ಶಿಕ್ಷಕ ವೃತ್ತಿ ಶ್ರೇಷ್ಠ ವೃತ್ತಿ: ಪ್ರೊ. ಸುರೇಶ್‍ನಾಥ್
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಂಗಳೂರು ತಾಲ್ಲೂಕು ಘಟಕ ಇದರ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮ ಸೋಮವಾರ (ಸೆ.5) ಜರುಗಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿ ಶ್ರೀ ಭಾರತಿ ಕಾಲೇಜು ನಂತೂರು ಇಲ್ಲಿ ಈ ಕಾರ್ಯಕ್ರಮ ಕಸಾಪ, ಮಂಗಳೂರು ತಾಲ್ಲೂಕು ಘಟಕ ಇದರ ಅಧ್ಯಕ್ಷರಾದ ಶ್ರೀ ಮಂಜುನಾಥ.ಎಸ್. ರೇವಣಕರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಶಿಕ್ಷಕರ ದಿನಾಚರಣೆಯ ಮಹತ್ವದ ಮತ್ತು ಔಚಿತ್ಯದ ಬಗ್ಗೆ ಮೂಡುಶೆಡ್ಡೆ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಭಾಸ್ಕರ್ ಹೊಸಮನೆ ಮಾತನಾಡಿದರು. ಇದೇ ಸಂದರ್ಭದಲ್ಲಿ 38 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಈಗ ಮಂಗಳೂರಿನ ಚೀಫ್ ಟ್ರಾಫಿಕ್ ವಾರ್ಡನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪ್ರೊ. ಎಂ.ಎಲ್. ಸುರೇಶ್‍ನಾಥ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಕ್ಷಕ ಹುದ್ದೆ ಎನ್ನುವುದು ಬರೀ ಸಂಬಳಕ್ಕಾಗಿ ಕೆಲಸ ಮಾಡುವ ಹುದ್ದೆಯಲ್ಲ. ಅದೊಂದು ಅತ್ಯಂತ ಗೌರವದ ಮತ್ತು ಜವಾಬ್ದಾರಿಯ ಹುದ್ದೆ ಆಗಿರುತ್ತದೆ. ಸಮಾಜದ ಎಲ್ಲಾ ಜಾತಿ ಮತ ಧರ್ಮದ ಮಕ್ಕಳನ್ನು ಜವಾಬ್ದಾರಿಯುತ ಪ್ರಜೆಗಳನ್ನಾಗಿ ಮಾಡುವಲ್ಲಿ ಶಿಕ್ಷಕರಿಗೆ ಹೆಚ್ಚಿನ ಜವಾಬ್ದಾರಿ, ಹೊಣೆಗಾರಿಕೆ ಇರುತ್ತದೆ ಮತ್ತು ಬದ್ಧತೆ ಅತೀ ಮುಖ್ಯವಾಗಿರುತ್ತದೆ. ಶಿಕ್ಷಕರ ಹೊಣೆಗಾರಿಕೆ ಬರೀ ಪಾಠ ಹೇಳಿಕೊಡುವಲ್ಲಿ ಮುಕ್ತಾಯವಾಗುವುದಿಲ್ಲ. ಮಕ್ಕಳಿಗೆ ಪಾಠದ ಜೊತೆಗೆ ದೇಶಪ್ರೇಮ, ದೇಶ ಭಕ್ತಿ, ಸಮಯ ಪ್ರಜ್ಞೆ, ಸಾಮಾಜಿಕ ಕಳಕಳಿ, ಸಾಮಾಜಿಕ ಬದ್ಧತೆಗಳನ್ನು ಗುರುಗಳು ತಿಳಿಸಿಕೊಡಬೇಕು. ಆರೋಗ್ಯಪೂರ್ಣ ಮತ್ತು ಶಿಸ್ತುಬದ್ಧ ಸಮಾಜದ ನಿರ್ಮಾಣದಲ್ಲಿ ಶಿಕ್ಷಕರು ಬಹುಮುಖ್ಯ ಭೂಮಿಕೆ ವಹಿಸುತ್ತಾರೆ. ಈ ಕಾರಣದಿಂದ ಅತ್ಯಂತ ಶ್ರೇಷ್ಠ ವೃತ್ತಿ ಒಂದಿದ್ದರೆ ಅದು ಶಿಕ್ಷಕ ವೃತ್ತಿಯಾಗಿರುತ್ತದೆ ಎಂದು ಸನ್ಮಾನ ಸ್ವೀಕರಿಸಿ ಪ್ರೊ. ಸುರೇಶ್‍ನಾಥ್ ಅವರು ಅಭಿಪ್ರಾಯಪಟ್ಟರು.
ಕಸಾಪ ಮಂಗಳೂರು ಘಟಕ ಇದರ ಗೌರವ ಕಾರ್ಯದರ್ಶಿಗಳಾದ ಡಾ. ಮುರಲೀ ಮೋಹನ್ ಚೂಂತಾರು ಇವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಇನ್ನೋರ್ವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ ಅವರು ಸ್ವಾಗತಿಸಿದರು. ಕಸಾಪದ ಕೋಶಾಧಿಕಾರಿ ಎನ್.ಸುಬ್ರಾಯ ಭಟ್ ಅವರು ವಂದಿಸಿದರು. ಕಾರ್ಯದರ್ಶಿ ಸಮಿತಿ ಸದಸ್ಯೆ ಶ್ರೀಮತಿ ರತ್ನಾವತಿ ಜೆ ಬೈಕಾಡಿ ಅವರು ಪ್ರಾರ್ಥನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಸಾಪದ ಸುಮಾರು 30 ಮಂದಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ