ಮೂಡುಬಿದಿರೆ: ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ 2 ದಿನದ ಅಂತರ್ ವಿಶ್ವವಿದ್ಯಾನಿಲಯ ಕಿರುನಾಟಕೋತ್ಸವ ಸ್ಪರ್ಧೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಗಳೂರು ವಿವಿ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ, ತ್ಯಾಗ, ಸಮರ್ಪಣಾ ಭಾವದಿಂದ ಪಡೆದ ಸ್ವಾತಂತ್ರ್ಯದ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು. ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನಮ್ಮ ನೈತಿಕ ಹೊಣೆಗಾರಿಕೆಗಳು ಬದಲಾಗಬೇಕಿದೆ. ಪ್ರೀತಿ ವಿಶ್ವಾಸದಿಂದ ಕೈಗೆತ್ತಿಕೊಂಡ ಕಾರ್ಯಗಳಿಂದ ಚಾರಿತ್ರ್ಯ ನಿರ್ಮಾಣ ಸಾಧ್ಯ. ಯುವ ಶಕ್ತಿಯನ್ನು ಸದೃಢಗೊಳಿಸಬೇಕಾದರೆ ಸಮಾಜಮುಖಿ ಚಿಂತನೆಗಳನ್ನು ಬೆಳೆಸಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಸ್ವಾತಂತ್ರ್ಯದ ಹಿನ್ನಲೆಯನ್ನು ಅರ್ಥಗರ್ಭಿತವಾಗಿ ಆಚರಿಸುವ ಹಿನ್ನಲೆಯಲ್ಲಿ ಕಿರುನಾಟಕೋತ್ಸವ ನಡೆಯಲಿದೆ. ಯುವ ಶಕ್ತಿಯನ್ನು ಮುಂದಿಟ್ಟುಕ್ಕೊಂದು ದೇಶವು ಅದ್ಭುತಗಳನ್ನು ಸೃಷ್ಟಿಸಬಹುದು. ಬಹುಮುಖ ಪ್ರತಿಭೆಗಳು ಹಾಗೂ ದೇಶೀಯ ಚಿಂತನೆ ವುಳ್ಳವರು ಸಂಪನ್ಮೂಲ ವ್ಯಕ್ತಿಗಳಾಗಳು ಸಾಧ್ಯ. ಸ್ವಾತಂತ್ರ್ಯ ನಂತರದ ಬದಲಾವಣೆಗಳಿಂದ ದೇಶದಲ್ಲಿ ಸಂಘರ್ಷ ಹೆಚ್ಚಾಗಿದೆ. ಸ್ವದೇಶಿ ಪ್ರೀತಿ ದೂರವಾದರೆ ಸ್ವಾತಂತ್ರ್ಯದ ನಿಜವಾದ ಅರ್ಥ ಮನದಟ್ಟಾಗಲು ಸಾಧ್ಯವಿಲ್ಲ ಆದ್ದರಿಂದ ವಿದ್ಯಾರ್ಥಿಗಳು ಸಾಮಾಜಿಕ ಪರಿಕಲ್ಪನೆಯನ್ನು ಅರಿತು ದೇಶದ ಶಕ್ತಿಗಳಾಗಿ ಬೆಳೆಯಬೇಕು ಎಂದು ಹೇಳಿದರು.
2 ದಿನದ ಕಿರುನಾಟಕೋತ್ಸವದಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳ 30 ತಂಡಗಳು ಭಾಗವಹಿಸಲಿವೆ. ಪ್ರತಿ ನಾಟಕವು 30 ನಿಮಿಷ ಕಾಲ ಮಿತಿ ಹೊಂದಿರಲಿದೆ. ಸಮಾರಂಭದಲ್ಲಿ ಮಂಗಳೂರು ವಿವಿ ವಿದ್ಯಾರ್ಥಿ ಕ್ಷೇಮ ಪಾಲನಾ ನಿರ್ದೇಶಕಿ ಡಾ. ಕಿಶೋರಿ ನಾಯಕ್ ಉಪಸ್ಥಿತರಿದ್ದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸ್ವಾಗತಿಸಿ, ಆಳ್ವಾಸ್ ಪಪೂ ಕಾಲೇಜಿನ ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ