ಉಜಿರೆ: ಸರಿಯಾಗಿ ಹಾಗೂ ಕ್ರಮಬದ್ದವಾಗಿ ಕೈ ತೊಳೆಯದೇ ಆಹಾರಾದಿಗಳನ್ನು ಸೇವಿಸುವುದರಿಂದ ವೈರಸ್ ಗಳಿಂದಾಗಿ ಅನೇಕ ರೋಗಗಳು ಬಾಧಿಸುತ್ತವೆ. ಇದರಿಂದ ಪ್ರತಿ ವರ್ಷ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಅತಿಸಾರ ಭೇದಿ ಕೂಡ ಒಂದಾಗಿದ್ದು, ಸರಕಾರ ಇದಕ್ಕಾಗಿ ವೈಜ್ಞಾನಿಕವಾಗಿ ಕೈ ತೊಳೆಯಲು ಕಾರ್ಯಕ್ರಮ ರೂಪಿಸಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಡಾ.ಪ್ರಸನ್ನ ಕುಮಾರ ಐತಾಳ್ ಹೇಳಿದರು.
ಇವರು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ನಡೆದ ಅತಿಸಾರ ಭೇದಿ ನಿಯಂತ್ರಣದ ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ವೈಜ್ಞಾನಿಕವಾಗಿ ಕೈ ತೊಳೆಯುವ ಪ್ರಾತ್ಯಕ್ಷಿಕೆ ನಡೆಸಿದರು.
ಪ್ರಾಚಾರ್ಯ ಪ್ರೊ. ದಿನೇಶ ಚೌಟ ಅವರು ಅಧ್ಯಕ್ಷತೆ ವಹಿಸಿದ್ದರು. ಎನ್. ಎಸ್.ಎಸ್ ನ ಸಹ ಯೋಜನಾಧಿಕಾರಿ ಚೇತನಾ ಕುಮಾರಿ, ರೆಡ್ ಕ್ರಾಸ್ ಇದರ ಸಂಯೋಜಕಿಯರಾದ ಡಾ. ಫ್ಲೇವಿಯಾ ಪೌಲ್ ಹಾಗೂ ಕವನಾಶ್ರೀ ಉಪಸ್ಥಿತರಿದ್ದರು.