|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹಳಿ ತಪ್ಪಿದ ಲಂಕಾ ಆರ್ಥಿಕತೆ- ಎಚ್ಚರಿಕೆಯ ಘಂಟೆ

ಹಳಿ ತಪ್ಪಿದ ಲಂಕಾ ಆರ್ಥಿಕತೆ- ಎಚ್ಚರಿಕೆಯ ಘಂಟೆ



-ಡಾ.ಎ.ಜಯ ಕುಮಾರ ಶೆಟ್ಟಿ

ನಮ್ಮ ನೆರೆಯ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಇತ್ತೀಚೆಗೆ ಜನರ ಸಹನೆಯ ಕಟ್ಟೆ ಒಡೆದು ನಡೆದ ಘಟನಾವಳಿಗಳು ಬಹಳಷ್ಟು ಆತಂಕಗಳನ್ನು ಸೃಷ್ಟಿಸಿದೆ. ರಾಷ್ಟ್ರಾಧ್ಯಕ್ಷರ ಪಲಾಯನ, ಪ್ರಧಾನಿಯ ರಾಜೀನಾಮೆಯಿಂದ ಸರಕಾರ ಕುಸಿದು ಬಿದ್ದು ಅರಾಜಕತೆ ಸೃಷ್ಟಿಯಾಗಿದೆ.


ಲಂಕಾ ದಿವಾಳಿಯಾದ ಬಗೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೇಗೆ ಒಂದು ಆರ್ಥಿಕತೆಯು ತನ್ನ ದೂರದರ್ಶಿತ್ವವಿಲ್ಲದ ಆರ್ಥಿಕ ನೀತಿಗಳಿಂದಾಗಿ ಮುಗ್ಗರಿಸಿ ಬೀಳಬಹುದು ಎಂಬ ಪಾಠವನ್ನು ಅನಾವರಣಗೊಳಿಸುತ್ತದೆ. ಕೇವಲ ತತ್ ಕ್ಷಣದ ಲಾಭವನ್ನು ಗಮನದಲ್ಲಿಟ್ಟಾಗ ಹೇಗೆ ಭವಿಷ್ಯ ಸಂಪೂರ್ಣ ಮಸುಕಾಗಿ ಮುಂದೆ ದಾರಿ ಕಾಣದಾಗುತ್ತದೆ ಎಂಬುದಕ್ಕೆ ಈ ಲಂಕಾದಲ್ಲಿ ನಡೆಯುತ್ತಿರುವ ವಿಘಟನೆಗಳೇ ಸಾಕ್ಷಿ. ವಿಪರೀತ ಆರ್ಥಿಕ ತೊಂಡರೆಯಿಂದ ಸೊರಗಿದ ಸಮಾಜಕ್ಕೆ ಭವಿಷ್ಯದ ಬೆಳಕು ಕಾಣಸಿಗುವುದಿಲ್ಲ.


ಆರ್ಥಿಕ ಬಿಕ್ಕಟ್ಟು:

ಶ್ರೀಲಂಕಾ ಸರ್ಕಾರವು 51 ಬಿಲಿಯನ್ ಡಾಲರ್ ಸಾಲ ಹೊಂದಿದ್ದು, ಇದರ ಮೇಲಿನ ಬಡ್ಡಿಯನ್ನೇ ಪಾವತಿಸಲಾಗುತ್ತಿಲ್ಲ. ಕೊರೊನಾ ಅಲೆ ಹಾಗೂ 2019ರಲ್ಲಿ ದೇಶದಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಕಾರಣದಿಂದ ದೇಶದ ಆರ್ಥಿಕತೆಯ ಬೆನ್ನೆಲುಬಾಗಿದ್ದ ಪ್ರವಾಸೋದ್ಯಮ ಇನ್ನಿಲ್ಲದಂತೆ ನೆಲಕಚ್ಚಿದೆ. ಶ್ರೀಲಂಕಾದ ಕರೆನ್ಸಿಯು ಶೇ 80 ರಷ್ಟು ಕುಸಿದಿರುವುದರಿಂದ ಆಮದು ಮತ್ತಷ್ಟು ದುಬಾರಿಯಾಗಿದೆ. ಹಣದುಬ್ಬರವು ಅಂಕೆಗೆ ಸಿಗದ ಮಟ್ಟಕ್ಕೆ ಏರಿಕೆಯಾಗಿದ್ದು, ಆಹಾರ ಪದಾರ್ಥಗಳ ಬೆಲೆಗಳು ಮುಗಿಲೆತ್ತರಕ್ಕೆ ಏರಿದೆ. ಈಗ ಜನ ಜನರು ಹಸಿವಿನಿಂದ ಬಳಲುತ್ತಿದ್ದಾರೆ. ದೇಶದ ಪ್ರತಿ 10 ಕುಟುಂಬಗಳಲ್ಲಿ ಸುಮಾರು ಒಂಬತ್ತು ಕುಟುಂಬದವರು ಆಹಾರದ ಅಭದ್ರತೆಯ ಸಮಸ್ಸೆಯನ್ನು ಎದುರಿಸುತ್ತಿರುವುದು ಕಳವಳಕಾರಿ.


ಕಂಗೆಟ್ಟ ಆರ್ಥಿಕ ವಲಯಗಳು:

ಏಪ್ರಿಲ್ 2021ರಲ್ಲಿ ರಾಜಪಕ್ಷೆ ದಿಢೀರಾಗಿ ರಸಗೊಬ್ಬರಗಳ ಆಮದನ್ನು ನಿಲ್ಲಿಸಿದರು. ಸಾವಯವ ಕೃಷಿಯ ಒತ್ತಡವು ಕೃಷಿಕರನ್ನು ಆಘಾತಕ್ಕೆ ತಳ್ಳಿತು ಹಾಗೂ ಇದರಿಂದ ಅಗತ್ಯ ಧಾನ್ಯಗಳ ಇಳುವರಿ ಭಾರಿ ಕುಂಠಿತವಾಯಿತು. ಇದರಿಂದ ಆಹಾರ ಪದಾರ್ಥಗಳ ಬೆಲೆಗಳು ಏರಲಾರಂಭಿಸಿದವು.


ಶ್ರೀಲಂಕಾದ ಆರ್ಥಿಕತೆ ಹೆಚ್ಚಾಗಿ ನಿಂತಿರುವುದು ಅದರ ಪ್ರವಾಸೋದ್ಯಮದಿಂದ. ಆದರೆ, ಎರಡು ವರ್ಷಗಳ ಹಿಂದೆ ಬಂದ ಕೋವಿಡ್ ಲಂಕಾದ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತವನ್ನೇ ನೀಡಿದೆ. ಕರೋನ ಮಹಾಮಾರಿ ವಕ್ಕರಿಸುವ ಮುಂಚೆಯೂ ಶ್ರೀಲಂಕಾದಲ್ಲಿ ಮಿತಿಮೀರಿದ ಭಯೋತ್ಪಾದಕ ದಾಳಿಗೆ ಬೆದರಿ ಪ್ರವಾಸಿಗರು ಬಂದಿರಲಿಲ್ಲ. ಪ್ರವಾಸಿಗರ ಆಗಮನ ಇಲ್ಲದೆ ಲಂಕಾದ ಆರ್ಥಿಕತೆ ಚೇತರಿಕೆ ಕಾಣಲು ಅಸಾಧ್ಯವಾಯಿತು. ಉಕ್ರೇನ್- ರಷ್ಯಾ ಯುದ್ಧ ಸನ್ನಿವೇಶವಂತೂ ಲಂಕಾದ ಆರ್ಥಿಕತೆಯನ್ನು ಅಕ್ಷರಶಃ ಸ್ತಬ್ಧಗೊಳಿಸಿದೆ. ಕಚ್ಚಾ ತೈಲಗಳ ಬೆಲೆಯಲ್ಲಿನ ಏರಿಕೆ ನಿಯಂತ್ರಿಸಲು ಅಲ್ಲಿನ ಸರಕಾರಕ್ಕೆ ಸಾಧ್ಯವಾಗಿಲ್ಲ. ಇದರ ಜೊತೆಗೆ ಪ್ರವಾಹದಂತಹ ನೈಸರ್ಗಿಕ ವಿಕೋಪವೂ ಲಂಕಾ ಆರ್ಥಿಕತೆಗ ಸವಾಲನ್ನೇ ಒಡ್ಡಿತು.


ಆರ್ಥಿಕ ಶಿಸ್ತಿಗೆ ಮಣೆ ಹಾಕದ ಶ್ರೀಲಂಕಾ:

ಶ್ರೀಲಂಕಾದ ವಿವಿಧ ಸರಕಾರಗಳು ವಿತ್ತೀಯ ಶಿಸ್ತನ್ನು ಕಾಯ್ದುಕೊಳ್ಳದೇ ಹೋಗಿವೆ. ಹೀಗಾಗಿ ಆರ್ಥಿಕತೆಅ ಹಳಿ ತಪ್ಪಿ ಇವತ್ತಿನ ಆರ್ಥಿಕ ಹಾಗೂ ಆಡಳಿತಾತ್ಮಕ ಬಿಕ್ಕಟ್ಟನ್ನು ನಿಭಾಯಿಸುವ ಸಾಮರ್ಥ್ಯವನ್ನು ಕಳಕೊಂಡಿದೆ. ಲಂಕಾದ ಬಜೆಟ್ ನಲ್ಲಿ ಸತತವಾಗಿ ವಿತ್ತೀಯ ಕೊರತೆ ಎದುರಾಗಿದೆ. ವಿತ್ತೀಯ ಕೊರತಯಾಗಲೀ, ಚಾಲ್ತಿ ಖಾತೆಯ ಕೊರತೆಯಾಗಲೀ ದೇಶದ ಆದಾಯಕ್ಕಿಂತಲೂ ಖರ್ಚು ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ಇದು ದೀರ್ಘ ಕಾಲ ಬುಂದವರಿದೆ ಅದರ ದಷ್ಪರಿಣಾಮಗಳಿಂದ ಆರ್ಥಿಕ ಶಕ್ತಿ ತೀರಾ ದುರ್ಭಲಗೊಳ್ಳುತ್ತದೆ.


ಸ್ವಾವಲಂಬಿ ಆರ್ಥಿಕತೆಯ ನಿರ್ಲಕ್ಷ್ಯ:

ಕಳೆದ ಮೂರು ದಶಕಗಳಂದ ನಡಯುತ್ತಿರುವ ಅಂತರ್ಯುದ್ಧವು ವಿದೇಶಿ ಹೂಡಿಕೆದಾರರನ್ನು ಹಿಮ್ಮೆಟ್ಟಿಸಿದ. ಬಂಡುಕೋರರ ವಿರುದ್ಧ ಹೋರಾಡುವಲ್ಲಿ ನಿರತರಾಗಿದ್ದ ಸರ್ಕಾರವು ಬಲವಾದ, ಸ್ವಾವಲಂಬಿ ಆರ್ಥಿಕತೆಯನ್ನು ನಿರ್ಮಿಸುವತ್ತ ಹೆಚ್ಚು ಗಮನಹರಿಸಲಿಲ್ಲ.


ವಿಪರೀತ ಸಾಲದ ಹೊರೆ ಹಾಗೂ ತೆರಿಗೆ ಕಡಿತದ ಹೊಡೆತ:

ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಿ ಗೋಟಬಯ ರಾಜಪಕ್ಷ ಅವರು ತೆರಿಗೆ ಕಡಿತದ ಭರವಸೆ ನೀಡಿದ್ದರು. ಅದರಂತೆ ಅಧಿಕಾರಕ್ಕೆ ಬಂದ ಬಳಿಕ ಸಾಕಷ್ಟು ಸಬ್ಸಿಡಿ, ತೆರಿಗೆ ಕಡಿತ ಇತ್ಯಾದಿ ಕ್ರಮ ಕೈಗೊಂಡರು. ಸರಕಾರಿ ಆದಾಯ ಕುಸಿಯಿತು, ವೆಚ್ಚ ಹೆಚ್ಚುತ್ತಾ ಹೋಯಿತು. ಆರ್ಥಿಕ ಶಿಸ್ತಿಗೆ ಮಣೆ ಹಾಕದ ಶ್ರೀಲಂಕಾವನ್ನು ಕ್ರೆಡಿಟ್ ರೇಟಿಂಗ್ ಸಂಸ್ಥೆಗಳು ಉಪೇಕ್ಷಿಸಿದ್ದವು. ಪರಿಣಾಮವಾಗಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಲಂಕಾಗೆ ಸಾಲ ಸಿಗುವುದು ದುಸ್ತರವಾಗಿ ದಿಡೀರ್ ಹೊಡೆತಕ್ಕೆ ಎಡೆ ಮಾಡಿಕೊಟ್ಟಿತು.

ಶ್ರೀಲಂಕಾದ ವಿವಿಧ ಸರಕಾರಗಳು ಬಹುದೊಡ್ಡ ಯೋಜನೆಗಳಿಗಾಗಿ ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಮನಬಂದಂತೆ ಸಾಲಗಳನ್ನು ಪಡೆದಿವೆ. ಚೀನಾ, ಜಪಾನ್ ಮತ್ತು ಎಡಿಬಿಯಿಂದ ಲಂಕಾ ಬಹಳಷ್ಟು ಸಾಲ ಪಡೆದಿದೆ. ಈಗ ಹೊಸ ಸಾಲ ಹುಟ್ಟುತ್ತಿಲ್ಲ, ಸಾಲದ ಸುಳಿಗೆ ಲಂಕಾ ಸಿಲುಕಿಕೊಂಡಿದೆ.


ಅಪಮೌಲ್ಯಗೊಂಡ ಶ್ರೀಲಂಕಾ ರೂಪಾಯಿ:

ಸಾಲದ ಹೊರೆ, ಆಮದಿನ ಒತ್ತಡ, ಪಾತಾಳಕ್ಕಿಳಿದ ರಫ಼ತು, ಆಹರವಸ್ತುಗಳ ಕೊರತೆ ಹೀಗೆ ಸಮಸ್ಯೆಗಳಲ್ಲಿ ಸಿಲುಕಿದ ಲಂಕಾದ ರೂಪಾಯಿಯ ಮೌಲ್ಯ ಸಹಜವಾಗಿ ಡಾಲರಿನ ಎದುರು ಕುಸಿಯುತ್ತಲೇ ಹೋಯಿತು. ಪೆಟ್ರೋಲ್ ಇತ್ಯಾದಿ ಆಮದ ವಸ್ತುಗಳ ಬೆಲೆ ಗಗನಕ್ಕೇರಿತು. ಪರಿಣಾಮವಾಗಿ ಇತರ ಅಗತ್ಯ ವಸ್ತುಗಳ ಬೆಲೆ ಗಳೂ ಏರಿಕೆಯಾಗಿ ಲಖಾ ಜನಸಾಮಾನ್ಯರ ಜವನವನ್ನು ಹೈರಾಣಗೊಳಸಿದೆ.


ವೆನಜುವೆಲಾ ಬಿಕ್ಕಟ್ಟು:

ಅಸಮರ್ಥ ಆರ್ಥಿಕ ನಿರ್ಧಾರಗಳ ಫಲವಾಗಿ ಅಲ್ಲಿನ ಜನ ಬೀದಿಯಲ್ಲಿ ನಿಲ್ಲುವಂತಾಗಿದೆ. ಇಲ್ಲಸಲ್ಲದ ಸವಲತ್ತುಗಳನ್ನು ನೀಡುವೆನೆಂದು ಭರವಸೆ ನೀಡಿ ಅಧಿಕಾರಕ್ಕೆ ಬಂದಂತಹ ನಾಯಕರು ದೇಶದ ಜನರನ್ನು ಅಕ್ಷರಶಃ ಬೀದಿಗಿಳಿಸಿದ್ದಾರೆ. ದಕ್ಷಿಣ ಅಮೆರಿಕದ ವೆನೆಜುವೆಲಾ ಜಗತ್ತಿನಲ್ಲಿ ಅತ್ಯಂತ ಹೆಚ್ಚಿನ ತೈಲ ನಿಕ್ಷೇಪವನ್ನು ಹೊಂದಿರುವ ದೇಶ. ಆದರೂ ಸಹ ಅಲ್ಲಿನ ಆರ್ಥಿಕತೆ ನೆಲಕಚ್ಚಿ, ಹಣದುಬ್ಬರ ದರ ಸಾವಿರ ಪಟ್ಟು ಹೆಚ್ಚಾಗಿದೆ.. ವೆನೆಜುವೆಲಾ ಚುನಾವಣಾ ಪ್ರಣಾಳಿಕೆಗಳಲ್ಲಿ ಅಲ್ಲಿನ ಜನರಿಗೆ ನೂರಾರು ಉಚಿತ ಯೋಜನೆಗಳ ಭರವಸೆಯನ್ನು ನೀಡಿದ ಕಮ್ಯುನಿಸ್ಟ್ ನಾಯಕರು ಅಧಿಕಾರಕ್ಕೆ ಬಂದ ನಂತರ ತಮ್ಮ ಭರವಸೆಗಳನ್ನು ಈಡೇರಿಸುವ ಭರದಲ್ಲಿ ಉದ್ಯೋಗ ಸೃಷ್ಟಿಸುವುದನ್ನು ನಿಲ್ಲಿಸಿಬಿಟ್ಟರು. ಉಚಿತ ಸವಲತ್ತುಗಳನ್ನು ನೀಡಿ ತನ್ನ ಖಾತೆಯಲ್ಲಿನ ಹಣವನ್ನು ಖಾಲಿ ಮಾಡಿಕೊಂಡು ಸಾಲದ ಮೊತ್ತವನ್ನು ಹೆಚ್ಚಿಸಿಕೊಂಡು ಕೊನೆಗೆ ಜನರಿಗೆ ಉದ್ಯೋಗ ನೀಡುವಲ್ಲಿ ವಿಫಲವಾಗಿ ತಮ್ಮ ದೇಶದ ಆರ್ಥಿಕ ಅಧಃಪತನಕ್ಕೆ ಕಾರಣರಾದರು.


ಎಚ್ಚರಿಕೆಯ ಘಂಟೆ- ಒಳ್ಳೆಯ ಬಿಕ್ಕಟ್ಟು ಎಂದಿಗೂ ವ್ಯರ್ಥವಾಗಲು ಬಿಡಬೇಡಿ:

ಆರ್ಥಿಕತೆಯನ್ನು ಹೇಗ ನಿರ್ವಹಿಸಬಾರದು ಎಂಬುದಕ್ಕೆ ಪಠ್ಯಪುಸ್ತಕ ಪ್ರಕರಣವಾಗಿ ದೇಶವನ್ನು ಸೂಚಿಸಲಾಗರುವುದು ಶ್ರೀಲಂಕಾದ ಆರ್ಥಿಕ ಬಕ್ಕಟ್ಟಿನ ತೀವೃತೆಗೆ ಸಾಕ್ಷಿಯಾಗಿದೆ. ವಿನ್‌ಸ್ಟನ್ ಚರ್ಚಿಲ್‌ರ ಪ್ರಖ್ಯಾತ ಹೇಳಕೆ, "ಒಳ್ಳೆಯ ಬಿಕ್ಕಟ್ಟು ಎಂದಿಗೂ ವ್ಯರ್ಥವಾಗಲು ಬಿಡಬೇಡಿ", ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಸೂಕ್ತ. ಶ್ರೀಲಂಕಾ ಸರ್ಕಾರವು ಚಾಲ್ತಿಯಲ್ಲಿರುವ ಆರ್ಥಿಕ ಬಿಕ್ಕಟ್ಟಿನ ಲಾಭವನ್ನು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ  ಹಿಂದೆಂದೂ ಪ್ರಯತ್ನಿಸದಂತಹ ಆರ್ಥಿಕತೆಯನ್ನು ಸುಧಾರಿಸುವಂತಹ ದಿಟ್ಟ ಕೆಲಸಗಳನ್ನು ಮಾಡುವತ್ತ ಗಮನ ಹರಿಸಬೇಕಾಗಿದೆ. ತಮ್ಮ ಬಜೆಟ್ ಭಾಷಣದಲ್ಲಿ, ನೂತನ ಅಧ್ಯಕ್ಷ ವಿಕ್ರಮಸಿಂಘೆ ಅವರು ತಮ್ಮ ಆಡಳಿತದ ಹಣಕಾಸಿನ ಕಾರ್ಯಕ್ರಮವು 2025 ರ ವೇಳೆಗೆ GDP ಯ ಸುಮಾರು 15% ಗೆ ಸರ್ಕಾರಿ ಆದಾಯವನ್ನು ಹೆಚ್ಚಿಸಲು ಶ್ರಮಿಸುತ್ತದೆ, ಸಾರ್ವಜನಿಕ ವಲಯದ ಸಾಲವನ್ನು ಕಡಿತಗೊಳಿಸುತ್ತದೆ, ಹಣದುಬ್ಬರವನ್ನು ನಿಯಂತ್ರಿಸುತ್ತದೆ ಮತ್ತು ಮೌಲ್ಯವರ್ಧಿತ ತೆರಿಗೆಯನ್ನು ಪ್ರಸ್ತುತ 12% ರಿಂದ 15% ಕ್ಕೆ ಹೆಚ್ಚಿಸುತ್ತದೆ ಎಂದು ತಿಳಿಸಿರುತ್ತಾರೆ.


ನಮ್ಮ ನೆರೆಯ ದೇಶಗಳು ಆರ್ಥಿಕ ಸಂಕಷ್ಟದಲ್ಲಿರುವುದು ನಮಗೇನು ಒಳ್ಳೆಯ ಸಂಗತಿಯಲ್ಲ. ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯೊಳಗೆ ಅಂದ ಹಾಗೆ ಮಾಡುತ್ತಿದೆ ಕೋವಿಡ್ ರೂಪಾಂತರಿ. ಕೋವಿಡ್ ಬಾಧೆಯು ನಮ್ಮನ್ನು ಬಿಟ್ಟು ತೊಲಗಿಲ್ಲ, ಇನ್ನೊಂದೆಡೆ ರಷ್ಯಾ-ಯುಕ್ರೇನ್ ಯುದ್ಧ ಇನ್ನೂ ಅಂತ್ಯ ಕಂಡಿಲ್ಲ. ಕೋವಿಡ್ ನಿರ್ವಹಣೆಯಲ್ಲಿ ನಮ್ಮ ದೇಶದ ಅತ್ಯಂತ ಜವಾಬ್ದಾರಿಯುತ ಹಾಗೂ ಎಚ್ಚರಿಕೆಯ ಹೆಜ್ಜೆಗಳು ಶ್ಲಾಘನೆಗೆ ಒಳಗಾಗಿದೆ. ರಷ್ಯಾ-ಯುಕ್ರೇನ್ ಯುದ್ಧದಲ್ಲಿ ಭಾರತವು ಹಣದುಬ್ಬರ ಹೆಚ್ಚದಂತಹ ಜಾಣ್ಮೆಯ ನಡೆಯಿಂದಾಗಿ ಯುದ್ಧದ ಬಿಸಿಯು ಆರ್ಥಿಕತೆಯ ಮೇಲೆ ಅಷ್ಟಾಗಿ ತಟ್ಟಲಿಲ್ಲ. ಆತ್ಮ ನಿರ್ಭರ ಭಾರತ ಪರಿಕಲ್ಪನೆಯ ಮೂಲಕ ಅನಾವರಣಗೊಂಡ ಸ್ವಾವಲಂಬಿ ಭಾರತದ ಆಶಯ ಹೊಣೆಯರಿತ ಹೆಜ್ಜೆ ಹಾಗೂ ದೂರಗಾಮಿ ಯೋಜನೆಗಳ ಮೂಲಕ ಸಾಕ್ಷಾತ್ಕಾರವಾಗಲಿದೆ.


ಆದರೆ ವೆನೆಜುವೆಲಾ, ಶ್ರೀಲಂಕಾ, ಜಿಂಬಾಬ್ವೆ ದೇಶಗಳು ಆರ್ಥಿಕ ಶಿಸ್ತು ಕಾಯ್ದುಕೊಳ್ಳದೆ ಕೇವಲ ಒಂದು ದಶಕದಲ್ಲಿ ತಮ್ಮ ಜನರು ಬೀದಿಗೆ ಬರುವಂತೆ ಮಾಡಿವೆ. ಆರ್ಥಿಕ ಶಿಸ್ತನ್ನು ಬದಿಗಿಟ್ಟು, ದಿಕ್ಕು ತಪ್ಪಿಸುವ ಜನಪ್ರಿಯ ಯೋಜನೆಗಳ ಮೂಲಕ ದೇಶವನ್ನು ಈಗ ದಿವಾಳಿತನ ದುಸ್ಥಿತಿಗೆ ಮತ್ತು ಹಸಿವಿನ ಕೂಪಕ್ಕೆ ತಳ್ಳಿವೆ. ಇಲ್ಲಿ ನಾಯಕತ್ವದ ದೂರದರ್ಶಿತ್ವದ ಕೊರತೆ, ಸ್ವಾವಲಂಬಿತನದ ನಿರ್ಲಕ್ಷ, ವಿತ್ತೀಯ ಅಶಿಸ್ತು ಆರ್ಥಿಕತೆಯ ಬುಡಮೇಲು ಮಾಡಿದೆ. ಇದೀಗ ಶ್ರೀಲಂಕಾದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಇಲ್ಲ ಸಲ್ಲದ ಉಚಿತ ಯೋಜನೆಗಳ ಭರವಸೆ ನೀಡಿ ಜನತೆಯಲ್ಲಿ ತಪ್ಪು ನಿರೀಕ್ಷೆಗಳನ್ನು ಹುಟ್ಟುಹಾಕಿ ಆರ್ಥಿಕತೆಯ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಜನರ ಹಾಗೂ ಆರ್ಥಿಕತೆಯ ದಿಕ್ಕುತಪ್ಪಿಸುವವರಿಗೆ ಇದೊಂದು ಎಚ್ಚರಿಕೆಯ ಘಂಟೆ!.


0 Comments

Post a Comment

Post a Comment (0)

Previous Post Next Post