ಅಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ಸಭೆ: ನೀಲಿಮಿಶ್ರಿತ ಶ್ವೇತಶಿಲೆಯ ರಾಮನ ವಿಗ್ರಹ: ಸಮಿತಿ ನಿರ್ಣಯ

Upayuktha
0

ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ರಾಮ ಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸಲಾಗುವುದೆಂದು ಭಾನುವಾರ ಅಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ನಡೆದ ಟ್ರಸ್ಟ್ ಸಭೆಯಲ್ಲಿ ನಿರ್ಣಯಿಸಲಾಗಿದೆ. 


ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಜೀ ಅಧ್ಯಕ್ಷತೆಯಲ್ಲಿ ಹಾಗೂ ಕಾರ್ಯದರ್ಶಿಗಳಾದ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮೊದಲಾದವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ‌


ನಿರ್ಮಾಣ ವೆಚ್ಚ ಹೆಚ್ಚಳ: ದೇಣಿಗೆಯೂ ಭರಪೂರ!! 

ಆರಂಭದಲ್ಲಿ ಮಂದಿರ ನಿರ್ಮಾಣಕ್ಕೆ ಸುಮಾರು 400 ಕೋಟಿ ವೆಚ್ಚ ತಗಲಬಹುದೆಂದು ಅಂದಾಜಿಸಲಾಗಿತ್ತು. ಆದರೆ ಜಿಎಸ್ ಟಿ ವೆಚ್ಚ, ರಾಯಲ್ಟಿ ಮೊದಲಾದ ಅನೇಕ ಕಾರಣಗಳಿಂದ ನಿರ್ಮಾಣ ವೆಚ್ಚ 1300 ಕೋಟಿ ತಗಲಬಹುದೆಂದು ಅಂದಾಜಿಸಲಾಗಿದೆ. ಆದರೆ ಮಂದಿರಕ್ಕಾಗಿ ದೇಶಾದ್ಯಂತ ಭಕ್ತರು ನೀಡುತ್ತಿರುವ ದೇಣಿಗೆಯೂ ಭರಪೂರ ಹರಿದು ಬರುತ್ತಿದೆ.‌ ತಿಂಗಳೊಂದರ ಸುಮಾರು 50 ಲಕ್ಷಕ್ಕಿಂತಲೂ ಅಧಿಕ ದೇಣಿಗೆ ಬರುತ್ತಿದ್ದು ಕೆಲವೊಮ್ಮೆ ಈ ಮೊತ್ತ ಕೋಟಿಗೂ ಮೀರಿದೆ. ಆದ್ದರಿಂದ ಈ ತನಕದ ಸುಮಾರು 300 ಕೋಟಿ ಖರ್ಚನ್ನು ಈಗ ಹರಿದು ಬರುತ್ತಿರುವ ಹೆಚ್ಚುವರಿ ದೇಣಿಗೆಯಿಂದಲೇ ನಿರ್ವಹಿಸಲಾಗಿದೆ ಎಂದೂ ಸಭೆಗೆ ತಿಳಿಸಲಾಯಿತು. ಆದ್ದರಿಂದ ಆರಂಭದ ದೇಣಿಗೆ ಸಂಗ್ರಹ ಅಭಿಯಾನದಿಂದ ಬಂದ‌ ಸಾವಿರ ಕೋಟಿಗೂ ಮೀರಿದ  ಮೂಲಧನದ ಸಮ್ಯಕ್ ನಿರ್ವಹಣೆಯ ಮಾಡಬೇಕಾದ ಕುರಿತಾಗಿಯೂ ಸಭೆ ಗಂಭೀರ ಚರ್ಚೆ ನಡೆಸಿತು.


ಮಹಾರಾಷ್ಟ್ರ ದಿಂದ ಸಾಗುವಾನಿ ಮರ : ಮಂದಿರಕ್ಕೆ ಬೇಕಾಗುವ ಸಾಗುವಾನಿ ಮರವನ್ನು ಮಹಾರಾಷ್ಟ್ರ ದಿಂದ ತರಿಸಿಕೊಳ್ಳಲಾಗುವುದು. ಈ  ಖರ್ಚು ವೆಚ್ಚಗಳ ವಿವರಗಳನ್ನು ಸಭೆಗೆ ಸಲ್ಲಿಸಿ ಅನುಮೋದನೆ ಪಡೆಯಲಾಯಿತು.


ಕರ್ನಾಟಕದ ಭಕ್ತರಿಂದ ಸ್ವರ್ಣ ಶಿಖರ: ಭಕ್ತರ ಬೇಡಿಕೆ ಮಂಡಿಸಿದ ಪೇಜಾವರ ಶ್ರೀ   

ಕೋಟ್ಯಂತರ ಹಿಂದುಗಳ ಶತಶತಮಾನಗಳ ಕನಸು ಸಾಕಾರಗೊಂಡು ನಿರ್ಮಾಣವಾಗುತ್ತಿರುವ ಭವ್ಯರಾಮಮಂದಿರದ ಪ್ರಧಾನ ಗರ್ಭಗುಡಿಯ ಶಿಖರಕ್ಕೆ ರಾಮಭಕ್ತ ಹನುಮನ ಪವಿತ್ರ ನೆಲವಾಗಿರುವ ಕರ್ನಾಟಕದಿಂದ ಸ್ವರ್ಣ ಶಿಖರವನ್ನು ಅರ್ಪಿಸಬೇಕೆನ್ನುವ ನಾಡಿನ ಅಸಂಖ್ಯ ಭಕ್ತರ ಇಂಗಿತವನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸಭೆಯಲ್ಲಿ ಮಂಡಿಸಿದರು.

ಮಂದಿರದ ವಾಸ್ತು ವಿನ್ಯಾಸಕ್ಕೆ ಅನುಗುಣವಾಗಿ ಸ್ವರ್ಣ ಶಿಖರವನ್ನು ರಾಜ್ಯದ ಭಕ್ತರ ಸಹಕಾರದಿಂದ ನಿರ್ಮಿಸಿ ವಿಶ್ಚ ಹಿಂದು ಪರಿಷತ್ ನೇತೃತ್ವದಲ್ಲಿ ಕರ್ನಾಟಕದ ಹಂಪೆಯಿಂದ ಸ್ವರ್ಣ ಶಿಖರ ಯಾತ್ರೆಯನ್ನು ರಾಜ್ಯಾದ್ಯಂತ ಸಂಚರಿಸಿ ಅಯೋಧ್ಯೆಗೆ ತಲುಪಿಸುವ ಇರಾದೆಯನ್ನು ಭಕ್ತರು ಹೊಂದಿರುವುದನ್ನು ಶ್ರೀಗಳು ತಿಳಿಸಿದರು.

ಅದರ ಜೊತೆಗೆ ಮುಂದಿನ ವರ್ಷಾಂತ್ಯಕ್ಕೆ ನಡೆಯುವ ನೂತನ ಮಂದಿರ ಸಮರ್ಪಣೆ ಹಾಗೂ ಶ್ರೀರಾಮನ ಪ್ರತಿಷ್ಠಾ ಮಹೋತ್ಸವಕ್ಕೆ ದಿನಾಂಕ ನಿಗದಿ ಪಡಿಸಿದ ಬಳಿಕ  ದೇಶದ ಭಕ್ತರನ್ನು ಈ ಉತ್ಸವಕ್ಕೆ  ಆಹ್ವಾನಿಸುವ ಸಲುವಾಗಿಯೂ ಒಂದು ಯಾತ್ರೆಯನ್ನು ಕೈಗೊಳ್ಳಬಹುದೆಂಬ ಅಬಿಪ್ರಾಯವನ್ನೂ  ಶ್ರೀಗಳು ವ್ಯಕ್ತಪಡಿಸಿದರು.


ಸಭೆಯಲ್ಲಿ ಉಪಸ್ಥಿತಿ:

ಟ್ರಸ್ಟ್ ಅಧ್ಯಕ್ಷ ಮಹಾಂತ, ಗೋಪಾಲ್ ದಾಸ್, ಕಾರ್ಯದರ್ಶಿ ಚಂಪತ್ ರಾಯ್, ಕೋಶಾಧಿಕಾರಿ ಗೋವಿಂದ ಗಿರಿ ಮಹಾರಾಜ್, ಸದಸ್ಯರುಗಳಾದ ಪೇಜಾವರ ಶ್ರೀ ಹಾಗೂ ಇತರೆ ವಿಶ್ವಸ್ಥರು, ಗೋರಖಪುರ ಜಿಲಾಧಿಕಾರಿ, ವಿಹುಂಪ ಮುಖಂಡ ಗೋಪಾಲ್ ಜಿ, ಮಂದಿರ ನಿರ್ಮಾಣದ ಇಂಜಿನಿಯರ್, ವಾಸ್ತು ತಜ್ಞರು, ಉಪಸ್ಥಿತರಿದ್ದರು. ಮತ್ತೋರ್ವ ವಿಶ್ವಸ್ಥರಾದ ಹಿರಿಯ ನ್ಯಾಯವಾದಿ ಪರಾಶರನ್ ಆನ್ ಲೈನ್ ಮೂಲಕ ಸಭೆಯಲ್ಲಿ ಪಾಲ್ಗೊಂಡರು.


ಹೈದ್ರಾಬಾದ್ ನಲ್ಲಿ ನಡೆಸಿದ ತಮ್ಮ 35 ಚಾತುರ್ಮಾಸ್ಯ ವ್ರತವನ್ನು ಮುಗಿಸಿ ಸೀಮೋಲ್ಲಂಘನವೋ ಎಂಬಂತೆ ಭಾನುವಾರ ಬೆಳಿಗ್ಗೆ ಅಯೋಧ್ಯೆ ತಲುಪಿದ ಪೇಜಾವರ ಶ್ರೀಗಳು ಬೆಳಿಗ್ಗೆ ಶ್ರೀರಾಮನ ತಾತ್ಕಾಲಿಕ ಮಂದಿರದಲ್ಲಿರುವ ರಾಮಲಲ್ಲಾನ ದರ್ಶನ ಪಡೆದು ಪೂಜೆ ಸಲ್ಲಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top