ದೇಶದ ತೇರನ್ನೆಳೆಯುವುದಕ್ಕೆ ವಿದ್ಯಾರ್ಥಿ ಸಮೂಹ ತಯಾರಾಗಬೇಕು : ಸುಬ್ರಹ್ಮಣ್ಯ ನಟ್ಟೋಜ
ಪುತ್ತೂರು: ಪ್ರಪಂಚಕ್ಕೆ ಭಾರತೀಯ ಸಂಸ್ಕೃತಿಯ ಕೊಡುಗೆ ಅಪಾರ. ಗತವೈಭವದ ಭಾರತವನ್ನು ಮತ್ತೊಮ್ಮೆ ಸಾಧಿಸುವ ಸಾಧನೆಯನ್ನು ವಿದ್ಯಾರ್ಥಿಗಳು ಮಾಡಬೇಕು. ದೇಶದ ತೇರನ್ನೆಳೆದು ವೈಭವದ ಜಾತ್ರೆ ನಡೆಸುವುದಕ್ಕೆ ಯುವಸಮೂಹ ಸಿದ್ಧವಾಗಬೇಕಿದೆ. ತನ್ಮೂಲಕ ಭವ್ಯ ಭಾರತವನ್ನು ನಿರ್ಮಿಸಬೇಕಿದೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ಅವರು ನಗರದ ನಟ್ಟೋಜ ಫೌಂಡೇಶಣ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಪದವಿಪೂರ್ವ ವಿದ್ಯಾಲಯದಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಅಭಿವೃದ್ಧಿ ಮತ್ತು ಆಡಳಿತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು ಕ.ರಾ.ವಿ.ಪ ಜಿಲ್ಲಾ ಘಟಕ ಹಾಸನ ಹಾಗೂ ಅಂಬಿಕಾ ಸಿ.ಬಿ.ಎಸ್.ಇ ವಿದ್ಯಾಲಯದ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಶನಿವಾರ ಆಯೋಜಿಸಲಾದ ಸರ್ ಸಿ.ವಿ ರಾಮನ್ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಂಗಳೂರಿನ ಅಭಿವೃದ್ಧಿ ಡಯಟ್‌ನ ಉಪನಿರ್ದೇಶಕಿ ರಾಜಲಕ್ಷ್ಮಿ ಕಾರ್ಯಕ್ರಮವನ್ನು ಉದ್ಘಾಟಿಸಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಲು ವಿಜ್ಞಾನ ನಾಟಕ ಸ್ಪರ್ಧೆ, ರಸಪ್ರಶ್ನೆ, ವಿಜ್ಞಾನ ಮಾದರಿ ತಯಾರಿ, ವಿಜ್ಞಾನ ಯೋಜನಾ ತಯಾರಿ, ವಿಚಾರಗೋಷ್ಠಿ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತಿದೆ. ಅಬ್ದುಲ್ ಕಲಾಂ ಯಾವ ರೀತಿ ದೊಡ್ಡ ಬಾಹ್ಯಾಕಾಶ ವಿಜ್ಞಾನಿ ಆಗುವುದಕ್ಕೆ ಸಾಧ್ಯವಾಯಿತೋ ಹಾಗೆ ವಿದ್ಯಾರ್ಥಿಗಳೂ ಪ್ರಯತ್ನಿಸಬೇಕು ಎಂದು ಹೇಳಿದರು.
ಮಂಗಳೂರಿನ ಅಭಿವೃದ್ಧಿ ಡಯಟ್‌ನ ಉಪನ್ಯಾಸಕಿ ವಿನೋದ ಬಿ ಮಾತನಾಡಿ ವಿಜ್ಞಾನ ಸಾಕಷ್ಟು ಬೆಳವಣಿಗೆಯಾಗುತ್ತಾ ಇದೆ. ಚಿಕ್ಕಂದಿನಿಂದ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ, ಸ್ಪರ್ಧೆಗಳು ನಡೆಯುತ್ತಿವೆ. ನಮ್ಮ ಯುವ ಜನತೆಯಿಂದ ವಿಜ್ಞಾನಿಗಳ ಸಂಖ್ಯೆ ಬೆಳೆಯಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ದಕ್ಷಿಣ ಕನ್ನಡ ಸಮಿತಿಯ ಅಧ್ಯಕ್ಷ ಡಾ. ಹಾಜಿ ಅಬೂಬಕರ್ ಆರ್ಲಪದವು ಮಾತನಾಡಿ ವಿದ್ಯಾರ್ಥಿ ಜೀವನ, ಹದಿಹರೆಯ ವಯಸ್ಸು, ಮಾನವ ಜೀವನದಲ್ಲಿ ಶ್ರೇಷ್ಠ ಸಮಯ. ಮತ್ತೆ ಮತ್ತೆ ಸಿಗುವ ಜೀವನ ಇದಲ್ಲ, ಹೊಸ ಮಧುರ ಭಾವನೆಗಳು ಮನದಲ್ಲಿ ಉದಯಿಸುವ ಈ ಕಾಲದಲ್ಲಿ ಉತ್ತಮ ಗುಣಗಳನ್ನು ಅಳವಡಿಸಿ ಕೊಂಡು ಸಜ್ಜನರ ಸಂಘ ನಡೆ ನುಡಿ, ಆಚಾರ ವಿಚಾರಗಳಿಂದ ಅಜರಾಮರರಾಗಬೇಕು. ಗುರಿ ಮುಟ್ಟಲು ಇರುವ ಹಾದಿಯ ಕನಸನ್ನು ಕಾಣಬೇಕು ಎಂದರು.
ಪುತ್ತೂರಿನ ಕ್ಷೇತ್ರ ಶಿಕ್ಷಾಣಾಧಿಕಾರಿ ಲೋಕೇಶ್ ಎಸ್ ಆರ್ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿದರು. ನಟ್ಟೋಜ ಫೌಂಡೇಶನ್ ಟ್ರಸ್ಟ್ನ ಖಜಾಂಜಿ ರಾಜಶ್ರೀ ನಟ್ಟೋಜ, ಅಂಬಿಕಾ ವಿದ್ಯಾಲಯ (ಸಿ.ಬಿ.ಎಸ್. ಇ) ಪ್ರಾಚಾರ್ಯೆ ಮಾಲತಿ ಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸುಧಾ ಕೋಟೆ ಹಾಗೂ ಸೌಜನ್ಯ ವಿ ಡಿ ಪ್ರಾರ್ಥಿಸಿದರು. ಉಪನ್ಯಾಸಕಿ ಜಯಂತಿ ಹೊನ್ನಮ್ಮ ಸ್ವಾಗತಿಸಿದರು. ಕನ್ನಡ ಉಪನ್ಯಾಸಕರಾದ ಸತೀಶ್ ಇರ್ದೆ ಇವರು ಕಾರ್ಯಕ್ರಮ ನಿರೂಪಿಸಿದರು. ರಸಪ್ರಶ್ನೆಯ ಮೌಖಿಕ ಸುತ್ತನ್ನು ಮಂಗಳೂರಿನ ಕಿಟ್ಟಲ್ ಮೆಮೋರಿಯಲ್ ಶಾಲೆಯ ಅಧ್ಯಾಪಕ ರಘುನಾಥ ಭಟ್ ನಡೆಸಿಕೊಟ್ಟರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ವಿಜೇತರಿಗೆ ಪ್ರಶಸ್ತಿ ಪತ್ರಗಳನ್ನಿತ್ತು ಗೌರವಿಸಿದರು.
ಬಹುಮಾನ ವಿಜೇತರು
ಪ್ರಥಮ: ಧಾತ್ರಿ ಸಿ ಎಚ್ ಮತ್ತು ಅನ್ವಿತ್ ಎನ್ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ತೆಂಕಿಲ ( ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಂಡ )
ದ್ವಿತೀಯ : ಕಾರ್ತಿಕ್ ಕೆ ಭಟ್ ಮತ್ತು ಆಶ್ಲೇಷ್ ಪಿ ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ.
ತೃತೀಯ : ಮನ್ವಿತ್ ಎಸ್ ಮತ್ತು ಇಶಾನ್ ಎಸ್ ಭಟ್ ಅಂಬಿಕಾ ವಿದ್ಯಾಲಯ (ಸಿಬಿಎಸ್‌ಇ) ಬಪ್ಪಳಿಗೆ