ಧಾರ್ಮಿಕತೆಯೊಂದಿಗೆ ಕ್ಷಾತ್ರಧರ್ಮ ಪಾಲನೆಯಾಗಲಿ : ಬಂಗಾರಡ್ಕ ವಿಶ್ವೇಶ್ವರ ಭಟ್
ಪುತ್ತೂರು: ಸಾಮಾಜಿಕ ಚಿಂತನೆಯ ಮೂಲಕ ಸಾಂಸ್ಕೃತಿಕ ಏಕತೆಯನ್ನು ಸಾಧಿಸಿ ಸದೃಢ ಭಾರತವನ್ನು ನಿರ್ಮಿಸುವುದು ವಿದ್ಯಾರ್ಥಿಗಳ ಜೀವನದ ಗುರಿಯಾಗಬೇಕು. ಧಾರ್ಮಿಕತೆಯ ಲೇಪದೊಂದಿಗೆ ಕ್ಷಾತ್ರಧರ್ಮವನ್ನು ಪರಿಪಾಲಿಸದಿದ್ದರೆ ಸಂಸ್ಕೃತಿ ನಷ್ಟವಾಗುವ ಆತಂಕವಿದೆ. ಬಾಹ್ಯಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಶಕ್ತಿಶಾಲಿ ದೇಶವನ್ನು ಕಟ್ಟುವ ಮೂಲಕ ವಿದ್ಯಾರ್ಥಿಗಳ ಬದುಕು ರಾಷ್ಟ್ರಕ್ಕೆ ಪ್ರೇರಣೆಯಾಗಬೇಕು ಎಂದು ಹಿರಿಯ ಲೇಖಕ, ಸಾಮಾಜಿಕ ಮುಂದಾಳು ವಿಶ್ವೇಶ್ವರ ಭಟ್ ಬಂಗಾರಡ್ಕ ಹೇಳಿದರು.
ಅವರು ನೆಲ್ಲಿಕಟ್ಟೆಯ ಅಂಬಿಕಾ ಪದವಿಪೂರ್ವ ಕಾಲೇಜಿನಲ್ಲಿ ನಡೆದ ರಕ್ಷಾಬಂಧನ ಹಾಗೂ ಸಂಸ್ಕೃತೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಗುರುವಾರ ಮಾತನಾಡಿದರು.
ಬಪ್ಪಳಿಗೆ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಮುಖ್ಯ ಅತಿಥಿಯಾಗಿದ್ದ ಯುವವಾಗ್ಮಿ ಗಣಿತ ಹಾಗೂ ಸಂಸ್ಕೃತ ಉಪನ್ಯಾಸಕ ಆದರ್ಶ ಗೋಖಲೆ ಮಾತನಾಡಿ ಪ್ರತಿಯೊಂದು ಹಬ್ಬವೂ ಪ್ರೇರಣೆ, ಆತ್ಮವಿಶ್ವಾಸವನ್ನು ತುಂಬುತ್ತದೆ. ಸೋದರ ಭಾವ ಜಾಗೃತಗೊಳಿಸಿ ಹೊಸ ಚೈತನ್ಯ ಮೂಡಿಸುವ ಶಕ್ತಿ ರಕ್ಷಾ ಬಂಧನಕ್ಕೆ ಇದೆ. ಜಗತ್ತನ್ನು ಗೆಲ್ಲುವುದಾದರೆ ಅದು ಪ್ರೀತಿಯಿಂದ ಸಾಧ್ಯ. ಪ್ರಪಂಚದಾದ್ಯಂತ ಅಣ್ಣ ತಂಗಿ ಎಂಬ ಸಂಬಂಧವನ್ನು ಬೆಸೆಯುವ ಭಾವನೆ, ಹಾಗೂ ಅವಿನಾಭಾವ ಸಂಬಂಧವನ್ನು ರಕ್ಷೆ ಎಲ್ಲರಲ್ಲೂ ತುಂಬುತ್ತದೆ. ದೇಶದ ರಕ್ಷೆ, ಸಸ್ಯ ಸಂರಕ್ಷಣೆಯನ್ನು ಸಾರುವ ಈ ರಕ್ಷಾಬಂಧನ ಸ್ವಾಭಿಮಾನ, ಪರಂಪರೆಯನ್ನು ಅಂಬಿಕಾದಲ್ಲಿ ಜಾಗೃತಗೊಳಿಸುವಲ್ಲಿ ಸಹಕಾರಿಯಾಗಲಿ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಮಹಾಭಾರತ ಕಾಲದಿಂದಲೂ ಪ್ರಚಲಿತದಲ್ಲಿರುವ ರಕ್ಷಾಬಂಧನದ ಪಾವಿತ್ರ್ಯತೆಯನ್ನು ಅರ್ಥೈಸಿ, ನುಡಿದುದನ್ನು ನಡೆಯಲ್ಲಿ ತೋರುವ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು. ರಕ್ಷಾಬಂಧನದ ಮಹತ್ವವನ್ನು ಅರಿತು ಅದರಂತೆ ಜೀವನದಲ್ಲಿ ಮುನ್ನಡೆಯಬೇಕು ಎಂದರು.
ಶ್ರಾವಣ ಸಂಸ್ಕೃತೋತ್ಸವದ ಮಹತ್ವದ ಕುರಿತು ವಿದ್ಯಾರ್ಥಿನಿ ಹಿತಾ ಕಜೆ ಮಾತನಾಡಿದರೆ, ಶ್ರೀರಾಮಸ್ತುತಿ ಕಾರ್ಯಕ್ರಮವನ್ನು ವಿದ್ಯಾರ್ಥಿನಿ ವರಲಕ್ಷ್ಮಿ ನಡೆಸಿಕೊಟ್ಟರು. ಖಜಾಂಚಿ ರಾಜಶ್ರೀ ನಟ್ಟೋಜ, ಪ್ರಾಂಶುಪಾಲ ಸತ್ಯಜಿತ್ ಉಪಾಧ್ಯಾಯ, ಬಪ್ಪಳಿಗೆ ಸಂಸ್ಥೆಯ ಪ್ರಾಚಾರ್ಯೆ ಶ್ರೀಮತಿ ಸುಚಿತ್ರಾ ಪ್ರಭು, ಉಪಪ್ರಾಚಾರ್ಯ ಗಣೇಶ್ ಪ್ರಸಾದ್ ಡಿ ಎಸ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಆಶಿತಾ, ಅರ್ಪಿತಾ, ಅಪೇಕ್ಷಾ, ಪಾವನಾ, ಶ್ರಾವ್ಯಾ, ಶಾನ್ವಿ ಪ್ರಾರ್ಥಿಸಿ, ವಿದ್ಯಾರ್ಥಿ ಅಭಿರಾಮ ಭಟ್ ಸ್ವಾಗತಿಸಿದರು. ವಿದ್ಯಾರ್ಥಿನಿಯರಾದ ಉತ್ಸವಿ ರೈ ನಿರೂಪಿಸಿ, ಉಪನ್ಯಾಸಕಿ ಗೀತಾ ಸಿ ಕೆ ಹಾಗೂ ಸುಮನಾ ವಂದಿಸಿದರು. ಉಪನ್ಯಾಸಕ ಸತೀಶ್ ಕೆ ಕಾರ್ಯಕ್ರಮ ನಿರೂಪಿಸಿದರು.