ದುಃಖ ಪಡುತ್ತಾ ಇರುವವನಿಗೆ ಬೇರೆಯವರ ಕಣ್ಣಿಗೆ ಆ ನೋವಿನ ಛಾಯೆ ಕಾಣದಿರಲೆಂದು ಬರುವ ಮಳೆ ಆ ಕಣ್ಣೀರನ್ನು ಮರೆ ಮಾಚಿ ಜೀವನದ ಹಲವು ಆಯಾಮಗಳನ್ನು ತಿಳಿಸಿಕೊಡುತ್ತದೆ. ಬದುಕು ಎಂದರೆ ಹೀಗೇ ಎಂದು ಹೇಳುವoತಹ ಸರಳ ರೇಖೆಗಳಿಲ್ಲ. ಬಂದದ್ದನ್ನು ಎದುರಿಸಿಕೊಂಡು ಹೋಗುವ ನೈಪುಣ್ಯತೆ ಹೊಂದಿರಬೇಕಾಗುತ್ತದೆ. ಅಷ್ಟಕ್ಕೂ ಮನಸ್ಸು ಎಂಬುದು ವಾಯು ವೇಗಕ್ಕಿಂತಲೂ ಹೆಚ್ಚು ಚಲನೆಯುಳ್ಳದ್ದು. ಅದರೊಂದಿಗೆ ಚಲಿಸಲು ಈ ದೇಹಕ್ಕೆ ಖಂಡಿತಾ ಸಾಧ್ಯವಾಗದು. ಮನಸ್ಸು ಆತ್ಮನ ಜೊತೆಗಾರ. ಈ ದೇಹವೋ ಎಲ್ಲೆಂದರಲ್ಲಿ ಬಾಹ್ಯ ಜ್ಞಾನ, ದಾಹ ಪಿಪಾಸೆಗೆ ಒಳಗಾಗುವ ಒಂದು ರೀತಿಯ ಜಾದೂಗಾರನೇ ಹೌದು. ಸರಿಯಾದ ದಾರಿಯಲ್ಲಿ ಸಾಗುತ್ತಾ ಕರ್ಮಗಳನ್ನು ಲವಲೇಶವು ಕಡೆಗಣಿಸದೆ ಮಾಡುತ್ತಾ ಸಾಗಿದಾಗ ಬದುಕಿನ ಒಳಾರ್ಥಗಳ ಮಾಗುವಿಕೆ ಬೆಳಕಿಗೆ ಬರುತ್ತದೆ. ಹೊಳಪು ಪ್ರಜ್ವಲಿಸುತ್ತದೆ.
ಬೆಳಕು ಮೂಡುವ ಮೊದಲೇ ಕೇಳುವ ಹಕ್ಕಿಗಳ ಚಿಲಿಪಿಲಿ ಗಾಯನ ಮನಸ್ಸಿಗೆ ಮುದ ನೀಡುತ್ತವೆ. ಬಾಲ್ಯವನ್ನು ನೆನಪಿಸುತ್ತ ಅಂದಿನ ಜವಾಬ್ದಾರಿ ರಹಿತ ಸಂತೋಷದ ಕ್ಷಣಗಳನ್ನು ಅನುಭವಿಸುವಂತೆ ಪ್ರೇರೇಪಿಸುತ್ತವೆ. ಖುಷಿಯ ಮೂಟೆಗಳಂತೆ ಮೆದುಳೊಳಗೆ ಅವಿತು ನಿರಂತರ ಸ್ಫೂರ್ತಿಯನ್ನು ನೀಡುತ್ತಾ ಬಾಳಿಗೆ ದೀವಿಗೆಯಾಗುತ್ತವೆ. ಹಾಗಾಗಿ ಬಾಲ್ಯವೆಂಬುದು ದೇವರ ವರಪ್ರಸಾದವೆಂದರೂ ತಪ್ಪಾಗಲಾರದು. ಹೆತ್ತವರೊಡನೆ ಅಷ್ಟೊಂದು ಸರಸ ಒಡನಾಟ ಇಲ್ಲದಿದ್ದರೂ ಅವರ ಜವಾಬ್ದಾರಿಯನ್ನು ಅರಿತು ಕೆಲಸ ಕಾರ್ಯಗಳೊಂದಿಗೆ ಜೋಡಿಸಿಕೊಳ್ಳುತ್ತಾ ಬದುಕಿನ ಹಾದಿಯನ್ನು ತುಳಿದು ತಿಳಿಯುವ ಅನಾವರಣ ಮಾಡಿ ಕೊಡುತ್ತಿದ್ದರು. ಮಾಡಿ ಕಲಿ ನೋಡಿ ತಿಳಿ ಎಂಬ ನೀತಿ ಶಿರಸಾವಹಿಸಿ ಮಾಡುವ ಕಲೆಯೆoಬುದು ರಕ್ತಗತದಂತೆ ಬಾಲ್ಯದಲ್ಲಿಯೇ ಬಂದು ಬಿಡುತ್ತಿತ್ತು. ಆಗಲೇ ಜವಾಬ್ದಾರಿ ಪೂರ್ವಾಲೋಚನೆಗಳೂ ಹಂಚಿಕೆಯಾಗುತ್ತಿತ್ತು.
ಜಗತ್ತು ವಿಶಾಲವಾಗಿದೆ. ಆದರೆ ಜಗದೊಳಗಿರುವ ಮನುಷ್ಯರ ಮನಸುಗಳು ಕುಬ್ಜವಾಗುತ್ತಲಿವೆ. ಬದುಕಿನ ಹೊಂದಾಣಿಕೆಯ ಏಣಿಯನ್ನು ಎತ್ತರಿಸುವಲ್ಲಿ ವಿಫಲವಾಗುತ್ತಿವೆ. ನಾಲ್ಕು ಗೋಡೆಗಳ ನಡುವೆ ಮನವು ಬೀಗಿ ಬೇಯುತ್ತಿದೆ. ತನ್ನೊಳಗಿನ ಆಸೆಗಳ ಪರಿಧಿಯನ್ನು ವಿಸ್ತರಿಸಿ ಹತಾಶೆಯ ಪರಿಣಾಮವನ್ನು ಎದುರಿಸಲು ವಿಫಲವಾಗುತ್ತಿದೆ. ಕೊನೆಗೆ ದಾರಿ ಕಾಣದೇ ಮುಂದೆ ಕೈ ಚೆಲ್ಲಿ ಬಿಡುತ್ತೇವೆ. ಯಾವುದೇ ಫಲಿತಾಂಶ ಬರುವ ಮುನ್ನ ಅಥವಾ ಬಂದ ನಂತರ ಧನಾತ್ಮಕವಾಗಿ ಯೋಚಿಸುವುದು ಒಳ್ಳೆಯ ಗುಣ. ಆದರೆ ಅದನ್ನು ಋಣಾತ್ಮಕವಾಗಿ ಗಳಿಸಿಕೊಂಡು ಎಲ್ಲರ ಯೋಚನೆಗಳಿಗೂ ಷಡ್ರಸಗಳನ್ನು ಸೇರಿಸುತ್ತ ಕೊರತೆಯನ್ನು ಎತ್ತಿ ಹಿಡಿಯುವವರು ಅನೇಕರಿದ್ದಾರೆ. ಯಾವುದೇ ವಸ್ತುವಾಗಲಿ ಅದಕ್ಕೊಂದು ಇತಿ ಮಿತಿಯೆoಬುದಿರುತ್ತದೆ. ಹಿಗ್ಗಿಸುವಿಕೆ ಅಥವಾ ಕುಗ್ಗಿಸುವಿಕೆ ಆಯಾಯ ವಸ್ತು ವಿಷಯಗಳಿಗೆ ಮೀಸಲಾಗಿರುತ್ತದೆ. ಬಲವಂತ ಮಾಡಿದರೆ ವಿಧಿ ಬೇರೆಯೇ ಬರೆಹ ಬರೆದು ಬಿಡುವ ಸಾಧ್ಯತೆ ಇರುತ್ತದೆ.
ಯಾಂತ್ರಿಕ ಬದುಕು ಯಂತ್ರದಂತೆ ಸಾಗುತ್ತಿದೆ. ಪ್ರಚೋದನೆ ನೀಡುತ್ತಾ ಬದುಕಿಗೆ ಹೊಸ ಭಾವನೆಗಳನ್ನು ತುಂಬುತ್ತಾ ಬೆಳಕು ಬೆಳಗಿಸಲು ಸಣ್ಣ ಹಣತೆಯೂ ಸಾಕು. ಆದರೆ ಬೆಳಗಿಸುವ ಸುವಿಶಾಲ ಮನಸ್ಸು ಇರಬೇಕು. ಒಲವ ಹಾದಿಗೆ ಹೂವು ಹಾಸಿದಂತೆ ನಂಬಿಕೆಯೆoಬ ಬತ್ತಿ ಸ್ವಚ್ಛ ಹಾಗೂ ಶುಭ್ರವಾಗಿರಬೇಕು. ಇತ್ತಿತ್ತಲಾಗಿ ಶುಭ್ರತೆಯೆoಬುದು ಬರಿಯ ಹೇಳಿಕೆಯ ಪದವಾಗಿ ಸಂಗ್ರಹ ಯೋಗ್ಯವಾಗಿ ನಿಂತಿದೆಯೆಂದರೆ ತಪ್ಪಾಗಲಾರದು. ಮನಸ್ಸು ಹುಳುಕು ಆಗಿದೆ. ಸಿಹಿ ತಿಂಡಿ ತಿಂದ ಬಳಿಕ ಬಾಯಿಯನ್ನು ಸ್ವಚ್ಛ ಗೊಳಿಸಲು ಪುರುಸೊತ್ತು ಇಲ್ಲದ ಮೇಲೆ ಹುಳುಕು ಸಾಮಾನ್ಯವಾಗಿ ಹಲ್ಲುಗಳಿಗೆ ಬಂದು ಬಿಡುತ್ತವೆ. ಇದು ಉತ್ಪ್ರೇಕ್ಷೆಯ ಮಾತಲ್ಲ.
ಹುಳುಕು ಹಲ್ಲುಗಳ ಹತ್ತಿರವೇ ಇರುವ ಒಬ್ಬಂಟಿ ನಾಲಿಗೆ ಹುಳುಕು ಸಹವಾಸವನ್ನು ಮಾಡುವುದು ಸಹಜ. ಒಳ್ಳೆಯ ಮಾತುಗಳು ಬರಬೇಕಾದರೆ ಸಜ್ಜನರ ಸಂಗವಿರಬೇಕು. ಅಥವಾ ಅನುಭವಿ ಹಿರಿಯರ ಆದರ್ಶ ನುಡಿಗಳಿರಬೇಕು. ಇವೆಲ್ಲವೂ ಈಗ ಪರದೆಯ ಹಿಂದೆ ಬೆಳಕು ಹಾಯಿಸಿದಾಗಷ್ಟೇ ಕಾಣುವ ಅಂಶಗಳಾಗಿವೆ. ಅಂತರಂಗದ ಬೆಳಕು ಹೊರಜಗತ್ತಿಗೆ ತೆರೆದುಕೊಂಡಾಗ ಮಾತ್ರ ನಿಜದ ಅನಾವರಣವಾಗಲು ಸಾಧ್ಯವಾಗುತ್ತದೆ. ಬೆಂಕಿಯಲ್ಲಿ ಕಾಯಿಸಿದಾಗ ಹೇಗೆ ಚಿನ್ನವು ಕಪ್ಪಾಗಿರುವುದೋ, ಬಳಿಕ ಸುತ್ತಿಗೆಯ ಮೃದು ಹೊಡೆತಕ್ಕೆ ಮರುಗಿ ಮಾರ್ಪಾಟು ಹೊಂದಿ ಪರಿಶುದ್ಧ ಚಿನ್ನ ದೊರಕುವಂತೆ ಬದುಕೆಂಬ ಈ ಬಂಗಾರ ಕಷ್ಟಗಳೆಂಬ ಹೊಡೆತಕ್ಕೆ ಸಿಕ್ಕಿ ಆ ಬಳಿಕ ತಾಳ್ಮೆಯೊಂದಿಗೆ ಜಯಿಸಿ ಪರಿಶುದ್ಧವಾಗುತ್ತದೆ. ಕಷ್ಟಗಳೇ ಇಲ್ಲದೆ ಜೀವನ ನಡೆಸಲು ಸಾಧ್ಯವಿಲ್ಲ.
ಬದುಕಿನ ಹಲವು ಘಟ್ಟಗಳು ಕೆಲವೊಮ್ಮೆ ತೀರಾ ಸರಳವಾಗಿ ಹರಿಯುವ ಸಲಿಲದಂತೆ ಸಾಗುತ್ತಿರುತ್ತವೆ. ಮತ್ತೆ ಕೆಲವೊಮ್ಮೆ ಭೋರ್ಗರೆದು ಪ್ರಪಾತಕ್ಕೆ ಸುರಿಯುವ ಜಲಪಾತದಂತೆ ರುದ್ರ ರಮಣೀಯವಾಗಿರುತ್ತದೆ. ಬದುಕು ಇವೆರಡರಂತೆ ಇರಲೇ ಬೇಕೆಂದೇನಿಲ್ಲ. ಭಿನ್ನವಾಗಿಯೂ ಇರಬಹುದು. ಅಥವಾ ಕಾಕತಾಳಿಯವೆಂಬಂತೆ ಹೋಲಿಕೆ ಕಂಡು ಬರಬಹುದು. ಜಗತ್ತಲ್ಲಿ ಒಬ್ಬರಂತೆ ಇನ್ನೊಬ್ಬರು ಇಲ್ಲವೆಂದಾದರೂ ಕೆಲವೊಮ್ಮೆ ಅಲ್ಪ ಸ್ವಲ್ಪ ಹೋಲಿಕೆ ಕಂಡು ಬರುವುದುಂಟು. ಹಾಗೆಯೇ ಮಾಡುವ ಕಾರ್ಯಗಳು, ಅನುಭವಿಸಿದ ಕಾಲಘಟ್ಟದ ಪರಿಣಾಮಗಳು ಏಕ ರೂಪವಾಗಿರಲು ಸಾಧ್ಯವಿಲ್ಲ.
ಹೋಲಿಕೆ ಇದ್ದರೂ ಅದು ಕ್ಷಣಿಕವೇ ಆಗಿರುವುದು. ಬದುಕೆಂಬ ಮಹಾಸಾಗರದೊಳಗೆ ಹುದುಗಿದ ಆಗಾಧ ಸಂಪನ್ಮೂಲಗಳನ್ನು ವ್ಯವಸ್ಥಿತ ರೀತಿಯಲ್ಲಿ ಜೋಡಿಸಿಕೊಂಡು ದಾರಿಯನ್ನು ಪಯಣಿಸಬೇಕಿದೆ. ಹೆಜ್ಜೆ ತಪ್ಪದೇ ಪರಾಮರ್ಷಿಸಿ ನಡೆಯುವ ವ್ಯವಧಾನ ಇನ್ನಷ್ಟು ಬೆಳೆಸಿಕೊಳ್ಳಬೇಕಾಗಿದೆ. ಒಡಲಿನ ನ್ಯಾಯ, ನೀತಿ, ಧರ್ಮ, ನಂಬಿಕೆಗಳಿಗೆ ಚ್ಯುತಿ ಬರದಂತೆ ಜೀವನ ಸಾಗಿಸುವ ಛಾತಿ ಇನ್ನಷ್ಟು ಹೆಚ್ಚು ಬೇಕಾಗಿದೆ. ಬದುಕು ಎಂದರೆ ಬೇಕಾ ಬಿಟ್ಟಿಯಾಗಿ ಸಾಗುವುದಕ್ಕಲ್ಲ. ಹಾದಿ ನಿರ್ಮಲವಾಗಿದ್ದಾಗ ಎಲ್ಲರೂ ಸಾಗುತ್ತಿರುತ್ತಾರೆ. ಆದೇ ಹಾದಿಯಲ್ಲಿ ಕೊಳಚೆ ನಿರ್ಮಿಸಿದಿರೋ ಮೂಗು ಮುಚ್ಚಿಕೊಂಡು ದೂರ ಹೋಗುತ್ತಾರೆ.
ಬರಿಯ ಕಾಂಕ್ರೀಟ್ ನಿರ್ಮಾಣದಿಂದ ಸ್ವಚ್ಛತೆ ಬರಲಾರದು. ಅಥವಾ ಕಶ್ಮಲ ಮಾಯವಾಗದು. ಅಂಗೈಯಲ್ಲಿ ಮಣ್ಣೇ ಆಗಬಾರದು ಎಂದರೆ ಮಣ್ಣಿನ ಜೊತೆ ಆಟ ಹೇಗೆ ಆಡುವುದು? ಮಣ್ಣು ಬೆಳಕು ಕಾಣುವುದರಿಂದ ಹಿಡಿದು ಬೆಳಕು ಮರೆಯಾದ ಬಳಿಕವೂ ಅಗತ್ಯವಾಗಿ ಬೇಕಾಗುವಂತದ್ದು. ಅಂತಹ ಮಣ್ಣು ಈಗ ಬಿಸಿಯಾಗಿ ಭೂಮಿ ತನ್ನ ಒಡಲ ಶಾಖ ಹೆಚ್ಚಿಸುವಂತಾಗುತ್ತಿರುವುದು ಮನುಷ್ಯನ ಅತಿಯಾಸೆಯಿಂದ. ಹಸುರು ಬೆಳೆದು ಹಸನು ಮಾಡಲು ಬಿಡದೇ ತಾಪ ಕಡಿಮೆಯಾಗುವುದೆಂತು? ಕಾಲಿಗೆ ಮಣ್ಣಿನ ಸ್ಪರ್ಶ ಆಗದ ಹೊರತು ಮಣ್ಣನ್ನು ಹೃದಯದಲ್ಲಿಟ್ಟು ಪೂಜಿಸುವುದೆಂತು? ಮಣ್ಣಿನ ಮಜ್ಜನ- ಸಕಲ ರೋಗಕ್ಕೂ ರಾಮ ಬಾಣ. ತಡವಾದರೂ ಅರಿತ ಮೇಲೆ ಇನ್ನಾದರೂ ಮಣ್ಣನ್ನು ಪೂಜಿಸುವ ಮನ ಹೆಚ್ಚಾಗಲಿ.
✍️ ಮಲ್ಲಿಕಾ ಜೆ ರೈ ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ



