ವಿಶ್ವದ ಎಲ್ಲ ರಾಷ್ಟ್ರಗಳು ತಮ್ಮ ದೇಶದ ಐಕ್ಯತೆ ಹಾಗೂ ಸಮಗ್ರತೆಯ ದೃಷ್ಟಿಯಿಂದ ರಾಷ್ಟ್ರಧ್ವಜವನ್ನು ನಿರ್ಮಿಸಿಕೊಂಡಿರುವುದನ್ನು ನೋಡುತ್ತೇವೆ. ಇತಿಹಾಸದ ಪುಟ ತೆರೆದು ನೋಡಿದಾಗಲೂ ಒಂದೊಂದು ವೀರರಿಗೆ ಒಂದೊಂದು ಧ್ವಜ ಇರುವುದನ್ನು ನೋಡಬಹುದು. ಹಾಗೆಯೇ ದೇವತೆಗಳ ಬಳಿಯೂ ಧ್ವಜ ಇರುವುದನ್ನು ಪುರಾಣಗಳಲ್ಲೂ ಕಾಣಬಹುದು. ಮಹಾ ವಿಷ್ಣುವಿನ ಗರುಡ ಧ್ವಜ, ಮಹೇಶ್ವರನ ವೃಷಕೇತನ, ಕಾಮನ ಮೀನಕೇತನ, ಸುಯೋಧನನ ಪನ್ನಗ ಪತಾಕೆ, ಅರ್ಜುನನ ಕಪಿಧ್ವಜ, ಭೀಷ್ಮನ ತಾಳಧ್ವಜ, ಚಾಲುಕ್ಯರ ವರಾಹ ಧ್ವಜ, ಕಲಚೂರ್ಯರ ವೃಷಭ ಧ್ವಜ, ವಿಜಯನಗರದ ಅರಸರ ವರಾಹ ಧ್ವಜ ಹೀಗೆ ಮೊದಲಾದ ಧ್ವಜ ವಿಷೇತತೆಗಳನ್ನು ನೋಡುತ್ತೇವೆ.
ಭಾರತದ ಮೊತ್ತ ಮೊದಲ ರಾಷ್ಟ್ರಧ್ವಜ ರೂಪುಗೊಂಡದ್ದು 1906 ನೆಯ ಇಸವಿಯಲ್ಲಿ. ಮ್ಯಾಡಮ್ ಕಾಮಾ ಅವರು ತನ್ನ ಅನುಯಾಯಿಗಳೊಡನೆ ಸೇರಿ ಮೊದಲ ಧ್ವಜ ರೂಪುಗೊಂಡಿತು. ಆಕೆ ನಿರ್ಮಿಸಿದ ಧ್ವಜದಲ್ಲಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣ ಇದ್ದವು. ಆದರೆ ಕೇಸರಿ ಬಣ್ಣದ ಮೇಲೆ ಸಾಲಾಗಿ ಎಂಟು ನಕ್ಷತ್ರಗಳು, ಬಿಳಿ ವರ್ಣದ ಮೇಲೆ 'ವಂದೇ ಮಾತರಮ್' ಎಂಬ ಬರಹ, ಹಸಿರು ಬಣ್ಣದ ಮೇಲೆ ಒಂದು ಬದಿಗೆ ಸೂರ್ಯ ಹಾಗೂ ಮತ್ತೊಂದು ಬದಿಗೆ ಚಂದ್ರನ ಚಿತ್ರ ಇದ್ದವು. ಆದರೆ ಈ ಧ್ವಜ ಭಾರತದಲ್ಲಿ ಪ್ರಚಲಿತವಾಗಲಿಲ್ಲ. ಇದಾದ ಹತ್ತು ವರ್ಷಗಳ ಅನಂತರ 1916 ರಲ್ಲಿ ಅನ್ನಿಬೆಸೆಂಟ್ ಇವರು ಹೋಂ ರೂಲ್ ಚಳುವಳಿ ಪ್ರಾರಂಭಿಸಿದಾಗ ಇನ್ನೊಂದು ಧ್ವಜದ ಸೃಷ್ಟಿಯಾಯಿತು. ಇದರಲ್ಲಿ ಮೇಲಿನಿಂದ ಕೆಳಗೆ ಒಂದರ ಪಕ್ಕದಲ್ಲಿ ಒಂದರಂತೆ ಐದು ಕೆಂಪು ಬಣ್ಣದ ಅಡ್ಡ ಪಟ್ಟಿ; ಧ್ವಜದ ಎಡಗಡೆಯ ಮೇಲಿನ ಮೂಲೆಯಲ್ಲಿ ಚಿಕ್ಕದೊಂದು ಯೂನಿಯನ್ ಜಾಕಿನ ಚಿತ್ರ; ಉಳಿದ ಭಾಗದಲ್ಲಿ ಹರಡಿದ ಸಪ್ತಋಷಿ ಮಂಡಲದ ಚಿತ್ರ ಇತ್ತು.
1919 ನೆಯ ಹೊತ್ತಿಗೆ ಮಹಾತ್ಮಾ ಗಾಂಧೀಜಿ ಅವರು ಅಖಿಲ ಭಾರತ ರಾಷ್ಟ್ರೀಯ ಮಹಾಸಭೆಯ ಮುಂದಾಳುತನ ವಹಿಸಿಕೊಂಡರು. ಆಗ ಒಂದು ಧ್ವಜದ ರೂಪುರೇಷೆಗೆ ವೇದಿಕೆ ರೂಪುಗೊಂಡಿತು. ಮಚಲಿ ಪಟ್ಟಣದ ರಾಷ್ಟ್ರೀಯ ವಿದ್ಯಾಲಯದ ಅಧ್ಯಾಪಕರಾಗಿದ್ದ ವೆಂಕಯ್ಯ ಎಂಬುವವರು ತ್ರಿವರ್ಣ ಧ್ವಜದ ಮಾದರಿಗಳನ್ನು ನಿರ್ಮಿಸಿ ಎಡಬಿಡದೆ ನಾಲ್ಕು ವರ್ಷಗಳ ಕಾಲ ರಾಷ್ಟ್ರೀಯ ಮಹಾಸಭೆಯ ಪ್ರತಿಯೊಂದು ಅಧಿವೇಶನದಲ್ಲಿ ಪ್ರದರ್ಶಿಸುತ್ತಾ ಬಂದರು. ಆದರೆ ಅವರು ನಿರ್ಮಿಸಿದ ಧ್ವಜ ಯಾರ ಗಮನಕ್ಕೂ ಬರಲಿಲ್ಲ ಎಂದು ತೋರುತ್ತದೆ. 1921 ರ ಹೊತ್ತಿಗೆ ರಾಷ್ಟ್ರಧ್ವಜದ ಅವಶ್ಯಕತೆ ಮನಗಂಡ ಗಾಂಧಿಯವರು ಧ್ವಜದ ಕುರಿತಾಗಿ ತಮ್ಮ ಅನುಯಾಯಿಗಳೊಡನೆ ಚರ್ಚಿಸತೊಡಗಿದರು. ಆಗ ಪಂಜಾಬಿನ ಲಾಲಾ ಹಂಬಸರಾಜರು ನಮ್ಮ ರಾಷ್ಟ್ರಧ್ವಜದಲ್ಲಿ ಚರಕದ ಚಿಹ್ನೆ ಇರಬೇಕೆಂದು ಗಾಂಧೀಜಿಗೆ ಸೂಚಿಸಿದರು. ಆಗ ವೆಂಕಯ್ಯ ಅವರೇ ಚರಕ ಚಿಹ್ನಾಂಕಿತ ತ್ರಿವರ್ಣ ಧ್ವಜವನ್ನು ರಚಿಸಿಕೊಟ್ಟರು. ಮುಂದೆ ಸುಮಾರು ಹತ್ತು ವರ್ಷಗಳ ಕಾಲ ಈ ಧ್ವಜವನ್ನು ಏರಿಸುತ್ತಾ ಬಂದರು. ಆದರೆ ಅಷ್ಟು ಕಾಲದ ತನಕವೂ ಈ ಧ್ವಜಕ್ಕೆ ರಾಷ್ಟ್ರೀಯ ಮಹಾಸಭೆಯ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಸಿಗಲಿಲ್ಲ.
ವೆಂಕಯ್ಯ ಅವರು ರಚಿಸಿದ ರಾಷ್ಟ್ರೀಯ ಮಹಾಸಭೆಯ ರಾಷ್ಟ್ರಧ್ವಜದಲ್ಲಿ ಮೇಲಿನಿಂದ ಕೆಳಕ್ಕೆ ಅನುಕ್ರಮವಾಗಿ ಬಿಳಿ, ಹಸಿರು, ಕೆಂಪು ಬಣ್ಣಗಳು ಇದ್ದವು. ಈ ಮೂರು ಬಣ್ಣಗಳನ್ನು ಆವರಿಸಿರುವ ದೊಡ್ಡದಾದ ಚರಕದ ಚಿಹ್ನೆ ಇತ್ತು. 1931ರಲ್ಲಿ ರಾಷ್ಟ್ರೀಯ ಮಹಾಸಭೆಯು ಸಮರ್ಪಕವಾದ ಒಂದು ರಾಷ್ಟ್ರಧ್ವಜ ರಚಿಸಲು ಒಂದು ಸಮಿತಿಯನ್ನು ನೇಮಿಸಿತು. ಸಮಿತಿಯು ಒಂದು ಕೇಸರಿ ಬಣ್ಣ ಹಾಗೂ ಅದರ ಮೇಲಿನ ತುದಿಯಲ್ಲಿ ಚಿಕ್ಕದೊಂದು ಚರಕದ ಚಿಹ್ನೆ ಬರುವಂತೆ ಮಾಡಿತ್ತು. ಆದರೆ ಮಹಾಸಭೆಯು ಇದನ್ನು ಸ್ವೀಕರಿಸಲಿಲ್ಲ. ಮತ್ತೆ ರಾಷ್ಟ್ರೀಯ ಮಹಾಸಭೆಯವರು ಗಾಂಧೀಜಿ ಸೂಚಿಸಿದ ಚರಕ ಚಿಹ್ನೆವುಳ್ಳ ತ್ರಿವರ್ಣ ಧ್ವಜವನ್ನು ಒಪ್ಪಿಕೊಂಡು, ಅದರಲ್ಲೇ ಸ್ವಲ್ಪ ಪರಿವರ್ತನೆ ತಂದು, ಅದು ಭಾರತದ ರಾಷ್ಟ್ರೀಯ ಧ್ವಜವೆಂದು ಸ್ವೀಕರಿಸಿತು. ಹೀಗೆ ಪರಿವರ್ತಿತ ರಾಷ್ಟ್ರೀಯ ಧ್ವಜದಲ್ಲಿ ಮೇಲಿಂದ ಕೆಳಗೆ ಅನುಕ್ರಮವಾಗಿ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳು ಇದ್ದವು. ಮೊದಲು ಮೂರು ಬಣ್ಣಗಳನ್ನು ಮುಟ್ಟುತ್ತಿದ್ದ ಚರಕದ ದೊಡ್ಡ ಗುರುತನ್ನು ಚಿಕ್ಕದಾಗಿಸಿ ಬಿಳಿಯ ಬಣ್ಣದ ನಡುವೆ ಬರುವಂತೆ ಮಾಡಲಾಯಿತು.
ಸಮಗ್ರ ಭಾರತದ ರಾಷ್ಟ್ರಧ್ವಜವನ್ನು ಮತ್ತೆ ಪರಿವರ್ತನೆಗೊಳಿಸುವುದಕ್ಕೆ ಭಾರತೀಯ ರಾಜ್ಯ ಘಟನಾ ಸಭೆಯ ಹನ್ನೊಂದು ಮಂದಿಯ ಉಪಸಮಿತಿಯನ್ನು ರಚಿಸಿತು. ಈ ಉಪಸಮಿತಿಯು ಭಾರತೀಯ ರಾಷ್ಟ್ರಧ್ವಜದ ಚಿಹ್ನೆಯನ್ನು ಧರ್ಮವಿಜಯಿ ಸಾಮ್ರಾಟ್ ಅಶೋಕನು ಸಾರನಾಥದಲ್ಲಿ ನಿಲ್ಲಿಸಿರುವ ಶಿಲಾಸ್ತಂಭದ ತುದಿಯಲ್ಲಿದ್ದ ಸಿಂಹಶೀರ್ಷದಿಂದ ತೆಗೆದುಕೊಂಡಿತು.
ಈ ಧ್ವಜವು ಮೊದಲಿನಂತೆ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣಗಳು ಇದ್ದು, ನಡುವೆ ಚರಕದ ಬದಲು ಸಾರನಾಥದ ಶಿಲಾಸ್ತಂಭದ ತುದಿಯ ಸಿಂಹ ಶೀರ್ಷದ ಪೀಠದ ನಡುವೆಯ ಚಕ್ರದ ಚಿಹ್ನೆಯು ನೀಲ ವರ್ಣದಲ್ಲಿ ಇರಬೇಕೆಂದು ಧ್ವಜ ರಚನೆಯ ಸಮಿತಿಯವರು ನಿಶ್ಚಯಿಸಿದರು. ಹೀಗೆ ಭಾರತದ ರಾಷ್ಟ್ರಧ್ವಜ ರೂಪುಗೊಂಡಿತು. ಇದಕ್ಕಾಗಿ ಆ 1931 ನೆಯ ಇಸವಿಯಿಂದ ಪ್ರತಿವರ್ಷ ಏಪ್ರಿಲ್ 26 ರಂದು ರಾಷ್ಟ್ರಧ್ವಜದ ದಿನವೆಂದು ಆಚರಣೆಗೆ ಬಂದಿತು.
ಡಾ. ಪ್ರಸನ್ನಕುಮಾರ ಐತಾಳ್
ಸಂಸ್ಕೃತ ವಿಭಾಗ
ಎಸ್.ಡಿ.ಎಂ ಪ.ಪೂ ಕಾಲೇಜು, ಉಜಿರೆ.