ಹಿರಿಯರ ಸಲಹೆ, ಸೂಚನೆಗಳು ನಮ್ಮೆಲ್ಲರಿಗೂ ಆದರ್ಶ ಪೂರಕ : ವೀಣಾ ಬಿ.ಎನ್.

Upayuktha
0

 


ಉಡುಪಿ: ಹಿರಿಯ ನಾಗರೀಕರ ಸಪ್ತಾಹ ಕಾರ್ಯಕ್ರಮವನ್ನು ಸೆಪ್ಟಂಬರ್ 25 ರಿಂದ ಅಕ್ಟೋಬರ್ 1 ರ ವರೆಗೆ ಜಿಲ್ಲೆಯಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲಾ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವುದರೊಂದಿಗೆ ಅರ್ಥಪೂರ್ಣವಾಗಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು.



  ಅವರು ಇಂದು ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಹಿರಿಯ ನಾಗರೀಕರ ಸಪ್ತಾಹ ಕಾರ್ಯಕ್ರಮ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 



    ಹಿರಿಯ ನಾಗರೀಕರನ್ನು ಗೌರವಿಸಬೇಕು . ಅವರ ಸಲಹೆ ಸೂಚನೆಗಳು ನಮ್ಮೆಲ್ಲರಿಗೂ ಆದರ್ಶ ಪೂರಕವಾಗಿದ್ದು, ಅವರ ಅನುಭವಗಳನ್ನು ನಾವು ತಿಳಿದುಕೊಂಡಾಗ ನಮ್ಮ ಕೆಲಸ ಕಾರ್ಯಗಳನ್ನು ಅಲ್ಪ ಸಮಯದಲ್ಲಿಯೇ ನಿಖರವಾಗಿ ಮಾಡಲು ಅನುಕೂಲವಾಗುತ್ತದೆ ಎಂದರು.



          ಈ ಬಾರಿಯ ಹಿರಿಯ ನಾಗರೀಕ ದಿನಾಚರಣೆಯನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸದೇ 7 ದಿನಗಳ ಕಾಲ ಸಪ್ತಾಹ ರೂಪದಲ್ಲಿ ಆಚರಿಸಲಾಗುವುದು ಎಂದ ಅವರು ಸೆಪ್ಟಂಂಬರ್ 25 ರಂದು ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದ್ದು, 26 ರಂದು ಹಿರಿಯ ನಾಗರೀಕರಿಗೆ ಆರೋಗ್ಯ ತಪಾಸಣೆ, 27 ರಂದು  ಶಿಕ್ಷಣ ಇಲಾಖೆವತಿಯಿಂದ ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, 28 ರಂದು ಹಿರಿಯ ನಾಗರೀಕರಿಗೆ ಕ್ರೀಡೆ ಹಾಗೂ ಸಾಂಸ್ಕೃತಿಕ  ಕಾರ್ಯಕ್ರಮ, 29 ರಂದು ಹಿರಿಯ ನಾಗರೀಕರಿಗೆ ಕಾನೂನು ಅರಿವು ಕಾರ್ಯಕ್ರಮ, 30 ರಂದು ಪೊಲೀಸ್ ಇಲಾಖೆಯಿಂದ ಹಿರಿಯ ನಾಗರೀಕರಿಗೆ ಕಾರ್ಯಾಗಾರ, ಅಕ್ಟೋಬರ್ 1 ರಂದು ಸಮಾರೋಪ ಸಮಾರಂಭ ನಡೆಯಲಿದೆ ಎಂದರು. 



ಹಿರಿಯ ನಾಗರೀಕರಿಗೆ ಕ್ರೀಡಾಕೂಟದಲ್ಲಿ ನಡಿಗೆ, ರಿಂಗ್‍ನ್ನು  ಬಕೆಟ್‍ನಲ್ಲಿ ಎಸೆಯುವುದು, ಮ್ಯೂಸಿಕಲ್ ಚೇರ್. ಸೇರಿದಂತೆ ಮತ್ತಿತರೆ ಕ್ರೀಡೆ ಹಾಗೂ  ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಏಕ ಪಾತ್ರಾಭಿನಯ,ಗಾಯನ, ಚಿತ್ರಕಲೆ  ಸ್ಪರ್ಧೆಗಳು  ನಡೆಯಲಿದೆ ಎಂದರು.



ವಿಶ್ವ ಹಿರಿಯ ನಾಗರೀಕರ ದಿನಾಚರಣೆಗೆ ಶಿಷ್ಠಾಚಾರದಂತೆ ಜನಪ್ರತಿನಿಧಿಗಳನ್ನು ಅಹ್ವಾನಿಸಬೇಕು ಎಂದ ಅವರು  ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕೆಂದು ಹಿರಿಯ ನಾಗರೀಕರ ಕಲ್ಯಾಣಧಿಕಾರಿಗಳಿಗೆ ಸೂಚನೆ ನೀಡಿದರು.



ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಉಪ ನಿರ್ದೇಶಕಿ ವೀಣಾ ವಿವೇಕಾನಂದ , ಜಿಲ್ಲಾ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ರತ್ನಾ, ಮತ್ತಿತರರು ಉಪಸ್ಥಿತರಿದ್ದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top