ಧರ್ಮಸ್ಥಳದಲ್ಲಿ ವ್ಯಸನ ಮುಕ್ತರಾದ ನವಜೀವನ ಸದಸ್ಯರ ಶತದಿನೋತ್ಸವ ಆಚರಣೆ

Upayuktha
0

ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣವಾಗಬೇಕು



ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಬಸವಣ್ಣೆಪ್ಪ ತುಬಾಕಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

• ಅಧ್ಯಕ್ಷತೆ ವಹಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿದರು.

• ಹರ್ ಘರ್ ತಿರಂಗಾ: ಇದೇ 13 ರಿಂದ 15ರ ವರೆಗೆ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ ಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು.


ಉಜಿರೆ: ಸ್ವಯಂ ಪ್ರೇರಣೆಯಿಂದ, ಪ್ರೀತಿ-ವಿಶ್ವಾಸ, ಆತ್ಮೀಯತೆಯ ಹಿತವಚನ, ಆಪ್ತಸಲಹೆಯೊಂದಿಗೆ ಮನಪರಿವರ್ತನೆ ಮೂಲಕ ಮದ್ಯ ವ್ಯಸನಿಗಳು ದುಶ್ಚಟ ಮುಕ್ತರಾಗಬಹುದು. ದೃಢ ಸಂಕಲ್ಪದೊಂದಿಗೆ, ಮುಂದೆ ಯಾವುದೇ ಆಮಿಷಕ್ಕೆ ಬಲಿಯಾಗದೆ ವ್ಯಸನ ಮುಕ್ತರು ಆರೋಗ್ಯಪೂರ್ಣ ಜೀವನ ನಡೆಸಬೇಕು. ತನ್ಮೂಲ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಕನಸು ಕಂಡ ಮದ್ಯವ್ಯಸನ ಮುಕ್ತ ಸಮಾಜ ನಿರ್ಮಾಣಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಶುಕ್ರವಾರ ಧರ್ಮಸ್ಥಳದಲ್ಲಿ ಅಮೃತವರ್ಷಿಣಿ ಸಭಾಭವನದಲ್ಲಿ ರಾಜ್ಯದೆಲ್ಲೆಡೆ 34 ಮದ್ಯವರ್ಜನ ಶಿಬಿರಗಳ ಮೂಲಕ  ವ್ಯಸನಮುಕ್ತರಾದ 1270 ಮಂದಿ ನವಜೀವನ ಸದಸ್ಯರ ಶತದಿನೋತ್ಸವದ ಸಂಭ್ರಮ ಆಚರಣೆಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವ್ಯಸನಮುಕ್ತರಾಗಿ ತಪಸ್ಸಿನಂತೆ ನೂರು ದಿನಗಳನ್ನು ಸುಖ-ಶಾಂತಿ, ನೆಮ್ಮದಿಯಿಂದ ಕಳೆದ ನವಜೀವನ ಸಮಿತಿ ಸದಸ್ಯರನ್ನು ಅಭಿನಂದಿಸಿದ ಹೆಗ್ಗಡೆಯವರು ಇಂದು ವ್ಯಸನ ಮುಕ್ತರು ಪವಿತ್ರಾತ್ಮರಾಗಿ ದೇವರ ದರ್ಶನ ಮತ್ತು ಆಶೀರ್ವಾದ, ಅನುಗ್ರಹ ಪಡೆಯಲು ಅರ್ಹರಾಗಿದ್ದೀರಿ. ಮುಂದೆ ಪ್ರತಿಯೊಬ್ಬರ ಮನೆಯಲ್ಲಿಯೂ, ಮನದಲ್ಲಿಯೂ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.


ಮಾಣಿಲದ ಮೋಹನದಾಸ ಸ್ವಾಮೀಜಿ ಜನಜಾಗೃತಿ ವೇದಿಕೆಯ ವಾರ್ಷಿಕ ವರದಿಯನ್ನು ಬಿಡುಗಡೆಗೊಳಿಸಿದರು.



ಸಮಾರಂಭವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಮಲ್ಲಿಕಾರ್ಜುನ ಬಸವಣ್ಣೆಪ್ಪ ತುಬಾಕಿ ಮಾತನಾಡಿ, ಧರ್ಮದ ಹಿನ್ನೆಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಂತಹ ಮಹಾಪುರುಷರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಮನಪರಿವರ್ತನೆ ಮೂಲಕ ವ್ಯಸನ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಜನಜಾಗೃತಿ ವೇದಿಕೆಯ ಸೇವೆ, ಸಾಧನೆಯನ್ನು ಶ್ಲಾಘಿಸಿದ ಅವರು ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಪೂರ್ಣ ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.



ವ್ಯಸನ ಮುಕ್ತರ ಕುಟುಂಬದ ಪರವಾಗಿ ಕೊಪ್ಪಳ ತಾಲ್ಲೂಕಿನ ಭಾಗ್ಯಲಕ್ಷ್ಮೀ ಮತ್ತು ರಾಮದುರ್ಗ ತಾಲ್ಲೂಕಿನ ಮಂಜುಳಾ ಶಿವಾನಂದ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.



ಮದ್ಯವ್ಯಸನಿಗಳನ್ನು ಮದ್ಯವರ್ಜನ ಶಿಬಿರಕ್ಕೆ ಸೇರಿಸಿ  ವ್ಯಸನಮುಕ್ತರಾಗಿ ಮಾಡಿದ ಎಂಟು ಮಂದಿಯನ್ನು “ಜಾಗೃತಿ ಅಣ್ಣ” ಮತ್ತು “ಜಾಗೃತಿ ಮಿತ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.



ಶಾಸನ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಶುಭಾಶಂಸನೆ ಮಾಡಿದರು.


ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ಚಾಲನೆ: ಇಂದಿನಿಂದ (ಇದೇ 13 ರಿಂದ) 15ರ  ವರೆಗೆ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ

ಪ್ರತಿ ಮನೆಯಲ್ಲಿ  ತ್ರಿವರ್ಣ ಧ್ವಜ ಹಾರಿಸುವ ಕಾರ್ಯಕ್ರಮ “ಹರ್ ಘರ್ ತಿರಂಗಾ” ಕಾರ್ಯಕ್ರಮಕ್ಕೆ ಡಿ. ವೀರೇಂದ್ರ ಹೆಗ್ಗಡೆಯವರು ಚಾಲನೆ ನೀಡಿದರು. ಎಲ್ಲರೂ ರಾಷ್ಟ್ರಧ್ವಜವನ್ನು ಗೌರವಿಸಿ, ದೇಶಪ್ರೇಮ ಮತ್ತು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.


ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್. ಮಂಜುನಾಥ್ ಮಾತನಾಡಿ, ರಾಜ್ಯದೆಲ್ಲೆಡೆ ಧರ್ಮಸ್ಥಳದ 45,000 ಮಂದಿ ಕಾರ್ಯಕರ್ತರು ಶುಕ್ರವಾರ  ಎಲ್ಲರಿಗೂ ರಾಷ್ಟ್ರಧ್ವಜ ವಿತರಿಸುವರು. ಬಾವುಟದ ಅಗೌರವ, ಅವಮಾನ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.


ಮಂಗಳೂರಿನ ಡಾ. ಶ್ರೀನಿವಾಸ ಭಟ್ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು.


ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿದೇರ್ಶಕ ವಿವೇಕ್ ವೀ ಪಾೈಸ್ ಸ್ವಾಗತಿಸಿದರು. ವೇದಿಕೆಯ ರಾಜ್ಯಾಧ್ಯಕ್ಷ ವಿ. ರಾಮಸ್ವಾಮಿ ಧನ್ಯವಾದವಿತ್ತರು. ಯೋಜನಾಧಿಕಾರಿಗಳಾದ ನಾಗೇಶ್ ಮತ್ತು ಗಣೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top