ಶ್ರೀಕೃಷ್ಣನ ಬದುಕು ಪರಿಪೂರ್ಣ ವ್ಯಕ್ತಿತ್ವಕ್ಕೆ ನಿದರ್ಶನ : ತೇಜಶಂಕರ ಸೋಮಯಾಜಿ
ಪುತ್ತೂರು: ಶ್ರೀಕೃಷ್ಣ ಪರಮಾತ್ಮನು ಅತ್ಯದ್ಭುತವಾದ ಚಾರಿತ್ರ‍್ಯವನ್ನು ಹೊಂದಿದವನು. ಪರಿಪೂರ್ಣ ವ್ಯಕ್ತಿತ್ವಕ್ಕೆ ನಿದರ್ಶನವಾಗುವ ವ್ಯಕ್ತಿಯೆಂದರೆ ಶ್ರೀಕೃಷ್ಣ. ಅಂತಹ ವ್ಯಕ್ತಿಯ ಸಂದೇಶಗಳನ್ನು ಅನುಸರಿಸಿದರೆ ಧರ್ಮಮಾರ್ಗದಲ್ಲಿ ನಡೆದು ಉನ್ನತ ವ್ಯಕ್ತಿತ್ವವನ್ನು ರೂಪಿಸಬಹುದು ಎಂದು ಅಂಬಿಕಾ ಪದವಿ ಮಹಾವಿದ್ಯಾಲಯದ ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಹೇಳಿದರು.
ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಗುರುವಾರದಂದು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದರು.
ಶ್ರೀಕೃಷ್ಣ ತನ್ನ ಜೀವನದ ಮೂಲಕ ಧರ್ಮದ ಹಾದಿಯನ್ನು ತೋರಿಸಿದವನು ಮಾತ್ರವಲ್ಲದೆ ಪರರಿಗೋಸ್ಕರ ತನ್ನ ಜೀವನವನ್ನೇ ಮುಡಿಪಾಗಿಟ್ಟವನು. ನಿಸ್ವಾರ್ಥ, ಪರೋಪಕಾರ ಮುಂತಾದ ಗುಣಗಳನ್ನು ಹೊಂದಿದ ಕಾರಣ ಆತನನ್ನು ಜಗದ್ಗುರು ಎಂದು ಸಂಬೋಧಿಸಲಾಗುತ್ತದೆ. ಕೃಷ್ಣನ ಇಡಿಯ ಬದುಕನ್ನು ಅವಲೋಕಿಸಿದಾಗ ತನಗಾಗಿ ಆತ ಏನನ್ನೂ ಮಾಡಿದ್ದಿಲ್ಲ ಎಂಬುದರ ಅರಿವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಕೃಷ್ಣನ ನಾಮಸ್ಮರಣೆಯು ಪಾಪವನ್ನು ಹೋಗಲಾಡಿಸಿ ಪುಣ್ಯವನ್ನು ನೀಡುತ್ತದೆ. ಕೃಷ್ಣನಾಮ ಜಪದಿಂದ ಮೋಕ್ಷದ ಹಾದಿಯನ್ನು ಕಂಡುಕೊಳ್ಳಬಹುದು ಎಂದು ಹೇಳಿದರು.
ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಭಜನೆ, ರಸಪ್ರಶ್ನೆ, ಸಂಗೀತ ಕುರ್ಚಿ, ಭಗವದ್ಗೀತೆ ಶ್ಲೋಕ ವಿವರಣೆ, ಮೊಸರು ಕುಡಿಕೆ ಮುಂತಾದ ಸ್ಪರ್ಧೆಗಳನ್ನು ನಡೆಸಿ, ವಿಜೇತರಿಗೆ ಬಹುಮಾನ ನೀಡಲಾಯಿತು. ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಹಾಗೂ ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ಅಂಕಿತಾ, ಮಹಿಮಾ ಪ್ರಾರ್ಥಿಸಿ, ಕಾಲೇಜಿನ ವಿದ್ಯಾರ್ಥಿ ಸಂಘದ ಅಧಕ್ಷೆ ಸಾಯಿಶ್ವೇತ ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅನಘಾ ವಂದಿಸಿದರು. ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಗಿರೀಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.