ಬೆಂಗಳೂರು: ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ಇಬ್ಬರು ಸೌರ ತಜ್ಞರಾದ ಶ್ರೀ ನೇವಿಲ್ಲೆ ವಿಲಿಯಮ್ಸ್ , ಶ್ರೀಮತಿ ರಿಚೆಂಡಾ ವಾನ್ ಲೀವೆನ್ ಮತ್ತು ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಸೌರಶಕ್ತಿಯ ಆದ್ಯ ಪ್ರವರ್ತಕರು, ಪ್ರಪಂಚದಾದ್ಯಂತ ಸೌರಶಕ್ತಿಯ ಉಪಯೋಗಗಳನ್ನು ಉತ್ತೇಜಿಸುತ್ತಿರುವ ಶ್ರೀ ನೇವಿಲ್ಲೆ ವಿಲಿಯಮ್ಸ್ ಅವರು 2020ನೇ ಸಾಲಿನ ಪ್ರಶಸ್ತಿಗೆ ಭಾಜನರಾಗಿದ್ದು, 2021ನೇ ಸಾಲಿನ ಪ್ರಶಸ್ತಿಗೆ ಇಂಧನ ಬಳಕೆ ಕುರಿತ ಜಾಗತಿಕ ಮನ್ನಣೆ ಪಡೆದ ಪ್ರಮುಖ ತಜ್ಞರು ಹಾಗೂ ಅನೇಕ ಜಾಗತಿಕ ಸಂಸ್ಥೆಗಳ ಮಾರ್ಗದರ್ಶಕರೂ ಆದ ಶ್ರೀಮತಿ ರಿಚೆಂಡಾ ವಾನ್ ಲೀವೆನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2022ನೇ ಸಾಲಿನ ಪ್ರಶಸ್ತಿಗೆ, ಕರ್ನಾಟಕ ರಾಜ್ಯದ ಒಳ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲಿ ಮೂಲ ಸೌಕರ್ಯಗಳನ್ನು ಬಲಪಡಿಸುವ ಕೆಲಸ ಮಾಡುತ್ತಿರುವ ಹೆಸರಾಂತ ಸರ್ಕಾರೇತರ ಸಂಸ್ಥೆಯಾದ ಸ್ವಾಮಿ ವಿವೇಕಾನಂದ ಯೂಥ್ ಮೂವ್ಮೆಂಟ್ ಸಂಸ್ಥೆ (ಎಸ್ ವಿ ವೈಎಂ) ಪಾತ್ರವಾಗಿದೆ.
ಪ್ರಶಸ್ತಿ ಪ್ರಧಾನ ಸಮಾರಂಭವು, ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಸೆಪ್ಟಂಬರ್ 24 ರಂದು ಸಂಜೆ ನಡೆಯಲಿದೆ. ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಮೋಹನ ಭಾಸ್ಕರ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
--------------------------------------
ಸೂರ್ಯಮಿತ್ರ ಪ್ರಶಸ್ತಿ ಕುರಿತು:
ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾದ ಡಾ. ಎಚ್. ಹರೀಶ್ ಹಂದೆ ಅವರು ಸಂಸ್ಥಾಪಕರಾಗಿರುವ ಸೆಲ್ಕೋ ಸಂಸ್ಥೆಯು ಪ್ರತಿಷ್ಠಿತ ವಾರ್ಷಿಕ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಯನ್ನು 2012ರಿಂದ ಕೊಡಮಾಡುತ್ತಾ ಬಂದಿದೆ. ಈ ಪ್ರಶಸ್ತಿಯನ್ನು, ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವ ಹರಿಕಾರರು ಮತ್ತು ಗ್ರಾಮೀಣ ಜನತೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದ ಅಸಾಧಾರಣ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ.
ಪ್ರಶಸ್ತಿ ಪುರಸ್ಕೃತರ ಪರಿಚಯ:
ಶ್ರೀ ನೇವಿಲ್ಲೆ ವಿಲಿಯಮ್ಸ್ (2020ನೇ ವರ್ಷ)
ಶ್ರೀ ನೇವಿಲ್ಲೆ ವಿಲಿಯಮ್ಸ್ ಅವರು ಒಬ್ಬ ಹೆಸರಾಂತ ಹವ್ಯಾಸಿ ಪತ್ರಕರ್ತ, ಪರ್ವತಾರೋಹಣದಂತ ಸಾಹಸೀ ಪ್ರವೃತ್ತಿಯುಳ್ಳ ವಿಶ್ವ ಪ್ರವಾಸಿ. ಸೌರಶಕ್ತಿಯ ಪ್ರವರ್ತಕರಾಗಿರುವ ಅವರು, 1988ರಿಂದ ಪ್ರಪಂಚದಾದ್ಯಂತ ಸೌರವಿದ್ಯುತ್ ಬಳಕೆಯ ವಿವಿಧ ವಿಧಾನಗಳನ್ನು ಉತ್ತೇಜಿಸುತ್ತಿದ್ದಾರೆ. ಸೌರಶಕ್ತಿಯಲ್ಲಿ ಪರಿಣತಿ ಹೊಂದಿರುವ ಲಾಭರಹಿತ ಸಂಸ್ಥೆ ಸೋಲಾರ್ ಎಲೆಕ್ಟ್ರಿಕಲ್ ಲೈಟ್ ಫಂಡ್ (SELF) ಅನ್ನು 1990ರಲ್ಲಿ ವಾಷಿಂಗ್ಟನ್ ನಲ್ಲಿ ಸ್ಥಾಪಿಸಿದರು. ಈ ಸಂಸ್ಥೆಯು, ಭಾರತ, ಚೀನಾ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಬ್ರೆಜಿಲ್, ತಾಂಜಾನಿಯಾ, ಉಗಾಂಡಾ, ದಕ್ಷಿಣ ಆಫ್ರಿಕಾ, ನೈಜೀರಿಯಾ, ಇಂಡೋನೇಷಿಯಾ ಮತ್ತು ಸೊಲೊಮನ್ ದ್ವೀಪಗಳಲ್ಲಿ "ಸೌರಶಕ್ತಿ ಆಧಾರಿತ" ಯೋಜನೆಗಳನ್ನು ಕಾರ್ಯಗತಗೊಳಿಸಲು ಸರ್ಕಾರಗಳು ಮತ್ತು ಸಮುದಾಯ ಸಂಸ್ಥೆಗಳಿಗೆ ಸಹಾಯ, ಸಹಕಾರ ಮತ್ತು ಸಲಹೆಗಳನ್ನು ನೀಡುತ್ತಿದೆ. 1997ರಲ್ಲಿ ವಿಲಿಯಮ್ಸ್ ಅವರು ಭಾರತ, ಶ್ರೀಲಂಕಾ ಮತ್ತು ವಿಯೆಟ್ನಾಂನಲ್ಲಿ ಅಂಗ ಸಂಸ್ಥೆಗಳನ್ನು ಹೊಂದಲು ಮತ್ತು ನಿರ್ವಹಿಸಲು ಸೋಲಾರ್ ಎಲೆಕ್ಟ್ರಿಕ್ ಲೈಟ್ ಕಂಪನಿ (SELCO)ಯನ್ನು ಸ್ಥಾಪಿಸಿದರು. ಸೆಲ್ಕೊ-ಇಂಡಿಯಾದ ಸಹ ಸಂಸ್ಥಾಪಕರೂ ಆದ ಅವರು, 2003ರವರೆಗೆ ಸೆಲ್ಕೊ-ಇಂಡಿಯಾದ ಅಧ್ಯಕ್ಷರಾಗಿದ್ದರು. 2004ರಲ್ಲಿ ಸ್ಟ್ಯಾಂಡರ್ಡ್ ಸೋಲಾರ್ ಇಂಕ್ ಸಂಸ್ಥೆಯನ್ನು ಸ್ಥಾಪಿಸಿ ಅಮೆರಿಕಾದಲ್ಲಿ ಸಂಸ್ಥೆಯ ಕಾರ್ಯಾಚರಣೆಯನ್ನು ಆರಂಭಿಸಿದರು. ವೇಗವಾಗಿ ಬೆಳೆಯುತ್ತಿದ್ದ ಸೌರಶಕ್ತಿ ಸೇವೆಗಳ ಸ್ಟಾಂಡರ್ಡ್ ಸೋಲಾರ್ ಕಂಪನಿಯನ್ನು ಹೂಡಿಕೆ ಗುಂಪೊಂದು 2008ರಲ್ಲಿ ಸ್ವಾಧೀನಪಡಿಸಿಕೊಳ್ಳುವವರೆಗೂ ವಿಲಿಯಮ್ಸ್ ಅದರ ಅಧ್ಯಕ್ಷರು ಮತ್ತು ಸಿಇಒ ಆಗಿದ್ದರು.
ಶ್ರೀಮತಿ ರಿಚೆಂಡಾ ವಾನ್ ಲೀವೆನ್ (2021ನೇ ವರ್ಷ)
ಶ್ರೀಮತಿ ರಿಚೆಂಡಾ ಅವರು, ಪ್ರಸ್ತುತ ಆಸ್ಪೆನ್ ನೆಟ್‌ವರ್ಕ್ ಆಫ್ ಡೆವಲಪ್‌ಮೆಂಟ್ ಎಂಟಪ್ರನರ್ಸ್ ನ (ANDE) ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಶುದ್ಧ ಇಂಧನ ಪರಿಹಾರಗಳ ಮೂಲಕ ಸುಸ್ಥಿರ ಅಭಿವೃದ್ಧಿಯ ರಾಯಭಾರಿಯಾಗಿ ಕೆಲಸ ಮಾಡುತ್ತಿರುವ ಅವರು ಜಾಗತಿಕವಾಗಿ ಗುರುತಿಸಿಕೊಂಡಿದ್ದಾರೆ.
ಈ ಹಿಂದೆ ಅವರು, ಶುದ್ಧ ಆರ್ಥಿಕತೆಯನ್ನು ಸಶಕ್ತಗೊಳಿಸಲು ಶ್ರಮಿಸುತ್ತಿರುವ ರಾಕಿ ಮೌಂಟೇನ್ ಇನಿಸ್ಟಿಟ್ಯೂಟನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಆಫ್ರಿಕಾ ಖಂಡದ ದಕ್ಷಿಣ ಭಾಗದ ರಾಷ್ಟ್ರಗಳಲ್ಲಿನ ಮನೆಗಳಿಗೆ ಇಂಧನ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಆಫ್ರಿಕಾದ ಸರ್ಕಾರ ಮತ್ತು ಸಂಬಂಧಿಸಿದ ಪಾಲದಾರರೊಂದಿಗೆ ಕೆಲಸ ಮಾಡುವ ವಿಶ್ವಸಂಸ್ಥೆ ಬೆಂಬಲಿತ ಲಾಭರಹಿತ ಗ್ಲೋಬಲ್ ಎಲ್‌ಪಿಜಿ ಪಾಲುದಾರಿಕೆ (GLPGP)ಯ ಅಂತಾರಾಷ್ಟ್ರೀಯ ಸಂಸ್ಥೆಗಳ ಅಧ್ಯಕ್ಷರಾಗಿ, ವಿಶ್ವ ಬ್ಯಾಂಕ್ ನ ಇಂಧನ ಕಾರ್ಯಕ್ರಮಗಳ (ESMAP) ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿಯೂ ಕೆಲಸ ಮಾಡಿದ್ದಾರೆ. ವಿಶ್ವಸಂಸ್ಥೆಯ, ಎಲ್ಲರಿಗೂ ಸುಸ್ಥಿರ ಇಂಧನ ಉಪಕ್ರಮವನ್ನು ಒಳಗೊಂಡ, ವಿಶ್ವಸಂಸ್ಥೆಯ ಫೌಂಡೇಷನ್ ನ ‘ಇಂಧನ ಸೌಲಭ್ಯ’ ಸಂಸ್ಥೆಯನ್ನು ಸ್ಥಾಪಿಸಿ ಮುನ್ನೆಡೆಸಿದರು. ಪೂರ್ವ ಆಫ್ರಿಕಾ, ದಕ್ಷಿಣ ಏಷ್ಯಾ ಮತ್ತು ಆ ಸಮಯದಲ್ಲಿ ಮಧ್ಯ ಅಮೆರಿಕದಲ್ಲಿ ಅಗತ್ಯವಾಗಿದ್ದ ವಿವಿಧ ಶ್ರೇಣಿಯ ಇಂಧನ ಪರಿಹಾಗಳನ್ನು ಒದಗಿಸುತ್ತಿದ್ದ ‘ಗುಡ್ ಎನರ್ಜಿಸ್ ಫೌಂಡೇಶನ್‘ ನ ಸ್ಥಾಪಕ ಮಂಡಳಿಯ ಸದಸ್ಯರಾಗಿ, ಅತಿ ಸಣ್ಣ ಉದ್ಯಮಶೀಲತೆಯ ಅಂತಾರಾಷ್ಟ್ರೀಯ ಮಹಿಳಾ ಸರ್ಕಾರೇತರ ಸಂಸ್ಥೆ ‘ಟ್ರಿಕಲ್ ಅಪ್’ನ ಸಿಇಒ ಆಗಿ ಸೇವೆ ಸಲ್ಲಿಸಿರುವ ಅವರು. SELCO ಇಂಡಿಯಾದ ಮಂಡಳಿಯ ನಿರ್ದೇಶಕರಾಗಿದ್ದರು.
ಎಸ್ವಿವೈಎಂ ಸಂಸ್ಥೆ (SVYM) (2022ನೇ ವರ್ಷ)
ಲಾಭರಹಿತ, ಸರ್ಕಾರೇತರ ಸಂಸ್ಥೆಯಾಗಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ಮಂಟ್ (SVYM) ಸಂಸ್ಥೆಯು, ಸಂಸ್ಥಾಪಕ ಅಧ್ಯಕ್ಷರಾದ ಡಾ. ಆರ್. ಬಾಲಸುಬ್ರಮಣಿಯಮ್ ಅವರ ನೇತೃತ್ವದಲ್ಲಿ 1984 ರಿಂದ ಕೆಲಸ ಮಾಡುತ್ತಿದ್ದು, ಮೈಸೂರು ಜಿಲ್ಲೆಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಭಾರತದಲ್ಲಿ ಹೊಸ ನಾಗರಿಕ ಸಮಾಜವನ್ನು ನಿರ್ಮಿಸುವಲ್ಲಿ 1984 ರಿಂದ ತನ್ನ ತಳಮಟ್ಟದ ನೀತಿ, ಕ್ರಿಯೆಗಳ ಮೂಲಕ ತೊಡಗಿಸಿಕೊಂಡಿರುವ ಸಂಸ್ಥೆಯಾಗಿರುವ ಎಸ್ವಿವೈಎಂ ಸುಮಾರು ನಾಲ್ಕು ದಶಕಗಳಲ್ಲಿ ವಿಕಸನಗೊಂಡಿದೆ.
ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ವಾತಾವರಣವನ್ನು ಸೃಷ್ಟಿಸಲು, ಎಲ್ಲಾ ಪಾಲುದಾರರಿಗೆ ಸಮಂಜಸವಾದ ಮತ್ತು ಸಮಾನ ಪ್ರಯೋಜನಗಳನ್ನು ಖಾತರಿಪಡಿಸುವುದರ ಮೂಲಕ, ಜನರು ಮತ್ತು ಗ್ರಹವನ್ನು ರಕ್ಷಿಸಲು ಅಗತ್ಯವಿರುವ ಸಮತೋಲನವನ್ನು ಸಾಧಿಸಲು ಸಾಧ್ಯ ಎಂಬುದನ್ನು ಗಮನದಲ್ಲಿಟ್ಟುಕೊಂಡು, ಜನರಲ್ಲಿ ಆರ್ಥಿಕ ಪರಿಣಾಮಗಳನ್ನು ತರುವ ಮಾನವ ಮತ್ತು ಸಾಮಾಜಿಕ ಬಂಡವಾಳವನ್ನು ನಿರ್ಮಿಸುವ ಮಾದರಿಯನ್ನು ಎಸ್ವಿವೈಎಂ ಸಕ್ರಿಯವಾಗಿ ಪ್ರತಿಪಾದಿಸುತ್ತಿದೆ. ನವೀಕರಿಸಬಹುದಾದ ಇಂಧನ ಆಧಾರಿತ ಪರಿಹಾರಗಳ ಏಕೀಕರಣದ ಮೂಲಕ, ದೂರದ ಪ್ರದೇಶಗಳಲ್ಲಿ ಸುಸ್ಥಿರ ಆರೋಗ್ಯ ಮೂಲ ಸೌಕರ್ಯವನ್ನು ಬಲಪಡಿಸಲು ಎಸ್ವಿವೈಎಂ ಕೆಲಸ ಮಾಡುತ್ತಿದೆ.
ಸೆಲ್ಕೋ ಕುರಿತು:
1995ರಲ್ಲಿ ಸ್ಥಾಪಿತವಾದ ಸೇಲ್ಕೋ ಇಂಡಿಯಾ ಸಂಸ್ಥೆಯು, ಮಾನ್ಯತೆ ಪಡೆದ ಸಾಮಾಜಿಕ ಉದ್ಯಮವಾಗಿದ್ದು, ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ ನವೀಕರಿಸಬಹುದಾದ ಇಂಧನ ಆಧಾರಿತ ಪರಿಹಾರಗಳನ್ನು ಒದಗಿಸುವ ಮೂಲಕ ಬಡತನ ನಿರ್ಮೂಲನೆಯಲ್ಲಿ ವಿಶಿಷ್ಟ ಮಾದರಿಯ ಕೆಲಸ ಮಾಡುತ್ತಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸೆಲ್ಕೋ ಇಂಡಿಯಾ, ದೇಶಾದ್ಯಂತ ಏಳು ರಾಜ್ಯಗಳಲ್ಲಿ ಇಂಧನ, ಶಿಕ್ಷಣ, ಆರೋಗ್ಯ ರಕ್ಷಣೆ, ಜೀವನೋಪಾಯ ಮತ್ತು ಗ್ರಾಮೀಣಾಭಿವೃದ್ಧಿಗೆ ಪೂರಕವಾದ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ಈ ವಲಯಗಳ ಸುಸ್ಥಿರ ಅಭಿವೃದ್ಧಿಗೆ ಬೇಕಾದ ಹಣಕಾಸು, ಕೌಶಲ್ಯಾಭಿವೃದ್ಧಿ, ಪೂರೈಕೆ ಸರಪಳಿ ಮತ್ತು ನೀತಿ-ನಿರೂಪಗಳ ಚೌಕಟ್ಟನ್ನು ಬಲಪಡಿಸುವ ಕೆಲಸಗಳ ಮೂಲಕ ಎಲ್ಲರೂ ಬಳಸಲು ಸಾಧ್ಯವಾಗುವಂತೆ ವಿಕೇಂದ್ರೀಕೃತ ಇಂಧನ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತವು ಹೊಂದಿರುವ, ಹವಾಮಾನ ಬದಲಾವಣೆ ತಗ್ಗಿಸುವಿಕೆ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪುವ ಬದ್ಧತೆಯ ಸಂದರ್ಭದಲ್ಲಿ ಸೆಲ್ಕೋದ ಈ ಕೆಲಸವು ಹೆಚ್ಚು ಪ್ರಸ್ತುತವಾಗಿದೆ. ಕಳೆದ 27 ವರ್ಷಗಳಲ್ಲಿ, ಸೆಲ್ಕೋದ ಈ ಕೆಲಸವು 6 ಲಕ್ಷಕ್ಕೂ ಹೆಚ್ಚು ಮನೆಗಳು, 3000ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳು ಹಾಗೂ ಜೀವನೋಪಾಯ ಕಸುಬುಗಳನ್ನು ಮಾಡುವ 5000ಕ್ಕಿಂತ ಹೆಚ್ಚು ಗ್ರಾಮೀಣ ಕುಟುಂಬಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಸೆಲ್ಕೋದ ಈ ಎಲ್ಲ ಸಮಾಜಮುಖಿ ಕೆಲಸಗಳಿಗಾಗಿ ಆಶ್ಡೆನ್ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ