“ನೋಡಿ ಕಲಿ” ಅತ್ಯಂತ ಕ್ಷಮತೆಯ ಕಲಿಕಾ ವಿಧಾನ: ಡಾ.ಎಸ್.ಸತೀಶ್ಚಂದ್ರ

Upayuktha
0

ಕ್ಷೇತ್ರ ಸಂದರ್ಶನ ಕಲಿಕೆಯ ಮಟ್ಟವನ್ನು ಹೆಚ್ಚಿಸುತ್ತದೆ




ಉಜಿರೆ: ಸಾಂಪ್ರದಾಯಿಕ ನಾಲ್ಕು ಗೋಡೆಗಳ ಹೊರಗೆ ಸಮುದಾಯ ಮಟ್ಟದಲ್ಲಿ ವಿದ್ಯಾರ್ಥಿಗಳು ಸಂವಹನ ಮಾಡಿದಾಗ ತಮ್ಮ ತಿಳುವಳಿಕೆ ಮತ್ತು ಕೌಶಲದ ಮಟ್ಟವನ್ನು ಹೆಚ್ಚಿಸಲು ಸಾಧ್ಯವಿದೆ. ಸಿದ್ಧಾಂತಗಳನ್ನು ಪಾಠ ಪ್ರವಚನಗಳ ಮೂಲಕ ಕಲಿತರೆ ಕ್ಷೇತ್ರ ಸಂದರ್ಶನದಿಂದ ಸಮುದಾಯ ಮಟ್ಟದಲ್ಲಿ ಅನುಷ್ಠಾನಗೊಂಡ ರೀತಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ’ನೋಡಿ ಕಲಿ’ ವಿಧಾನ ಅತ್ಯಂತ ಕ್ಷಮತೆಯುಳ್ಳ ಕಲಿಕಾ ವಿಧಾನ ಎಂದು ಉಜಿರೆಯ ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಎಸ್. ಸತೀಶ್ಚಂದ್ರ ಅಭಿಪ್ರಾಯಪಟ್ಟರು.


ಡಾ.ಸತೀಶ್ಚಂದ್ರ ಅವರು ತುಮಕೂರು ವಿಶ್ವವಿದ್ಯಾಲಯ ಹಾಗೂ ಶ್ರೀ.ಧ.ಮಂ.ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗಗಳ ಒಡಂಬಡಿಕೆಯ ಭಾಗವಾಗಿ ಆಯೋಜಿಸಲಾಗದ್ದ ಎರಡು ದಿನಗಳ “ಗ್ರಾಮೀಣ ಸಬಲೀಕರಣದ ಮಾದರಿ”ಗಳ ಬಗ್ಗೆ ಕ್ಷೇತ್ರ ಸಂದರ್ಶನ ಶಿಬಿರವನ್ನು ಉಜಿರೆಯ ಶ್ರೀ.ಧ.ಮಂ. ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಇತ್ತೀಚೆಗೆ ದೀಪ ಪ್ರಜ್ವಲನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು.


ವಿದ್ಯಾರ್ಥಿಗಳು ಅಧ್ಯಯನ ಮಾಡಿದ ವಿಷಯದಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆಯಬೇಕು. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳವು ಆಯೋಜಿಸಿದ ಮಾದರಿ ಸಬಲೀಕರಣ ಕಾರ್ಯಕ್ರಮಗಳ ಬಗ್ಗೆ ಪ್ರಾಥಮಿಕ ತಿಳುವಳಿಕೆ ಮೂಡಿಸಲು ಕ್ಷೇತ್ರ ಸಂದರ್ಶನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶ್ರೀ.ಧ.ಮಂ. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಜಯಕುಮಾರ ಶೆಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ತಿಳಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ತುಮಕೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಅಧ್ಯಯನ ಮಂಡಳಿಯ ಅಧ್ಯಕ್ಷ ಡಾ.ವಿಲಾಸ್ ಕಡ್ರೋಲ್ಕರ್ ಮಾತನಾಡುತ್ತಾ ಅರ್ಥಶಾಸ್ತ್ರದ ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವ ವಿಷಯಗಳ ಪ್ರಾತ್ಯಕ್ಷಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಪ್ರವರ್ತಿತ ಸಂಸ್ಥೆಗಳ ವಿವಿಧ ಮಾದರಿ ಕಾರ್ಯಕ್ರಮಗಳಲ್ಲಿ ಕಂಡುಕೊಳ್ಳಲು ಸಾಧ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.  

ಶ್ರೀ.ಧ.ಮಂ.ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎನ್.ಉದಯಚಂದ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳದ ಒಳಚರಂಡಿ ಸಂಸ್ಕರಣಾ ಘಟಕ, ತ್ಯಾಜ್ಯ ನಿರ್ವಹಣಾ ಘಟಕ, ಉಜಿರೆಯ ರುಡ್ಸೆಟಿ, ಶ್ರೀ ಧರ್ಮಸ್ಥಳ ಗ್ರಾಮೋದ್ಯೋಗ ಸಿರಿ ಸಂಸ್ಥೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಘಟಕಗಳಿಗೆ ತುಮಕೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ೭೫ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಭೇಟಿ ನೀಡಿದರು.


ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾದ್ಯಾಪಕರಾದ ಡಾ. ಜಯಶೀಲ, ಡಾ. ರವೀಂದ್ರ ಕುಮಾರ್, ಡಾ.ಮುನಿರಾಜು, ಡಾ.ನೀಲಕಂಠ ಭಾಗವಹಿಸಿದ್ದರು. ಶಿಬಿರದ ಸಂಯೋಜನೆಯಲ್ಲಿ ಶ್ರೀ.ಧ.ಮಂ.ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ.ನಾಗರಾಜ್, ಡಾ.ಗಣರಾಜ್, ಡಾ.ಮಹೇಶ್, ಅಭಿನಂದನ್ ಸಹಕರಿಸಿದ್ದರು. ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಧನ್ಯಾ ಪ್ರಭು ನಿರ್ವಹಿಸಿದ ಕಾರ್ಯಕ್ರಮದಲ್ಲಿ ಶ್ರೀ.ಧ.ಮಂ. ಕಾಲೇಜಿನ ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಯುವರಾಜ್ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top