ಧರ್ಮಸ್ಥಳದಲ್ಲಿ ಖ್ಯಾತ ಆಯುರ್ವೇದ ವೈದ್ಯ ಡಾ. ಗಿರಿಧರ ಕಜೆ ಅವರ ಕೃತಿ “ ಪ್ರಕೃತಿ” ಬಿಡುಗಡೆ

Upayuktha
0

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು “ಪ್ರಕೃತಿ” ಕೃತಿ ಲೋಕಾರ್ಪಣೆ ಮಾಡಿದರು.


ಉಜಿರೆ: ಪಂಚೇಂದ್ರಿಯಗಳ ನಿಯಂತ್ರಣದೊಂದಿಗೆ ಹಿತ-ಮಿತವಾದ ಸೂಕ್ತ ಆಹಾರ ಸೇವನೆಯಿಂದ ಆರೋಗ್ಯ ರಕ್ಷಣೆ ಮತ್ತು ಆಯುಷ್ಯ ವೃದ್ಧಿಯೊಂದಿಗೆ ನಾವು ಆರೋಗ್ಯ ಭಾಗ್ಯವನ್ನು ಹೊಂದಬಹುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಅವರು ಭಾನುವಾರ ಧರ್ಮಸ್ಥಳದಲ್ಲಿ ವಸಂತ ಮಹಲ್‍ನಲ್ಲಿ ಖ್ಯಾತ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಅವರ ಆರನೆ ಕೃತಿ “ಪ್ರಕೃತಿ” ಬಿಡುಗಡೆಗೊಳಿಸಿ ಮಾತನಾಡಿದರು.


ಆಯುರ್ವೇದ ಪದ್ಧತಿ ಬಗ್ಯೆ ನಂಬಿಕೆ ಮತ್ತು ವಿಶ್ವಾಸ ಹೆಚ್ಚಾಗಬೇಕು. ನಮ್ಮನ್ನು ನಾವು ತಿಳಿದುಕೊಂಡು ನಮಗೆ ಸೂಕ್ತವಾದ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಆಹಾರವೇ ಔಷಧಿಯಾಗಬೇಕು ಅಲ್ಲದೆ ಔಷಧಿಯೇ ಆಹಾರವಾಗಬಾರದು. ಆಧುನಿಕ ಜೀವನಶೈಲಿ, ಆಹಾರ-ವಿಹಾರ, ಒತ್ತಡದ ಕೆಲಸಗಳೆ ಆರೋಗ್ಯ ಹದಗೆಡಲು ಕಾರಣವಾಗಿದೆ. 


ಪ್ರಾಚೀನ ಕಾಲದಿಂದಲೂ ಋಷಿ-ಮುನಿಗಳು ಪ್ರಕೃತಿಯ ಪ್ರಶಾಂತ ಪರಿಸರದಲ್ಲಿ ಆರೋಗ್ಯಪೂರ್ಣ ಜೀವನ ನಡೆಸುತ್ತಿದ್ದರು. ಶತಮಾನಗಳಿಂದ ಬಳಸುತ್ತಿದ್ದ ಪ್ರಕೃತಿ ಚಿಕಿತ್ಸಾ ಪದ್ಧತಿ, ಯೋಗಾಭ್ಯಾಸ, ಆಯುರ್ವೇದ ಪದ್ಧತಿಯಿಂದ ಆರೋಗ್ಯಭಾಗ್ಯದ ರಕ್ಷಣೆ ಸಾಧ್ಯವಾಗುತ್ತದೆ. ಆಯುರ್ವೇದ ಪದ್ಧತಿ ಬಗ್ಯೆ ಉನ್ನತ ಅಧ್ಯಯನ ಹಾಗೂ ಸಂಶೋಧನೆಗಳು ನಡೆಯಬೇಕು. ಸಂಶೋಧನಾ ಫಲಿತಾಂಶವನ್ನು ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಬಳಸಬೇಕು. ಇದಕ್ಕಾಗಿ ಉಡುಪಿಯಲ್ಲಿರುವ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಯಲ್ಲಿ ಸಂಶೋಧನಾ ಕೇಂದ್ರವನ್ನು ಪ್ರಾರಂಭಿಸಲಾಗಿದೆ ಎಂದು ಹೆಗ್ಗಡೆಯವರು ತಿಳಿಸಿದರು. ಅನೇಕ ವೈವಿಧ್ಯಮಯ  ಗ್ರಂಥಗಳು ತಾಳೆಗರಿಯಲ್ಲಿವೆ ಎಂದು ಅವರು ತಿಳಿಸಿದರು.


ಉಡುಪಿ, ಹಾಸನ ಮತ್ತು ಬೆಂಗಳೂರಿನಲ್ಲಿರುವ ಆಯುರ್ವೇದ ಆಸ್ಪತ್ರೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದು ಇಲ್ಲಿ ಸೇರಿದವರೆಲ್ಲ ಸಂಪೂರ್ಣ ಗುಣಮುಖರಾಗಿ ಹೋಗುತ್ತಾರೆ. ಅಲೊಪತಿ ಚಿಕಿತ್ಸಾ ವಿಧಾನದಲ್ಲಿ ಶಮನವಾಗದ ರೋಗಗಳು ಕೂಡಾ ಆಯುರ್ವೇದ ಪದ್ಧತಿಯಲ್ಲಿ ಸಂಪೂರ್ಣ ಗುಣವಾದ ಸಾಕಷ್ಟು ಉದಾಹರಣೆಗಳಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ಆರೋಗ್ಯಪೂರ್ಣ ಬದುಕಿಗೆ ಉಪಯುಕ್ತವಾದ ಮಾಹಿತಿಯ ಕಣಜವಾಗಿ “ಪ್ರಕೃತಿ” ಆಕರ್ಷಕವಾಗಿ ಮೂಡಿ ಬಂದಿದೆ. ಎಲ್ಲಾ ಲೇಖನಗಳು ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ ಎಂದು  ಡಾ. ಹೆಗ್ಗಡೆಯವರು ಡಾ. ಕಜೆ ಅವರ ಕೃತಿ “ಪ್ರಕೃತಿ” ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದರು.


ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಮಾತನಾಡಿ, ಧರ್ಮದ ನೆಲೆಯಲ್ಲಿ ನಾವು ಕರ್ಮ ಮಾಡಿ ಗೌರವಯುತ ಜೀವನ ನಡೆಸಬೇಕು. ಪ್ರಗತಿಯ ಹೆಸರಿನಲ್ಲಿ ಪ್ರಕೃತಿಯಿಂದ ನಾವು ವಿಮುಖರಾಗಿರುವುದೇ ಹೆಚ್ಚಿನ ರೋಗ ರುಜಿನಗಳಿಗೆ ಕಾರಣವಾಗಿದೆ. ಯಾವುದೇ ಪಾಶ್ರ್ವಪರಿಣಾಮಗಳಿಲ್ಲದ ಆಯುರ್ವೇದ ಪದ್ಧತಿಯನ್ನೆ ನಾವು ಬಳಸಬೇಕು ಎಂದು ಅವರು ಕಿವಿಮಾತು ಹೇಳಿದರು. ಡಾ. ಗಿರಿಧರ ಕಜೆ ಅವರ ಆಯುರ್ವೇದ ಚಿಕಿತ್ಸಾ ಪದ್ಧತಿಯ ಶುಶ್ರೂಷೆಯಿಂದ ತಾನು ಕೊರೊನಾದಿಂದ ಮುಕ್ತಿ ಪಡೆದಿರುವುದಾಗಿ ಸಚಿವರು ತಿಳಿಸಿದರು.


ಪ್ರಜಾವಾಣಿ ಪತ್ರಿಕೆಯ ಪ್ರಧಾನ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಮಾತನಾಡಿ, ಆಯುರ್ವೇದ ನಮ್ಮ ಜೀವನ ಪದ್ಧತಿಯಾಗಬೇಕು. ಆಯುರ್ವೇದ ಪದ್ಧತಿಯಿಂದ ನಮ್ಮ ಆರೋಗ್ಯ, ಆಯುಷ್ಯ ಮತ್ತು ಆನಂದ ವೃದ್ಧಿಯಾಗಿ ಸುಖ-ಶಾಂತಿ, ನೆಮ್ಮದಿಯ ಜೀವನ ನಡೆಸಬಹುದು. ಆದರೆ ಇಂದಿನ ಬದಲಾದ ಆಧುನಿಕ ಜೀವನ ಶೈಲಿಯಲ್ಲಿ ನಾವು ಹಗಲು ಮಾಡುವ ಕೆಲಸವನ್ನು ರಾತ್ರಿ ಮಾಡುತ್ತೇವೆ. ರಾತ್ರಿ ಮಾಡುವ ಕೆಲಸವನ್ನು ಹಗಲು ಮಾಡುತ್ತೇವೆ. ಪ್ರಕೃತಿಯಿಂದ ದೂರವಾದಷ್ಟು ನಮ್ಮಲ್ಲಿ ವಾತ, ಪಿತ್ತ, ಕಫಗಳು ಜಾಸ್ತಿಯಾಗುತ್ತವೆ. ಆಹಾರ ಮತ್ತು ಔಷಧಿ ಬೇರೆ ಬೇರೆ ಅಲ್ಲ. ಒಂದೇ ಆಗಿರಬೇಕು ಎಂದು ಅವರು ಹೇಳಿದರು.  


ಟಿ.ವಿ. 9 ವಾಹಿನಿಯ ಪ್ರಧಾನ ನಿರೂಪಕ ರಂಗನಾಥ್ ಭಾರಧ್ವಾಜ್ ಮಾತನಾಡಿ ಸ್ವಚ್ಛ ಭಾರತ ನಿರ್ಮಾಣದ ಆಶಯದಂತೆ ಸ್ವಸ್ಥ ಬಾರತವೂ ನಮ್ಮ ಗುರಿಯಾಗಬೇಕು. ಮನೆಯ ಹಿತ್ತಲಲ್ಲಿರುವ ಗಿಡಮೂಲಿಕೆಗಳು ಕೂಡಾ ಔಷಧೀಯ ಗುಣ ಹೊಂದಿದ್ದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನಮ್ಮ ಮನಸ್ಸುಗಳು ಸದಾ ಜಾಗೃತವಾಗಿ, ಕಲ್ಮಶರಹಿತವಾಗಿದ್ದು, ಮಾನವೀಯ ಸಂಬಂಧಗಳೊಂದಿಗೆ ಜೀವನ ಮೌಲ್ಯಗಳನ್ನು ಉಳಿಸಿ, ಬೆಳೆಸಿದಾಗ ಆರೋಗ್ಯವಂತರಾಗಲು ಸಾಧ್ಯ. ಯೋಗಕ್ಕೆ ದೊರಕಿದಷ್ಟು ಮಹತ್ವ ಮತ್ತು ಪ್ರಚಾರ ಆಯುರ್ವೇದಕ್ಕೂ ಸಿಗಬೇಕು ಎಂದು ಅವರು ಹೇಳಿದರು. 


“ಪ್ರಕೃತಿ” ಕೃತಿಯ ಲೇಖಕ ಡಾ. ಗಿರಿಧರ ಕಜೆ ಪುಸ್ತಕದ ಬಗ್ಯೆ ಸವಿವರ ಮಾಹಿತಿ ನೀಡಿದರು. ಸೆಲ್ಕೊ ಸಂಸ್ಥೆಯ ಸಿ.ಇ.ಒ. ಮೋಹನ ಭಾಸ್ಕರ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಗೋವಿಂದ ಪ್ರಸಾದ್ ಕಜೆ ಸ್ವಾಗತಿಸಿದರು. ಶ್ರೀನಿವಾಸರಾವ್ ಧರ್ಮಸ್ಥಳ ಧನ್ಯವಾದವಿತ್ತರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top