ಆಳ್ವಾಸ್ ಕಾಲೇಜು: 'ನೋವೆಲ್ ಟ್ರೆಂಡ್ಸ್ ಇನ್ ಸ್ಪೋರ್ಟ್ಸ್ ನ್ಯೂಟ್ರಿಷನ್' ಕುರಿತ ವಿಚಾರ ಸಂಕಿರಣ

Upayuktha
0

ಸ್ಪೋರ್ಟ್ಸ್ ನ್ಯೂಟ್ರಿಷನ್‌ನ ಅಗತ್ಯತೆಗಳಿಗೆ ಅನುಸಾರ ಆಹಾರ ಕ್ರಮವನ್ನು ಬೆಳೆಸಿಕೊಳ್ಳಿ: ಪ್ರೊ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ


ಮೂಡುಬಿದಿರೆ: ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಹಕಾರಿ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.


ವಿದ್ಯಾಗಿರಿಯ ವಿಎಸ್ ಆಚಾರ್ಯ ಸಭಾಭವನದಲ್ಲಿ ಆಳ್ವಾಸ್ ಕಾಲೇಜಿನ ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷನ್ (ಸ್ನಾತಕೋತ್ತರ ವಿಭಾಗ) ಹಾಗೂ ಫುಡ್ ನ್ಯೂಟ್ರಿಷನ್ ಆ್ಯಂಡ್ ಡಯಟಿಟಿಕ್ಸ್ (ಪದವಿ ವಿಭಾಗ) ಆಯೋಜಿಸಿದ `ನೋವೆಲ್ ಟ್ರೆಂಡ್ಸ್ ಇನ್ ಸ್ಪೋರ್ಟ್ಸ್ ನ್ಯೂಟ್ರಿಷನ್' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡಾ ವಿದ್ಯಾರ್ಥಿಗಳಿಗೆ ಆರೋಗ್ಯ, ನೈರ್ಮಲ್ಯತೆ ಹಾಗೂ ಸಧೃಢತೆ ಬಹು ಮುಖ್ಯವಾಗಿದ್ದು, ಪ್ರಸ್ತುತ ಸ್ಪೋರ್ಟ್ಸ್ ನ್ಯೂಟ್ರಿಷನ್‌ನ ಅಗತ್ಯತೆಗಳಿಗೆ ಅನುಸಾರ ಆಹಾರ ಕ್ರಮವನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯು ದೈಹಿಕ, ಮಾನಸಿಕ, ಬೌದ್ಧಿಕ, ಸಾಮಾಜಿಕ ಹಾಗೂ ಆದ್ಯಾತ್ಮಿಕ ಆಯಾಮಗಳಲ್ಲಿ ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಆಳ್ವಾಸ್ ವಿದ್ಯಾಸಂಸ್ಥೆಯು ಉತ್ತಮ ಶಿಕ್ಷಣದೊಂದಿಗೆ, ಕ್ರೀಡೆ ಹಾಗೂ ದೇಶದ ಸಂಸ್ಕೃತಿಯನ್ನು ಸಾರುವ ಕಾರ್ಯಕ್ರಮಗಳಿಗೆ ಒತ್ತು ನೀಡಿ ವಿದ್ಯಾರ್ಥಿಗಳಲ್ಲಿ ದೇಶಭಿಮಾನವನ್ನು ಹುಟ್ಟು ಹಾಕುವ ಶೇಷ್ಠ ಕೆಲಸವನ್ನು ಮಾಡುತ್ತಿದೆ ಎಂದರು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಗೋಪಿಚಂದ್ ಮಿತ್ರ ಫೌಂಡೇಶನ್‌ನ ಹಿರಿಯ ನ್ಯೂಟ್ರಿಷನ್ ಹಿರಿಯ ಸಲಹೆಗಾರರಾದ ಡಾ. ಆರಾಧನ ಶರ್ಮಾ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆಗೆ ತಯಾರಾಗಬೇಕಾದಲ್ಲಿ ನಿರಂತರವಾಗಿ ನೈಸರ್ಗಿಕ ಆಹಾರ ಸೇವಿಸಬೇಕು. ವಿದೇಶಿಗರ ಆಹಾರ ಪದ್ಧತಿಯಲ್ಲಿ ಪೋಷಕಾಂಶಭರಿತ ಆಹಾರ ಸೇವನೆ ಇದೆ, ದೇಶದಲ್ಲಿ ಈ ರೀತಿಯ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ ಶಿಕ್ಷಣದೊಂದಿಗೆ ಕ್ರೀಡೆಯನ್ನು ನಮ್ಮ ಸಂಸ್ಥೆಯು ಅವಿಭಾಜ್ಯ ಅಂಗವಾಗಿ ಬೆಳೆಸಿಕೊಂಡು ಬಂದಿದ್ದೇವೆ. ಕಟ್ಟಡವನ್ನು ಆಕಾಶದೆತ್ತರ ಕಟ್ಟಬೇಕಾದರೆ ಅಡಿಪಾಯ ಗಟ್ಟಿಯಾಗಿರಬೇಕು. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಉತ್ತಮ ಸಾಧನೆ ಮಾಡಬೇಕಾದರೆ, ನಿರಂತರವಾಗಿ ಪೌಷ್ಟಿಕ ಆಹಾರ ಪಡೆದು, ಯೋಗಾಭ್ಯಾಸ ಮಾಡಿ, ಮಾನಸಿಕ ಸ್ಥಿರತೆ ಕಾಪಿಟ್ಟುಕೊಳ್ಳಬೇಕು. ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷನ್ ವಿಭಾಗದವರು, ಕ್ರೀಡಾಪಟುಗಳು ಯಾವ ರೀತಿಯ ಆಹಾರ ಪಡೆದುಕೊಳ್ಳಬೇಕು ಎಂದು ಸಂಶೋಧನೆ ಮಾಡಬೇಕು ಎಂದರು.


ಸ್ಪೋರ್ಟ್ಸ್ ನ್ಯೂಟ್ರಿಷನಿಸ್ಟ್ ಡಾ. ಗೀತಾಂಜಲಿ, ಸಿಎಸ್‌ಐಆರ್-ಸಿಎಫ್ಟಿಆರ್‌ಐ ಸಂಯೋಜಕ ಡಾ. ರವೀಂದ್ರ ವೀರಣ್ಣ ಇನ್ನಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಪ್ರಸ್ತುತ ಕ್ರೀಡಾ ಕ್ಷೇತ್ರಕ್ಕೆ ಅಗತ್ಯವಿರುವ ನ್ಯೂಟ್ರಿಷನ್ ಕುರಿತು ಮಾಹಿತಿ ನೀಡಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಉಪಸ್ಥಿತರಿದ್ದರು. ಫುಡ್ ಸೈನ್ಸ್ ಆ್ಯಂಡ್ ನ್ಯೂಟ್ರಿಷನ್ ವಿಭಾಗದ ಸಂಯೋಜಕಿ ಅರ್ಚನಾ ಪ್ರಭಾತ್ ಸ್ವಾಗತಿಸಿ, ಫುಡ್ ನ್ಯೂಟ್ರಿಷನ್ ಆ್ಯಂಡ್ ಡಯಟಿಟಿಕ್ಸ್ ಮುಖ್ಯಸ್ಥೆ ಆಶಿತಾ ವಂದಿಸಿದರು. ವಿದ್ಯಾರ್ಥಿನಿ ಶಿವಾನಿ ಶೆಟ್ಟಿ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top