ತತ್ತ್ವ ಮತ್ತು ಮೌಲ್ಯಾದರ್ಶಗಳ ಆಧಾರದ ಮೇಲೆ ವಾಣಿಜ್ಯ ಕ್ಷೇತ್ರ ನಿರ್ಮಾಣಗೊಳ್ಳಬೇಕಿದೆ: ಮಾರೂರು ಶಶಿಧರ್ ಪೈ
ಪುತ್ತೂರು ಆ. 12: ಭಾರತ ಹೊಸ ಉದ್ಯೋಗ ಪರ್ವಕ್ಕೆ ಸಾಕ್ಷಿಯಾಗುತ್ತಿರುವ ಹೊತ್ತಿನಲ್ಲಿ ಇಲ್ಲಿನ ಯುವಕರು ಉದ್ಯೋಗಿಗಳಾಗುವ ಬದಲು ಉದ್ಯೋಗ ನೀಡುವವರಾಗಬೇಕಿದೆ. ಡಿಜಿಟಲ್ ಇಂಡಿಯಾದ ಪ್ರೇರಣೆಯಿಂದಾಗಿ ಗ್ರಾಮೀಣ ಭಾರತವೂ ಮುಂಚೂಣಿಗೆ ಬಂದಿದ್ದು, ಇಲ್ಲಿನ ಯುವ ಮನಸ್ಸುಗಳು ಬದಲಾವಣೆಗೆ ಒಗ್ಗಿಕೊಳ್ಳುತ್ತಿದ್ದಾರೆ. ಈ ಸಂದರ್ಭ ರಾಷ್ಟ್ರ ಧರ್ಮದ ಆಧಾರದ ಮೇಲೆ ಉದ್ಯೋಗವನ್ನು ಸೃಷ್ಟಿಸುವ ಸದಾವಕಾಶ ನಮಗಿದೆ. ಪ್ರಾಯೋಗಿಕವಾಗಿ ರಾಷ್ಟ್ರದ ಆರ್ಥಿಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬೇಕಿದೆ ಎಂದು ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯ ಅಧ್ಯಕ್ಷ ಮಾರೂರು ಶಶಿಧರ್ ಪೈ ಹೇಳಿದರು.
ಅವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ ವ್ಯೋಮ್– 2022 ಒಂದು ದಿನದ ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಸ್ಪರ್ಧೆಯನ್ನು ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಬದಲಾವಣೆಯ ಪರ್ವಕ್ಕೆ ಇಡೀ ರಾಷ್ಟ್ರ ತೆರೆದುಕೊಳ್ಳುತ್ತಿದೆ. ಪ್ರತೀ ಕ್ಷೇತ್ರದಂತೆ ವಾಣಿಜ್ಯ ಕ್ಷೇತ್ರವನ್ನೂ ತತ್ತ್ವ ಮತ್ತು ಮೌಲ್ಯಾಧಾರಿತವಾಗಿ ವೃದ್ಧಿಸಬೇಕಿದೆ. ಉದ್ಯೋಗ ಸೃಷ್ಟಿಸುವವರು ಗ್ರಾಹಕರ ಸಂತೃಪ್ತಿಯನ್ನು ಮತ್ತು ಉದ್ಯೋಗಿಗಳು ತನ್ನ ಸಂಸ್ಥೆಗೆ ಪ್ರಥಮ ಆದ್ಯತೆ ನೀಡಿ ಕಾರ್ಯನಿರ್ವಹಿಸಬೇಕು. ನಿರೀಕ್ಷೆಯನ್ನು ಮೀರಿ ಕರ್ತವ್ಯ ನಿರ್ವಹಿಸಲು ಸಮರ್ಥರಾಗುವ ಜೊತೆಗೆ ಪ್ರೇರೇಪಿಸು, ಸಬಲೀಕರಣಗೊಳಿಸು, ಸಂಭಾವನೆ ಒದಗಿಸು ಎಂಬ ಕಾರ್ಯತಂತ್ರವನ್ನು ಎಲ್ಲಾ ಕ್ಷೇತ್ರವೂ ಮಾಡಬೇಕು. ಯಶಸ್ಸು ಎನ್ನುವುದು ಗಮ್ಯವಾಗಿರದೆ, ನಿರಂತರ ಪಯಣವೆನ್ನುವುದನ್ನು ಮನಗಂಡು ಮುನ್ನುಗ್ಗಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಶ್ರೀಪತಿ ಕಲ್ಲೂರಾಯ ಮಾತನಾಡಿ ಭಾರತ ಸರ್ಕಾರ ವಿವಿಧ ಯೋಜನೆಗಳ ಮೂಲಕ ಭಾರತವನ್ನು ವಿಶಿಷ್ಟ ಸ್ಥಾನದಲ್ಲಿರಿಸುವ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ವಿಶ್ವದ ಐದು ಬೃಹತ್ ಆರ್ಥಿಕತೆಯ ಸಾಲಲ್ಲಿರುವ ಭಾರತವನ್ನು 2024ರ ಒಳಗಾಗಿ ಐದು ಟ್ರಿಲಿಯನ್ ಡಾಲರ್ ರಾಷ್ಟ್ರವನ್ನಾಗಿಸುವ ಪ್ರಯತ್ನವಾಗುತ್ತಿದೆ. ಈ ಸಂದರ್ಭದಲ್ಲಿ ವಾಣಿಜ್ಯ ವಿದ್ಯಾರ್ಥಿಗಳಾಗಿ ಕೌಶಲ್ಯವನ್ನು ಗಳಿಸುವ ಮುಖೇನ ವೈಯಕ್ತಿಕ ಅಭಿವೃದ್ಧಿಯಲ್ಲಿ ಮತ್ತು ರಾಷ್ಟ್ರದ ಏಳಿಗೆಗೆ ಜೊತೆಯಾಗಬೇಕಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣು ಗಣಪತಿ ಭಟ್ ನಿರಂತರ ಪ್ರಯತ್ನದಿಂದಾಗಿ ಮಹತ್ತರದನ್ನು ಸಾಧಿಸಬಹುದು. ಸರ್ವತೋಮುಖ ಬೆಳವಣಿಗೆಯತ್ತ ಯುವಕರ ಚಿತ್ತವಿರಲಿ ಎಂದು ಶುಭಹಾರೈಸಿದರು. ಇದೇ ಸಂದರ್ಭದಲ್ಲಿ ಸ್ನಾತಕೋತ್ತರ ವಾಣಿಜ್ಯ ವಿಭಾಗದ ವಿವಿಧ ಚಟುವಟಿಕೆಗಳ ಕುರಿತಾದ ಕೈಪಿಡಿ 'ಪ್ರಬುದ್ಧ' ಬಿಡುಗಡೆಗೊಂಡಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಾದ ರೂಪಾ ಮತ್ತು ಅನುಶ್ರೀ ಪ್ರಾರ್ಥಿಸಿ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕಿ ಡಾ.ವಿಜಯ ಸರಸ್ವತಿ ಸ್ವಾಗತಿಸಿ, ಪ್ರಸ್ಥಾವನೆಗೈದರು. ಸ್ಪರ್ಧೆಯ ವಿದ್ಯಾರ್ಥಿ ಸಂಯೋಜಕಿ ರೂಪಾ ವಂದಿಸಿದರು. ವಿದ್ಯಾರ್ಥಿ ಸಂಯೋಜಕ ಹರ್ಷ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಥಮ ಎಂ.ಕಾಂ ವಿದ್ಯಾರ್ಥಿನಿ ಅಕ್ಷಿತಾ ಕಾರ್ಯಕ್ರಮ ನಿರೂಪಿಸಿದರು.