ಮೂಡುಬಿದಿರೆ: ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ನಾಟಕ ಸ್ಪರ್ಧೆಯಲ್ಲಿ ಅಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ 'ಅಮರಕ್ರಾಂತಿ ಸ್ವಾತಂತ್ರ‍್ಯ ಹೋರಾಟ - 1837' ನಾಟಕವು ಪ್ರಥಮ ಬಹುಮಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಇದಕ್ಕೂ ಮೊದಲು ಮಂಗಳೂರಿನ ರಾಮಕೃಷ್ಣ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ.ಫಟಕ ಮಟ್ಟದ ಸ್ಪರ್ಧೆಯಲ್ಲೂ ಈ ನಾಟಕ ಪ್ರಥಮ ಪ್ರಶಸ್ತಿ ಪಡೆದುಕೊಂಡಿದೆ.
ಡಾ| ಪ್ರಭಾಕರ ಶಿಶಿಲ ರಚಿಸಿದ ಈ ನಾಟಕವನ್ನು ಜೀವನ್ ರಾಂ ಸುಳ್ಯ ನಿರ್ದೇಶಿಸಿದ್ದಾರೆ. ಭುವನ ಮಣಿಪಾಲ ಮತ್ತು ಉಜ್ವಲ್ ಯು.ವಿ. ತಾಂತ್ರಿಕ, ಸಂಗೀತದಲ್ಲಿ ಮನುಜ ನೇಹಿಗ ಸುಳ್ಯ, ಬೆಳಕು ನಿರ್ವಹಣೆ ಶಿಶಿರ ಕಲ್ಕೂರ, ಪ್ರಸಾಧನದಲ್ಲಿ ಸೋಮನಾಥ ಉಡುಪಿ ಸಹಕಾರ ನೀಡಿದ್ದಾರೆ. ಕಲಾವಿದರಾಗಿ ಕಾರ್ತಿಕ್ ಕುಮಾರ್, ಶ್ರೀಕಂಠ ರಾವ್, ಜೋಶಿತ್ ಶೆಟ್ಟಿ, ಗಗನ್ ಶೆಟ್ಟಿ, ರೇವನ್ ಪಿಂಟೋ, ರೋನಿತ್ ರಾಯ್, ಮನೀಶ್, ಪ್ರಮೋದ್ ಶೆಟ್ಟಿ, ವನ್ಯಶ್ರೀ ಸುಳ್ಯ, ಹರ್ಷಿತಾ ಶಿರೂರು ಅಭಿನಯಿಸಿದ್ದಾರೆ. ನಾಟಕ ತಂಡಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
ಆಗಸ್ಟ್ 7, 8 ರಾಜ್ಯ ಮಟ್ಟದ ಸ್ಪರ್ಧೆ
'ಕರ್ನಾಟಕದಲ್ಲಿ ಸ್ವಾತಂತ್ರ‍್ಯ ಹೋರಾಟ' ವಿಷಯವನ್ನು ಆಧರಿಸಿ ಕರ್ನಾಟಕ ಅಂತರ್ ವಿಶ್ವವಿದ್ಯಾನಿಲಯಗಳ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯು ಆ.7 ಮತ್ತು 8 ರಂದು ಮಂಗಳೂರು ವಿ.ವಿ.ಯ ಆಶ್ರಯದಲ್ಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆವರಣದಲ್ಲಿ ನಡೆಯಲಿದೆ. ಈ ಸ್ಪರ್ಧೆಯಲ್ಲಿ ರಾಜ್ಯದ ಸುಮಾರು 60 ಕ್ಕಿಂತಲೂ ಹೆಚ್ಚು ನಾಟಕ ತಂಡಗಳು ಭಾಗವಹಿಸುವ ನಿರೀಕ್ಷೆಯಿದೆ.