'ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’: ಪೂರ್ಣಿಮಾ ಮಾಳಗಿಮನಿಗೆ ಪ್ರಥಮ ಪ್ರಶಸ್ತಿ

Upayuktha
0

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ಕೊಂಕಣಿ ಕಥೆಗಾರ ದಾಮೋದರ ಮಾವಜೊ ಅವರು ’ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ’ಯಲ್ಲಿ ಪ್ರಥಮ ಪ್ರಶಸ್ತಿ ಪಡೆದ ಪೂರ್ಣಿಮಾ ಮಾಳಗಿಮನಿ ಅವರನ್ನು ಅಭಿನಂದಿಸಿದರು. ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ಪಡೆದ ಪತ್ರಕರ್ತ ಸಂದೀಪ ನಾಯಕ ಇದ್ದಾರೆ.


ಬೆಂಗಳೂರು: “ಕಥನದಲ್ಲಿ ಕೌಶಲ್ಯವೆಂಬುದು ನಿರಂತರವಾದ ಅಭ್ಯಾಸದಿಂದ ಬರುವಂಥದ್ದು. ಕಥೆಗಳು ನನ್ನ ಬಳಿಗೆ ಬರಬೇಕು. ಕಥಾ ಪ್ರಕಾರವನ್ನೇ ನನ್ನ ಅಭಿವ್ಯಕ್ತಿಯ ಮಾಧ್ಯಮವಾಗಿ ನಾನು ಆರಿಸಿಕೊಂಡೆ ಎಂಬುದನ್ನು ವಿವರಿಸುವುದು ಕಷ್ಟ” ಎಂದು ಖ್ಯಾತ ಕೊಂಕಣಿ ಕಥೆಗಾರ, ಜ್ಞಾನಪೀಠ ಪುರಸ್ಕೃತ ಸಾಹಿತಿ ದಾಮೋದರ ಮಾವಜೊ ಅವರು ಹೇಳಿದರು.


ಭಾನುವಾರ ನಗರದಲ್ಲಿ ನಡೆದ ’ಬುಕ್ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ-2022’ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. 


“ಸಣ್ಣಕಥೆ ಎನ್ನುವುದು ಎಷ್ಟು ಪದಗಳು ಎನ್ನುವುದರ ಮೇಲೆ ನಿರ್ಧಾರವಾಗುವುದಿಲ್ಲ. ತನ್ನ ಗಾತ್ರವನ್ನು ಆಯಾ ಸಣ್ಣಕತೆಯೇ ಕಂಡುಕೊಳ್ಳುತ್ತದೆ. ಈ ನಿಟ್ಟಿನಲ್ಲಿ ನೋಡಿದಾಗ ಹಿಂದಿ ಜನರಾಡುವ ಭಾಷೆಯಾಗಿ ದೊಡ್ಡದೇ ಹೊರತು ಸಾಹಿತ್ಯದ ಗುಣಮಟ್ಟದ ವಿಚಾರಕ್ಕೆ ಬಂದಾಗ ಸಣ್ಣದು. ಹಿಂದಿಗೆ ಹೋಲಿಸಿದರೆ ಕನ್ನಡ, ಬಾಂಗ್ಲಾ, ಮಲಯಾಳಂ, ಮರಾಠಿ, ಕೊಂಕಣಿ ಭಾಷೆಗಳ ಸಾಹಿತ್ಯದ ಆಳ-ಅಗಲ ಅಗಾಧವಾದುದು” ಎಂದು ಅವರು ಅಭಿಪ್ರಾಯಪಟ್ಟರು.


ಇದೇ ಸಂದರ್ಭದಲ್ಲಿ ಮೊದಲ ಮೂರು ಪ್ರಶಸ್ತಿಗಳ ಘೋಷಣೆ ಮಾಡಿದ ಅವರು ’ವಿನ್ನರ್ ವಿನ್ನರ್ ಚಿಕನ್ ಡಿನ್ನರ್’ ಕಥೆಗಾಗಿ ಪ್ರಥಮ ಪ್ರಶಸ್ತಿ ಗಳಿಸಿದ ಪೂರ್ಣಿಮಾ ಮಾಳಗಿಮನಿ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು. ಪ್ರಥಮ ಪ್ರಶಸ್ತಿಯು ರೂ. ೫೧,೦೦೦ ನಗದು, ಫಲಕ ಮತ್ತು ಪುಸ್ತಕದುಡುಗೊರೆಗಳನ್ನು ಹೊಂದಿತ್ತು.


’ನೆರಳ ನರ್ತನ’ ಕಥೆಗಾಗಿ ದ್ವಿತೀಯ ಪ್ರಶಸ್ತಿ ಗಳಿಸಿದ ಬಸವಣ್ಣೆಪ್ಪ ಕಂಬಾರ ಅನಾರೋಗ್ಯದ ಕಾರಣದಿಂದ ಹಾಜರಿರಲಿಲ್ಲ. ಅವರ ಪರವಾಗಿ ಹಿರಿಯ ಕವಿ ಎಚ್.ಎಸ್.ವೆಂಕಟೇಶ್ ಮೂರ್ತಿ ಪ್ರಶಸ್ತಿ ಸ್ವೀಕರಿಸಿದರು. ರೂ. 25,000 ನಗದು, ಪ್ರಶಸ್ತಿ ಫಲಕ ಮತ್ತು ಪುಸ್ತಕದ ಉಡುಗೊರೆಯನ್ನು ದ್ವಿತೀಯ ಪ್ರಶಸ್ತಿ ಹೊಂದಿತ್ತು.

’ಚಂದ್ರಶಾಲೆಯಲ್ಲಿ ನಿಂತ ತೇರು’ ಕಥೆಗಾಗಿ ’ಪ್ರಜಾವಾಣಿ’ ಬಳಗದ ಸಂದೀಪ ನಾಯಕ ತೃತೀಯ ಪ್ರಶಸ್ತಿಯನ್ನು ಸ್ವೀಕರಿಸಿದರು. ರೂ.15,000 ನಗದು, ಪ್ರಶಸ್ತಿ ಫಲಕ ಮತ್ತು ಪುಸ್ತಕದ ಉಡುಗೊರೆಯನ್ನು ತೃತೀಯ ಪ್ರಶಸ್ತಿ ಹೊಂದಿತ್ತು.


ಅಂತಿಮ ಸುತ್ತಿನ ಬಹುಮಾನ ಘೋಷಣೆಗೂ ಮುನ್ನ ’ಬುಕ್ ಬ್ರಹ್ಮ’ದ ಸಹಸಂಸ್ಥಾಪಕ ಸತೀಶ್ ಚಪ್ಪರಿಕೆ ಅವರು ಇಬ್ಬರು ಕಥೆಗಾರರ ಜೊತೆ ಸಂವಾದ ನಡೆಸಿಕೊಟ್ಟರು.


ಅದಕ್ಕಿಂತ ಮೊದಲು ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ದೇಶಕ, ಕರ್ನಾಟಕದ ಸಾಕ್ಷಿಪ್ರಜ್ಞೆ ಗಿರೀಶ್ ಕಾಸರವಳ್ಳಿ ಅವರು ಮೂರು ಸಮಾಧಾನಕರ ಬಹುಮಾನ ಘೋಷಿಸಿ, ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಅನುಪಮಾ ಪ್ರಸಾದ್ ಅವರ ’ಕುಂತ್ಯಮ್ಮಳ ಮಾರಾಪು’, ಮೌನೇಶ ಬಡಿಗೇರ ಅವರ ’ಒಂಟಿ ಓಲೆಯ ಮುತ್ತು’, ನಂದಿನಿ ಹೆದ್ದುರ್ಗ ಅವರ ’ಬಾಗಿದ ರೆಪ್ಪೆಯ ಅಡಗುತಾಣದಲ್ಲಿ’ ಕಥೆಗಳು ಸಮಾಧಾನಕರ ಬಹುಮಾನ ಪಡೆದವು. ಸಮಾಧಾನಕರ ಬಹುಮಾನ ಪಡೆದ ಕತೆಗಳಿಗೆ ತಲಾ ರೂ.೫೦೦೦ ನಗದು ಮತ್ತು ಪ್ರಶಸ್ತಿ ಫಲಕ ದೊರೆತಿದೆ. ಉಳಿದ 14 ಕಥೆಗಾರರಿಗೆ ತಲಾ ರೂ.೧೦೦೦ ನಗದು ಮತ್ತು ಪ್ರಶಸ್ತಿ ಫಲಕ ನೀಡಲಾಯಿತು.

ಇನ್ಫೋಸಿಸ್ ಸಂಸ್ಥೆಯ ಬೆಂಗಳೂರು ಕೇಂದ್ರದ ಮುಖ್ಯಸ್ಥ ಗುರುರಾಜ ದೇಶಪಾಂಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಥಾ ಸ್ಪರ್ಧೆ ತೀರ್ಪುಗಾರರಾಗಿದ್ದ ಜಿ.ಎನ್.ರಂಗನಾಥರಾವ್, ಶ್ರೀಧರ ಬಳಗಾರ, ಕೇಶವ ಮಳಗಿ, ಎಂ.ಎಸ್. ಆಶಾದೇವಿ ಉಪಸ್ಥಿತರಿದ್ದರು.


ಈ ಕಥಾಸ್ಪರ್ಧೆಗೆ ಒಟ್ಟು ೫೧೮ ಕಥೆಗಳು ಬಂದಿದ್ದವು. ಕಡೆಯ ಸುತ್ತಿನ 50 ಕಥೆಗಳನ್ನು ಓದಿದ ಹಿನ್ನೆಲೆಯಲ್ಲಿ, ಕಥೆಗಳು ಪಡೆದುಕೊಳ್ಳುತ್ತಿರುವ ಈ ಹೊತ್ತಿನ ನಿಲುವು ಒಲವುಗಳ ಬಗ್ಗೆ ಆಶಾದೇವಿ ಅವರು ಮಾತನಾಡಿದರು. ಕನ್ನಡ ಕಾವ್ಯ, ಕಥೆ ಮತ್ತು ವಿಮರ್ಶೆ ಯಾವ ಅನುಮಾನವೂ ಇಲ್ಲದೆ ಎಲ್ಲ ಭಾಷೆಗಳಿಗಿಂತ ಮುಂದಿದೆ ಎಂದು ಅವರು ಹೇಳಿದರು.


ನವಕರ್ನಾಟಕ ಪ್ರಕಾಶನದ ರಮೇಶ್ ಉಡುಪ, ಅಂಕಿತ ಪುಸ್ತಕದ ಪ್ರಕಾಶ್ ಕಂಬತ್ತಳ್ಳಿ ಪಾಲ್ಗೊಂಡಿದ್ದರು. ಯಕ್ಷಗಾನ ಕಲಾವಿದೆ ಅಶ್ವಿನಿ ಕೊಂಡದಕುಳಿ ಅವರ ರಂಗಪ್ರವೇಶವಾಗುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಬುಕ್ ಬ್ರಹ್ಮ ಪ್ರಧಾನ ಸಂಪಾದಕ ದೇವು ಪತ್ತಾರ್ ಸ್ವಾಗತಿಸಿದರು. ಬುಕ್ ಬ್ರಹ್ಮ ಸಿಇಒ ಉಷಾ ಪ್ರಸಾದ್ ವಂದಿಸಿದರು. ವತ್ಸಲಾ ಮೋಹನ್, ಸ್ವಸ್ತಿಕಾ ಶೆಟ್ಟಿ ನಿರೂಪಿಸಿದರು. 


web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top