ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಒಂದು ದಿನದ ರಾಷ್ಟ್ರ ಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ವ್ಯೋಮ್ 2022’ : ಸಮಾರೋಪ ಸಮಾರಂಭ
ಪುತ್ತೂರು ಆ. 12: ಜೀವನದಲ್ಲಿ ಕಷ್ಟ ಎಲ್ಲರಿಗೂ ಬರುತ್ತದೆ. ಅದನ್ನು ಎದುರಿಸಿದ ನಂತರದ ಜೀವನವೇ ನಿಜವಾದ ಜೀವನ. ಇಂದಿನ ಸ್ಫರ್ಧಾತ್ಮಕ ಜಗತ್ತನ್ನುಎದುರಿಸಲು ವಿದ್ಯಾರ್ಥಿಗಳಲ್ಲಿ ಅನೇಕ ಕೌಶಲ್ಯವಿರಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಶಿಕ್ಷಣವನ್ನು ನೀಡುವ ಪ್ರಯತ್ನ ನಡೆಯಬೇಕು ಎಂದು ಬಿಎಎಸ್‌ಎಫ್ ಇಂಡಿಯಾ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ರಾಜಶೇಖರ್ ಭಟ್‌ಕಕ್ಕುಂಜೆ ಹೇಳಿದರು.
ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ ವ್ಯೋಮ್-2022ಒಂದು ದಿನದರಾಷ್ಟ್ರ ಮಟ್ಟದ ಅಂತರ್ ಕಾಲೇಜು ಸ್ಫರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಕ್ರವಾರ ಅವರು ಮಾತನಾಡಿದರು.
ವಿದ್ಯಾಸಂಸ್ಥೆಯಲ್ಲಿ ಸಿಗುವ ಅವಕಾಶಗಳನ್ನು ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳಬೇಕು. ಪ್ರತಿದಿನ ನಿಗದಿತ ಸಮಯವನ್ನು ವ್ಯಕ್ತಿತ್ವ ವಿಕಸನ ಮತ್ತುಆತ್ಮಾವಲೋಕನ ಮಾಡಿಕೊಳ್ಳುವ ಕಾಯಕಕ್ಕೆ ಮೀಸಲಿರಿಸಬೇಕು. ಪ್ರಚಲಿತ ವಿದ್ಯಮಾನಗಳ ಅರಿವಿನ ಜೊತೆಗೆ ಸಂದಿಗ್ಧ ಪರಿಸ್ಥಿತಿಗಳಿಗೆ ಸಿದ್ಧರಾಗಿ ಮುನ್ನುಗ್ಗುವ ಮನೋಸ್ಥೈರ್ಯ ರೂಢಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್ ಮಾತನಾಡಿ ಸ್ಪರ್ಧಾತ್ಮಕ ಜಗತ್ತಿಗೆ ಕಾಲಿಡುವ ವಿದ್ಯಾರ್ಥಿಗಳಿಗೆ ಇಂತಹ ಸ್ಪರ್ಧೆಗಳು ಸಹಕಾರಿ. ಕಾರ್ಯಕ್ರಮಗಳು ಮನೋರಂಜನೆಗಾಗಿ ಆಯೋಜನೆಗೊಳ್ಳುವ ಬದಲು ಮನೋವಿಕಾಸಕ್ಕಾಗಿ ಏರ್ಪಡಿಸಬೇಕು. ಶೈಕ್ಷಣಿಕವಾಗಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಜೀವನಕ್ಕೆಅಗತ್ಯವಾಗಿ ಬೇಕಾದ ಶಿಕ್ಷಣವನ್ನು ನೀಡುತ್ತದೆಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯ ಪ್ರೊ.ವಿಷ್ಣು ಗಣಪತಿ ಭಟ್, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದ ಸಂಯೋಜಕಿ ಡಾ.ವಿಜಯ ಸರಸ್ವತಿ, ಸ್ಪರ್ಧೆಯ ವಿದ್ಯಾರ್ಥಿ ಸಂಯೋಜಕಿ ರೂಪಾ ಉಪಸ್ಥಿತರಿದ್ದರು. ಪುತ್ತೂರಿನ ವಿವೇಕಾನಂದ ಕಾಲೇಜಿನ ಬಿ.ಕಾಂ ತಂಡ ಪ್ರಥಮ ಸ್ಥಾನ ಪಡೆದರೆ, ಸುಬ್ರಹ್ಮಣ್ಯದ ಕೆಎಸ್‌ಎಸ್‌ಕಾಲೇಜು ದ್ವಿತೀಯ ಸ್ಥಾನ ಪಡೆದುಕೊಂಡಿತು. ಸ್ಪರ್ಧೆಯಲ್ಲಿ ಒಟ್ಟು 16 ಕಾಲೇಜುಗಳ, 160ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಲಕ್ಷ್ಮಿ ವಿ ಭಟ್ ಸ್ವಾಗತಿಸಿ, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ಹರ್ಷ ನಾಯಕ್ ವಂದಿಸಿದರು. ದ್ವಿತೀಯ ಎಂಕಾಂ ವಿದ್ಯಾರ್ಥಿನಿ ಕವನಾ ಪೈ ಕಾರ್ಯಕ್ರಮ ನಿರೂಪಿಸಿದರು.