
ಉಜಿರೆ: ಯುವ ವಿಜ್ಞಾನಿಯ ವಿನೂತನ ಆವಿಷ್ಕಾರದ ಅನ್ವೇಷಣೆಯು ಪರಿಸರ ಪೂರಕವಾಗಿರಬೇಕು. ಸಮಾಜಕ್ಕೆ ಒಳಿತು ಮಾಡುವ ಉದ್ದೇಶವನ್ನು ಹೊಂದಿರಬೇಕು ಎಂದು ಎನ್‍ಐಟಿಕೆ ಸುರತ್ಕಲ್‍ನ ರಸಾಯನ ಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ.ಅರುಣ್ ಎಂ ಇಸಳೂರ್ ತಿಳಿಸಿದರು.
ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗ ಬುಧವಾರ ಆಯೋಜಿಸಿದ್ದ ‘ಕೆಮ್ ಶೋಧನಾ 2022’ ಒಂದು ದಿನದ ರಾಷ್ಟ್ರ ಮಟ್ಟದ ಫೆಸ್ಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಸರ ಪೂರಕ ಸಂಶೋಧನೆ ಪ್ರತಿಯೊಬ್ಬ ಯುವ ವಿಜ್ಞಾನಿಯ ಗುರಿಯಾಗಿರಬೇಕು. ಹೊಸದೊಂದು ಆವಿಷ್ಕಾರದ ಮನೋಭಾವನೆ ಹೊತ್ತ ವಿಜ್ಞಾನಿಯ ಅನ್ವೇಷಣೆ ಪರಿಸರದ ತತ್ವ ಮತ್ತು ಸಾಮಾಜಿಕತೆಯ ಮನ್ನಣೆ ಪಡೆಯುವಂತಿರಬೇಕು ಎಂದು ಅಭಿಪ್ರಾಯಪಟ್ಟರು.
ವಿನೂತನ ಆವಿಷ್ಕಾರ, ಕ್ರಿಯಾಶೀಲತೆ ಮತ್ತು ಉದ್ಯಮಶೀಲತೆ ಈ ಮೂರು ಮೌಲಿಕ ಗುಣಗಳನ್ನು ಕಲಿಕೆಯ ಹಂತದಿಂದಲೇ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು. ಜೊತೆಗೆ ಸೂಕ್ಷ್ಮವಾದ ಗಮನಿಸುವಿಕೆಯಿಂದ ಈ ಮೂರು ಗುಣಗಳು ವೃದ್ಧಿಯಾಗುತ್ತವೆ ಎಂದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎನ್ ಉದಯಚಂದ್ರ ಮಾತನಾಡಿದರು. ಕ್ರಿಯಾಶೀಲ ಆವಿಷ್ಕಾರದ ನಂತರ ಅದನ್ನು ಅಭಿವೃದ್ಧಿಪಡಿಸುವ ಹಂತವೇ ನಿರ್ಣಾಯಕವಾಗಿರುತ್ತದೆ. ಈ ಹಂತದಲ್ಲಿ ನಿರ್ದಿಷ್ಟ ಚೌಕಟ್ಟಿನ ಹೊರಗೆ ನಿಂತು ಯೋಚಿಸಬೇಕು. ಬೌದ್ಧಿಕ ತಿಳುವಳಿಕೆ ಮೌಲ್ಯಯುತವಾಗಿದ್ದಾಗ ಆವಿಷ್ಕಾರ ಮತ್ತು ಸಂಶೋಧನೆ ಸಮಾಜಪರವಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ ಪಿ, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕರಾದ ಫ್ಲೋರಿನಾ ಫರ್ನಾಂಡೀಸ್ ಮತ್ತು ಆದಿತ್ಯ ಬಲ್ಲಾಳ್ ಉಪಸ್ಥಿತರಿದ್ದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನೆಫೀಸತ್ ಫೆಸ್ಟ್‌ನ ರೂಪುರೇಷೆಗಳನ್ನು ವಿವರಿಸಿದರು. ಧನ್ಯಾ ಕೆ.ಎನ್ ಕಾರ್ಯಕ್ರಮ ನಿರೂಪಿಸಿದರೆ, ಸಹಾಯಕ ಪ್ರಾಧ್ಯಾಪಕ ಡಾ.ನವೀನ್ ಕುಮಾರ್ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ