ಮಂಗಳೂರು: ಶ್ರೀ ವಾಗೀಶ್ವರಿ ಯಕ್ಷಗಾನ ಕಲಾ ವರ್ಧಕ ಸಂಘದ 27ನೆಯ ಸರಣಿ ಕಾರ್ಯಕ್ರಮ ಶ್ರೀ ಮಹಾಮಾಯೀ ದೇವಸ್ಥಾನದ ವಠಾರದಲ್ಲಿ ಜರಗಿತು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಶುಭವನ್ನು ಯಕ್ಷಗಾನದ ಅಭಿಮಾನಿ, ಪ್ರೇಕ್ಷಕ ಎನ್.ಟಿ. ರೈ ಅಧ್ಯಕ್ಷ ಸ್ಥಾನದಿಂದ ಹಾರೈಸಿದರು. ಈ ಸಂಘದ ಏಳಿಗೆಗೆ ತನ್ನಿಂದಾದ ಸಹಕಾರವನ್ನು ನೀಡುವುದಾಗಿ ತಿಳಿಸಿದರು.
ಸುದಾಸ್ ಆಚಾರ್ಯ ಕಾವೂರು 5 ನೆಯ ತರಗತಿಯಲ್ಲಿ ಇರುವಾಗಲೇ ಯಕ್ಷಗಾನದ ವೇಷಗಳನ್ನು ಮಾಡುತ್ತಿದ್ದವರು. 7 ನೆಯ ತರಗತಿಯಲ್ಲಿರುವಾಗ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಲ್ಲಿ ಚೆಂಡೆ ಮದ್ದಳೆ ವಾದನವನ್ನು ಕಲಿತರು. ಪೊಲಿಟೆಚ್ನಿಕ್ ವಿದ್ಯಾಭ್ಯಾಸದ ಬಳಿಕ ವೃತ್ತಿಯ ಜೊತೆಗೇ ಹಿಮ್ಮೇಳ ವಾದಕರಾಗಿ ಕಲಾ ಸೇವೆಯನ್ನು ಮಾಡುತ್ತ ಬಂದವರು. ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಬೆಳೆದು ಬಂದಿದ್ದಾರೆ ಎಂದು ಸಂಘದ ಪ್ರದಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು.
ಸಂಮಾನಕ್ಕೆ ಉತ್ತರಿಸಿದ ಸುದಾಸ್ ಆಚಾರ್ಯ ಕಲಾ ಜೀವನದಲ್ಲಿ ತನ್ನನ್ನು ತಿದ್ದಿದ ಹಿರಿಯರನ್ನು ಸ್ಮರಿಸಿಕೊಂಡರು. ಹಿಮ್ಮೇಳ ವಾದನ ಕಲಿತ ಬಳಿಕ ಅದನ್ನು ಅಭ್ಯಾಸ ಮಾಡಿದ್ದೇ ಈ ಸಂಘದಲ್ಲಿ. ಇಂದು ಸಂಮಾನ ಮಾಡಿರುವುದು ಅತ್ಯಂತ ಸಂತೋಷ ತಂದಿದೆ ಎಂದರು.
ಕೀರ್ತಿಶೇಷ ತಿಮ್ಮಪ್ಪ ಗುಜರನ್ ತಲಕಳ ಮೇಳವನ್ನು 38 ವರ್ಷ ಹಾಗೂ ಉಳ್ಳಾಲ ಭಗವತಿ ಮೇಳವನ್ನು 18 ವರ್ಷ ಮುನ್ನಡೆಸಿದವರು. 40 ಕ್ಕೂ ಮಿಕ್ಕಿ ಯಕ್ಷಗಾನ ಪ್ರಸಂಗಗಳನ್ನು ರಚಿಸಿದವರು. ಈ ಸಂಘಕ್ಕೆ ನೀಡಿದ ಸಹಕಾರವನ್ನು ಸಂಜಯ ಕುಮಾರ್ ಸಂಸ್ಮರಣೆ ಮಾಡಿದರು.
ಇನ್ನೋರ್ವ ಅತಿಥಿ ಪ್ರೊ. ಶೃತ ಕೀರ್ತಿ ರಾಜ್ ಸಂಘದ ನೂರು ವರ್ಷಗಳಲ್ಲಿ ದುಡಿದ ಹಲವು ತಲೆಮಾರಿನವರ ಸೇವೆಯನ್ನು ನೆನಪಿಸಿಕೊಂಡರು. ಸುಣ್ಣಂಬಳ ವಿಶ್ವೇಶ್ವರ ಭಟ್ಟರು ಇಂದಿನ ಸುಖದ ಯಕ್ಷಗಾನಕ್ಕೆ ಹಲವು ಕಲಾವಿದರ ತ್ಯಾಗವೇ ಕಾರಣ ಎಂದು ಹೇಳಿದ ಮಾತುಗಳನ್ನು ನೆನಪಿಸಿದರು. ತಾಳ ಮದ್ದಳೆ ಕ್ಷೇತ್ರ ಯಕ್ಷಗಾನಕ್ಕೆ ಭದ್ರ ಬುನಾದಿ. ಯಕ್ಷಗಾನದಲ್ಲಿ ಮಾತೆ ಮುಖ್ಯ.ವೇಷ ಭೂಷಣ, ಹೆಜ್ಜೆಗಾರಿಕೆ, ಮುಖವರ್ಣಿಕೆ ದಿನವೂ ಒಂದೇ ರೀತಿ ಇದ್ದರೂ ಮಾತುಗಾರಿಕೆ ಪ್ರತಿ ದಿನ ಬೇರೆಯೇ ಇರುತ್ತದೆ. ಅದು ಸಾಧ್ಯವಾಗುವುದು ತಾಳಮದ್ದಳೆ ಸಂಘಗಳ ಮೂಲಕ. ಇಂತಹ ಅಪೂರ್ವ ಇತಿಹಾಸವುಳ್ಳ ಸಂಘ ಇನ್ನೂ ಹಲವು ವರ್ಷ ಕಲಾ ಸೇವೆ ಮಾಡಲೆಂದು ಹಾರೈಸಿದರು.
ಇನ್ನೋರ್ವ ಅತಿಥಿ ತಿಮ್ಮಪ್ಪ ಗುಜರನ್ ಇವರ ಪುತ್ರಿ, ತಲಕಳ ಮೇಳದ ಸಂಚಾಲಾಕಿ ತಮ್ಮ ಮೇಳ ಆಸಕ್ತ ಎಲ್ಲಾ ಕಲಾವಿದರಿಗೆ ಅವಕಾಶವನ್ನು ಕೊಡುತ್ತಿದೆ. ಈ ಸಂಘಕ್ಕೂ ಒಳ್ಳೆಯದಾಗಲಿ ಎಂದು ಹಾರೈಸಿದರು. ಸಂಮಾನ ಪತ್ರವನ್ನು ಅಶೋಕ ಬೋಳೂರ್ ಪ್ರಸ್ತುತಪಡಿಸಿದರು.
ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಸಿ.ಎಸ್. ಭಂಡಾರಿ ಸ್ವಾಗತವನ್ನು ಕೋರಿದರು. ಹಿರಿಯ ಕಲಾವಿದ ಮೋಹನ್ ಬಂಗೇರ, ಸಂಘದ ಅಧ್ಯಕ್ಷ ಶ್ರೀನಾಥ್ ಪ್ರಭು, ಕೋಶಾಧಿಕಾರಿ ಶಿವಪ್ರಸಾದ್ ಪ್ರಭು, ಉಪಾಧ್ಯಕ್ಷೆ ಪ್ರಫುಲ್ಲಾ ನಾಯಕ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಾಗಾಸ್ತ್ರ ಕುಂಭಕರ್ಣ ಕಾಳಗ ತಾಳಮದ್ದಳೆ ಜರಗಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ