ನೆನಪಿನ ಬುತ್ತಿಯಿಂದ: ನಾನು ಚಾಲಕನಾಗಿದ್ದಾಗ- ಭಾಗ 4

Upayuktha
0



1991ನೇ ಇಸವಿ. ನಾನು ಉಡುಪಿಯ ಪುತ್ತಿಗೆ ಮಠದ ಸ್ವಾಮಿಗಳಾದ ಶ್ರೀ ಸುಗುಣೇಂದ್ರ ತೀರ್ಥರ ವಾಹನಕ್ಕೆ ಚಾಲಕನಾಗಿದ್ದೆ. ಮುಂದೆ 1992 ರಲ್ಲಿ ಪುತ್ತಿಗೆ ಮಠದ ಪರ್ಯಾಯ. ಇದಕ್ಕೆ ಪೂರ್ವ ಭಾವಿಯಾಗಿ ಭಾರತದಲ್ಲಿರುವ ಎಲ್ಲ ಪುಣ್ಯ ಕ್ಷೇತ್ರಗಳನ್ನು ಸಂದರ್ಶಿಸಿ ಬರುವ ಸಂಪ್ರದಾಯವಿದೆ. ಈ ಯಾತ್ರೆಗೆ ಪರ್ಯಾಯ ಸಂಚಾರ ಎಂದು ಕರೆಯುವರು. ಆ ಪ್ರಯುಕ್ತ ನಾವು ಸುಮಾರು ಎರಡು ಮೂರು ವಾಹನಗಳಲ್ಲಿ ಈ ಸಂಚಾರಕ್ಕೆ ಹೊರಟಿದ್ದೆವು. ಪೂರ್ವ ನಿರ್ಧಾರದಂತೆ ಉಡುಪಿಯಿಂದ ಹೊರಟು ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಮುಂತಾದ ಕಡೆಗಳಲ್ಲಿ ಮಠ ಮಂದಿರಗಳಲ್ಲಿ ವಾಸ್ತವ್ಯ ಮಾಡಿಕೊಂಡು ಕೊಲ್ಹಾಪುರ, ಪೂನಾ,ಮುಂಬಯಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗುಜರಾತ್, ರಾಜಸ್ಥಾನ, ದೆಹಲಿ ತನಕ ಹೋಗಿ ಅಲ್ಲಿ ಎರಡು ತಿಂಗಳು ಚಾತುರ್ಮಾಸ್ಯವನ್ನು ಪೂರೈಸಿ ಹರಿದ್ವಾರ, ಹೃಷಿಕೇಶದ ಮೂಲಕ ಬದರಿನಾಥನ ದರ್ಶನಕ್ಕೆ ಹೊರಟೆವು.


ಹೃಷಿಕೇಶದಿಂದ ಪೂರ್ತಿ ಘಾಟಿ ರಸ್ತೆ. ಅಗಲ ಕಿರಿದಾದ ರಸ್ತೆಗಳು, ಕಡಿದಾದ ತಿರುವುಗಳು,  ಸಾವಿರಾರು ಅಡಿಯ ಪ್ರಪಾತಗಳು, ಕಣ್ಣಿಗೆ ಎಟುಕದಷ್ಟು ಎತ್ತರದ ಪರ್ವತಗಳು, ಯಾವ ಕ್ಷಣದಲ್ಲೂ ಉರುಳಬಹುದಾದ ಬಂಡೆಗಳು, ಬಿರುಗಾಳಿಯ ಜತೆ ಬರುವಂಥ ಜಡಿಮಳೆಗಳು, ಎಲ್ಲೋ ದೂರದಿಂದ ಕಂಡೂ ಕಾಣದಂತಿರುವ ಗೆರೆಗಳಂತೆ ಕಾಣುವ ಮಾರ್ಗಗಳು, ಮತ್ತದೇ ಮಾರ್ಗದಲ್ಲಿ ನಾವು ಪ್ರಯಾಣಿಸಬೇಕೆಂದು ಅರಿತಾಗ ಆಗುವ ರೋಮಾಂಚನಗಳು, ಮಧ್ಯದಲ್ಲಿ ಎಲ್ಲಿ ಏನಾಗುತ್ತದೋ ಎನ್ನುವ ಆತಂಕಗಳು, ಹಸಿವು ಬಾಯಾರಿದರೆ ಹೋಟೇಲುಗಳು ಎಲ್ಲಿ ಸಿಗಬಹುದೆಂಬ ಕುತೂಹಲದ ಜತೆಗೆ ಹಸಿವು ಹೆಚ್ಚಾಗುವ ಅನುಭವಗಳು ಒಂದೆರಡಲ್ಲ ಹಂತ ಹಂತವೂ ಅಪಾಯವನ್ನೇ ತೆಕ್ಕೆಯಲ್ಲಿಟ್ಟುಕೊಂಡು ಹೋಗಬೇಕಾದ ದಾರಿ. ಆದರೂ ಮನಸ್ಸಿಗೆ ಅತಿಯಾದ ಆನಂದವನ್ನು ತಂದುಕೊಡುವುದರಲ್ಲಿ ಯಾವ ಸಂದೇಹವೂ ಇಲ್ಲ.


ಬಹುಷ ಮಾನವನ ಕಣ್ಣಿಗೆ ಅತಿಯಾದ ಸುಖ ಕೊಡುವ ಒಂದು ಸ್ಥಿತಿ ಎಂದರೆ ಈ ಬದರಿನಾಥನ ದರ್ಶನಕ್ಕೆ ಹೋಗುವ ಈ ದಾರಿಯ ವಿಹಂಗಮ ನೋಟಗಳು ಎಂದರೆ ತಪ್ಪಲ್ಲ. ಅದೇ ಆನಂದದ ಉತ್ಕರ್ಷೆಯಲ್ಲಿ ನಾವು ಮುಂದೆ ಮುಂದೆ ಹೋಗಿ ರಾತ್ರಿಗೆ ಜೋಶಿಮಠಕ್ಕೆ ಬಂದದ್ದಷ್ಟೇ ನಮ್ಮ ಸಾಧನೆಯಾಯಿತು. ಮರುದಿನ ಬೆಳಿಗ್ಗೆ ಬದರಿನಾಥಕ್ಕೆ ಹೋಗಿ ಅಲಕನಂದಾ ನದಿಯಲ್ಲಿ ತೀರ್ಥ ಸ್ನಾನ ಮಾಡಿ ಬದರಿನಾಥನ ದರ್ಶನ ಮಾಡಿದಾಗ ಜನ್ಮ ಸಾರ್ಥಕವಾದಂಥ ಅನುಭವ. ಅಂತೆಯೇ ನಾವು ಎರಡು ದಿನಗಳು ಬದರಿಯಲ್ಲೇ ಇದ್ದು ಮೂರನೇ ದಿನ ಬೆಳಿಗ್ಗೆ ವಾಪಸು ಹೊರಡಲನುವಾದೆವು. 


ಎಲ್ಲರೂ ಅವರವರ ವಾಹನದಲ್ಲಿ ಕೂತು ಇನ್ನೇನು ಹೊರಡಬೇಕು ಎನ್ನುವಾಗ ನಾನು ಚಲಾಯಿಸುತ್ತಿದ್ದ ಟೆಂಪೋ ಟ್ರಾವೆಲ್ಲರ್ ಹೊರಡಲನುವಾಗಲೇ ಇಲ್ಲ. ಎಷ್ಟು ಸಲ ಸ್ಟಾರ್ಟ್ ಮಾಡಿದರೂ ವಾಹನದ ಬ್ಯಾಟರಿ ಬಲವನ್ನು ಕಳಕೊಂಡಿತೇ ಹೊರತು ಇಂಜಿನ್ ಸ್ಟಾರ್ಟ್ ಆಗಲೇ ಇಲ್ಲ. ನನಗಾದರೋ ಕಾರಣವೇನೆಂದೇ ತಿಳಿಯಲಿಲ್ಲ. ಮೊನ್ನೆ ತಂದು ನಿಲ್ಲಿಸಿದ ವಾಹನ ಸುಸ್ಥಿತಿಯಲ್ಲಿತ್ತು. ಇವತ್ತು ಇದ್ದಲ್ಲಿಯೇ ಏನಾಗಿದೆ ಇದಕ್ಕೆಂದೇ ತಿಳಿಯದಾದೆ. ಹತ್ತಿರ ಯಾವುದೂ ಗ್ಯಾರೇಜೂ ಇರಲಿಲಿಲ್ಲ. ಇದ್ದರೂ ನಮ್ಮ ವಾಹನ ಆಗತಾನೆ ಬಂದಂಥ ಹೊಸ ಮಾದರಿಯದ್ದಾದರಿಂದ ಅದರ ರಿಪೇರಿಯೂ ಕಷ್ಟವೇ ಎಂದರಿತಾಗ ಈ ಚಳಿಯಲ್ಲಿ ಇನ್ನೆಷ್ಟು ದಿನಗಳನ್ನು ಕಳೆಯಬೇಕೆಂಬ ಭಯವೂ ಉಂಟಾಯಿತು. ಆವಾಗ ಅಲ್ಲಿಗೆ ಯಾವಾಗಲೂ ಬಂದು ಹೋಗುತ್ತಿರುವ ಟ್ಯಾಕ್ಸಿ ಚಾಲಕನಲ್ಲಿ ಇದಕ್ಕೇನು ಪರಿಹಾರವಿರಬಹುದು ಎಂದು ಕೇಳಿದಾಗ ಆತನಿಗೆ ನನ್ನ ಸಮಸ್ಯೆ ಅರ್ಥವಾಯಿತು. ಆತ ಕೇಳಿದ 'ನೀವು ಬಂದು ಎಷ್ಟು ದಿನವಾಯಿತು' ಎಂದು. ನಾನಂದೆ ಇಲ್ಲ ಎರಡು ದಿನಗಳಷ್ಟೇ ಆದದ್ದು ಎಂದಾಗ ಆತನಿಗೆ ಇನ್ನೂ ಸ್ಪಷ್ಟವಾಯಿತು. ಆತ ಪುನಹ ಹೇಳಿದ 'ನೀವು ಬಂದ ಮೇಲೆ ವಾಹನವನ್ನು ಮಧ್ಯ ಮಧ್ಯ ಸ್ಟಾರ್ಟ್ ಮಾಡಿಲ್ಲದ ಕಾರಣ ಡೀಸಲ್ ಪೈಪಲ್ಲಿರುವ ಇಂಧನ ಇಲ್ಲಿಯ ಚಳಿಗೆ ಗಟ್ಠಿಯಾಗಿದೆ ಡೀಸಲ್ ಪೈಪ್ಗಳಿಗೆ ಸ್ವಲ್ಪ ಬೆಂಕಿಯಿಂದ ಬಿಸಿ ಮುಟ್ಟಿಸಿದರೆ ಸ್ಟಾರ್ಟ್ ಆಗಬಹುದು' ಎಂದ. ಅವನು ಹೇಳಿದಂತೆ ಒಂದು ದೊಂದಿಯನ್ನು ಮಾಡಿ ಹಿತ್ತಾಳೆಯ ಡೀಸಲ್ ಪೈಪುಗಳಿಗೆ ಬಿಸಿ ಮುಟ್ಟಿಸಿಯೂ ಆಯಿತು.


ಇಂಧನವೇನೋ ನೀರಾಗಿರಬಹುದು. ಆದರೆ ವಾಹನ ಸ್ಟಾರ್ಟ್ ಮಾಡಲು ಬ್ಯಾಟರಿಯಲ್ಲಿ ಶಕ್ತಿಯೇ ಇರಲಿಲ್ಲ. ಇನ್ನೇನು ಮಾಡೋಣವೆಂಬ ಸಮಸ್ಯೆ ಉಂಟಾಯಿತು. ಅಷ್ಟರಲ್ಲಿ ನಮ್ಮ ಹಾಗೆ ಬಂದಂಥ ಟೂರಿಸ್ಟ್ ಬಸ್ಸೊಂದಿತ್ತು. ಆ ಬಸ್ಸಿನ ಚಾಲಕ ಹೇಳಿದ 'ಬ್ಯಾಟರಿಯೂ ಶಕ್ತಿ ಕಳಕೊಂಡಿದ್ದರಿಂದ ಇನ್ನು ಒಂದು ಮಾರ್ಗವಿದೆ. ಏನೆಂದರೆ ನಾನು ಕೂಡ ಈಗಲೇ ಹೊರಡುವವನು ಆದ್ದರಿಂದ ನಿಮ್ಮ ವಾಹನವನ್ನು ಬಸ್ಸಿಗೆ ಹಿಂಬದಿಯಿಂದ ಕಟ್ಟಿ ಬಿಡಿ. ಒಂದೆರಡು ಕಿ.ಮೀ. ಮುಂದೆ ಹೋದಾಗ ಸೆಲ್ಫ್ ಹೊಡೆದಾಗ ವಾಹನ ಚಾಲು ಆಗುವ ಸಾಧ್ಯತೆ ಇದೆ. ಪ್ರಯತ್ನಿಸೋಣ' ಎಂದ. ಬೇರೆ ದಾರಿ ಇಲ್ಲದೆ ಒಪ್ಪಿಕೊಂಡೆ. ಆದರೆ ಆ ಬಸ್ಸಿನ ಚಾಲಕ ಇದಿಷ್ಟಕ್ಕೆ 500 ರೂಪಾಯಿ ಕೊಡಬೇಕೆಂದು ಬೇಡಿಕೆ ಇಟ್ಟ. ಆಯಿತು ನಾವು ಒಪ್ಪಿಕೊಂಡು ಆತನ ಬಸ್ಸಿಗೆ ನಮ್ಮ ಟೆಂಪೋ ಟ್ರಾವೆಲ್ಲರ್ ಕಟ್ಟಿಯೂ ಆಯಿತು. ಆತ ಹೇಳಿದಂತೆ ನಿಧಾನವಾಗಿ ಆತನ ಹಿಂದೆ ನಮ್ಮ ವಾಹನವೂ ಹೊರಟಿತು. 


ಇದರ ನಡುವೆ ನನಗೆ ಇನ್ನೊಂದು ಸಮಸ್ಯೆಯೂ ಇತ್ತು. ನಮ್ಮ ವಾಹನದಲ್ಲಿ ಹೈಡ್ರೋಲಿಕ್ ಪವರಿನ ಬ್ರೇಕ್ ಸ್ಟೀಯರಿಂಗಿನ ವ್ಯವಸ್ಥೆ ಇದ್ದುದರಿಂದ ವಾಹನ ಚಾಲು ಆಗದೆ ನಮ್ಮ ಇಚ್ಛೆಗೆ ತಕ್ಕಂತೆ ವಾಹನ ಮುಂದೆ ಓಡಿಸುವುದೂ ಕಷ್ಟವೇ. ಅಂತು ಹೇಗಾದರೂ ಮಾಡಿ ಒಂದುದು ಕಿ.ಮೀ. ಹೋದಾಗ ನಮ್ಮ ವಾಹನ ಚಾಲು ಆಯಿತು. ಬಸ್ಸಿನ ಚಾಲಕನಿಗೆ ಹಣ ಕೊಟ್ಟು ಆತನನ್ನು ಬೀಳಕೊಟ್ಟೆವು. ಮುಂದೆ ನಮ್ಮ ವಾಹನವು ಮಧ್ಯೆ ಮಧ್ಯೆ ಸ್ವಲ್ಪ ಕಿರಿ ಕಿರಿ ಮಾಡುತ್ತಿತ್ತು. ವಾಹನದ ಪಂಪಿನೊಳಗೆ ಗಾಳಿ ನುಗ್ಗಿದ್ದರಿಂದ ಅದು ಪೂರ್ತಿ ಹೊರ ಹೋಗುವಲ್ಲಿವರೆಗೆ ತೊಂದರೆ ಕೊಡುತ್ತಿತ್ತು.


ಅಂತು ಹೇಗಾದರೂ ಬದರಿ ಯಾತ್ರೆಯನ್ನು ಸುಖವಾಗಿಯೇ ಪೂರೈಸಿದೆವು. ಆದರೆ ಅಲ್ಲಿ ಒಂದು ಪಾಠವನ್ನೂ ಕಲಿತೆವು. ಬದರಿಯಂಥ ಹಿಮ ಬೀಳುವ ಪ್ರದೇಶದಲ್ಲಿ ವಾಹನವನ್ನು ನಿಲ್ಲಿಸಿದರೆ ಪ್ರತಿ 2-3 ಗಂಟೆಗೊಂದಾವರ್ತಿ ವಾಹನವನ್ನು ಸ್ಟಾರ್ಟ್ ಮಾಡಿ ಒಂದೈದು ನಿಮಿಷದ ನಂತರ ಬಂದ್ ಮಾಡಿಟ್ಟರೆ ಮಾತ್ರ ಸುಸ್ಥಿತಿಯಲ್ಲಿರುತ್ತದೆ. ಇಲ್ಲದಿದ್ದರೆ ಚಳಿಗೆ ಇಂಧನ ಮಂಜುಗಡ್ಡೆಯಂತಾಗುತ್ತದೆ. ಜತೆಗೇ ಸಮಸ್ಯೆ ಉಂಟಾಗುತ್ತದೆ. ಪ್ರತಿಯೊಂದು ಹಂತದಲ್ಲೂ ಕಲಿಯುವಂಥ ಪಾಠವಿರುತ್ತದೆ. ಕಲಿತ ಪಾಠ ನೆನಪಿನಲ್ಲಿಡಬೇಕಾದ ಬಾಧ್ಯತೆಯೂ ಇರುತ್ತದೆ. ಈ ಜಗತ್ತೇ ಒಂದು ಪಾಠಶಾಲೆ. ಕಲಿಯುವ ಕುತೂಹಲವಿದ್ದರೆ ಹಂತ ಹಂತದಲ್ಲೂ ಸಂದರ್ಭಗಳೆಂಬ ಗುರುತ್ವ ಅಸಂಖ್ಯವಾಗಿರುತ್ತದೆ. ಮುಂದೆ ನೋಡೋಣ.. ನಮಸ್ಕಾರ 

***********

-ಬಾಲಕೃಷ್ಣ ಸಹಸ್ರಬುದ್ಧೆ ಮುಂಡಾಜೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top