇವೆ. ಬೆಟ್ಟ ಗುಡ್ಡಗಳು ಎಷ್ಟೇ ದೊಡ್ಡದಾಗಿದ್ದರೂ ಅದನ್ನು ಏರುವ ಮನಸ್ಸುಳ್ಳವರಿಗೆ ಪರಿಶ್ರಮವೆಂಬ ಸ್ನೇಹಿತ ಇದ್ದೇ ಇರುತ್ತಾನೆ.
ಈ ಕಾರಣದಿಂದ ಕಾರ್ಯ ತತ್ಪರರಾದರೆ ಕಾಲಡಿಗೆ ನಿಲ್ಲಿಸುವಂತಹ ಚಾಕಚಕ್ಯತೆ ಪಡೆಯುವಂತಾಗುತ್ತದೆ. ಹಗಲುಗನಸು ಕಾಣುತ್ತ ಬದುಕನ್ನು ನಿರರ್ಥಕವಾಗಿ ವ್ಯಯಿಸುತ್ತ ಭೂಮಿಗೆ ಭಾರವಾಗಿ ಬದುಕು ನಡೆಸುವವರು ಬಹಳ ಮಂದಿ ಇದ್ದಾರೆ. ಇತರರಿಗೆ ಕೇಡು ಬಗೆದು ಜೀವಿಸುವ ನರ ಪುಂಗವರೂ ಇದ್ದಾರೆ. ಹಾಗೆ ಒಳಿತು ಮಾಡಿದವರನ್ನು ನೆನೆಯದ ಕೆಟ್ಟ ಮನಸ್ಸಿನವರೂ ಇರುತ್ತಾರೆ. ಮನಸ್ಸಿನ ವಿವೇಚನೆಯನ್ನು ಪರಿಪೂರ್ಣವಾಗಿ ಅರ್ಥೈಸಿಕೊಳ್ಳುತ್ತ ಒಳಿತಿನ ಹಾದಿಯನ್ನು ತುಳಿಯುವಲ್ಲಿ ಎಡವಿ ಬೀಳುತ್ತಾರೆ. ಬದುಕು ದಿಗ್ವಿಜಯ ಭೇರಿಯಂತೆ ಕಂಡರೂ ಸಂಯಮ, ತಾಳ್ಮೆ, ವಿವೇಕಗಳಂತಹ ಅರ್ಥಪೂರ್ಣ ಪದಗಳಿಂದ ಶೃಂಗಾರಗೊಳಿಸಿ ಸಾರ್ಥಕತೆ ಪಡೆಯುವಲ್ಲಿ ಯಶಸ್ವಿಯಾಗುವುದೇ ಬದುಕಿನ ತಿಳಿಯಾದ ಹಾದಿಯಾಗಿದೆ. ಇತರರಿಗೆ ಮೋಸ ಮಾಡಿ ಬದುಕಿದರೂ ಆ ಮೋಸದ ಮೊನೆ ಮುಳ್ಳಿನಂತೆ ಎಂದಿಗೂ ಬಾಧಿಸದೇ ಇರದು.
ತನಗಾಗಿ ಬದುಕು ಕಟ್ಟಿಕೊಳ್ಳಲು ಶ್ರಮಿಸಿದ ಬಂಧು ಮಿತ್ರ, ಸಹೋದರ ಅಥವಾ ಯಾರೇ ಸ್ನೇಹಿತರೂ ಇರಬಹುದು. ಅವರನ್ನು ನಗಣ್ಯವಾಗಿಸಿದರೆ ಅಂತರಂಗ ದೊಳಗಿರುವ ಪರಮಾತ್ಮ ಅಂತರ್ಯಾಮಿ ಎಂದು ತಿಳಿಯದಷ್ಟು ಮೂಢ ಬದುಕು ನಡೆಸುವುದು ಎಂದರ್ಥವಲ್ಲದೇ ಬೇರೇನು? ಕೇವಲ ತಮ್ಮ ಮನದ ಅಭಿಲಾಷೆಗೋಸ್ಕರ ಒಂದೇ ಕರುಳ ಬಳ್ಳಿಯಿಂದ ಹುಟ್ಟಿದ ಅಣ್ಣ, ತಮ್ಮ, ತಂಗಿ ಇಂತಹ ಬಾಂಧವ್ಯವನ್ನು ಮೂಲೆಗುಂಪಾಗಿಸುವ ಕೆಲವು (ಅ)ಮಾನವೀಯ (ಅ)ಸಹೃದಯರು ತಮಗೊಳಿತು ಮಾಡಿದ ಮನಸ್ಸನ್ನು ಅರಿಯುವಲ್ಲಿ ವಿಫಲರಾಗುತ್ತಾರೆ. ಕೇವಲ ಸ್ವಾರ್ಥ ಪಿಪಾಸಿಗಳಾಗುತ್ತಾರೆ. ತಮಗಾಗಿ ಉಪಕರಿಸಿದ ಮನಸ್ಸನ್ನು ಅರಿಯುವಲ್ಲಿ ವಿಫಲರಾಗಿ ಅವರ ಮನಸ್ಸಿನ ಮೂಲೆಯಲ್ಲಿ ನೋವಿನ ಬೀಜವನ್ನು ಶಾಶ್ವತವಾಗಿ ಬಿತ್ತಿ ಬಿಡುತ್ತಾರೆ. ಅರಿತರೆ ಸಂತೋಷ. ಅರಿಯದೇ ಹೋಗಿ ಕೊನೆಗಾಲದಲ್ಲಿ ಅರಿತರೂ ನಿಷ್ಪ್ರಯೋಜಕವೇ. ಇರುವಾಗ ಆಗದವರು ಇಲ್ಲದ ಮೇಲೆ ಬಂದರೆಷ್ಟು ಹೋದರೆಷ್ಟು?
ಕಳೆದ ದಿನಗಳು ಶೋಕಿಯಾದರೆ ವ್ಯಥೆ ಪಡುವ ಕಾಲಕ್ಕೂ ತಯಾರಾಗಬೇಕಾದೀತು. ಅದೇ ಸದ್ವಿನಿಯೋಗಕ್ಕಾಗಿ ಮಾಡಿದ ಗಳಿಗೆಗಳ ಪ್ರತಿಫಲಿತ ಅದರ ಆಯುಷ್ಯ ವರ್ಧಿಸಿದoತೆ ತನ್ನಿoತಾನೇ ಲಭಿಸುತ್ತದೆ. ಅಂತಹ ಹಬ್ಬಗಳು ಬದುಕಿನಲ್ಲಿ ವಾರ್ಷಿಕಾವರ್ತನವಾಗಿ ಬರುವುದಿಲ್ಲ. ಬದಲಿಗೆ ಜೀವನಾವರ್ತನವಾಗಿ ಮಾತ್ರ ಬಂದೊದಗುತ್ತವೆ. ಅದನ್ನು ಸಂಭ್ರಮದಿಂದ ಆಚರಿಸಲು ಕೆಲವರು ಇಷ್ಟ ಪಡುತ್ತಾರೆ. ಆದರೆ ಇನ್ನು ಕೆಲವರು ಅದನ್ನು ಅಷ್ಟಾಗಿ ಗಣನೆಗೆ ಒಳಪಡಿಸದೇ ಸಾದಾ ಸೀದಾ ಸಾಮಾನ್ಯ ಸಂಗತಿಯಂತೆ ಇದ್ದು ಬಿಡುತ್ತಾರೆ. ಅವರು ಹೇಗೆಂದರೆ ಅತ್ತ ದುಃಖ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೆ ಸಂಯಮಿಗಳಾಗಿರುತ್ತಾರೆ. ಆರಕ್ಕೇರದೆ ಮೂರಕ್ಕಿಳಿಯದೆ ನಡೆಸುವ ಈ ಬದುಕು ಎಲ್ಲರಿಗೂ ಆದರ್ಶವೇ ಹೌದು.
ಯಾರ್ಯಾರನ್ನೋ ಮೆಚ್ಚಿಸಲು ಏನೆಲ್ಲಾ ಪಿತೂರಿ ಮಾಡುವ ಇಂದಿನ ಸಮಾಜದ ಆಗು ಹೋಗುಗಳು ಬರಿ ಮುಖವಾಡ ಹೊದ್ದಂತಹ ಸ್ವರೂಪಗಳೆಂದರೆ ತಪ್ಪಾಗಲಾರದು. ಅಷ್ಟಕ್ಕೂ ಮನುಜರಿಗೆ ಸಿಕ್ಕಿದ ಈ ಮನುಷ್ಯರೂಪ ಬರೀ ತೋರಿಕೆಗಾಗಿ ಮಾತ್ರ ಅಲ್ಲ! ಇದ್ದು ಸಾಧಿಸುವಂತಹ ಗುಣ, ಧೈರ್ಯ, ವಿವೇಕ ಇವೆಲ್ಲವುಗಳನ್ನು ಅಳವಡಿಸಿಕೊಂಡು ಅಂತರಂಗದ ಆ ಪರಮಾತ್ಮನನ್ನು ಸಂತೋಷಗೊಳಿಸಿದರೆ ಜೀವನವೆಂಬುದು ಸುಖದ ನಿಧಿಯಂತಾಗುವುದು. ಸಂಪತ್ತು ಗಳಿಕೆಯಲ್ಲಿ ಮಾನವೀಯ ಸಂಬಂಧಗಳನ್ನು ಮರೆತು ಬದುಕುವ ರೂಢಿ ಕಾಲ ಕಳೆದಂತೆ ಅಸಹನೀಯ ನೋವನ್ನು ಮಾತ್ರ ಕೊಡಬಲ್ಲುದಲ್ಲದೆ ಪ್ರೀತಿ ನಂಬಿಕೆಯನ್ನು ಉಳಿಸಲೊಲ್ಲದು.
ಎಲ್ಲವೂ ವ್ಯಾಪಾರದ ದೃಷ್ಠಿಯಾದರೆ ಬದುಕಿಗೆ ಯಾವ ಬೆಲೆಯೂ ಉಳಿಯದು. ಈ ಭೂಮಿಯಲ್ಲಿ ಬದುಕಲು ಅರ್ಹತೆ ನೀಡಿದ ಆ ದೇವರಿಗೋಸ್ಕರ ನಾವು ನಮ್ಮ ಜೀವನದ ಕ್ಷಣ ಕ್ಷಣವನ್ನೂ ವಿನಿಯೋಗಿಸಿದಾಗ ಋಣ ಸಂದಾಯ ಮಾಡಲು ಸಾಧ್ಯವಿದೆಯೆಂದಾದರೆ ಅದಕ್ಕಿಂತ ಆತ್ಮ ತೃಪ್ತಿ ಬೇರಾವುದೂ ಇರಲಾರದು, ಸಿಗಲಾರದು.
ಸರ್ವೇ ಜನ ಸುಖಿನೋ ಭವಂತು, ಎಲ್ಲರಿಗೂ ಒಳಿತಾಗಲಿ.
✍️ ಮಲ್ಲಿಕಾ ಜೆ ರೈ ಪುತ್ತೂರು
ಮುಕ್ರಂಪಾಡಿ
ದರ್ಬೆ
ಪುತ್ತೂರು 574202
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ