ಭಾರತದ ಪರಂಪರೆ ಅತ್ಯಂತ ಉತ್ಕೃಷ್ಟವಾದದ್ದು : ಡಾ.ಶ್ರೀಧರ ಎಚ್.ಜಿ
ಪುತ್ತೂರು: ಭಾರತದ ಪರಂಪರೆ ಅತ್ಯಂತ ಉತ್ಕೃಷ್ಟವಾದದ್ದು. ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸುವ ಮನೋಭಾವ ಹೊಂದಿದ್ದ ಮಹನೀಯರು ನಮ್ಮ ನಡುವೆ ಆಗಿ ಹೋಗಿದ್ದಾರೆ. ಸ್ವಾತಂತ್ರ‍್ಯದ ಅಮೃತ ಮಹೋತ್ಸವಕ್ಕೆ ದೇಶಕ್ಕೆ ದೇಶವೇ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಸ್ವಾತಂತ್ರ‍್ಯ ಗಳಿಸಲು ನಮ್ಮ ಹಿಂದಿನವರು ಪಟ್ಟ ಶ್ರಮ ಏನೆಂಬುದನ್ನು ಅರ್ಥ ಮಾಡಿಕೊಳ್ಳುವ ಕಾರ್ಯ ನಡೆಯಬೇಕು ಎಂದು ಪುತ್ತೂರಿನ ವಿವೇಕಾನಂದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ ಎಚ್.ಜಿ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಪಾರಂಪರಿಕ ದಿನಾಚರಣೆ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದೆ ನಮ್ಮಕಣ್ಣ ಮುಂದೆ ಅನೇಕ ಮಾದರಿ ವ್ಯಕ್ತಿಗಳಿರುತ್ತಿದ್ದರು. ಆದರೆ ಈವತ್ತಿಗೂ ಅಂದಿನ ಮಹನೀಯರಷ್ಟೇ ಮಾದರಿಗಳಾಗಿ ಉಳಿದಿದ್ದಾರೆ. ಹೊಸ ವ್ಯಕ್ತಿಗಳು ಆದರ್ಶ ಎನಿಸದಿರುವುದು ಆತಂಕಕಾರಿ ವಿಚಾರ. ನಾವು ಸ್ವಾತಂತ್ರ‍್ಯ ಗಳಿಸಿ ವರ್ಷಗಳಾಗುತ್ತಾ ಬಂದಂತೆ ನೈತಿಕವಾಗಿ ಅಧಃಪತನಕ್ಕಿಳಿಯುತ್ತಿದ್ದೇವೆ. ಈ ನೆಲೆಯಲ್ಲಿ ನಾವು ಗಂಭೀರವಾಗಿ ಆಲೋಚಿಸಬೇಕಿದೆ. ನನ್ನಂತೆ ನೀನಾಗು ಎಂದು ಸಲಹೆ ಕೊಡುವ ರೀತಿಯಲ್ಲಿ ನಾವು ಬದುಕಿ ತೋರಿಸಬೇಕು ಎಂದು ಕರೆ ನೀಡಿದರು.
ಪಾರಂಪರಿಕ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ನಮಗಿಂದು ಪಾಶ್ಚಿಮಾತ್ಯ ಚಿಂತನೆ, ಆಚರಣೆಗಳು ಆದರ್ಶವೆನಿಸುತ್ತಿರುವುದು ದುರಂತ. ಒಂದೆಡೆ ವಿದೇಶೀಯರು ನಮ್ಮ ಸಂಸ್ಕೃತಿ ಸಂಸ್ಕಾರಗಳೆಡೆಗೆ ಆಕರ್ಷಿತರಾಗುತ್ತಿದ್ದರೆ ನಮ್ಮವರೇ ದೂರ ಸರಿಯುತ್ತಿದ್ದಾರೆ. ನಮ್ಮ ದೇಶದ ಔನ್ನತ್ಯವನ್ನು ಅರಿಯದೆ ನಮ್ಮತನದ ಬಗೆಗೆ ತಾತ್ಸಾರ ಧೋರಣೆ ಹೊಂದಿರುವ ವ್ಯಕ್ತಿಗಳೇ ದೇಶಕ್ಕಂಟಿದ ಶಾಪ ಎಂದರು.
ನಮ್ಮ ಉಡುಗೆ ತೊಡುಗೆಗಳು ವ್ಯಕ್ತಿತ್ವದ ಪ್ರತಿಬಿಂಬ. ಇಂದು ಸಮಾಜದಲ್ಲಿ ನಡೆಯುವ ವಿಕೃತಿಗಳಿಗೆ ಉಡುಗೆಗಳೂ ಕಾರಣ ಎಂಬುದನ್ನು ಮರೆಯಬಾರದು. ಹುಡುಗರು ಹಾದಿ ತಪ್ಪದಂತೆ ನೋಡಿಕೊಳ್ಳಬೇಕಾದದ್ದು ಎಷ್ಟು ಮುಖ್ಯವೋ ಮನಸ್ಸಲ್ಲಿ ವಿಕೃತ ಭಾವನೆ ಮೂಡುವಂತಹ ಉಡುಗೆಗಳನ್ನು ಹುಡುಗಿಯರು ತೊಡದಂತೆ ಮಾರ್ಗದರ್ಶನ ಮಾಡುವುದೂ ಅಷ್ಟೇ ಮಖ್ಯ. ಸ್ವಾತಂತ್ರ‍್ಯ, ಆಧುನಿಕತೆ ಮೊದಲಾದ ಶಬ್ದಗಳನ್ನು ವಿವಿಧ ನೆಲೆಗಳಲ್ಲಿ ಬಳಸಬಹುದಾದರೂ ಸಮಸ್ಯೆ ಪರಿಹಾರಕ್ಕೆ ಅವು ಉಪಯೋಗ ಆಗುವುದಿಲ್ಲ. ಸಂತ್ರಸ್ತರಿಗೆ ಹಾಗೂ ಅವರ ಹೆತ್ತವರಿಗಷ್ಟೇ ನೋವೇನೆಂಬುದು ತಿಳಿದಿರುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ಮಾತನಾಡಿ ನಾವು ನಮ್ಮತನದ ಹರಿಕಾರರಾಗಬೇಕು. ಒಳ್ಳೆಯ ವಿಚಾರಗಳನ್ನು ತಿಳಿದುಕೊಳ್ಳುವ ಹಾಗೂ ಅದಕ್ಕಾಗಿ ಹಂಬಲಿಸುವ ಮನಃಸ್ಥಿತಿ ಬೆಳೆಸಿಕೊಳ್ಳಬೇಕು. ನಮ್ಮ ದೇಸೀಯ ಪರಂಪರೆಯನ್ನು ಮುಂದುವರೆಸುವ ಹೊಣೆ ನಮ್ಮ ಮೇಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಗಣೇಶ ಪ್ರಸಾದ್ ಎ, ಕಾಲೇಜಿನ ಪ್ರಾಚಾರ್ಯ ರಾಕೇಶ ಕುಮಾರ್ ಕಮ್ಮಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಲೇಜು ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಲಾದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಸಾಯಿಶ್ವೇತಾ ಸ್ವಾಗತಿಸಿ, ಕಾರ್ಯದರ್ಶಿ ಅನಘಾ ವಂದಿಸಿದರು. ತತ್ತ್ವಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ವಾನ್ ತೇಜಶಂಕರ ಸೋಮಯಾಜಿ ಕಾರ್ಯಕ್ರಮ ನಿರ್ವಹಿಸಿದರು.