|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ರಾಘವೇಂದ್ರ ಯತಿ ಸಾರ್ವಭೌಮರು "ಶುಭಯೋಗ ತರುವ ಯೋಗಿ"

ರಾಘವೇಂದ್ರ ಯತಿ ಸಾರ್ವಭೌಮರು "ಶುಭಯೋಗ ತರುವ ಯೋಗಿ"

ಇಂದು ಮಂತ್ರಾಲಯದ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳ ಪುಣ್ಯದಿನ



ಸತ್ಯ-ಧರ್ಮ ಮಗ್ನರಾಗಿ ಭಜಿಸಿದವರಿಗೆ ಕಲ್ಪವೃಕ್ಷವಾಗಿ ನಮಿಸಿದವರಿಗೆ ಕಾಮಧೇನುವಾಗಿ ಕೋಟ್ಯಂತರ ಭಕ್ತ-ಶಿಷ್ಯ ಸಂದೋಹವನ್ನು ಪೊರೆಯುತ್ತಾರೆ ಎಂಬ ವಿಶ್ವಾಸಕ್ಕೆ ಪಾತ್ರರಾದವರು ಶ್ರೀ ರಾಘವೇಂದ್ರ ಗುರು ಸಾರ್ವಭೌಮರು. ಗುರುರಾಯರೆಂದೊ, ರಾಯರೆಂದೊ ಕರೆಯಲ್ಪಡುವ ಈ ಮಹಾಗುರುವಿನ ಆರಾಧನಾ ಮಹೋತ್ಸವ ನಾಡಿನಾದ್ಯಂತ ಶ್ರದ್ಧಾಭಕ್ತಿಯೊಂದಿಗೆ ಆಚರಿಸಲ್ಪಡುವುದು. ಈ ಪರ್ವ ದಿನಗಳ ಸಂಭ್ರಮ, ಮುಗ್ಧ ಭಕ್ತಿಯ ಹಿನ್ನೆಲೆಯಲ್ಲಿದೆ ಪವಿತ್ರವಾದ ಹಾಗೂ ಗುರುತರವಾದ ಗುರು-ಶಿಷ್ಯ ಅನುಬಂಧ, ಇದು ಅವರ್ಣನೀಯ ಸಂಬಂಧವೊಂದರ ವಿರಾಡ್ ದರ್ಶನ.


ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸ ಕೃಷ್ಣದೇವರಾಯನ ವೈಣಿಕ ವಿದ್ಯಾಗುರು ಕೃಷ್ಣಾಚಾರ್ಯರ ವಂಶಸ್ಥ ತಿಮ್ಮಣ್ಣಾಚಾರ್ಯ ಮತ್ತು ಗೋಪಿಕಾ ದಂಪತಿಗೆ ವೆಂಕಟೇಶ ಜ್ಯೇಷ್ಠ ಪುತ್ರ. ಹುಟ್ಟಿದ್ದು ಕಾವೇರಿ ನದಿಯ ದಡದ ಒಂದು ಗ್ರಾಮ. ಯತಿಯಾಗಿ ವಿಶ್ವಹಿತ ಬಯಸಿ ವಿಶ್ವಧರ್ಮದ ಉದ್ಧಾರಕನಾಗಿ ದುಡಿದು, ಚಲನಶೀಲ ಬದುಕಿಗೆ ನಿಶ್ಚಿತ ಧ್ಯೇಯ ಧೋರಣೆಗಳು ಬೇಕು ಎಂಬ ಘೋಷ ಮೊಳಗಿಸುತ್ತಾ ವರ್ತಮಾನದ ಜೀವನ ಉನ್ನತ ಮೌಲ್ಯಗಳ ಅವಲಂಬಿತವಾಗಿರಬೇಕೆಂದು ಸಾರಿದರು. ಕೊನೆಗೊಮ್ಮೆ ಅಂದರೆ ಕಾಲ ಸನ್ನಿಹಿತವಾದಾಗ ತುಂಗೆಯ ದಡದಲ್ಲಿ ನೆಲೆಯನ್ನು ಕಂಡುಕೊಂಡರು ಶ್ರೀ ರಾಘವೇಂದ್ರ ಮಹಾಸ್ವಾಮಿಗಳವರು.


ಶ್ರೀಮೂಲ ರಾಮದೇವರು ಶ್ರೀ ರಾಘವೇಂದ್ರ ಯತಿ ಸಾರ್ವಭೌಮರ ಪರಂಪರೆಗೆ ಆರಾಧ್ಯ ದೇವರು. ಮರ್ಯಾದಾ ಪುರುಷೋತ್ತಮನಾಗಿ ಮನುಕುಲಕ್ಕೆ ಆದರ್ಶ ವ್ಯಕ್ತಿತ್ವವೊಂದನ್ನು ಪ್ರಕಟಿಸಿದ ಮಹಾನುಭಾವ ರಾಮ, ಶ್ರೀರಾಮನಾದ, ಭಗವಾನ್ ಶ್ರೀರಾಮಚಂದ್ರನೇ ಆದ. ಇಂತಹ ಅಪ್ರತಿಮ ಪ್ರತಿಮೆಯ ಆರಾಧಕರಾದ ರಾಯರು ಮನುಕುಲದ ಉತ್ಕ್ರಾಂತಿಯನ್ನು ಒಂದು ದಿವ್ಯ ಮನಃಸ್ಥಿತಿಯ ವ್ಯಾಖ್ಯಾನ ಮತ್ತು ಮಾನವ ಮನಸ್ಸುಗಳಲ್ಲಿ ಸ್ಥಾಪಿಸುವ ಕಾರ್ಯ ನಿರ್ವಹಿಸಿದರು.ಶ್ರೀ ರಾಮ ಒಂದು ಸಂದೇಶ, ರಾಯರು ಈ ಪ್ರಭೆಯ ಅಥವಾ ಮೌಲ್ಯದ ಪ್ರಚಾರಕ. ಈ ಕಲ್ಪನೆ ಮತ್ತು ಅನುಸಂಧಾನಗಳೇ ನಮ್ಮ ಸಂಸ್ಕೃತಿಯ ಹೆಚ್ಚುಗಾರಿಕೆ, ಗುರುವಿನಿಂದ ಭವರೋಗ ಕಳೆದುಕೊಳ್ಳುವುದು ಸಾಧುವಾದ ವಿಧಾನವೇ ಹೌದಲ್ಲ.


ನಾವು ಯಾವುದರ ಮುಂದೆ ಲಘುವಾಗುತ್ತೇವೆಯೋ ನಮ್ಮ ಮುಂದಿರುವುದು, ಅದು ‘ಗುರು’. ದೊಡ್ಡದು, ಆಶ್ರಯ ಸ್ಥಾನ, ಶಿಸ್ತಿನ ನೆಲೆ, ಜ್ಞಾನ ರಾಶಿ ಎಂಬಿತ್ಯಾದಿ ಅರ್ಥಾನುಸಂಧಾನಗಳಿಂದ ಗುರುವನ್ನು ಸ್ವೀಕರಿಸಿದರೆ ಅಥವಾ ಆವಾಹಿಸಿಕೊಂಡರೆ ಈ ಗುರುವಲ್ಲದೆ ಬೇರೆ ಯಾರು ನಮ್ಮ ಕಷ್ಟಕಾರ್ಪಣ್ಯಗಳನ್ನು ಪರಿಹರಿಸಬಲ್ಲರು? 'ಅನ್ಯಥಾ ಶರಣಂ ನಾಸ್ತಿ' ಎಂಬ ಭಾವದೊಂದಿಗೆ ಗುರುವಿಗೆ ಶರಣು. 


ಯೋಗಿಯಾದರೂ ಶುಭಯೋಗವನ್ನು ಅನುಗ್ರಹಿಸುವ ಶಿಷ್ಯ ವಾತ್ಸಲ್ಯವಿರುವ ಶ್ರೀ ಗುರುರಾಘವೇಂದ್ರ ಸ್ವಾಮಿಗಳು ಭಕ್ತಜನ ಮಂದಾರ, ದೀನ ಜನ ದಯಾಸಾಗರ. ಸತ್ಯಜ್ಞಾನ - ಪರಮಾತ್ಮಾನುಭವ ಸಿದ್ಧಿಗೆ ಗುರುವೇ ಪರಮೋಚ್ಚ ಸಾಧನ. ಗುರುಕೃಪೆಯಿಂದ ಭವದಲ್ಲಿ ಬದುಕಿ ಭವಸಾಗರವನ್ನು ಉತ್ತರಿಸಬಹುದು. ಇದು ಭಾರತೀಯ ಚಿಂತನೆ. ಆದುದರಿಂದಲೇ ನಮ್ಮ ಸಂಸ್ಕೃತಿಯಲ್ಲಿ ‘ಗುರು’ ಸಾಕ್ಷಾತ್ ಪರಬ್ರಹ್ಮ. ತಂದೆ, ಅಮ್ಮ, ಬಂಧು, ಮಿತ್ರ, ನ್ಯಾಯ ನಿಷ್ಠುರನಾಗಿ ‘ವಿದ್ಯೆ’ ಎಂಬ ಅಮೇಯ ಸತ್ಯ ತಿಳಿವಳಿಕೆಯನ್ನು ಬೋಧಿಸುತ್ತಾ ಮಾನವ ಸ್ವರೂಪವನ್ನು ತಿದ್ದಿ ನಿಯಮಿತಗೊಳಿಸುವವ ಗುರು. ಹಾಗಾಗಿ ಆರಂಭವೇ ಶ್ರೀ ಗುರುಭ್ಯೋ ನಮಃ ಎಂದಲ್ಲವೇ?


ಒಡನಾಟ, ಅನುಸರಿಸುವಿಕೆಗಳು ಕಾರಣವಾಗಿ, ಪ್ರೀತಿ ವಿಶ್ವಾಸಗಳೇ ಪೂರಕವಾಗಿ ಗುರು ಪರಮ ಆಪ್ತನಾಗುತ್ತಾನೆ. ಆತ್ಮೀಯತೆ ಗುರುವಿನಿಂದ ಸನ್ಮಾರ್ಗ, ಕಷ್ಟಗಳಿಗೆ ಪರಿಹಾರ, ನಿರಾತಂಕ ಬದುಕಿಗೆ ಸತ್ಪಥ ಮುಂತಾದುವುಗಳನ್ನು ನಿರೀಕ್ಷಿಸುವಂತೆ ಪ್ರೇರೇಪಿಸುತ್ತದೆ. ಬಹುಶಃ ಇದೇ ಗುರು-ಶಿಷ್ಯ ಸಂಬಂಧದ ಅನನ್ಯತೆ.


ನಿಷ್ಕಲ್ಮಶ ಭಕ್ತಿಗೆ ಒಲಿಯುವ ರಾಯರು ಮಂತ್ರಾಲಯದಲ್ಲಿ ವೃಂದಾವನಸ್ಥರಾಗಿಯೇ ಇದ್ದುಕೊಂಡು ಪವಾಡಗಳ ಮೂಲಕ, ಪ್ರತ್ಯಕ್ಷ ಪ್ರಮಾಣಗಳ ಹಾಗೂ ಅನುಭವ ರೂಪದಲ್ಲಿ ಭಕ್ತಕೋಟಿಯನ್ನು ಅನುಗ್ರಹಿಸುತ್ತಾರೆ ಎಂಬುದು ನಂಬಿಕೆ. ಈ ಪ್ರತೀತಿಯನ್ನು ಒಪ್ಪಿದವರು, ಅನುಗ್ರಹೀತರಾದವರ ಸಂಖ್ಯೆ ಅಪಾರ. ಅವರವರ ಭಾವಕ್ಕೆ, ಭಕ್ತಿಗೆ ತೆರನಾಗಿ ಭಗವಂತ. ಅಥವಾ ಭಗವಂತ ರೂಪಿ ಗುರು.


ತತ್ತ್ವ ಜ್ಞಾನಿಯಾಗಿ, ಅಪಾರ ವಾಙ್ಮಯ ನಿರ್ಮಾಪಕರಾಗಿ, ಪವಾಡಗಳನ್ನು ಮೆರೆದು ಅವಧೂತರಾಗಿ ಲೋಕಕ್ಕೆ ಒಳಿತನ್ನು ಬಯಸಿದರು‌.


ನಾಸ್ತಿಕ ಯುಗದಲ್ಲೂ ಆಸ್ತಿಕತೆಯನ್ನು ಪೋಷಿಸಿದರು. ವೈಜ್ಞಾನಿಕ ಪ್ರಗತಿಯಲ್ಲೂ ಆಧ್ಯಾತ್ಮಿಕ ಸಿದ್ಧಿಯ ಮಹತ್ವವನ್ನು ತಿಳಿಸಿದರು. ಭೌತಿಕ ಪ್ರಗತಿ, ವೈಜ್ಞಾನಿಕ ಮುನ್ನೋಟದಲ್ಲಿ ಧರ್ಮದ ಆಸಕ್ತಿ ಕಡಿಮೆಯಾಗದಂತೆ ಬೋಧಿಸಿದರು. ಇವರ ಮಹಿಮೆಗೆ ಸಮಾಜ ಬೆರಗಾಯಿತು. ಅನುಗ್ರಹದಿಂದ ಪಾವನವಾಯಿತು ಎಂಬುದು ಪ್ರತೀತಿ.


ಆಚಾರ್ಯ ಮಧ್ವರ ತಾತ್ವಿಕ ಸಿದ್ಧಾಂತವನ್ನು ರಾಯರು ಮತ್ತೊಮ್ಮೆ ಭಾರತೀಯರ ಮುಂದೆ ಅನಾವರಣಗೊಳಿಸಿದರು. ಐವತ್ತಕ್ಕೂ ಹೆಚ್ಚಿನ ಧಾರ್ಮಿಕ ಗ್ರಂಥಗಳನ್ನು ರಚಿಸಿದರು. ಭಗವದ್ಗೀತೆಯ ಕುರಿತು ಮೂರು, ಉಪನಿಷತ್ತುಗಳ ಬಗ್ಗೆ ಹತ್ತು, ಬ್ರಹ್ಮಸೂತ್ರಗಳ ಮೇಲೆ ಏಳು, ವಿಜಯ ತೀರ್ಥರ ಹದಿನೇಳು ಕೃತಿಗಳಿಗೆ ಟಿಪ್ಪಣಿ, ಋಗ್ವೇದಕ್ಕೆ ಮಂತ್ರಾರ್ಥ ಮಂಜರಿ, ಇತಿಹಾಸಕ್ಕೆ ಸಂಬಂಧಿಸಿದ ಮೂರು ಗ್ರಂಥಗಳು ರಾಯರ ಕೃತಿಗಳು. ಪರಿಮಳ, ಭಾವದೀಪ, ತತ್ತ್ವ ಮಂಜರಿ, ತಂತ್ರ ದೀಪಿಕೆಗಳು ಜನಜನಿತವಾದ ಗ್ರಂಥಗಳು. ತಿಳಿಯಾದ ಶೈಲಿ, ಸರಳ ನಿರೂಪಣೆಯಿಂದ ರಾಘವೇಂದ್ರರ ಕವಿತ್ವ ಲೋಕಮಾನ್ಯ.


ತಂಜಾವೂರಿನಲ್ಲೊಮ್ಮೆ ಬರಗಾಲ ಬಂದಾಗ ಅಲ್ಲಿಗೆ ಧಾವಿಸಿದ ರಾಯರು ಮೊಕ್ಕಾಂ ಹೂಡಿದರು. ಜಪಾನುಷ್ಠಾನ‌ ಪೂಜೆಗಳೊಂದಿಗೆ ನಿತ್ಯ ಸಾವಿರಾರು ಮಂದಿಗೆ ಅನ್ನದಾನ ಮಾಡಿದರು. ಭಗವಂತನನ್ನು ಭಕ್ತಿಯಿಂದಲೂ ಭಾವನಾತ್ಮಕವಾಗಿಯೂ ಸ್ವೀಕರಿಸಬೇಕು. ಬೌದ್ಧಿಕ ಪರಿಪಕ್ವತೆ ಇರಲಿ ಎಂದು ಸಾರಿದರು.ವೈದಿಕ ವಿಚಾರ ಧಾರೆಯನ್ನು ವಿಶ್ವಧರ್ಮದ ವಿಚಾರಧಾರೆಯನ್ನು ವಿಶ್ವಧರ್ಮದ ವಿಶಾಲ ವೇದಿಕೆಯಲ್ಲಿ ನೆಲೆಗೊಳಿಸಿದರು. ಹರಿದಾಸರಿಗೆ ಮಾರ್ಗದರ್ಶಕ ಕೈದೀವಿಗೆಯಾದರು. ಮಂತ್ರಾಲಯದಲ್ಲಿ ಸಜೀವ ವೃಂದಾವನ ಪ್ರವೇಶ ಮಾಡಿದ ಶ್ರೀ ರಾಘವೇಂದ್ರರು ಶ್ರಾವಣ ಕೃಷ್ಣ ದ್ವಿತೀಯದಂದು ಶ್ರೀರಾಮನ ಪಾದಸೇರಿದರು.

[ಆ.13,14,15 : ರಾಘವೇಂದ್ರ ಗುರುಸಾರ್ವಭೌಮರ ಆರಾಧನೋತ್ಸವ]

-ಕೆ.ಎಲ್.ಕುಂಡಂತಾಯ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post