ಮಂಗಳೂರು ವಿವಿ ಕಾಲೇಜು: ಡಾ. ಎಸ್‌ ಆರ್‌ ರಂಗನಾಥನ್‌ ಜನ್ಮದಿನಾಚರಣೆ

Upayuktha
0

ಗ್ರಂಥಾಲಯ ಕ್ರಾಂತಿಗೆ ನಾಂದಿ ಹಾಡಿದ ರಂಗನಾಥನ್‌: ಪ್ರೊ. ವಿ ಜಿ ತಳವಾರ್‌


ಮಂಗಳೂರು: ಮೂಲತಃ ಗಣಿತ ಪ್ರಾಧ್ಯಾಪಕರಾಗಿದ್ದ ಡಾ. ಎಸ್‌ ಆರ್‌ ರಂಗನಾಥನ್‌, ಭಾರತದ ಗ್ರಂಥಾಲಯಗಳನ್ನು ಬದಲಿಸಬೇಕೆಂದು ಪಣತೊಟ್ಟು 20 ವರ್ಷಗಳ ಕಾಲ ರಜೆಯಿಲ್ಲದೆ, ವಾರದ ಏಳೂ ದಿನ, ದಿನಕ್ಕೆ 13 ಗಂಟೆ ದುಡಿದು, ಗ್ರಂಥಾಲಯ ವಿಜ್ಞಾನದ ಪಿತಾಮಹ ಎನಿಸಿಕೊಂಡಿದ್ದು ಕಡಿಮೆ ಸಾಧನೆಯಲ್ಲ, ಎಂದು ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಪ್ರೊ. ವಿ ಜಿ ತಳವಾರ್‌ ಅಭಿಪ್ರಾಯಪಟ್ಟರು.


ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಕಾಲೇಜು ಗ್ರಂಥಾಲಯ ಹಾಗೂ ಐಕ್ಯೂಎಸಿ ವತಿಯಿಂದ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಶುಕ್ರವಾರ ನಡೆದ ವಿಶೇಷ ಉಪನ್ಯಾಸ ಹಾಗೂ ಡಾ. ಎಸ್‌ ಆರ್‌ ರಂಗನಾಥನ್‌ ಅವರ ಜನ್ಮದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಗ್ರಂಥಾಲಯ ವಿಭಜನೆಯಲ್ಲಿ ರಂಗನಾಥನ್‌ ಪರಿಚಯಿಸಿದ ಹೊಸ ಪದ್ಧತಿಗಳು ಅವರ ದೊಡ್ಡ ಕೊಡುಗೆ. ಬರಹಗಾರರ ಪರಿಚಯ, ಪ್ರತಿಯೊಬ್ಬ ಓದುಗನಿಗೂ ಪುಸ್ತಕ ದೊರೆಯುವಂತೆ ನೋಡಿಕೊಳ್ಳುವುದು, ಪ್ರತಿ ಪುಸ್ತಕಕ್ಕೂ ಓದುಗನಿರುವಂತೆ ಮಾಡುವುದು, ಓದುಗನ ಸಮಯ ಉಳಿಕೆ ಹಾಗೂ ಗ್ರಂಥಾಲಯವನ್ನು ಬೆಳೆಸುವುದು ಎಂಬ ಅವರ ಸೂತ್ರಗಳು ಹೊಸ ಕ್ರಾಂತಿಗೆ ಕಾರಣವಾದವು, ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ. ಅನಸೂಯ ರೈ, ಡಾ. ಎಸ್‌ ಆರ್‌ ರಂಗನಾಥನ್‌ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಪಾಲಕರಾಗಿದ್ದರು ಎಂಬುದು ಹೆಮ್ಮೆಯ ವಿಷಯ. ನಮ್ಮ ಗ್ರಂಥಾಲಯದಲ್ಲಿ ಅವರ ಹೆಸರಿನಲ್ಲಿ ಪ್ರತ್ಯೇಕ ವಿಭಾಗವನ್ನು ಆರಂಭಿಸುವ ಚಿಂತನೆಯಿದೆ, ಎಂದರು. ಕೇರಳದ ಮಂಜೇಶ್ವರದ ಗೋವಿಂದ ಪೈ ಸ್ಮಾರಕ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥ ಡಾ. ಶಚೀಂದ್ರನ್‌ ವಿ,ʼರಿಸರ್ಚ್‌ ಪಬ್ಲಿಕೇಶನ್‌ ಆಂಡ್‌ ಎಥಿಕ್ಸ್‌ʼ ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಕಾಲೇಜಿನ ಗ್ರಂಥಪಾಲಕಿ ಡಾ. ವನಜ ಸ್ವಾಗತ ಕೋರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಐಕ್ಯೂಎಸಿ ಸಂಚಾಲಕ ಡಾ.ಸುರೇಶ್‌ ಧನ್ಯವಾದ ಸಮರ್ಪಿಸಿದರು. ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಶಮಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಹರ್ಷಿತಾ ಪ್ರಾರ್ಥನೆ ನೆರವೇರಿಸಿದರು. ಕಾಲೇಜಿನ ಹಿರಿಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ಗಣ್ಯರು ಡಾ. ರಂಗನಾಥನ್‌ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕಛೇರಿ ಸಿಬ್ಬಂದಿ ಹಾಗೂ ಗ್ರಂಥಾಲಯ ಸಿಬ್ಬಂದಿಗೆ ಸಾಂಕೇತಿಕವಾಗಿ ತ್ರಿವರ್ಣ ಧ್ವಜ ವಿತರಿಸಲಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top