|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಆಗಸ್ಟ್ 1 ರಿಂದ 7ರ ತನಕ ವಿಶ್ವ ಸ್ತನ್ಯಪಾನ ಸಪ್ತಾಹ

ಆಗಸ್ಟ್ 1 ರಿಂದ 7ರ ತನಕ ವಿಶ್ವ ಸ್ತನ್ಯಪಾನ ಸಪ್ತಾಹ

ವಿಶ್ವದಾದ್ಯಂತ ಸ್ತನ್ಯಪಾನದ ಮಹತ್ವ, ಉಪಯೋಗವನ್ನು ಜನರಿಗೆ ತಿಳಿಸಿ, ಸ್ತನ್ಯ ಪಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಆಗಸ್ಟ್ 1 ರಿಂದ 7ರವರೆಗೆ ಅಂತರಾಷ್ಟ್ರೀಯ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತದೆ. ನವಜಾತ ಶಿಶುಗಳಿಗೆ ತಾಯಿಯ ಎದೆ ಹಾಲೇ ಆಹಾರ ಮತ್ತು ಅಮೃತ. ಮಗುವಿನ ದೈಹಿಕ ಮತ್ತು ಸರ್ವತೋಮುಖ ಬೆಳವಣಿಗೆಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು, ಪೋಷಕಾಂಶಗಳು, ರೋಗದಿಂದ ರಕ್ಷಣೆ ನೀಡುವ ಆಂಟಿಬಾಡಿಗಳು ಈ ಹಾಲಿನಲ್ಲಿ ಇರುವ ಕಾರಣದಿಂದ ಸ್ತನ್ಯಪಾನ ಮಗುವಿಗೆ ಅತ್ಯಮೂಲ್ಯ. ಅದರಲ್ಲಿ ಮೊದಲ ದಿನ ತಾಯಿಯಲ್ಲಿ ಉತ್ಪತ್ತಿಯಾಗುವ ಹಳದಿ ಗಟ್ಟಿ ಹಾಲಿಗೆ ಕೊಲೆಸ್ಟ್ರಮ್ ಎನ್ನಲಾಗುತ್ತದೆ. ಇದು ಅತ್ಯಂತ ಶ್ರೇಷ್ಠವಾದ, ಅಮೃತ ಸದೃಶ ಆಹಾರವಾಗಿರುತ್ತದೆ. ಇದರಲ್ಲಿ ಪ್ರೋಟಿನ್, ಖನಿಜಾಂಶಗಳು, ಜೀವ ಸತ್ವಗಳು ಹಾಗೂ ಇತರ ಪೋಷಕಾಂಶಗಳು ಹೇರಳವಾಗಿದೆ. ಇದು ನವಜಾತ ಶಿಶುಗಳನ್ನು ಸೋಂಕಿನಿಂದ ರಕ್ಷಿಸಿ, ದೈಹಿಕ ಬೆಳವಣಿಗೆ ಮುನ್ನುಡಿ ಬರೆಯುತ್ತದೆ.


ಸ್ತನ್ಯಪಾನದ ಲಾಭಗಳು?


1. ತಾಯಿಯ ಎದೆ ಹಾಲಿನಲ್ಲಿರುವ ಪ್ರೋಟಿನ್ ಮಗುವಿನ ಮೆದುಳಿನ ಬೆಳವಣಿಗೆಗೆ ಪೂರಕ ಮತ್ತು ಸಹಕಾರಿ.


2. ಎದೆ ಹಾಲಿನಲ್ಲಿರುವ ಕೊಬ್ಬಿನ ಅಂಶ, ಮಗುವಿನ ನರಮಂಡಲವ್ಯೂಹ ವ್ಯವಸ್ಥೆ ಅಭಿವೃದ್ಧಿಯಾಗಲು ಹೆಚ್ಚು ಸಹಕಾರಿ


3. ತಾಯಿಯ ಎದೆಹಾಲಿನಲ್ಲಿರುವ ಶಕ್ತಿ, ಪ್ರೋಟಿನ್, ಕೊಬ್ಬು, ಸೋಡಿಯಂ, ಲವಣ ಮತ್ತು ಜಿಂಕ್ ಮಗುವಿನ ರಕ್ಷಣಾ ವ್ಯವಸ್ಥೆಯನ್ನು ಸದೃಢಗೊಳಿಸುತ್ತದೆ.


4. ಎದೆ ಹಾಲು ಕುಡಿಸುವುದರಿಂದ ತಾಯಿ ಮಗುವಿನ ನಡುವೆ ಭಾಂದವ್ಯ ವೃದ್ಧಿಸುತ್ತದೆ. ತಾಯಿಯ ಅನಗತ್ಯ ಗರ್ಭಧಾರಣೆಯನ್ನು ತಡೆಯುತ್ತದೆ. ಸ್ತನ ಕ್ಯಾನ್ಸರ್‌ನಿಂದಲೂ ತಾಯಿಗೆ ರಕ್ಷಣೆ ನೀಡುತ್ತದೆ. ಗರ್ಭಾವಸ್ಥೆಯ ಸಮಯದಲ್ಲಿ ತಾಯಿಗೆ ಹೆಚ್ಚಾಗಿ ದೇಹ ತೂಕ ನಿಯಂತ್ರಿಸುವಲ್ಲಿ ಸ್ತನ್ಯಪಾನ ಸಹಾಯ ಮಾಡುತ್ತದೆ ಮತ್ತು ತಾಯಿಯ ಸೌಂದರ್ಯ ವೃದ್ಧಿಸುತ್ತದೆ.


5. ಎದೆ ಹಾಲು ಬಹಳ ಸುಲಭವಾಗಿ ಮಗುವಿನ ಜಠರದಲ್ಲಿ ಜೀರ್ಣವಾಗುತ್ತದೆ ಮತ್ತು ಮಗುವಿನ ಜೀರ್ಣಾಂಗ ವ್ಯವಸ್ಥೆಯನ್ನು ಬೇಗನೆ ಬೆಳೆಯುವಂತೆ ಪ್ರಚೋದಿಸುತ್ತದೆ.


6. ಎದೆ ಹಾಲಿನಲ್ಲಿರುವ ಕ್ಯಾಲ್ಸಿಯಂ, ಮಗುವಿನ ಎಲುಬು ಬೆಳವಣಿಗೆಗೆ ಅತೀ ಅಗತ್ಯ


7. ಎದೆ ಹಾಲು ನೀಡುವುದರಿಂದ ತಾಯಿಗೆ ಅಸ್ಥಿರಂದ್ರತೆ ಬಾರದಂತೆ ತಡೆಯುತ್ತದೆ ಮತ್ತು ಅಂಡಾಶಯದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.


8. ತಾಯಿಯ ಎದೆ ಹಾಲು ಕುಡಿದ ಮಕ್ಕಳಿಗೆ ಮಲಬದ್ಧತೆ, ಅತಿಸಾರ, ಬೇಧಿ ಮತ್ತು ಇತರ ಜಠರ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆ ವಿರಳವಾಗಿರುತ್ತದೆ.


9. ಎದೆಹಾಲಿನಲ್ಲಿ ತಾಯಿಯಿಂದ ಹೇರಳವಾಗಿ ಆಂಟಿ ಆಕ್ಸಿಡೆಂಟ್‌ಗಳು, ಕಿಣ್ವಗಳು, ಆಂಟಿಬಾಡಿಗಳು ಮಗುವಿಗೆ ದೊರಕಿ ರಕ್ಷಣಾ ವ್ಯವಸ್ಥೆ ಸದೃಢವಾಗುತ್ತದೆ.


10. ತಾಯಿಯಿಂದ ಎದೆಹಾಲು ಕುಡಿದ ಮಕ್ಕಳಲ್ಲಿ ಅಲರ್ಜಿ, ತುರಿಕೆ, ಅಸ್ತಮಾ, ಶ್ವಾಸ ಸಂಬಂಧಿ ರೋಗಗಳು ಬಹಳ ವಿರಳ ಎಂದೂ ಅಂಕಿ ಅಂಶಗಳಿಂದ ತಿಳಿದು ಬಂದಿದೆ.


ಕೊಲೆಸ್ಟ್ರಮ್ ಎಂಬ ಸಂಜೀವಿನಿ


ಮಗು ತಾಯಿಯ ಗರ್ಭದಿಂದ ಹೊರಬಂದ ಕೂಡಲೇ ತಾಯಿಯ ಸ್ತನಗಳಿಂದ ಒಂದೆರಡು ಘಂಟೆಗಳ ಕಾಲ ಹಳದಿ ಬಣ್ಣದ ಜೀವದ್ರವ್ಯ ಒಸರಲು ಆರಂಭವಾಗುತ್ತದೆ. ಎದೆ ಹಾಲು ಬರುವ ಮೊದಲೇ ಈ ಜೀವದ್ರವ್ಯ ಸಾಮಾನ್ಯವಾಗಿ ಎಲ್ಲಾ ಸಸ್ತನಿಗಳ ಸ್ತನಗಳಿಂದ ಒಸರುತ್ತದೆ. ಆಂಗ್ಲಭಾಷೆಯಲ್ಲಿ ಈ ದ್ರವವನ್ನು ಕೊಲೆಸ್ಟ್ರಮ್ ಎಂದು ಕರೆಯುತ್ತಾರೆ. ಇದೊಂದು ನಸು ಹಳದಿ ಬಣ್ಣದ ಅಂಟಾದ ಮಂದ ದ್ರವ್ಯವಾಗಿರುತ್ತದೆ. ಇದೊಂದು ಅತ್ಯಂತ ಅಮೂಲ್ಯವಾದ ಸಂಜೀವಿನಿ ಅಥವಾ ಜೀವದ್ರವ್ಯ ಎಂದರೂ ಅತಿಶಯೋಕ್ತಿಯಾಗಲಾರದು. ತಾಯಂದಿರು ಈ ಕೊಲೆಸ್ಟ್ರಮ್‌ ಅನ್ನು ಸಂಪೂರ್ಣವಾಗಿ ಮಗುವಿಗೆ ನೀಡಬೇಕು. ಒಂದು ಹನಿಯೂ ವ್ಯರ್ಥವಾಗದಂತೆ ಈ ಜೀವ ದ್ರವವನ್ನು ಮಗುವಿಗೆ ಸಿಗುವಂತೆ ಮಾಡುವ ಹೊಣೆಗಾರಿಕೆ ತಾಯಂದಿರು ಮತ್ತು ದಾದಿಯರಿಗೆ ಇರುತ್ತದೆ.


ಈ ಕಾರಣದಿಂದಲೇ ತಾಯಂದಿರು ಮಗು ಹುಟ್ಟಿದ ಕೂಡಲೇ ಒಂದೆರಡು ಗಂಟೆಗಳ ಒಳಗೆ ಮಗುವಿಗೆ ಸ್ತನಪಾನ ಮಾಡಿಸಲೇಬೇಕು. ಈ ಕೊಲೆಸ್ಟçಮ್‌ನಲ್ಲಿ ತಾಯಿಯಿಂದ ಮಗುವಿಗೆ ಪೋಷಕಾಂಶಗಳು, ರೋಗಗಳಿಂದ ರಕ್ಷಣೆ ನೀಡುವ ಅತ್ಯಮೂಲ್ಯ ಆಂಟಿಬಾಡಿಗಳು ಇರುತ್ತದೆ. ಈ ಆಂಟಿಬಾಡಿಗಳು ಮಗುವನ್ನು ಹಲವಾರು ರೋಗಗಳಿಂದ ರಕ್ಷಿಸುತ್ತದೆ. ಮಗುವಿನ ಜೀವ ರಕ್ಷಕ ವ್ಯವಸ್ಥೆ ಮತ್ತು ರಕ್ಷಣಾ ವ್ಯವಸ್ಥೆ ಸರಿಯಾಗಿ ಬೆಳವಣಿಗೆ ಆಗಿ, ತನ್ನಿಂತಾನೇ ತನ್ನದೇ ದೇಹದಲ್ಲಿ ಆಂಟಿಬಾಡಿಗಳು ಉತ್ಪಾದನೆಯಾಗುವವರೆಗೆ ತಾಯಿಯಿಂದ ಕೊಲೆಸ್ಟ್ರಮ್‌ನ ಜೊತೆಗೆ ಬಳುವಳಿಯಾಗಿ ಬಂದ ಆಂಟಿಬಾಡಿಗಳು ಮಗುವನ್ನು ಮಾರಣಾಂತಿಕ ರೋಗಗಳಿಂದ ರಕ್ಷಿಸುತ್ತದೆ. ಮಗುವಿನ ರಕ್ಷಣಾ ವ್ಯವಸ್ಥೆಗೆ ಪೂರಕವಾಗಿ ಕೆಲಸ ಮಾಡಿ ಯಾವುದೇ ಸೋಂಕು ಶಿಶುವಿಗೆ ಬಾರದಂತೆ ತಡೆಯುತ್ತದೆ. ಈ ಜೀವದ್ರವ್ಯ ಕೊಲೆಸ್ಟ್ರಮ್‌ನಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಇರುತ್ತದೆ. ಈ ಪ್ರೋಟೀನ್ ಮಗುವಿನ ಆರಂಭಿಕ ಬೆಳವಣಿಗೆಗೆ ಮತ್ತು ರಕ್ಷಣಾ ವ್ಯವಸ್ಥೆಯನ್ನು ಸುದೃಡಗೊಳಿಸಲು ಅತೀ ಅವಶ್ಯಕ.


ಶಿಶುಗಳಲ್ಲಿ ಜೀರ್ಣಾಂಗ ವ್ಯವಸ್ಥೆ ಅತ್ಯಂತ ಚಿಕ್ಕದಾಗಿದ್ದು ಪ್ರಾಥಮಿಕ ಹಂತದಲ್ಲಿ ಇರುತ್ತದೆ. ಇಂತಹ ಸಂದರ್ಭದಲ್ಲಿ ಅತೀ ಹೆಚ್ಚು ಸಾಮರ್ಥ್ಯದ ಪೋಷಕಾಂಶಯುಕ್ತ ಪ್ರೋಟೀನ್ ಮತ್ತು ಖನಿಜಾಂಶಗಳು, ಜೀವಧಾತುಗಳನ್ನು ಅತೀ ಕಡಮೆ ಗಾತ್ರದಲ್ಲಿ ನೀಡುತ್ತದೆ. ಈ ಕೊಲೆಸ್ಟ್ರಮ್ ಮಗುವಿಗೆ ಮೊದಲ ಮಲವಿರ್ಸಜನೆ ಮಾಡಲು ಪೂರಕವಾದ ವಾತಾವರಣ ನಿರ್ಮಿಸಿ ಕೊಡುತ್ತದೆ. ಶಿಶುಗಳ ಮೊದಲ ಮಲವನ್ನು ಮೆಕೋನಿಯಮ್ ಎನ್ನುತ್ತಾರೆ. ಇದರ ಮುಖಾಂತರ ದೇಹದಲ್ಲಿನ ಹೆಚ್ಚಿನ ಪ್ರಮಾಣದ ‘ಬಿಲುರುಬಿನ್’ ಎಂಬ ವಸ್ತು ದೇಹದಿಂದ ಹೊರಹಾಕಲ್ಪಡುತ್ತದೆ. ಮಗು ತಾಯಿಯ ಗರ್ಭದಿಂದ ಹೊರ ಬಂದಾಗ ರಕ್ತದ ಪ್ರಮಾಣ ತೀವ್ರವಾಗಿ ಕಡಮೆಯಾಗಿ, ಕೆಂಪು ರಕ್ತಣಗಳು ಸತ್ತು ಹೋಗಿ ಅತಿ ಹೆಚ್ಚು ಪ್ರಮಾಣದಲ್ಲಿ ಬಿಲುರುಭಿನ್ ದೇಹದಲ್ಲಿ ಶೇಖರಣೆಯಾದಲ್ಲಿ ಮಗುವಿಗೆ ಕಾಮಾಲೆ ರೋಗ ಅಥವಾ ಜಾಂಡೀಸ್ ಬರುತ್ತದೆ. ಒಟ್ಟಿನಲ್ಲಿ ಈ ‘ಬಿಲುರುಬಿನ್’ ವರ್ಣದ್ರವ್ಯ ಸರಾಗವಾಗಿ ದೇಹದಿಂದ ಹೊರ ಹೋಗಲು ಕೊಲೆಸ್ಟ್ರಮ್ ಸಹಾಯ ಮಾಡುತ್ತದೆ.


ಕೊಲೆಸ್ಟ್ರಮ್‌ನಲ್ಲಿ ದೇಹದ ರಕ್ಷಣ ವ್ಯವಸ್ಥೆಯ ಸೈನಿಕರಾದ ‘ಲಿಂಪೋಸೈಟ್’ ಎಂಬ ಬಿಳಿರಕ್ತಗಳು ಅತೀ ಪ್ರಮುಖವಾದ ಆಂಟಿಬಾಡಿಗಳಾದ IgA, IgG ಮತ್ತು JgM ಇರುತ್ತದೆ. ಇದಲ್ಲದೆ ಲೈಜೋಜೈಮ್, ಲಾಕ್ಟೋಪೆರಾಕ್ಸಿಡೇಸ್, ಕಾಂಪ್ಲಿಮೆಂಟ್, ಪಾಲಿಪೆಪ್ಟೆಡ್, ಇಂಟರ್‌ಲ್ಯುಕಿನ್, ಸೈಟೋಕೈನ್ ಮುಂತಾದ ಅತೀ ಅವಶ್ಯಕ ಜೀವರಕ್ಷಕ ಧಾತುಗಳು ಇರುತ್ತದೆ.


ಕೊನೆಮಾತು


ಜಗತ್ತಿನಲ್ಲಿ ಜನ್ಮವೆತ್ತ ಪ್ರತಿ ಜೀವಸಂಕುಲಕ್ಕೂ, ಹುಟ್ಟಿದ ತಕ್ಷಣದಿಂದ ಆಹಾರ ಅತೀ ಅವಶ್ಯಕ. ನವಜಾತ ಶಿಶುವಿಗೆ ತಾಯಿಯ ಎದೆಹಾಲಿಗೆ ಸರಿ ಸಮಾನವಾದ ಆಹಾರ ಇನ್ನೊಂದಿಲ್ಲ. ಎದೆಹಾಲು ಎನ್ನುವುದು ಮಗುವಿಗೆಂದೇ ತಯಾರಾದ ನೈಸರ್ಗಿಕ ಆಹಾರ. ಅಥವಾ ಜೀವ ರಕ್ಷಕ ಜೀವದ್ರವ್ಯ. ಎದೆಹಾಲು ಕುಡಿಸುವುದರಿಂದ ತಾಯಿಗೆ ಮಾತೃತ್ವದ ಖುಷಿ ದೊರಕಿದರೆ ಮಗುವಿಗೆ ಆಹಾರದ ಜೊತೆಗೆ ಸುರಕ್ಷತೆಯ ಭಾವ ಮೂಡುತ್ತದೆ. ಸ್ತನಪಾನ ಕ್ರಿಯೆಯಲ್ಲಿ ತಾಯಿ ಮತ್ತು ಶಿಶುವಿಗೆ ಪರಸ್ಪರವಾಗಿ ಒಬ್ಬರಿಗೆ ಒಬ್ಬರ ಉಸಿರು, ವಾಸನೆ, ಹೃದಯ ಬಡಿತ ಸಮ್ಮಿಳಿತಗೊಂಡು ಅನ್ಯೋನತೆಯ ಎಳೆಗಳು ಬೆಸೆದುಕೊಳ್ಳುತ್ತದೆ. ಎದೆ ಹಾಲು ಉತ್ಪತ್ತಿಯಾಗುವ ಮೊದಲು ಒಸರುವ ಹಳದಿ ಬಣ್ಣದ ಜೀವದ್ರವ್ಯ, ಕೊಲೆಸ್ಟ್ರಮ್ ಕೋಟಿಕೋಟಿ ಕೊಟ್ಟರೂ ಮಾರುಕಟ್ಟೆಯಲ್ಲಿ ಸಿಗುವುದಿಲ್ಲ.


ಮಗು ಹುಟ್ಟಿದ ಮೂರರಿಂದ ನಾಲ್ಕು ದಿನಗಳವರೆಗೆ ಕೊಲೆಸ್ಟçಮ್ ಮಗುವಿಗೆ ಸಿಗುತ್ತದೆ. ಅ ಬಳಿಕ ಹೆಚ್ಚು ಎದೆ ಹಾಲು ಉತ್ಪತ್ತಿಯಾಗಿ ಕೊಲೆಸ್ಟ್ರಮ್ ಅಂಶ ಕಡಿಮೆಯಾಗುತ್ತದೆ. ಕೆಲವೊಮ್ಮೆ ನೀರು ನೀರಾಗಿ ಬಣ್ಣ ರಹಿತ ದ್ರವವಾಗಿ ಕಂಡು ಬಂದರೂ. ಕೊಲೆಸ್ಟçಮ್‌ನಲ್ಲಿರುವ ಬೀಟಾಕೆರೊಟಿನ್ ಅಂಶದಿಂದಾಗಿ ಹೆಚ್ಚಾಗಿ ನಸು ಹಳದಿ ಬಣ್ಣ ಬರುತ್ತದೆ. ಪ್ರತಿಬಾರಿ ಸ್ತನ್ಯಪಾನ ಮಾಡಿದಾಗಲೂ ಮಗುವಿಗೆ ಅರ್ಧ ಟೀ ಸ್ಪೂನ್‌ನಷ್ಟು ಕೊಲೆಸ್ಟ್ರಮ್ ಮೊದಲ 24 ಗಂಟೆಗಳಲ್ಲಿ ದೊರಕುತ್ತದೆ. ಮಗುವಿನ ಸಣ್ಣ ಕರುಳಿನ ಗಾತ್ರ ಕೇವಲ 5ರಿಂದ 7ಮೀ.ಲೀ ಇರುವುದರಿಂದ ಪ್ರತಿಬಾರಿ ಸ್ತನಪಾನ ಮಾಡಿದಾಗ ಒಂದು ಟೀ ಸ್ಪೂನ್ ಕೊಲೆಸ್ಟ್ರಮ್ ಧಾರಾಳವಾಗಿ ಸಾಕಾಗುತ್ತದೆ. ಒಟ್ಟಿನಲ್ಲಿ ಕೋಟಿ ಕೋಟಿ ಕೊಟ್ಟರೂ ಸಿಗದ ಕೊಲೆಸ್ಟ್ರಮ್ ಶಿಶುಗಳ ಆರೋಗ್ಯವನ್ನು ಕಾಪಾಡುವ ಸಂಜೀವಿನಿ ಎಂದರೆ ಅತಿಶಯೊಕ್ತಿಯಲ್ಲ. ಪ್ರತೀ ತಾಯಂದಿರು ಈ ಕೊಲೆಸ್ಟ್ರಮ್ ಮಹತ್ವವನ್ನು ಅರಿತು ಮಗು ಹುಟ್ಟಿದ ಕೂಡಲೇ ಶಿಶುಗಳಿಗೆ ಸ್ತನ್ಯಪಾನ ಮಾಡಿಸಿದ್ದಲ್ಲಿ ಆರೋಗ್ಯವಂತ ಶಿಶುಗಳು ಮಕ್ಕಳಾಗಿ ಬೆಳೆದು ಆರೋಗ್ಯವಂತ ಸಮಾಜದ ನಿರ್ಮಾಣ ಸಾಧ್ಯವಿದೆ ಅದರಲ್ಲಿಯೇ ಸಮಾಜದ ಹಿತ ಅಡಗಿದೆ.


- ಡಾ|| ಮುರಲೀ ಮೋಹನ್ ಚೂಂತಾರು

 BDS, MDS, DNB, MOSRCSEd(U.K), FPFA, M.B.A

 ಮೊ : 9845135787

 drmuraleechoontharu@gmail.com

 ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم