ವಿವಿ ಕಾಲೇಜು ಜ್ಞಾನ, ಪರಂಪರೆ, ಸಂಸ್ಕೃತಿಯ ಪ್ರತೀಕ: ಪ್ರೊ. ಪಿ ಎಸ್ ಯಡಪಡಿತ್ತಾಯ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ 9 ನೇ ಕುಲಪತಿಯಾಗಿ ಎನ್‌ಇಪಿ ಜಾರಿ, ಆಝಾದಿ ಕಿ ಅಮೃತ್ ಮಹೋತ್ಸವ ಆಚರಣೆಂತಹ ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನ ಆಡಳಿತ ಅವಧಿಯಲ್ಲಿ ಎಲ್ಲರ ಸಲಹೆ ಸೂಚನೆ, ಸಹಕಾರ ದೊರೆತಿದೆ ಎಂದು ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಬುಧವಾರ ನಡೆದ 117 ನೇ ಕಾಲೇಜು ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿವಿ ಕಾಲೇಜು ಜ್ಞಾನ, ಪರಂಪರೆ, ಸಂಸ್ಕೃತಿಯ ಪ್ರತೀಕ. ಕಾಲೇಜಿನ ಈ ಗುಣ ಮುಂದೆಯೂ ಇರಲಿ ಎಂದರಲ್ಲದೆ ಕಠಿಣ ಸಂದರ್ಭಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಪ್ರಾಂಶುಪಾಲೆ ಡಾ. ಅನಸೂಯ ರೈ ಅವರನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.
ಕಾಲೇಜಿನ ಹಳೆ ವಿದ್ಯಾರ್ಥಿನಿ, ನಿವೃತ್ತ ವಾಣಿಜ್ಯ ಶಾಸ್ತ್ರ ಪ್ರಾಧ್ಯಾಪಿಕೆ ಸುನಂದಾ ಮಾತನಾಡಿ, ತಮ್ಮ ನೆಚ್ಚಿನ ಪ್ರಾಧ್ಯಾಪಕರು, ಸ್ನೇಹಿತರು, ಅಪರೂಪದ ಕ್ಷಣಗಳನ್ನು ನೆನಪಿಸಿಕೊಂಡರು. ವಿವಿ ಕಾಲೇಜು ತನಗೆ ವಿದ್ಯೆ, ಜೀವನ, ಆತ್ಮವಿಶ್ವಾಸ, ದೃಢತೆ ಎಲ್ಲವನ್ನೂ ಕೊಟ್ಟಿದೆ. ವಿದ್ಯಾರ್ಥಿನಿಯಾಗಿ ಕಲಿಕೆಗೆ, 'ಕಾಲೇಜ್ ಟೈಮ್ಸ್' (ಈಗಿನ ಪ್ರತಿಭಾ ತರಂಗ) ನಡೆಸಲು ದೊರೆತ ಪ್ರೋತ್ಸಾಹ, 11 ತಿಂಗಳು ಪ್ರಾಂಶುಪಾಲೆಯಾಗಿ ಕಾರ್ಯನಿರ್ವಹಿಸಬೇಕಾದಾಗ ದೊರೆತ ಸಹಕಾರವನ್ನು ನೆನಪಿಸಿಕೊಂಡರು.
ಪ್ರಾಂಶುಪಾಲೆ ಡಾ. ಅನಸೂಯ ರೈ ತಮ್ಮ ಮಾತಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಸವಾಲಿನ ಸಂದರ್ಭಗಳಲ್ಲಿ ನೀಡಿದ ಮಾರ್ಗದರ್ಶನ, ವಿವಿಧ ಕಾರ್ಯಕ್ರಮಗಳನ್ನು ನಡೆಸಲು ವಿದ್ಯಾರ್ಥಿಗಳು, ಪ್ರಾಧ್ಯಾಪಕರು ನೀಡಿದ ಸಹಕಾರಕ್ಕಾಗಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್, ವಿಶೇಷ ಸಂದರ್ಭದಲ್ಲಿ ದೊರೆತ ಆದ್ಯಕ್ಷತೆ ನಾಯಕತ್ವ ಗುಣ ಬೆಳೆಸಿದೆ, ಎಂದರು.
ರಾಜಕೀಯ ಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ವಾರ್ಷಿಕ ವರದಿ ವಾಚಿಸಿದರು. ಇದೇ ವೇಳೆ ಮಂಗಳೂರು ವಿಶ್ವವಿದ್ಯಾನಿಲಯ 2020 ರಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಬಿಎ ಯಲ್ಲಿ 6 ನೇ ರ‍್ಯಾಂಕ್ ಪಡೆದ ಸಾಯಿ ಸೂರ್ಯ, ಬಿ.ಕಾಂ ನಲ್ಲಿ 8 ನೇ ರ‍್ಯಾಂಕ್ ಪಡೆದ ಪ್ರಿಯದರ್ಶಿನಿ, ಬಿ.ಎ ಯಲ್ಲಿ ಒಂಭತ್ತನೇ ರ‍್ಯಾಂಕ್ ಗಳಿಸಿದ ಸಂಧ್ಯಾ ಹಾಗೂ ಎನ್‌ಎಸ್‌ಎಸ್ ನಲ್ಲಿ ರಾಷ್ಟ್ರಮಟ್ಟದಲ್ಲಿ ಮಿಂಚಿದ ಅಪರ್ಣಾ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ಸಾಧಕರಿಗೆ, ವಿಶೇಷ ಸಾಧನೆ ಮಾಡಿದವರಿಗೆ ಬಹುಮಾನ ವಿತರಿಸಲಾಯಿತು. ವರ್ಷದ ಕ್ರೀಡಾ ಚಾಂಪಿಯನ್ ಗಳಾದ ಅಭಿಷೇಕ್ ಹಾಗೂ ಅಂಕಿತಾ ಅವರಿಗೆ ಬಹುಮಾನ ವಿತರಿಸಲಾಯಿತು. ಯುಪಿಎಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್‌ಗಳಾದ ಯುಸಿಎಂ ಸ್ಟ್ರೈಕರ್ಸ್ ಹಾಗೂ ರನ್ನರ್ಸ್ ಅಪ್ ಆಗಿ ಮೂಡಿಬಂದ ಯುಸಿಎಂ ಬ್ರಿಗೇಡ್ ತಂಡಗಳಿಗೆ ಟ್ರೋಫಿಗಳನ್ನು ವಿತರಿಸಲಾಯಿತು.
ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಕುಮಾರಸ್ವಾಮಿ ಎಂ ಹಾಗೂ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಗಾಯತ್ರಿ ಎಂ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಉಪ ನಿರ್ದೇಶಕ ಡಾ. ಹರೀಶ್ ಎ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರಕಾಶ್ ಧನ್ಯವಾದ ಸಮರ್ಪಿಸಿದರು.
ಸಹಕಾರ್ಯದರ್ಶಿನಿ ಅಂಕಿತಾ ಎಸ್, ಲಲಿತ ಕಲಾ ಸಂಘದ ಕಾರ್ಯದರ್ಶಿನಿ ಅಪರ್ಣಾ ಎಸ್ ಶೆಟ್ಟಿ, ಸಹ ಕಾರ್ಯದರ್ಶಿನಿ ಕಾವ್ಯಾ ಎನ್ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾಲೇಜಿನ ಶಿಕ್ಷಕ- ರಕ್ಷಕ ಸಂಘದ ಸದಸ್ಯರು, ಹಳೆ ವಿದ್ಯಾರ್ಥಿಗಳು, ನಿವೃತ್ತ ಪ್ರಾಂಶುಪಾಲರುಗಳು, ಬೋದಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳು ಯಕ್ಷಗಾನ ಪ್ರಸಂಗ ಸೇರಿದಂತೆ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ