'ಸೋಮೇಶ್ವರ ಮಾಗಣೆ ಮಾಹಿತಿ ಕೋಶ' ರಚನೆಗೆ ವಜ್ರದೇಹಿ ಸ್ವಾಮೀಜಿಯವರಿಂದ ಚಾಲನೆ

Upayuktha
0

ಮಂಗಳೂರು: ಸೋಮೇಶ್ವರ ಮಾಗಣೆ ಮಾಹಿತಿ ಕೋಶ ರಚನೆಯ ಪೂರ್ವಸಿದ್ದತಾ ಸಭೆ, ಸಾಹಿತ್ಯ ವಲಯದ ಅಪೂರ್ವ ಕಾರ್ಯಕ್ರಮವಾಗಿ ದಾಖಲಿಸಲ್ಪಟ್ಟಿತು.


ಮಂಗಳೂರು ಹೋಬಳಿ ಮಾಗಣೆಗಳ ಒಕ್ಕೂಟದ ವಿಶೇಷ ಸಮಾಲೋಚನಾ ಸಭೆಯಲ್ಲಿ "ಸೋಮೇಶ್ವರ ಮಾಗಣೆಯ ಮಾಹಿತಿ ಕೋಶ" ಗ್ರಂಥ ರಚನಾ ಕಾರ್ಯಕ್ಕೆ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ಮಾರ್ಗದರ್ಶನ ನೀಡಿದರು.


ಅಸೈಗೋಳಿ ಬಂಟರ ಭವನದಲ್ಲಿ ಮಂಗಳವಾರ ಸಂಜೆ ನಡೆದ ಈ ಕಾರ್ಯಕ್ರಮವು ಸಾಹಿತ್ಯ ವಲಯದ ಅಪೂರ್ವ ಕಾರ್ಯಕ್ರಮವಾಗಿ ದಾಖಲಿಸಲ್ಪಟ್ಟಿತು. ಪೂಜ್ಯ ಸ್ವಾಮೀಜಿಗಳು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.


"ದೇಶ ಬೊಕ್ಕ ದೇಹದ ಸೂತ್ರ ಧರ್ಮ, ದೇಶ ಒರಿಂಡ ದೇಹ ಒರಿಯೆರೆ ಸಾಧ್ಯ, ನಮಡ ವ್ಯಾಜ್ಯಲ್ ಬೈದಿನಿ, ದೈಬರ್ದ್ ಅತ್ತ್, ಭೂಮಿರ್ದ್, ನಮಡ ಕೂಡ್ ಕಟ್ಟ್ ಇತ್ತಿನೆರ್ದಾತ್ರ ಕುಟುಂಬ ಒರಿದಿನಿ, ನಮ್ಮ ಹಿರಿಯಕ್ಲು ಬುಡ್ದ್ ಪೋತಿನ ಇತಿಹಾಸನ್ ಒರಿಪಾದ್, ದಾಖಲಿಸಾವುನ ಬೇಲೆ ಆವೋಡು" ಎಂದು ಪರಮಪೂಜ್ಯ ಶ್ರೀ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನದ ಸಂದೇಶ ನೀಡಿದರು.


ಮಾಗಣೆಗಳ ಒಕ್ಕೂಟದ ಅಧ್ಯಕ್ಷರು, ರೂವಾರಿ ಪೂಜ್ಯ ಶ್ರೀ ನೀಲೇಶ್ವರ ಉಚ್ಚಿಲ್ಲತ್ತಾಯ ಪದ್ಮನಾಭ ತಂತ್ರಿಗಳು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, "ಯಾವೆಲ್ಲಾ ವಿಷಯಗಳು ಆಗಬೇಕೆಂದು ಮನಸಿನಲ್ಲಿತ್ತೋ ಅದೆಲ್ಲಾ ಈ ಸಭೆಯಲ್ಲಿ ಮೂಡಿಬಂದಿದೆ, ಇದು ತಂತ್ರಿಗಳು ಮಾಡಿದ ಮಾಗಣೆ ಎಂಬ ಅಭಿಪ್ರಾಯ ಇದ್ದಿರಬಹುದು, ಅದು ತಪ್ಪು. ಇದು ನೀವು ಮಾಡಿದ ಮಾಗಣೆ,  ನಿಮ್ಮ ಮಾಗಣೆ, ಇದನ್ನು ಬಲಿಷ್ಟವಾಗಿ ಬೆಳೆಸುವ ಹೊಣೆಗಾರಿಕೆ ನಿಮ್ಮೆಲ್ಲರಿಗೆ ಇದೆ, ಎಲ್ಲರಲ್ಲೂ ಒಂದು ಜ್ಞಾನ ಇದೆ, ಅದನ್ನು ಬೆಳೆಸಿದರೆ ಅದುವೇ ವಿಜ್ಞಾನವಾಗುತ್ತದೆ, ನಾವೆಲ್ಲರೂ ಮಾಗಣೆ ಒಕ್ಕೂಟದ ಮೂಲಕ ಬಲಿಷ್ಟವಾಗಬೇಕಾಗಿದೆ" ಎಂದು ಆಶೀರ್ವಚನದ ಮಾತುಗಳನ್ನಾಡಿದರು.


ಮಾಗಣೆಗಳ ಒಕ್ಕೂಟದ ಪ್ರಧಾನ ಸಂಚಾಲಕರು, ಚಂದ್ರಹಾಸ ಅಡ್ಯಂತಾಯ, ಚಂದ್ರಹಾಸ್ ಉಳ್ಳಾಲ್, ಕೆ. ಟಿ. ಸುವರ್ಣ, ಸೀತಾರಾಮ ಶೆಟ್ಟಿ ನೆತ್ತಿಲ ಬಾಳಿಕೆ, ಹರೀಶ್ ಕುತ್ತಾರ್, ಪ್ರಧಾನ ಕಾರ್ಯದರ್ಶಿ ಚಿದಾನಂದ ಉಚ್ಚಿಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಒಕ್ಕೂಟದ ಸಂಯೋಜಕ ಕದ್ರಿ ನವನೀತ್ ಶೆಟ್ಟಿ ಅವರು ಮಾಗಣೆಗಳ ಒಕ್ಕೂಟದ ಉದ್ದೇಶ, ಕಾರ್ಯಯೋಜನೆಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕ್ಟೋಬರ್ 10ನೇ ತಾರೀಕಿನ ಒಳಗೆ 17 ಗ್ರಾಮಗಳ  ದೇವಸ್ಥಾನ, ದೈವಸ್ಥಾನ, ಧಾರ್ಮಿಕ ಶ್ರದ್ದಾ ಕೇಂದ್ರಗಳ, ಚಾರಿತ್ರಿಕ ಸ್ಥಳಗಳ ಪ್ರಾಥಮಿಕ ಮಾಹಿತಿಯ ಕರಡು ಪ್ರತಿಯನ್ನು  ಒಕ್ಕೂಟಕ್ಕೆ ಒಪ್ಪಿಸುವಂತೆ ತೀರ್ಮಾನಿಸಲಾಯಿತು‌. ಪ್ರತಿಯೊಂದು ಗ್ರಾಮದಲ್ಲಿ ಇಬ್ಬರು ಸಂಪಾದಕರನ್ನು ನಿಯೋಜಿಸಿ ಊರಿನ ಹಿರಿಯರ, ಜಾನಪದ ಕಲಾವಿದರ, ಸಾಹಿತಿಗಳ, ಅನುಭವಿಗಳ ಸಹಕಾರದೊಂದಿಗೆ ಸ್ಥಳ ಪುರಾಣವನ್ನೊಳಗೊಂಡ ಸಚಿತ್ರ ಗ್ರಾಮ ಚರಿತ್ರೆಯನ್ನು  ರಚಿಸಲು ಮಾರ್ಗದರ್ಶನ ನೀಡಿದರು.


ಉಪನ್ಯಾಸಕ ಅರುಣ್ ಉಳ್ಳಾಲ್, ನಿವೃತ್ತ ಮುಖ್ಯ ಶಿಕ್ಷಕ ರವೀಂದ್ರ ರೈ ಹರೇಕಳ ಅನಿಸಿಕೆ, ಅಭಿಪ್ರಾಯ ಹಂಚಿಕೊಂಡರು.

ಶಿಕ್ಷಕ ರವಿಶಂಕರ್ ಪ್ರಾರ್ಥನೆಗೈದರು. ಪ್ರಧಾನ ಕಾರ್ಯದರ್ಶಿ, ಚಿದಾನಂದ ಉಚ್ಚಿಲ್ ಸ್ವಾಗತಿಸಿದರು. ಸುಕೇಶ್ ಚೌಟ ಮತ್ತು ರಾಜೇಶ್ ಶೆಟ್ಟಿ, ಪಜೀರ್ ಕಾರ್ಯಕ್ರಮ ನಿರೂಪಿದರು. ಕಾರ್ಯದರ್ಶಿ ರಘು ಉಚ್ಚಿಲ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top