|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾನವ ಸಂಪನ್ಮೂಲ ಸದ್ಬಳಕೆ ಅಭಿವೃದ್ಧಿಯ ರಹದಾರಿ

ಮಾನವ ಸಂಪನ್ಮೂಲ ಸದ್ಬಳಕೆ ಅಭಿವೃದ್ಧಿಯ ರಹದಾರಿ




-ಡಾ.ಎ. ಜಯಕುಮಾರ ಶೆಟ್ಟಿ

ಅರ್ಥಶಾಸ್ತ್ರ ಪ್ರಾಧ್ಯಾಪಕರು

ಶ್ರೀ.ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು (ಸ್ವಾಯತ್ತ), ಉಜಿರೆ-574240

9448154001

ajkshetty@sdmcujire.in


ಬಿಡಿಸಲಾಗದ ಒಗಟು: ಜನಸಂಖ್ಯೆ ಎಂಬುದನ್ನು ಮಾನವ ಸಂಪನ್ಮೂಲ ಎಂದು ಪರಿಭಾವಿಸಿದಾಗ ಅದು ದೇಶಕ್ಕೆ ಕೊಡುಗೆಯೇ. ಆದರೆ ಅದು ಕೇವಲ ಸಂಖ್ಯೆಯಷ್ಟೇ ಆದರೆ ದೇಶಕ್ಕೆ ಅದಕ್ಕಿಂತ ದೊಡ್ಡ ಸಮಸ್ಯೆ ಬೇರಿಲ್ಲ. ಇಂದಿನ ಅಭಿವೃದ್ಧಿಶೀಲ ಯುಗದಲ್ಲಿ ವೈಜ್ಞಾನಿಕ ಅನ್ವೇಷಣೆಗಳು ಮಾನವನನ್ನು ಈ ವಿಶ್ವದ ಒಡೆಯನಾಗಿ ಮಾಡಿದರೂ, ಅವನು ಮಾತ್ರ ತನ್ನನ್ನು ತಾನೇ ನಿಯಂತ್ರಣಕ್ಕೊಳಪಡಿಸುವುದು ಅಸಾಧ್ಯವಾಗಿದೆ. ಜನಸಂಖ್ಯಾ ಸ್ಪೋಟವು ಜಗತ್ತಿನ ಬಹುತೇಕ ಭಾಗಗಳಲ್ಲಿ ಬಿಡಿಸಲಾಗದ ಒಗಟಾಗಿದೆ. 

ವಿಶ್ವದ ಜನಸಂಖ್ಯೆ 800 ಕೋಟಿ: ವಿಶ್ವ ಜನಸಂಖ್ಯೆಯು 1987 ಜುಲೈ 11 ರಂದು 500 ಕೋಟಿಯ ಗಡಿಯನ್ನು ತಲುಪಿತು. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ಗಮನಿಸಿ ವಿಶ್ವಸಂಸ್ಥೆ 1987ರಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಜನಸಂಖ್ಯೆಯ ಕುರಿತಾದ ಸಮಸ್ಯೆಗಳ ಅರಿವನ್ನು ಮೂಡಿಸಲು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತ ಮಂಡಳಿಯು 1989ರ ಜುಲೈ 11ರಂದು ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಆಚರಿಸಲು ಕರೆ ನೀಡಿತು. 

2011 ರಲ್ಲಿ ವಿಶ್ವದ ಜನಸಂಖ್ಯೆಯು 700 ಕೋಟಿ ತಲುಪಿದರೆ 2022ರಲ್ಲಿ 796 ಕೋಟಿಯಾಗಿದೆ ಹಾಗೂ ಈಗ 8 ಬಿಲಿಯನ್ ತಲುಪುವ ಹಂತದಲ್ಲಿದೆ ಎಂದು ಅಂದಾಜಿಸಲಾಗಿದೆ. ಆರೋಗ್ಯದಲ್ಲಿನ ಪ್ರಗತಿಯು ಜೀವಿತಾವಧಿಯನ್ನು ವಿಸ್ತರಿಸಿದೆ. ಈ ನಿಟ್ಟಿನಲ್ಲಿ ಈ ಸಾಲಿನ ವಿಶ್ವ ಜನಸಂಖ್ಯಾ ದಿನಾಚರಣೆಯ ಘೋಷವಾಕ್ಯವು ಎಲ್ಲಾ 8 ಬಿಲಿಯನ್ ಜನರು ಚೇತರಿಸಿಕೊಳ್ಳುವ ಭವಿಷ್ಯದ ಕಡೆಗೆ ಗಮನ ನೀಡುತ್ತದೆ. ಅವಕಾಶಗಳನ್ನು ಬಳಸಿಕೊಂಡು ಹಕ್ಕುಗಳು ಹಾಗೂ ಆಯ್ಕೆಗಳನ್ನು ಖಾತರಿಪಡಿಸುವತ್ತ ಆದ್ಯತೆ ನೀಡುತ್ತದೆ.

ಕ್ಷಣ ಕ್ಷಣಕ್ಕೂ ಏರುತ್ತಿರುವ ಜನಸಂಖ್ಯೆ: ಜಾಗತಿಕವಾಗಿ ಪ್ರತಿ ದಿನ 4,01,300 ಅಂದರೆ ಪ್ರತಿ ತಾಸಿಗೆ 16,720, ಪ್ರತಿ ನಿಮಿಷಕ್ಕೆ 278 ಮತ್ತು ಪ್ರತೀ ಕ್ಷಣಕ್ಕೆ 5 ಶಿಶುಗಳು ಜನಿಸುತ್ತವೆ.. ಆದರೆ ಪ್ರತಿ ದಿನ ಜಾಗತಿಕವಾಗಿ 1,58,686 ವ್ಯಕ್ತಿಗಳು (ಪ್ರತಿ ನಿಮಿಷಕ್ಕೆ 110 ಮತ್ತು ಪ್ರತಿ ಕ್ಷಣಕ್ಕೆ 2) ಸಾವನ್ನಪ್ಪುತ್ತಿದ್ದಾರೆ. ಅಂದರೆ ಪ್ರತಿ ಕ್ಷಣದಲ್ಲಿ 3 ವ್ಯಕ್ತಿಗಳ ಸೇರ್ಪಡೆಯಾಗುತ್ತದೆ.

ಎಷ್ಟೋ ಮಿಲಿಯ ವರ್ಷಗಳ ನಂತರ 1800 ರಲ್ಲಿ ಜಗತ್ತಿನ ಒಟ್ಟು ಜನಸಂಖ್ಯೆ ಒಂದು ಬಿಲಿಯ ಅಂದರೆ 100 ಕೋಟಿಯನ್ನು ಮೊತ್ತ ಮೊದಲ ಬಾರಿಗೆ ತಲುಪಿತು ಮುಂದೆ 127 ವರ್ಷಗಳ ನಂತರ ಅಂದರೆ 1927ರಲ್ಲಿ ಜಗತ್ತಿನ ಜನಸಂಖ್ಯೆ ದ್ವಿಗುಣಗೊಂಡು 2 ಬಿಲಿಯ ತಲುಪಿತು. ಮುಂದಿನ 33 ವರ್ಷಗಳಲ್ಲಿ ಅಂದರೆ 1960 ರಲ್ಲಿ 3 ಬಿಲಿಯ ತಲುಪಿ, ಮುಂದೆ 14 ವರ್ಷಗಳಲ್ಲಿ 1974ಕ್ಕೆ 4 ಬಿಲಿಯ ತಲುಪಿತು. ಮುಂದೆ ಕೇವಲ 13 ವರ್ಷಗಳಲ್ಲಿ(1987) ಜುಲೈ 11 ರಂದು ಜಗತ್ತಿನ ಜನಸಂಖ್ಯೆ 5 ಬಿಲಿಯ ತಲುಪಿತು. ಮುಂದೇ ಕೇವಲ 12 ವರ್ಷಗಳ ಅಂತರದಲ್ಲಿ 6 ಬಿಲಿಯ (1999) ಹಾಗೂ 7 ಬಿಲಿಯನ್ (2011) ತಲುಪಿತು. ಇದೀಗ 11 ವರ್ಷಗಳ ಅಂತರದಲ್ಲಿ 8 ಬಿಲಿಯನ್ (2022) ತಲುಪಲಿದೆ

ಈ ಜಗತ್ತಿನಲ್ಲಿ ಹಿಂದೆ ಜನಸಂಖ್ಯೆಯು ಬಹಳ ನಿಧಾನವಾಗಿ ಹೆಚ್ಚುತ್ತಿತ್ತು. ಜಗತ್ತಿನ ಒಟ್ಟು ಜನಸಂಖ್ಯೆಯು ದ್ವಿಗುಣಗೊಳ್ಳಲು ಏಳು ಶತಮಾನಗಳನ್ನೇ ತೆಗೆದುಕೊಂಡಿತು. 9ನೇ ಶತಮಾನದಲ್ಲಿ 0.25 ಬಿಲಿಯನ್ ಇದ್ದ ಜನಸಂಖ್ಯೆ 16ನೇ ಶತಮಾನಕ್ಕಾಗುವಾಗ ದ್ವಿಗುಣಗೊಂಡು 0.50 ಬಿಲಿಯ ತಲುಪಿತು. ಮುಂದೆ ಎರಡು ಶತಮಾನಗ ಅವಧಿಯಲ್ಲಿ ಜನಸಂಖ್ಯೆಯು ದ್ವಿಗುಣಗೊಂಡಿತು. 1950 ಮತ್ತು 1987ರ ಕೇವಲ 37 ವರ್ಷಗಳ ಅವಧಿಯಲ್ಲಿ ಜಗತ್ತಿನ ಜನಸಂಖ್ಯೆಯು 2.5 ಬಿಲಿಯದಿಂದ 5 ಬಿಲಿಯಕ್ಕೇ ಬಹಳ ವೇಗವಾಗಿ ದ್ವಿಗುಣಗೊಂಡಿತು. 

ಜನಸಂಖ್ಯೆ ಎನ್ನುವುದು ಕೇವಲ ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ಉಳಿದಿಲ್ಲ. ಬಹಳ ಹಿಂದಿನಿಂದಲೂ ಮಾನವ ಸಮಾಜದಲ್ಲಿ ಆತಂಕ ಮೂಡಿಸುತ್ತಲೇ ಬಂದಿದೆ. ಕ್ರಿ.ಪೂ 4 ನೇ ಶತಮಾನದಲ್ಲಿ ಜಗತ್ತಿನ ಜನಸಂಖ್ಯೆ ಕೇವಲ 20 ಕೋಟಿ ಇದ್ದಾಗಲೇ ಪ್ಲೇಟೋ ಮತ್ತು ಅರಿಸ್ಟಾಟಲ್ ಮೊದಲಾದ ದಾರ್ಶನಿಕರು ಕಟ್ಟುನಿಟ್ಟಿನ ಜನನ ನಿಯಂತ್ರಣ ಕ್ರಮಗಳಿಗೆ ಸಲಹೆ ನೀಡಿದ್ದರು.

ಜಗತ್ತಿನ ಪ್ರತಿ ಆರು ಜನರಲ್ಲಿ ಒಬ್ಬ ಭಾರತೀಯ: ಚೀನಾದ ನಂತರ ಅತೀ ಹೆಚ್ಚು ಜನರನ್ನು ಹೊಂದಿರುವ ದೇಶವಾದ ಭಾರತ ಬೌಗೋಳಿಕವಾಗಿ ಜಗತ್ತಿನ 2.4% ಭೂಭಾಗವನ್ನು ಹೊಂದಿದೆ, ಆದರೆ ಜಗತ್ತಿನ 17.7% ಜನರು ಭಾರತದಲ್ಲಿದ್ದಾರೆ. ಜಗತ್ತಿನ ಪ್ರತಿ 6 ಜನರಲ್ಲಿ ಒಬ್ಬ ಭಾರತೀಯ. ಜಾಗತಿಕ ವರಮಾನದಲ್ಲಿ ಭಾರತದ ಪಾಲು ಕೇವಲ 2.51%. ಬೌಗೋಳಿಕವಾಗಿ ಅಮೇರಿಕಾ ಭಾರತದ ಎರಡೂವರೆ ಪಟ್ಟು ದೊಡ್ಡದಿದೆ. ಆದರೆ ಜನಸಂಖ್ಯೆಯಲ್ಲಿ ಭಾರತವು ಅಮೇರಿಕಾದ ಮೂರೂವರೆ ಪಟ್ಟು ದೊಡ್ಡದಿದೆ. ಭಾರತದ ವಾರ್ಷಿಕ ಜನಸಂಖ್ಯಾ ಹೆಚ್ಚಳವು ಆಸ್ಟ್ರೇಲಿಯಾ ದೇಶದ ಒಟ್ಟು ಜನಸಂಖ್ಯೆಗೆ ಸಮನಾಗಿದೆ.

ಪ್ರತಿ ನಿಮಿಷಕ್ಕೆ 49 ಶಿಶುಗಳ ಜನನ: ಇಪ್ಪತ್ತನೇ ಶತಮಾನದ ಆರಂಭದಲ್ಲಿ ಭಾರತದ ಜನಸಂಖ್ಯೆ ಕೇವಲ 23.6 ಕೋಟಿ (1901) ಆಗಿತ್ತು. 1951 ರಲ್ಲಿ 36 ಕೋಟಿಯನ್ನು ತಲುಪಿದ ಜನಸಂಖ್ಯೆ 2011 ರ ಜನಗಣತಿಯ ಪ್ರಕಾರ 121 ಕೋಟಿಯ ಗಡಿಯನ್ನೂ ಮೀರಿದೆ. ಭಾರತದಲ್ಲಿ ಈಗ ಪ್ರತಿ ದಿನ 67,385 ಶಿಶುಗಳು ಜನಿಸುತ್ತವೆ, ಅದು ವಿಶ್ವದ ಮಗುವಿನ ಜನನದ ಆರನೇ ಒಂದು ಭಾಗವಾಗಿದೆ. ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ 250 ಶಿಶುಗಳ ಜನನವಾದರೆ ಭಾರತದಲ್ಲಿ 49 ಶಿಶುಗಳು ಜನಿಸುತ್ತವೆ.

ಪ್ರಸ್ತುತ ಭಾರತದ ಜನಸಂಖ್ಯೆ 140  ಕೋಟಿ ಹಾಗೂ 2051ರ ವೇಳೆಗೆ 164.6 ಕೋಟಿಗಳಿಗೆ ಏರಿಕೆಯಾಗಲಿದೆ. ಪ್ರಸ್ತುತ 145 ಕೋಟಿ ಇರುವ ಚೀನಾದ ಜನಸಂಖ್ಯೆ ಸ್ಥಿರತೆ ಕಾಯ್ದುಕೊಳ್ಳಲಿದ್ದು, ಭಾರತದ ಜನಸಂಖ್ಯೆ ಹೆಚ್ಚಲಿದೆ. 2027 ರ ಸುಮಾರಿಗೆ ಜನಸಂಖ್ಯೆಯ ಗಾತ್ರದಲ್ಲಿ ಭಾರತ ಚೈನಾವನ್ನು ಹಿಂದಿಕ್ಕಲಿದೆ ಎಂದು ಅಂದಾಜಿಸಲಾಗಿದೆ.

ಜನಸಂಖ್ಯೆ ಜೊತೆಗೆ ಹೆಚ್ಚುತ್ತಿವೆ ಸಮಸ್ಯೆ: ಈಗಾಗಲೇ ಭಾರತ ಸೇರಿದಂತೆ ಜಗತ್ತಿನಾದ್ಯಂತ ಬಡತನ, ಆಹಾರ, ಅನಕ್ಷರತೆ, ಬಾಲ ಕಾರ್ಮಿಕರು, ನಿರುದ್ಯೋಗ ಸಮಸ್ಯೆಗಳು ಕಾಡುತ್ತಿವೆ. ವಿಶ್ವದ ಜನಸಂಖ್ಯೆ ಹೆಚ್ಚಿದಂತೆ ಜಾಗತಿಕ ತಾಪಮಾನದ ಸಮಸ್ಯೆ, ನೈಸರ್ಗಿಕ ವಿಪತ್ತು ಹಾಗೂ ಇನ್ನಿತರ ಸಮಸ್ಯೆಗಳು ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ.

ಜನಸಂಖ್ಯೆಯು ಹೆಚ್ಚಿದಂತೆ ಜಾಗತಿಕವಾಗಿಯೂ ಮನುಷ್ಯರ ಜೀವನಮಟ್ಟವೂ ಕುಸಿಯುತ್ತದೆ. ಹೆಚ್ಚಿನ ಜನಸಂಖ್ಯೆಯಿಂದಾಗಿ ಆಯಾ ದೇಶಗಳು ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಹಿಂದೆ ಬೀಳುತ್ತವೆ. ಹೆಚ್ಚಿನ ಜಾಗತಿಕ ಸಮಸ್ಯೆಗಳ ಹಿಂದೆಯೂ ಹೆಚ್ಚುತ್ತಿರುವ ಜನಸಂಖ್ಯೆಯ ನೆರಳು ಕಾಣುತ್ತಿದೆ.

ಒಂದು ದೇಶದ ಪ್ರಗತಿ ಹಾಗೂ ಪರಿಪೂರ್ಣ ಬೆಳವಣಿಗೆಗೆ ಮಾನವ ಸಾಮಥ್ರ್ಯ ಎಷ್ಟು ಅಗತ್ಯವೋ ಅಷ್ಟೇ ರೀತಿಯಲ್ಲಿ ಏರುತ್ತಿರುವ ಜನಸಂಖ್ಯೆ ಕೂಡಾ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಇದೊಂದು ವಿಪರ್ಯಾಸವಾದರೂ ಕೂಡಾ ನಂಬಲೇಬೇಕಾದ ಕಟು ವಾಸ್ತವ.

ವಿಶ್ವದ ಅತೀ ಹೆಚ್ಚಿನ ಜನಸಂಖ್ಯೆಯ ರಾಷ್ಟ್ರವಾಗಿರುವುದು ಅನೇಕ ಜವಾಬ್ದಾರಿಗಳನ್ನೂ ಹೊತ್ತು ತರುತ್ತದೆ. ಎಲ್ಲರಿಗೂ ಆಹಾರ, ವಸತಿ, ಉದ್ಯೋಗ, ಆರೋಗ್ಯ, ಶಿಕ್ಷಣ ಒದಗಿಸುವ ಜವಾಬ್ದಾರಿ ಹೆಚ್ಚಾಗುತ್ತದೆ. ಅಂತೆಯೇ ಪರಿಸರದ ಮೇಲಿನ ಒತ್ತಡ ಹಚ್ಚಾಗುತ್ತದೆ. ಜನಸಂಖ್ಯೆ ಹೆಚ್ಚಳದಿಂದ ವಾಯುಮಾಲಿನ್ಯ, ತ್ಯಾಜ್ಯ ನಿರ್ವಹಣೆಯ ಸವಾಲುಗಳೂ ಭೂತಾಕಾರವಾಗಿ ಪೀಡಿಸಲಿವೆ.

2022ರ ವೇಳೆಗೆ ಚೀನಾವನ್ನು ಹಿಂದಿಕ್ಕಿ ಜನಸಂಖ್ಯೆಯಲ್ಲಿ ಭಾರತ 140 ಕೋಟಿಯ ಗಡಿಯನ್ನು ತಲುಪಲಿದೆ. ವಿಶ್ವ ಸಂಸ್ಥೆಯ ವರದಿಯೇನೋ ಎಚ್ಚರಿಕೆ ನೀಡುವ ರೂಪದಲ್ಲಿದೆ. ಈಗಾಗಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಚೀನಾ ಆ ಜನಸಂಖ್ಯೆಯನ್ನೇ ಬಳಸಿಕೊಂಡು ಆರ್ಥಿಕ ಪ್ರಗತಿ ಸಾಧಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದೆ.

ಭಾರತದ ಮತ್ತು ಚೀನದ ಸಮಸ್ಯೆಗಳಲ್ಲಿ ಭಿನ್ನತೆಯಿದೆ. ವಿಸ್ತೀರ್ಣದಲ್ಲಿ ಭಾರತಕ್ಕಿಂತ ಚೀನಾ ಮೂರು ಪಟ್ಟು ದೊಡ್ಡದು. ಹಾಗಾಗಿ ಜನಸಂಖ್ಯೆಯಲ್ಲಿ ಚೀನಾಕ್ಕಿಂತ ದೊಡ್ಡದಾಗಿ ಬೆಳೆಯುವುದರಲ್ಲಿ ಸಮಸ್ಯೆಗಳೇ ಹೆಚ್ಚಿವೆ. ಗಾತ್ರದಲ್ಲಿ ಜಗತ್ತಿನ ಏಳನೇ ಅತಿದೊಡ್ಡ ರಾಷ್ಟ್ರವಾಗಿದ್ದುಕೊಂಡು ಜನಸಂಖ್ಯೆಯಲ್ಲಿ ಅತಿ ದೊಡ್ಡ ದೇಶವಾಗುವುದರಲ್ಲಿ ಅಪಾಯವಂತೂ ಇದ್ದೇ ಇದೆ.

ಡೆಮಾಗ್ರಫಿಕ್ ಡಿವಿಡೆಂಡ್ (ಜನಸಂಖ್ಯಾ ಲಾಭಾಂಶ): ಜನಸಂಖ್ಯೆಯ ವಯಸ್ಸಿನ ರಚನೆಯ ಬದಲಾವಣೆಯು ಆರ್ಥಿಕ ಬೆಳವಣಿಗೆಗೆ ಪೂರಕವಾಗುವ ಸಂಭವತೆಯನ್ನು ಡೆಮಾಗ್ರಫಿಕ್ ಡಿವಿಡೆಂಟ್ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಅವಲಂಬಿತ ಜನಸಂಖ್ಯೆಯ ಪ್ರಮಾಣ ಕಡಿಮೆಯಾಗಿ, ಕೆಲಸ ಮಾಡುವ ವಯಸ್ಸಿನ ಜನರ ಪ್ರಮಾಣ ಹೆಚ್ಚಾಗುವ ಸ್ಥಿತಿಯಾಗಿರುತ್ತದೆ.

ಭಾರತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ ಒಂದೆಡೆ ಸವಾಲಾದರೆ, ಇನ್ನೊಂಡೆಡೆ ಅದು ಬೆಳವಣಿಗೆಗೆ ಅವಕಾಶವನ್ನೂ ಒದಗಿಸಿಕೊಡುತ್ತದೆ. ಭಾರತದ ಜನಸಂಖ್ಯೆಯಲ್ಲಿ 62.5% ಜನರು ಕೆಲಸ ಮಾಡುವÀ (15-59) ಪ್ರಾಯದವರಾಗಿದ್ದಾರೆ. ಈ ಪ್ರಮಾಣವು 2036 ರಲ್ಲಿ ಗರಿಷ್ಟ 65% ತಲುಪಲಿದೆ. ಈ ರೀತಿಯ ಲಾಭವನ್ನು ಭಾರತವು 2006 ರಿಂದ 2036 ವರೆಗೆ ಮೂರು ದಶಕಗಳ ಕಾಲ ಅನುಭವಿಸಲಿದೆ. ಆದರೆ ಇದು ವಾಸ್ತವವಾಗಬೇಕಾದಲ್ಲಿ ಜನರ ಜೀವನ ಮಟ್ಟ ಸುಧಾರಿಸುವಂತಹ ಅನೇಕ ವಲಯಗಳಲ್ಲಿ ಹಣಹೂಡಿಕೆ ಅಗತ್ಯವಾಗುತ್ತದೆ.

ಮುಂದಿನ ಐದು ವರ್ಷಗಳಲ್ಲಿ ಪ್ರತಿ ವರ್ಷ ಸುಮಾರು 15 ಮಿಲಿಯ ಯುವಕರು ಉದ್ಯೋಗ ಕ್ಷೇತ್ರವನ್ನು ಪ್ರವೇಶಿಸಲಿದ್ದಾರೆ. ಅಗತ್ಯ ಸಮಕಾಲೀನ ಕೌಶಲ್ಯ ಇಲ್ಲದಿರುವುದರಿಂದ ಯುವಕರು ಉದ್ಯೋಗ ಪಡೆಯಲು ವಿಫಲರಾಗುತ್ತಾರೆ.

ಮಾನವ ಸಂಪನ್ಮೂಲವಾಗಲಿ: ದೇಶದ ಉತ್ಪಾದಕತೆಯನ್ನು ಹೆಚ್ಚಿಸಿಕೊಂಡು, ಲಭ್ಯ ಸಂಪನ್ಮೂಲಗಳನ್ನು ಜಾಣತನದಿಂದ ಬಳಸಿಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ ಭಾರತೀಯರ ಬದುಕು ಸಹನೀಯವಾಗಿರಲು ಸಾಧ್ಯವಿದೆ. ಅತೀ ಹೆಚ್ಚು ಯುವಜನರನ್ನು ಹೊಂದಿರುವ ಭಾರತಕ್ಕೆ ಜನಸಂಖ್ಯೆ ವರದಾನವಾಗಿದೆ, ಯುವ ಶಕ್ತಿ ಭಾರತದ ವರ್ತಮಾನ ಮತ್ತು ಭವಿಷ್ಯ. ಮಾನವ ಬಂಡವಾಳದ ಸದ್ಬಳಕೆಯ ಮೂಲಕ ಆರ್ಥಿಕಾಭಿವೃದ್ಧಿಯ ಲಾಭಗಳು ಜನಸಾಮಾನ್ಯರಿಗೆ ತಲುಪುವಂತಾದಾಗ ಮಾತ್ರ ಸುಸ್ಥಿರ ಹಾಗೂ ಅರ್ಥಪೂರ್ಣ ಅಭಿವೃದ್ಧಿ ಸಾಧ್ಯ. ಯುವ ಜನರಲ್ಲಿ ಸಮಕಾಲೀನ ಕೌಶಲ್ಯವರ್ಧನೆ ಮಾಡುವ ಮೂಲಕ ಜನಸಂಖ್ಯೆಯನ್ನು ಮಾನವ ಸಂಪತ್ತು ಆಗಿ ಪರಿವರ್ತಿಸಿ ಅಭಿವೃದ್ದಿಯನ್ನು ಪಡೆಯಲು ಸಾಧ್ಯ. ಜನಸಂಖ್ಯೆ ಹೊರೆಯಾಗಿರದೆ ಸಂಪನ್ಮೂಲವಾಗಲಿ.



web counter

0 Comments

Post a Comment

Post a Comment (0)

Previous Post Next Post