ರಕ್ಷೆ ಭಾರತೀಯ ಸಂಸ್ಕೃತಿಯ ಪ್ರತೀಕವಾದದ್ದು : ಶ್ರೀಕೃಷ್ಣ ಉಪಾಧ್ಯಾಯ
ಪುತ್ತೂರು: ರಕ್ಷಾ ಬಂಧನ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅದು ಸಂಬಂಧಗಳ ಪ್ರತೀಕ. ತಂಗಿ ಅಣ್ಣನಿಗೆ ಪ್ರೀತಿಯಿಂದ ರಕ್ಷೆ ಕಟ್ಟಿದಾಗ, ಅಣ್ಣ ತಂಗಿಯನ್ನು ಎಂತಹ ಸಂದರ್ಭದಲ್ಲೂ ರಕ್ಷಣೆ ಮಾಡುವ ಜವಾಬ್ದಾರಿಯನ್ನು ರಕ್ಷೆ ಬೆಳೆಸುತ್ತದೆ. ಹಾಗೆಯೇ ತಾಯಿ ಭಾರತಾಂಬೆಯನ್ನೂ ರಕ್ಷಿಸುವ ಕರ್ತವ್ಯವನ್ನು ರಕ್ಷೆ ನೀಡುತ್ತದೆ. ಭಾವ ಶ್ರೀಮಂತಿಕೆಯಿಂದ ರಕ್ಷಾಬಂಧನ ಹಬ್ಬವನ್ನು ಆಚರಿಸಬೇಕು ಎಂದು ಪುತ್ತೂರಿನ ವಾಗ್ಮಿ ಶ್ರೀಕೃಷ್ಣ ಉಪಾಧ್ಯಾಯ ಹೇಳಿದರು.
ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ಶುಕ್ರವಾರದಂದು ರಕ್ಷಾಬಂಧನ ಆಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಭಾರತ ಸಂಸ್ಕೃತಿ ಸಂಸ್ಕಾರಗಳಿಂದ ಸಮ್ಮಿಳಿತವಾದ ರಾಷ್ಟ್ರ. ವಿವೇಕಾನಂದರು ಚಿಕಾಗೋ ಸಮ್ಮೇಳನದಲ್ಲಿ ಭಾರತದ ಸಂಸ್ಕೃತಿಯನ್ನು ಪ್ರತಿನಿಧಿಸಿ, ಜಗತ್ತಿಗೆ ಭಾರತೀಯತೆಯನ್ನು ಪ್ರತಿಬಿಂಬಿಸಿದರು. ವಸುದೈವ ಕುಟುಂಬಕಮ್ ಎಂಬ ಮಾತನ್ನು ಸಾಬೀತುಪಡಿಸಿದರು. ಯಾವುದೇ ಹುದ್ದೆಯಲ್ಲಿದ್ದರೂ ದೇಶದ ಕೀರ್ತಿಯನ್ನು ಧರ್ಮದ ಹಾದಿಯ ಮೂಲಕ ಪಸರಿಸುವ ಕೆಲಸವನ್ನು ಇಂದಿನ ಯುವ ಪೀಳಿಗೆ ಮಾಡಬೇಕಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ ಮಾತನಾಡಿ, ಸನಾತನ ಸಂಸ್ಕಾರಗಳನ್ನು ಗೌರವಿಸುವುದನ್ನು ರೂಢಿಸಬೇಕು. ಸಂಪ್ರದಾಯ ಸಂಸ್ಕೃತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳದಿದ್ದರೆ ಜೀವನ ಪರಿಪೂರ್ಣವಾಗಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ರಕ್ಷಾ ಬಂಧನ ಹಬ್ಬವು ನಮ್ಮೊಳಗೆ ಹುದುಗಿರುವ ಭಾರತೀಯತೆಯನ್ನು ಬಡಿದೆಬ್ಬಿಸುತ್ತದೆ ಎಂದರು.
ವಿವಿಧತೆಯನ್ನು ಹೊಂದಿದ ಭಾರತದಲ್ಲಿ ರಕ್ಷೆ ಏಕತೆಯ ಸಂಕೇತ. ರಕ್ಷೆಯ ಬಣ್ಣ ಕೇಸರಿಯು ಶೌರ್ಯದ ಸಂಕೇತ. ಅಣ್ಣಂದಿರು ತಂಗಿಯಂದಿರ ರಕ್ಷಣೆಗೆ ಶೌರ್ಯದಿಂದ ಮುನ್ನುಗ್ಗಬೇಕು. ತ್ಯಾಗವನ್ನು ತೋರಿಸಬೇಕು. ರಕ್ಷೆಯು ದುಶ್ಚಟಗಳಿಂದ ಕೂಡಾ ಎಚ್ಚರಿಸುತ್ತದೆ ಎಂದರು. ಕಾರ್ಯಕ್ರಮದಲ್ಲಿ ಕಾಲೇಜಿನ ಐಕ್ಯೂಎಸಿ ಘಟಕದ ಸಂಯೋಜಕ ಹಾಗೂ ಮನಃಶಾಸ್ತ್ರ ವಿಭಾಗ ಮುಖ್ಯಸ್ಥ ಚಂದ್ರಕಾಂತ ಗೋರೆ ಉಪಸ್ಥಿತರಿದ್ದರು.
ಕಾಲೇಜಿನ ವಿದ್ಯಾರ್ಥಿನಿಯರಾದ ಮಹಿಮಾ, ಅಂಕಿತಾ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಸ್ವಾಗತಿಸಿ, ಕಾಲೇಜಿನ ತತ್ತ್ವಶಾಸ್ತ್ರ ವಿಭಾಗ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ವಂದಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಗಿರೀಶ್ ಭಟ್ ಇಳಂತಿಲ ಕಾರ್ಯಕ್ರಮ ನಿರೂಪಿಸಿದರು.