ಮಂಗಳೂರು: ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ 6ನೇ ವಾರ್ಷಿಕೋತ್ಸವ ಸಮಾರಂಭವು ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶನಿವಾರ ನಡೆಯಿತು.
ಮುಖ್ಯ ಅತಿಥಿಯಾಗಿ ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ವಿಶ್ರಾಂತ ಸಹಾಯಕ ಪ್ರಾಧ್ಯಾಪಕ ಡಾ. ಜಿ. ಪಿ. ಪಟ್ನಾಕರ್ ಆಗಮಿಸಿದ್ದರು. ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಮನಸ್ಸನ್ನು ರೂಪಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಕಲಿಕೆಯು ವೇಗವರ್ಧಕವಿದ್ದಂತೆ. ಇದು ವ್ಯಕ್ತಿಯೊಬ್ಬನನ್ನು ಎಲ್ಲಾ ಕ್ಷೇತ್ರಗಳಲ್ಲೂ ತಲೆಯೆತ್ತಿ ನಿಲ್ಲುವಂತೆ ಮಾಡುತ್ತದೆ ಎಂದರು.
ಮತ್ತೊರ್ವ ಅತಿಥಿ, ದ.ಕ., ಉಡುಪಿ, ಮತ್ತು ಕೊಡಗು ಜಿಲ್ಲೆಗಳ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಡಾ. ಜೆನಿಫರ್ ಲೋಲಿಟ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯದ ನಿರ್ಮಾಪಕರು. ಆದ್ದರಿಂದ ಶಿಕ್ಷಕರು ನಮ್ಮ ಜೀವನದಲ್ಲಿ ಸಾಮರಸ್ಯ ಮತ್ತು ಸ್ನೇಹ ಕಾಪಾಡಿಕೊಳ್ಳಬೇಕು, ಎಂದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ, ಯಶಸ್ಸಿಗೆ ಕಾರಣವಾಗುವ ಸಾಮರ್ಥ್ಯ, ಇಚ್ಛೆ ಮತ್ತು ಅವುಗಳನ್ನು ನಿರ್ವಹಿಸಲು ವಿದ್ಯಾರ್ಥಿಗಳಿಗೆ ಅವಕಾಶವಿರಬೇಕು ಎಂದರು.
ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಸ್ವಾಗತಿಸಿ, ಇತಿಹಾಸ ಉಪನ್ಯಾಸಕ ಡಾ. ಮೋಹನ ಕೆ. ಎನ್. ನಿರೂಪಿಸಿದರು. ವಾಣಿಜ್ಯ ಉಪನ್ಯಾಸಕ ಸಂತೋಷ್ ಅತಿಥಿಗಳನ್ನು ಪರಿಚಯಿಸಿದರು. ಸ್ನಾತಕೋತ್ತರ ತುಳು ವಿಭಾಗ ಸಂಯೋಜಕ ಡಾ. ಮಾಧವ ಎಂ.ಕೆ. ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ನಂಜುಂಡ ರಾಜ್ ವಂದಿಸಿದರು.
ವಾಣಿಜ್ಯ ಉಪನ್ಯಾಸಕ ರಾಘವೇಂದ್ರ, ಇತಿಹಾಸ ಉಪನ್ಯಾಸಕಿ ಮಧುಶ್ರೀ ಜೆ. ಶ್ರೀಯಾನ್, ದೈಹಿಕ ಶಿಕ್ಷಣ ನಿರ್ದೇಶಕ ಅಶ್ವಥ್ ಸಾಲಿಯಾನ್, ಪತ್ರಿಕೋದ್ಯಮ ಉಪನ್ಯಾಸಕಿ ಅಶ್ವಿನಿ ಅನುಶ್ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.
ಈ ಸಂದರ್ಭ ಸ್ನಾತಕೋತ್ತರ ಎಂಬಿಎ(ಐ.ಬಿ) ಮತ್ತು ಎಂ.ಕಾಂ ವಿಭಾಗದ ಸಂಯೋಜಕರಾದ ಡಾ. ಜಗದೀಶ್ ಬಿ., ಸ್ನಾತಕೋತ್ತರ ಕೊಂಕಣಿ ವಿಭಾಗ ಸಂಯೋಜಕರಾದ ಡಾ. ದೇವದಾಸ್ ಪೈ, ಜಿಎಸ್‌ಟಿ ವಿಭಾಗ ಸಂಯೋಜಕ ಡಾ. ಯತೀಶ್ ಕುಮಾರ್, ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ