ಒತ್ತಡ ಮುಕ್ತ ಜೀವನಕ್ಕೆ ವಿವೇಕಯುಕ್ತ ಹೂಡಿಕೆ ಅಗತ್ಯ: ಪ್ರೊ. ಮನೋಜ್ ಲೂಯಿಸ್
ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕರ ಸಂಘ (ಮುಕ್ತಾ)ದ ಸಹಯೋಗದೊಂದಿಗೆ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮವನ್ನು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ಆಯೋಜಿಸಿತ್ತು.
ಉದ್ಘಾಟನಾ ಕಾರ್ಯಕ್ರಮದ ಗೌರವ ಅತಿಥಿ ಮುಕ್ತಾದ ಕಾರ್ಯದರ್ಶಿ ಪ್ರೊ. ಮನೋಜ್ ಲೂಯಿಸ್ ಮಾತನಾಡಿ, ಒತ್ತಡಮುಕ್ತ ಜೀವನಕ್ಕಾಗಿ ವಿವೇಕಯುಕ್ತ ಹೂಡಿಕೆ ಅತ್ಯಗತ್ಯ ಎಂದರಲ್ಲದೆ, ಹೂಡಿಕೆ ವೇಳೆ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ವಿವರಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ಹೂಡಿಕೆ ಯಾವುದೇ ಒಂದು ಕ್ಷೇತ್ರಕ್ಕೆ ಸೀಮಿತವಾಗದೆ, ಜಾಗತಿಕ ಅಗತ್ಯತೆಯಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಹೂಡಿಕೆ ತುಂಬಾ ಮುಖ್ಯ ಎಂದರು.
ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕ ಡಾ. ಯತೀಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು. 'ಆರ್ಥಿಕ ಸಾಕ್ಷರತೆ' ಕುರಿತು ಸೆಬಿ ನೋಂದಾಯಿತ ಸಿಎಫ್‌ಪಿ ನವೀನ್ ರೆಗೋ, 'ಹಣದ ಸಮಯದ ಮೌಲ್ಯ' ಕುರಿತು ಫ್ರಾಂಕ್ಲಿನ್ ಟೆಂಪಲ್ಟನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಲಿಯೋ ಅಮಲ್ ಎ ಹಾಗೂ 'ವೈಯಕ್ತಿಕ ಹೂಡಿಕೆ ಯೋಜನೆʼ ಕುರಿತು ವೈಯಕ್ತಿಕ ಹೂಡಿಕೆ ಸಲಹೆಗಾರ ಯವೋನಿಲ್ ಡಿ ಸೋಜಾ ಉಪನ್ಯಾಸ ನೀಡಿದರು.
ಉಪನ್ಯಾಸಕಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರೆ, ಸಿ ಲಹರಿ ಧನ್ಯವಾದ ಸಮರ್ಪಿಸಿದರು. ಸುಮಾರು 177 ವಿದ್ಯಾರ್ಥಿಗಳು ಹಾಗೂ 10 ಮಂದಿ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ